»   » ಎಸ್ ಜಾನಕಿ ಅವರ ಯಾವ ಕನ್ನಡ ಹಾಡು ನಿಮಗಿಷ್ಟ?

ಎಸ್ ಜಾನಕಿ ಅವರ ಯಾವ ಕನ್ನಡ ಹಾಡು ನಿಮಗಿಷ್ಟ?

Posted By:
Subscribe to Filmibeat Kannada

'ದಕ್ಷಿಣ ಭಾರತದ ಹಾಡುಹಕ್ಕಿ' ಎಂದೇ ಕರೆಸಿಕೊಂಡಿರುವ ಎಸ್ ಜಾನಕಿ ಅವರನ್ನು ನೆನಪು ಮಾಡಿಕೊಳ್ಳಲು ಇದಕ್ಕಿಂತಲೂ ಸುದಿನ ಇನ್ನೊಂದಿಲ್ಲ. ಏಕೆಂದರೆ ಅವರಿಗೆ ಇಂದು (ಏ.23) ಹುಟ್ಟುಹಬ್ಬ. ಗಾನ ಕೋಗಿಲೆ, ಗಾನ ಸರಸ್ವತಿ, ಗಾನ ಸಾಮ್ರಾಜ್ಞಿಗೆ ಇಂದು 77ನೇ ಜನುಮದಿನ.

ಎಸ್ ಜಾನಕಿ ಅವರ ದೇಹಕ್ಕೆ ವಯಸ್ಸಾಗಿದ್ದರೂ ಕಂಠಕ್ಕೆ ಮಾತ್ರ ಇನ್ನೂ 20 ಪ್ರಾಯ. ಅವರ ಕಂಠಸಿರಿಗೆ ಮಾರುಹೋಗದವರಿಲ್ಲ. ಈ ಕೋಗಿಲೆ ಕಂಠಸಿರಿಯಿಂದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನ ಸಾವಿರಾರು ಹಾಡುಗಳು ಹೊರಹೊಮ್ಮಿವೆ.

Happy birthday to playback singer S Janaki

ತನ್ನ 50 ವರ್ಷಗಳ ವೃತ್ತಿಬದುಕಿನಲ್ಲಿ 2007ರ ಸಮಯಕ್ಕೆ ಜಾನಕಿ ಹಾಡಿದ ಹಾಡುಗಳ ಸಂಖ್ಯೆ 20,000. ಇನ್ನು ಪ್ರಶಸ್ತಿ, ಬಿರುದುಗಳ ವಿಚಾರಕ್ಕೆ ಬಂದರೆ ಲೆಕ್ಕವಿಲ್ಲದಷ್ಟು ಸನ್ಮಾನ, ಬಹುಮಾನಗಳಿಗೆ ಪಾತ್ರವಾಗಿದ್ದಾರೆ. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಜೊತೆಗೆ 31 ಬಾರಿ ವಿವಿಧ ರಾಜ್ಯ ಪ್ರಶಸ್ತಿಗಳು ಅವರನ್ನು ವರಿಸಿವೆ.

ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡಿದಿರುವ ಜಾನಕಿ ಅವರು 2013ರಲ್ಲಿ ಭಾರತ ಸರ್ಕಾರ ಕೊಟ್ಟಂತಹ ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದರು. ಇದಕ್ಕೆ ಕಾರಣವೂ ಇಲ್ಲದಿಲ್ಲ. ದಕ್ಷಿಣದ ಕಲಾವಿದರನ್ನು ಕಡೆಗಣಿಸಲಾಗುತ್ತಿದ್ದು, ತಮ್ಮಂತಹವರಿಗೆ ತುಂಬಾ ತಡವಾಗಿ ಈ ಪ್ರಶಸ್ತಿ ಕೊಡುತ್ತಿದ್ದೀರೆಂದು ಆ ಪ್ರಶಸ್ತಿಯನ್ನು ಒಲ್ಲೆ ಎಂದರು.

ಕನ್ನಡದಲ್ಲಿ ಅತ್ಯಂತ ಮಧುರವಾದ ಸೋಲೋ ಹಾಡುಗಳನ್ನು ಕೊಟ್ಟ ಖ್ಯಾತಿ ಜಾನಕಿ ಅವರಿಗಿದೆ. ಅವರ ತಾಯ್ನುಡಿ ಕನ್ನಡ ಅಲ್ಲದಿದ್ದರೂ ಸ್ಪಷ್ಟವಾಗಿ, ಸುಲಲಿತವಾಗಿ ಕನ್ನಡ ಹಾಡುಗಳು ಹಾಲು ಜೇನಿನಂತೆ ಅವರ ಕಂಠಸಿರಿಯಿಂದ ಹೊರಹೊಮ್ಮಿವೆ.

