»   » ಚಂದಕ್ಕಿಂತ ಚಂದ 'ಚಂದ್ರ'ನ ಒಂದೊಂದು ಹಾಡುಗಳು

ಚಂದಕ್ಕಿಂತ ಚಂದ 'ಚಂದ್ರ'ನ ಒಂದೊಂದು ಹಾಡುಗಳು

By: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada

ಕನ್ನಡ ಚಿತ್ರ ಗೀತೆಗಳ ರಸಕರಿಗೆ ಇದೇಕೋ ಸಮೃದ್ಧಿಯ ಕಾಲವೆಂದೆನಿಸುತ್ತದೆ. ಒಂದಾದ ಮೇಲೊಂದು ಉತ್ತಮ ಗೀತೆಗಳನ್ನು ಸವಿಯುವ ಸೌಭಾಗ್ಯ ನಮ್ಮದು. ಇತ್ತೀಚೆಗೆ ಬರುತ್ತಿರುವ ಸುಮಧುರ ಹಾಡುಗಳ ಗೊಂಚಲಿಗೆ ಮತ್ತೊಂದು ಸವಿ ಸೇರ್ಪಡೆ ಚಂದ್ರ ಚಿತ್ರದ ಗೀತೆಗಳು. ಶ್ರಿಯಾ ಸರನ್ ಹಾಗೂ ಪ್ರೇಮ್ ಅಭಿನಯದ ರೂಪ ಅಯ್ಯರ್ ನಿರ್ದೇಶನದ 'ಚಂದ್ರ' ಚಿತ್ರದ ಹಾಡುಗಳನ್ನು ಕೇಳುವುದೇ ಒಂದು ಸುಂದರ ಅನುಭವ.

ಶುಕ್ರ, ಸತ್ಯ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿ ಎಲೆ ಮರೆ ಕಾಯಿಯಂತೆ ಉಳಿದು ಹೋಗಿದ್ದ ಗೌತಮ್ ಶ್ರೀವತ್ಸ ಸಂಗೀತ ಈ ಚಿತ್ರದಲ್ಲಿ ಹಣ್ಣಾದಂತೆ ಭಾಸವಾಗುತ್ತದೆ. ಶಾಸ್ತ್ರೀಯ ಸಂಗೀತದಲ್ಲಿನ ಅವರ ಸಾಧನೆ ಹಾಗೂ ಪರಿಣಿತಿ ಪ್ರತಿ ಹಾಡಿನಲ್ಲೂ ಎದ್ದು ಕಂಡರೆ, ಮುಂದೆ ಅವರು ಏರಬಹುದಾದ ಎತ್ತರದ ಬಗ್ಗೆ ಭರವಸೆ ಮೂಡುತ್ತದೆ.

ನಮ್ಮದೇ ಆದ ವಾದ್ಯಗಳ ಸಮರ್ಪಕ ಬಳಕೆ ಹಾಗೂ ತಾಳ ವಾದ್ಯಗಳ ವಿನೂತನವಾದ ಸಂಯೋಜನೆಯಿಂದ ಗೌತಮ್ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಉತ್ತಮವಾದ ಮ್ಯೂಸಿಕ್ ಸಿಸ್ಟಮ್ಮಿನಲ್ಲಿ ಕೇಳಿದಾಗ ಗೌತಮ್ ರವರ ಈ ಚಿತ್ರದಲ್ಲಿನ ಪ್ರಯೋಗ ಹಾಗೂ ಶ್ರಮ ಎದ್ದು ಕಾಣುತ್ತದೆ. ಹಾಡುಗಳಲ್ಲಿನ ಕೋರಸ್ ಹಾಗೂ ಸ್ವರಗಳ ಬಳಕೆ ಸಹಾ ಅತ್ಯುತ್ತಮವಾಗಿ ಮೂಡಿ ಬಂದಿದೆ.

ಇತರ ಖ್ಯಾತ ಸಂಗೀತ ನಿರ್ದೇಶಕರ, ಅದರಲ್ಲೂ ಎ ಆರ್ ರೆಹಮಾನರ ಸಂಗೀತದ ಛಾಯೆ ಕೆಲವೊಂದು ಕಡೆ ನವಿರಾಗಿ ಕೇಳಿ ಬಂದರೂ, ಅವನ್ನು ಮೀರಿಸುವ ಸ್ವಂತಿಕೆಯ ಶಕ್ತಿ ಹಾಡುಗಳಲ್ಲಿದೆ. ಸಂಗೀತ ಪ್ರಧಾನವಾಗಿರುವ ಇಂತಹ ಹಾಡುಗಳಿಗೆ ನೃತ್ಯ ಹಾಗೂ ದೃಶ್ಯ ಸಂಯೋಜನೆ ಮಾಡುವುದು ಸವಾಲಿನ ಕೆಲಸವೇ ಸರಿ. ಈ ಹಾಡುಗಳನ್ನು ಕೇಳುವಾಗ ಅವು ತೆರೆಯ ಮೇಲೆ ಹೇಗೆ ಬಂದಿರಬಹುದು ಎಂಬ ಸಹಜ ಕುತೂಹಲ ಮೂಡುತ್ತದೆ.

