ಪ್ರಶಾಂತ್ ನೀಲ್ ನಿರ್ದೇಶನ ಮತ್ತು ವಿಜಯ್ ಕಿರಂಗದೂರ್ ಅವರ ಹೊಂಬಾಳೆ ಪ್ರೊಡಕ್ಷನ್ಸ್‌ನಲ್ಲಿ ಮೂಡಿಬಂದಿರುವ ಸಿನಿಮಾ ಸಲಾರ್. ಈ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸಿದ್ದು, ಶ್ರುತಿ ಹಾಸನ್ ನಾಯಕಿ. ಮಲಯಾಳಂ ನಟ ಪೃಥ್ವಿರಾಜ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಇನ್ನೊಂದು ವಿಶೇಷವೆಂದರೆ ಸಲಾರ್‌ನಲ್ಲಿ ಕನ್ನಡದ ನಟರಾದ ಡೈನಾಮಿಕ್ ಸ್ಟಾರ್ ದೇವರಾಜ್, ರತ್ನನ್ ಪ್ರಪಂಚ ಪ್ರಮೋದ್, ಗುಲ್ಟು ನವೀನ್ ಶಂಕರ್, ಗರುಡ ರಾಮಚಂದ್ರ ರಾಜು, ಮಧು ಗುರುಸ್ವಾಮಿ ಹಾಗೂ ರವಿಭಟ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣ, ರವಿ ಬಸೂರು ಸಂಗೀತ, ಶಿವಕುಮಾರ್ ಕಲಾ ನಿರ್ದೇಶನವಿದೆ. ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಬಹುತೇಕ ಕೆಜಿಎಫ್ ತಾಂತ್ರಿಕ ವರ್ಗವೇ ಕೆಲಸ ಮಾಡಿದೆ.
ಬಿಡುಗಡೆ: ಸಲಾರ್ ಸಿನಿಮಾ 2023ರ ಡಿಸೆಂಬರ್ 22ರಂದು ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಯಿತು.
ಕಥೆ: ವರದರಾಜ ಮನ್ನಾರ್ (ಪೃಥ್ವಿರಾಜ್ ಸುಕುಮಾರನ್) ದೇವ(ಪ್ರಭಾಸ್)ಗೆ ಬಾಲ್ಯದ ಗೆಳೆಯ. ಕಾರಣಾಂತರಗಳಿಂದ ದೇವ ಖಾನ್ಸರ್ ಬಿಟ್ಟು ತಾಯಿ ಜೊತೆ ಅಸ್ಸಾಂನಲ್ಲಿ ನೆಲೆಸಿರುತ್ತಾನೆ. ತಾಯಿಗೆ ಕೊಟ್ಟ ಮಾತಿನಂತೆ ಆತ ಆಯುಧ ಹಿಡಿಯಲ್ಲ. ಯಾರ ಮೇಲೂ ಕೋಪಗೊಳ್ಳದೇ ತಪ್ಪು ಕಂಡಾಗ ಒಳಗೊಳಗೆ ಕುದಿಯುತ್ತಿರುತ್ತಾನೆ. ಹೀಗಿರುವಾಗ ಆದ್ಯ(ಶೃತಿಹಾಸನ್) ವಿದೇಶದಿಂದ ಕೊಲ್ಕತ್ತಾಗೆ ಬರ್ತಾಳೆ. ಆದ್ಯಗೆ ಪ್ರಾಣಹಾನಿ ಇದೆ ಎಂದು ಆಕೆ ತಂದೆ ತನ್ನ ಸಹಾಯಕನ ಮೂಲಕ ಅಸ್ಸಾಂನಲ್ಲಿರುವ ದೇವ ಬಳಿಗೆ ಕಳುಹಿಸುತ್ತಾನೆ. ಇಷ್ಟಕ್ಕೂ ಆದ್ಯ ಯಾರು? ಆಕೆಗೆ ಇರುವ ಕಂಟಕ ಏನು? ಆಕೆಯನ್ನು ದೇವ ಯಾಕೆ ರಕ್ಷಿಸುತ್ತಾನೆ? ಇದೆಲ್ಲದರ ನಡುವೆ ದೇವ ಹಾಗೂ ವರದ ನಡುವೆ ವೈಮನಸ್ಸು ಮೂಡಲು ಕಾರಣ ಏನು? ಕಥೆಯ ಕೇಂದ್ರಬಿಂದು ಖಾನ್ಸರ್ ಹಿನ್ನೆಲೆ ಏನು? ಎಂಬುದೇ ಸಿನಿಮಾದ ಕಥೆ.