ಎಸ್ ಜಾನಕಿ ಅವರು ಕನ್ನಡದಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದರೂ ಅವರಿಗೆ ನಿಜವಾಗಿಯೂ ಸವಾಲಾದ ಹಾಡು ಯಾವುದು ಎಂದರೆ ಥಟ್ಟನೆ ಅವರು ಹೇಮಾವತಿ (1977) ಚಿತ್ರದ "ಶಿವ ಶಿವ ಎನ್ನದ ನಾಲಿಗೆ ಏಕೆ ಶಿವನನು ಸ್ಮರಿಸದ ಜೀವವು ಏಕೆ" ಎಂದು ಹೇಳುತ್ತಾರೆ.

ಜಾನಕಿ ಹಾಡಿರುವ ಕನ್ನಡ ಹಾಡುಗಳು ಕೇವಲ ಸಂಖ್ಯೆಯಲ್ಲಷ್ಟೇ ಅಲ್ಲದೆ ಗುಣಮಟ್ಟದಲ್ಲೂ ಅತ್ಯುತ್ತಮವಾಗಿರುವುದು ವಿಶೇಷ. ಶಾಸ್ತ್ರೀಯ ಧಾಟಿಯ "ಭಾರತಭೂಷಿರ" ದಿಂದ ಹಿಡಿದು ಭಾವನಾತ್ಮಕವಾಗಿ ಹಿಡಿದಿಡುವ "ಸುಖದ ಸ್ವಪ್ನದ ಗಾನ" ಆಗಿರಬಹುದು, ಗಗನವು ಎಲ್ಲೋ ಎಂಬ ಹರ್ಷದಾಯಕ ಧಾಟಿ, ಕಂಗಳು ತುಂಬಿರಲು ಎಂಬ ಕರುಣಾಜನ ರಸ ಉಕ್ಕಿಸುವ ಹಾಡುಗಳು, ಇಂದು ಎನಗೆ ಗೋವಿಂದ ಎಂದು ಭಕ್ತಿರಸ ಉಕ್ಕಿಸುವ, ದೇವರ ಆಟ ಬಲ್ಲವರ್ಯಾರು ಎಂಬ ಆಧ್ಯಾತ್ಮಕ ಚಿಂತನೆ ಹಕ್ಕುವ ಹಾಡುಗಳನ್ನು ಕೇಳಿದರೆ ಇಂದಿಗೂ ಮೈ ಪುಳಕಗೊಳ್ಳುತ್ತದೆ.

ಮೂಡಲ ಮನೆಯ (ಬೆಳ್ಳಿಮೋಡ), ನೋಡು ಬಾ ನೋಡು ಬಾ (ಮಿಸ್ ಲೀಲಾವತಿ), ಪಂಚಮವೇದ (ಗೆಜ್ಜೆಪೂಜೆ), ಯಾವೂರವ್ವ ಇವ ಯಾವುರವ್ವ (ಎಡಕಲ್ಲುಗುಡ್ಡದ ಮೇಲೆ), ಯಾವ ಜನ್ಮದ ಮೈತ್ರಿ (ಗೌರಿ), ಆಕಾಶದೀಪವು ನೀನು (ಪಾವನ ಗಂಗ), ಬಾನಲ್ಲು ನೀನೆ (ಬಯಲುದಾರಿ), ನೀ ಇರಲು ಜೊತೆಯಲ್ಲಿ (ಗುಣ ನೋಡಿ ಹೆಣ್ಣು ಕೊಡು)...

ನನ್ನೆದೆ ಕೋಗಿಲೆಯ ಎಂದು ಹಾಡಿದ ಜಾನಕಿ ಅವರಿಗೆ ನಾದಬ್ರಹ್ಮ ಹಂಸಲೇಖ ಅವರು ಕೊಟ್ಟಂತಹ ಬಿರುದು 'ನಾದ ದೇವತೆ' ಎಂದು. ಜಾನಕಿ ಅವರ ಸಿರಿಕಂಠದಿಂದ ಹಲವಾರು ಹಾಡುಗಳು ಹೊರಹೊಮ್ಮಿದ್ದರೂ ಕೆಲವೊಂದು ಹಾಡುಗಳನ್ನು ಇಲ್ಲಿ ನೀಡಲಾಗಿದೆ. ನಿಮಗ್ಯಾವ ಕನ್ನಡ ಹಾಡು ಇಷ್ಟ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ. (ಫಿಲ್ಮಿಬೀಟ್ ಕನ್ನಡ)

English summary
Sishtla Sreeramamurthy Janaki, commonly known as S. Janaki, celebrating her 77th birthday on 23rd of Aril. Wishing "The Nightingale of the South" S Janaki a very Happy Birthday! By the by which is your favourite Kannada song of S.Janaki?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada