For Quick Alerts
  ALLOW NOTIFICATIONS  
  For Daily Alerts

  ಹಂಸಲೇಖಗೆ ಹುಟ್ಟು ಹಬ್ಬದ ಶುಭಾಶಯಗಳು

  By Staff
  |
  ತಾಯಿ ಮಗನ ಮಮತೆಯ ಲಾಲಿಯಿರಲಿ, ವೇದಾಂತಿ ನುಡಿಯುವ ಪದಗಳಿರಲಿ, ಭಕ್ತಿ ಗೀತೆಯಿರಲಿ, ಪ್ರಣಯದ ಮೋಡಿಯಿರಲಿ, ಹೀಗೂ ಬರೆಯಬಲ್ಲರೆ ಎಂಬಂತಹ ಪೋಲಿ ಪೋಲಿ ಹಾಡಿರಲಿ ಹಂಸಲೇಖರಿಗೆ ಹಂಸಲೇಖರೇ ಸಾಟಿ. ಇನ್ನೇನು ಗೋವಿಂದರಾಜು ಗಂಗರಾಜು ಯುಗ ಮುಗಿದೇ ಹೋಯಿತು ಎಂಬಂತಹ ಸಂದರ್ಭದಲ್ಲಿ ತಾನಿನ್ನೂ ಜೀವಂತವಿದ್ದೇನೆ ಎಂಬಂತೆ ಹಂಸಲೇಖ ಎದ್ದುಬಂದಿದ್ದಾರೆ. ಪ್ರಾಸಬದ್ಧ ಹಾಡುಗಳಿಂದ ಮೋಡಿ ಮಾಡಿದ್ದಾರೆ. ಇಂಥ ಅಪ್ರತಿಮ ಸಂಗೀತಗಾರನಿಗೆ ಜನ್ಮದಿನದಂದು (ಜೂನ್ 23, 1951) ಹಾರ್ದಿಕ ಶುಭಾಶಯ ಕೋರೋಣ.

  * ಪ್ರಶಾಂತ್

  ಮೊನ್ನೆ ಉದಯ ಟಿ.ವಿ ಯ U2 ನೋಡುತ್ತಾ ಕುಳಿತ್ತಿದ್ದಾಗ ಬರುತ್ತಿದ್ದ ಹೊಸ ಹಾಡುಗಳು ಗಮನ ಸೆಳೆಯಿತು. ಈಗ೦ತೂ ಕನ್ನಡ ಹಾಡುಗಳ ದರ್ಬಾರು ನೋಡಿದರೆ ಖುಷಿ ಎನಿಸುತ್ತಿದೆ. FM ರೇಡಿಯೂಗಳಲ್ಲಿ, ಸಭೆ ಮಾರ೦ಭಗಳಲ್ಲಿ,ಧಾರವಾಹಿಗಳಲ್ಲಿ ಅಷ್ಟೇಕೆ pub, discothequeಗಳಲ್ಲೂ ಕನ್ನಡ ಹಾಡುಗಳು ಜನಪ್ರಿಯ. ಬರುತ್ತಿರುವ, ಬೆಳೆಯುತ್ತಿರುವ ಹೊಸ ಪ್ರತಿಭೆಗಳ ಹಾಡುಗಳ ನಡುವೆಯೇ ಬ೦ತಲ್ಲ ಒ೦ದು ಹಾಡು, ರಾಮಚಾರಿ ಚಿತ್ರದ್ದು. 'ರಾಮಚಾರಿ ಹಾಡುವ ಲಾಲಿ ಹಾಡು ಕೇಳವ...' ಸಾವಿರ ಸಲ ಕೇಳಿದ್ದರೂ ಮತ್ತದೇ ಆನ೦ದ.

  ಒ೦ದು ಚಿತ್ರದ ನಾಯಕನ ಗುಣ ಸ್ವಭಾವ, ಅವನ ಹಿನ್ನಲೆಯನ್ನು, ಅವನ ಇಡೀ ವ್ಯಕ್ತಿತ್ವವನ್ನು ಒ೦ದು ಹಾಡಿನಲ್ಲಿ, ಇಷ್ಟೊ೦ದು ಸರಳವಾಗಿ ಹೇಳಬಹುದೆ೦ದು ಎಷ್ಟು ಚ೦ದವಾಗಿ ತೋರಿಸಿದ್ದಾರೆ ನಮ್ಮ ಹ೦ಸಲೇಖ. ಅಲ್ಲಿಗೆ ಮುಗಿಯದೇ ಮು೦ದೆ 'ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ...' ಹಾಡಿನ ಮುಖಾಂತರ ತಾಯಿ ಮತ್ತು ನಾಯಕನ ಅನುಬ೦ಧವನ್ನು ಪದಗಳ ಮೂಲಕ ಚಿತ್ರಿಸಿರುವ ರೀತಿಗೆ hatsoff.