ಧಿರನಾ ಧಿರನಾ

ಸಾಹಿತ್ಯ : ರೂಪಾ ಐಯ್ಯರ್
ಹಾಡಿರುವವರು : ಕಾರ್ತಿಕ್

ಕಾರ್ತಿಕ್ ಹಾಡಿರುವ "ಧಿರನಾ ಧಿರನಾ" ಒಂದು ಸುಂದರವಾದ ಹಾಡು. ಕಾರ್ತಿಕ ನಿಜಕ್ಕೂ ಅದ್ಭುತವಾದ ರೀತಿಯಲ್ಲಿ ಹಾಡಿದ್ದಾರೆ. ಉತ್ತಮವಾದ ಸ್ವರ ಸಂಯೋಜನೆಗೆ ಜೊತೆಯಾಗಿ ಸುಂದರವಾದ ಆಲಾಪನೆಗಳು ಹಾಗೂ ಅದಕ್ಕೆ ತಕ್ಕುದಾದ ತಾಳ ವಾದ್ಯಗಳ ಬಳಕೆಯಿಂದಾಗಿ ಹಾಡು ಮನ ಮೋಹಕವಾಗಿ ಮೂಡಿ ಬಂದಿದೆ. ಎಲ್ಲವೂ ಸುಲಲಿತವಾಗಿ ಮಿಶ್ರಿತವಾಗಿರುವುದರಿಂದ ಮತ್ತೆ ಮತ್ತೆ ಕೇಳಬೇಕೆನಿಸುವ ಗುಣ ಹಾಡಿಗೆ ಲಭಿಸಿದೆ.

ಮೌನ ಮೌನದಲಿ

ಸಾಹಿತ್ಯ : ರೂಪಾ ಐಯ್ಯರ್
ಹಾಡಿರುವವರು : ಸೋನು ನಿಗಂ, ಅನುರಾಧಾ ಭಟ್

ಸೋನು ನಿಗಮ್ ಹಾಗೂ ಅನುರಾಧ ಭಟ್ ಹಾಡಿರುವ " ಮೌನ ಮೌನದಲಿ" ಗೀತೆ ಮತ್ತೊಂದು ಅತ್ಯುತ್ತಮವಾದ ಗೀತೆ. ಶಾಸ್ತ್ರೀಯ ಶೈಲಿಯಲ್ಲೇ ಇದ್ದರೂ ನಡು ನಡುವೆ ಫ್ಯೂಶನ್ ಶೈಲಿಯಲ್ಲಿಯೂ ಹಾಡು ಮುಂದುವರಿಯುತ್ತದೆ. ಸಾಹಿತ್ಯವೂ ಉತ್ತಮವಾಗಿದೆ. ಕೊನೆಗೆ ಸೋನು ನಿಗಮ್ ಗಿಂತ ಅನುರಾಧ ಭಟ್ ರವರೇ ಹೆಚ್ಚಿನ ಅಂಕ ಗಳಿಸುತ್ತಾರೆ. ಎರಡೂ ಶೈಲಿಯಲ್ಲೂ ಗೌತಮ್ ಗೆಲ್ಲುತ್ತಾರೆ.

ನೀ ಸೆಳೆವೆ ಬಿಡದೆ ನನ್ನನ್ನು

ಸಾಹಿತ್ಯ : ಜಯಂತ್ ಕಾಯ್ಕಿಣಿ
ಹಾಡಿರುವವರು : ಅನುರಾಧಾ ಭಟ್, ಬದರಿ ಪ್ರಸಾದ್

"ನೀ ಸೆಳೆವೆ ಬಿಡದೆ ನನ್ನನ್ನು" ಗೀತೆ ತನ್ನ ಮೊದಲ ಸಾಲಿನಿಂದಲೇ ಮನ ಸೆಳೆಯುತ್ತದೆ. ಅನುರಾಧ ಭಟ್ ತಮ್ಮ ಕಂಠದಿಂದ ಈ ಸೆಳೆತವನ್ನು ಮತ್ತಷ್ಟು ಗಟ್ಟಿ ಗಳಿಸುತ್ತಾ ಹೋಗುತ್ತಾರೆ. ಬದ್ರಿಯವರು ಉತ್ತಮವಾಗಿ ಧ್ವನಿಗೂಡಿಸಿದ್ದಾರೆ. ಕೆಲವೊಮ್ಮೆ ಹಾಡಿನ ರಾಗ ಎಲ್ಲೋ ಕೇಳಿಸಿದಂತೆ ಅನಿಸಿದರೂ ಮರು ಕ್ಷಣದಲ್ಲೇ ಹೊಸ ತಿರುವುಗಳನ್ನು ಪಡೆಯುತ್ತಾ ಹೊಸ ಅನುಭವ ಕೊಡುತ್ತದೆ. ಹಾಡು ತನ್ನ ವಿಶಿಷ್ಠವಾದ ರಿದಮ್ ನಿಂದಲೇ ಮೆಚ್ಚುಗೆಯಾಗುತ್ತದೆ.

