ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿರುವ ಈ ಅದ್ಧೂರಿ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಕಿರಗಂದೂರು ತಮ್ಮ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು,ತಮಿಳು,ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಕೂಡ ಬಿಡುಗಡೆಯಾಗಿದೆ.
ಕಥೆ
70-80 ರ ದಶಕದ ಕಥೆಯನ್ನು ಹೊಂದಿರುವ ಕೆ.ಜೆ.ಎಫ್ ಕೋಲಾರದ ಚಿನ್ನದ ಗಣಿಯಲ್ಲಿ ಮಾಫಿಯಾ ನೆರಳಿನಲ್ಲಿ ನೆಡೆಯುವ ಅಮಾನುಷ ಕೃತ್ಯಗಳು ಮತ್ತು ಅವುಗಳಿಗೆ ಅಂತ್ಯ ಹಾಡಲು ಬಯಸುವ ನಾಯಕನ ಹೋರಾಟವನ್ನು ಚಿತ್ರಿಸುತ್ತದೆ. ಬಾಲ್ಯದಿಂದಲೇ ತಾಯಿಯ ಬಯಕೆಯಂತೆ ಪ್ರಬಲನಾಗುವ ಮಹಾತ್ವಾಕಾಂಕ್ಷೆಯುಳ್ಳ ರಾಕಿ ಮುಂಬೈನ ಭೂಗತ ಲೋಕದಲ್ಲಿ ಬೆಳೆದು ನಿಲ್ಲುತ್ತಾನೆ. ಕೆ.ಜೆ.ಎಫ್‌ನ ಮಾಫಿಯಾ ಭದ್ರಕೋಟೆಯಲ್ಲಿ ರಾಕಿ ಹೇಗೆ ಪ್ರವೇಶಿಸುತ್ತಾನೆ ಮತ್ತು ಚಿನ್ನದ ಗಣಿ ಧೂಳಿನಲ್ಲಿ ಬೆಂದವರ ನೋವಿನ ಧ್ವನಿಯಾಗಿ ರಾಕಿ ಹೇಗೆ ಪರಿವರ್ತಿತನಾಗುತ್ತಾನೆ ಎನ್ನವುದು ಕಥೆಯ ಮೂಲ ತಿರುಳು. ಇದರಲ್ಲಿ ರಾಜಕೀಯ ಮತ್ತು ಮಾತೃಪ್ರೇಮ ಹಿನ್ನಲೆಯ ಶಕ್ತಿಯಾಗಿ ಕೆಲಸ ಮಾಡುತ್ತುವೆ.ಚಿತ್ರಕಥೆಗೆ ಪೂರಕವಾಗಿ ಅನಂತನಾಗ್ ರಾಕಿಯ ಪಯಣವನ್ನು ತಮ್ಮ ಅದ್ಭುತ ಕಂಠದಿಂದ ನಿರೂಪಿಸುತ್ತಾ ಹೋಗುತ್ತಾರೆ.