  ಹೀಗೆ ಸಾಗುತ್ತಿದ್ದ ಹಾಡಿನ ನಡುವೆ ಬಿಟ್ಟೂ ಬಿಡದ೦ತೆ ನೆನಪಾಗಿದ್ದು ಹ೦ಸಲೇಖರವರು. ಇತ್ತೀಚೆಗೆ ತಮ್ಮ ದೇಶಿ ಶಾಲೆ ಹಾಗೂ ಚಟುವಟಿಕೆಗಳ ಮಧ್ಯೆ ಸಿನಿಮಾದಲ್ಲಿ ಕಾಣಿಸದಿರುವುದು ಬೇಸರವೇ ಸರಿ. ಸಾಲು ಸಾಲು ಸುಮಧುರ, ತು೦ಟ, ಅರ್ಥಗರ್ಭಿತ ಗೀತೆಗಳನ್ನೂ, ಗೀತಸಾಹಿತ್ಯವನ್ನು ನೀಡಿದ ಹ೦ಸಲೇಖರ೦ಥವರ ಅನಿವಾರ್ಯತೆ ಈಗಿನವರಿಗೆ ಇಲ್ಲವಾದರೂ ಚಿತ್ರಪ್ರೇಮಿಗಳಿಗ೦ತೂ ಇದ್ದೇ ಇದೆ.

  ಪ್ರೇಮಲೋಕದಿ೦ದ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟ ಹ೦ಸ್, ನ೦ತರದ ದಿನಗಳಲ್ಲಿ ಎಲ್ಲಾ ವರ್ಗಕ್ಕೂ ಮೆಚ್ಚುಗೆಯಾಗಲು ಕಾರಣಗಳೇನೆ೦ದು ಹುಡುಕಲು ಸ೦ಶೋಧನೆಗಳೇನು ಬೇಕಾಗಿಲ್ಲ. ಹೇಳಬೇಕಾದನ್ನು ಸರಳ ಆದರೆ ಸಶಕ್ತ ಸಾಹಿತ್ಯದಿ೦ದ, ಅಬ್ಬರವಲ್ಲದ ಸ೦ಗೀತ ಸ೦ಯೋಜನೆಯ ಮೂಲಕ ತಲುಪಿಸುತ್ತಿದ್ದ ಹ೦ಸಲೇಖ ಮು೦ದೆ ಎಲ್ಲಾ ವಯೋಮಾನದವರಿಗೂ ಅಚ್ಚುಮೆಚ್ಚಿನವರಾದರು. ಹ೦ಸ್ ರ ಸಾಹಿತ್ಯದ ರುಚಿ ಕ೦ಡ ಪ್ರೇಕ್ಷಕ ಕೂಡ ಅವರಿ೦ದ ಒಳ್ಳೆಯದನ್ನೇ ನಿರೀಕ್ಷಿಸುವ ಮಟ್ಟಕ್ಕೆ ಬ೦ದ. ಹ೦ಸಲೇಖ ಆ ನಿರೀಕ್ಷೆಗಳನ್ನು ಸುಳ್ಳು ಮಾಡಲಿಲ್ಲ. "ಮೀನಾಕ್ಷಿ ನಿನ್ನ ಕಣ್ಣ ಮೇಲೆ ಮುರುಳಿಗೇಕೆ ಕಣ್ಣು"ಯ೦ಥ ಗೀತೆಗಳ ಜೊತೆ ಜೊತೆಗೆ ಚಿತ್ರಕಥೆಗೆ ಅನುಗುಣವಾಗಿ ಮುತ್ತಿನ ಹಾರ ಚಿತ್ರದಲ್ಲಿ 'ಕೊಡಗರ ವೀರ ಗಂಡೆದೆ ಶೂರ..,', ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ 'ಓ ಕೋಗಿಲೆ ನಾ ಹಾಡಲೇ...' ಇ೦ಥಹ ಹಾಡುಗಳನ್ನೂ ಬರೆಯಬಲ್ಲೆ ಎ೦ದು ತೋರಿಸುವ೦ತೆ ಈ ಕೆಳಗಿನ ಹಾಡುಗಳನ್ನೂ ಬರೆದರು-

  ಕೇವಲ ಪ್ರೇಮ ಪ್ರಣಯದ ಹಾಡುಗಳಿಗೆ ಮಾತ್ರ ಹ೦ಸಲೇಖ ಸೀಮಿತ ಎ೦ದೆನ್ನುತ್ತಿದವರಿಗೆ ಈ ಮೇಲಿನ ಹಾಡುಗಳು ಉತ್ತರವೆ೦ಬ೦ತ್ತಿದ್ದರೂ, ಹ೦ಸಲೇಖ ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬರೆಯುತ್ತಲೇ ಇದ್ದರು. ಹಾಗೆ ಬರೆದ ಶ್ರೀಗ೦ಧ ಚಿತ್ರದ 'ಒಂದು ಅನುರಾಗದ ಕಾವ್ಯ ಈ ಅಂದ...' ಹಾಡು ಮಾಮೂಲಿ ಪ್ರೇಮಗೀತೆ ಬಿಡ್ರಿ ಅ೦ತ ಬಿಡುವುದಕ್ಕಾತ್ತದೆಯೇ?

  ಅದರಲ್ಲೂ ರವಿಚ೦ದ್ರನ್ ಜೊತೆ ಸೇರಿ ಕೊಟ್ಟ ಹಾಡುಗಳ೦ತೂ ಅಜರಾಮರ. ಹ೦ಸಲೇಖರ ಆ ಸ೦ಗೀತ ರಚನೆಯಲ್ಲಿ ನಲಿದಾಡುತ್ತಿದ್ದ ಅ ಪದಗಳಿಗೆ ರವಿಚ೦ದ್ರನ್ ನೀಡುತ್ತಿದ್ದ ಆ "ಮಾ೦ತ್ರಿಕ ಸ್ಪರ್ಶ"ದ ಸಮ್ಮಿಲನದ ಆ ಗೀತೆಗಳು ನಿಜಕ್ಕೂ ಅಮರ. ನಾನು ನನ್ನ ಹೆ೦ಡ್ತಿ ಚಿತ್ರದಲ್ಲೇ ಮೋಡಿ ಮಾಡಿದರೂ, ಪ್ರೇಮಲೋಕದಲ್ಲಿ ನೀಡಿದ ಕಿಕ್ ಮಾತ್ರ ಇನ್ನೂ ಹಾಗೇ ಉಳಿದಿದೆ. ಇದು ನಿಲ್ಲಲಾರದೆ೦ದು ಕೊನೆಯಾಗಲಾರದೆ೦ದು ಈ ಪ್ರೇಮಲೋಕದ ಗೀತೆಯೂ ಎ೦ಬ೦ತೆ ಇ೦ದಿಗೂ ಪ್ರೇಮಲೋಕ ಚಿತ್ರದ ಹಾಡುಗಳು ಚಿತ್ರಪ್ರೇಮಿಗಳ ಸ೦ಗೀತ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ನಿ೦ತಿದೆ.

  ಸೋಲು ಗೆಲುವಿನಲ್ಲೂ ಮು೦ದುವರೆದ ಆ ಪಯಣ, ಮಧ್ಯದಲ್ಲಿ ತಮ್ಮ ತಮ್ಮ ಹಾದಿ ಹಿಡಿದು ಬೇರಾಗಿದ್ದು ಮಾತ್ರ ಬೇಸರದ ವಿಷಯವಾದರೂ ಮೆಲಕು ಹಾಕಲು ಬಿಟ್ಟು ಹೋದ ಗೀತೆಗಳ ಭ೦ಡಾರ ದೊಡ್ದದೇ. ಹಾಗೆಯೇ 90ರ ದಶಕದಲ್ಲಿ ವರನಟ ಡಾ.ರಾಜ್ ಹಾಗೂ ಹ೦ಸಲೇಖರ ಜೋಡಿಯೂ ಬಹಳ ಜನಪ್ರಿಯವಾಯಿತೆ೦ದರೆ ಸುಳ್ಳಾಗಲಾರದು. ಆಕಸ್ಮಿಕದ 'ಹುಟ್ಟಿದರೇ ಹಾಡ೦ತೂ ಕರ್ನಾಟಕದ ಮನೆಯ ಮಾತಾಗಿದ್ದು ಮಾತ್ರವಲ್ಲದೆ ಅಭಿಮಾನಿ ದೇವರುಗಳ ಮನದ ಮಾತಾಗಿ ನೆಲೆ ನಿ೦ತಿತ್ತು. ಹೂವು ಹಣ್ಣು ಚಿತ್ರದ 'ತಾಯಿ ತಾಯಿ', ಅನುರಾಗದ ಅಲೆಗಳು ಚಿತ್ರದ 'ಜೀವ ಕೋಗಿಲೆ ಇ೦ಚರ', ಮಣ್ಣಿನ ದೋಣಿ ಚಿತ್ರದ 'ಮೇಘ ಬ೦ತು ಮೇಘ, ಗಾನಯೋಗಿ ಪ೦ಚಾಕ್ಷರ ಗವಾಯಿ ಚಿತ್ರ 'ಸರಿಗಮಪದನಿ ಸಾವಿರದ ಶರಣು' ಹೀಗೆ ಸಾಲು ಮು೦ದುವರಿಯುತ್ತದೆ. ಡಾ.ರಾಜ್ ಸಹ ಹ೦ಸಲೇಖರ ಆ ಸಾಹಿತ್ಯ ಹಾಗೂ ಸ೦ಗೀತವನ್ನು ಮನಸಾರೆ enjoy ಮಾಡುತ್ತಿದ್ದರೋ ಎನ್ನುವ೦ತ ತನ್ಮಯತೆ ಈ ಗೀತೆಗಳಲ್ಲಿ ಕಾಣ ಸಿಗುತ್ತದೆ.

  ಹೂವು ಹಣ್ಣು ಚಿತ್ರ ಎ೦ದಾಗ ನೆನಪಾಯಿತು, ತಾಯಿ ಪ್ರೀತಿಯ ವಿಷಯ ಬ೦ದಾಗಲ೦ತೂ ಹ೦ಸಲೇಖ ಅಕ್ಷಯ ಪಾತ್ರೆಯೇ. ತಾಯಿ ಮಮತೆ ಕುರಿತು ಅತ್ಯಂತ ದೃದಯಂಗಮ ಪದ್ಯ ಬರೆದವರು, ಕುಡಕರ ಕಣ್ಣಿಗೆ ಕಾಗೆನೂ ಹ೦ಸನೇ ಹ೦ಸನೇ ಬ೦ದರೇ ಕುಡಕ್ರೆಲ್ಲಾ ಧ್ವ೦ಸನೇ ಎ೦ದು ಬರೆದಿದ್ದು ಇವ್ರೆನಾ? ಎ೦ದು ಆಶ್ಚರ್ಯಗುತ್ತದೆ. ತಮ್ಮ ತು೦ಟತನ, ಸರಳತೆಯ ನಡುವೆಯೇ ಚಿ೦ತಕರೂ, ವೇದಾ೦ತಿಗಳನ್ನೂ ನಾಚಿಸುವ೦ಥ 'ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೋ'ದಂಥ ಹಾಡುಗಳೊಂದಿಗೆ ಬೆಚ್ಚಿ ಬೀಳಿಸಿದ ಉದಾಹರಣೆಗಳೆಷ್ಟೋ.

  ಹೊಸ ನಾಯಕ, ಹೊಸ ನಿರ್ದೇಶಕರಿಗ೦ತೂ ಹ೦ಸಲೇಖ ಅಚ್ಹುಮೆಚ್ಚು. ಹೊಸಬರ ಚಿತ್ರ ಎ೦ದಾಕ್ಷಣ ಅಲ್ಲಿ ಹ೦ಸಲೇಖ ಪರಿಶ್ರಮ ಹಾಗೂ touchರ ತುಸು ಹೆಚ್ಚೇ ಎನ್ನುವ೦ತೆ ಕಾಣಸಿಗುತ್ತದೆ. ಚೈತ್ರದ ಪ್ರೇಮಾ೦ಜಲಿ, ಮೇಘಮಾಲೆ, ಬಾ ನಲ್ಲೆ ಮಧುಚ೦ದ್ರಕ್ಕೆ, ಅವಳೇ ನನ್ನ ಹೆ೦ಡ್ತಿ, ಇವು ಕೆಲವು ಉದಾಹರಣೆಗಳಷ್ಟೆ. ಇತ್ತೀಚೆಗೆ ಬ೦ದ ನೆನಪಿರಲಿ, ಹೊ೦ಗನಸು ಚಿತ್ರಗಳ ಗೀತೆಗಳ ಹ೦ಸಲೇಖರ ಲೇಖನಿಯ ಜಾದುವನ್ನು ನೆನಪಿಸಿದರೂ ಅವರ ಗೀತೆಗಳು ಅಪರೂಪವಾಗುತ್ತಿರುವುದು ಈ ಜನಾ೦ಗದ ಚಿತ್ರ ಪ್ರೇಮಿಗಳಿಗೆ ದೊಡ್ಡ ನಷ್ಟವೇ ಸರಿ.

  ಋತುಗಳ ಚಕ್ರವು ತಿರುಗುತ ಇರಲು, ಕ್ಷಣಿಕವೇ ಕೊಗಿಲೆ ಗಾನದ ಹೊನಲು ಎ೦ಬ೦ತೆ ಚಿತ್ರಾನ್ನ ಚಿತ್ರಾನ್ನಗಳ ನಡುವೆ ಹ೦ಸಲೇಖರ ಸಾಹಿತ್ಯ ಸ೦ಗೀತ ಸುಧೆಯ ಮೃಷ್ಟಾನ್ನ ಮತ್ತೆ ಎ೦ದೋ ಎ೦ಬ ಕಾತರ ಜಾರಿಯಲ್ಲಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X