ಠಸ್ಸೆ ಒತ್ತು ಈ ಕಾಲಿಗೆ

ಸಾಹಿತ್ಯ : ಎ ಪಿ ಅರ್ಜುನ್
ಹಾಡಿರುವವರು : ಟಿಪ್ಪು

ಇಷ್ಟೆಲ್ಲಾ ಸುಂದರ, ಸುಮಧುರ ಹಾಡುಗಳ ನಡುವೆ ಒಂದು ಮಾಸ್ ಸಾಂಗ್ ಇಲ್ಲದಿದ್ದರೆ ಹೇಗೆ ಎಂಬ ಪ್ರಶ್ನೆಗೆ "ಟಸ್ಸೆ ಒತ್ತು ಈ ಕಾಲಿಗೆ" ಹಾಡು ಭರ್ಜರಿಯಾದ ಉತ್ತರ. ನಾಯಕನ ನೃತ್ಯಕ್ಕೆ ಹೇಳಿ ಮಾಡಿಸಿದಂತಿರುವ ಈ ಹಾಡಿನಲ್ಲಿ ಗೌತ್ತಮ್ ತಮ್ಮ ಛಾಪನ್ನು ಒತ್ತುತ್ತಾರೆ. ಇತ್ತೀಚಿನ ಇತರ ಮಾಸ ಹಾಡುಗಳಿಗಿಂತ ವಿಭಿನ್ನವಾಗಿದೆ ಎನ್ನುವುದೇ ಈ ಹಾಡಿನ ಹೆಗ್ಗಳಿಕೆ. ಇಂತಹ ಹಾಡುಗಳಿಗೆ ಅನಿವಾರ್ಯವೆಂಬಂತೆ ಟಿಪ್ಪು ರವರ ಧ್ವನಿ ಬಳಕೆಯಾಗಿದೆ ಹಾಗೂ ಅದನ್ನು ಅವರು ಸಹಾ ಉತ್ತಮವಾಗಿಯೇ ಬಳಸಿಕೊಂಡಿದ್ದಾರೆ.

ಓಂಕಾರದಲ್ಲಿ ಝೇಂಕಾರದಲ್ಲಿ

ಸಾಹಿತ್ಯ : ಡಾ. ನಾಗೇಂದ್ರ ಪಸಾದ್
ಹಾಡಿರುವವರು : ಚಿತ್ರ, ಮಧು ಬಾಲಕೃಷ್ಣ, ಬದರಿ ಪ್ರಸಾದ್

"ಓಂಕಾರದಲ್ಲಿ ಝೇಂಕಾರದಲ್ಲಿ" ಮತ್ತೊಂದು ಸುಮಧುರ ಶಾಸ್ತ್ರೀಯ ಸಂಗೀತ ಧಾಟಿಯ ಹಾಡು. ಬದ್ರಿ ಪ್ರಸಾದ್, ಚಿತ್ರಾ ಹಾಗೂ ಮಧು ಬಾಲಕೃಷ್ಣರ ಧ್ವನಿಯಲ್ಲಿ ಮೂಡಿ ಬಂದಿರುವ ಕೃಷ್ಣನ ಸ್ತುತಿ ಗೀತೆಯಂತಿರುವ ಈ ಹಾಡು ಕೇಳುಗರ ಮನ ಸೆಳೆಯುವುದರಲ್ಲಿ ಸಂದೇಹವೇ ಇಲ್ಲ. ಅದೆಷ್ಟೇ ಹೊಸ ಧಾಟಿಯ ಹಾಡುಗಳು ಬಂದರೂ ಶಾಸ್ತ್ರೀಯ ಸಂಗೀತದ ಛಾಯೆ ಇರುವ ಗೀತೆಗಳಿಗೆ ತನ್ನದೇ ಆದ ಕಂಪಿದೆ ಎನ್ನುವುದನ್ನು ಈ ಹಾಡು ಮತ್ತೊಮ್ಮೆ ನಿರೂಪಿಸುತ್ತದೆ. ಉತ್ತಮವಾದ ಆಲಾಪನೆ, ಸ್ವರ ಹಾಗೂ ವಾದ್ಯಗಳ ಬಳಕೆಯಿಂದಾಗಿ ಈ ಹಾಡು ನೆನಪಿನಲ್ಲಿ ಉಳಿಯುತ್ತದೆ. ಗೌತಮ್ ರ ಮೇಲಿನ ಭರವಸೆ ಈ ಹಾಡಿನಿಂದ ಮತ್ತಷ್ಟು ಹೆಚ್ಚುತ್ತದೆ.

English summary
Much awaited 'Chandra' audio review. Roopa Iyer directed this movie and Prem and Shreya Saran in lead role. 
Please Wait while comments are loading...