»   » 'ದೇವದಾಸ'ನಿಗೆ ಮತ್ತೆ ಶರಣಾದನೆ ಗೋಲ್ಡನ್ ಸ್ಟಾರ್?

'ದೇವದಾಸ'ನಿಗೆ ಮತ್ತೆ ಶರಣಾದನೆ ಗೋಲ್ಡನ್ ಸ್ಟಾರ್?

Subscribe to Filmibeat Kannada

ಸುದೀರ್ಘ ಸಮಯದ ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು 'ಮುಂಗಾರು ಮಳೆ' ಸುರಿಯಲಿದೆಯೇ? ಸತತ ಸೋಲುಗಳಿಂದ ಕಂಗೆಟ್ಟಿರುವ ಚಿತ್ರರಂಗದಲ್ಲಿ ಹೊಸ ಸಂಚಲನ ಉಂಟಾಗಲಿದೆಯೇ? ಹೌದು ಎನ್ನುತ್ತಾರೆ 'ಮಳೆಯಲಿ ಜೊತೆಯಲಿ' ಬರುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ .

ಈಗಾಗಲೇ ಚಿತ್ರದ ಧ್ವನಿಸುರುಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು 'ಮಳೆಯಲಿ ಜೊತೆಯಲಿ' ಮೇಲೆ ನಿರೀಕ್ಷೆಗಳೂ ಮುಗಿಲು ಮುಟ್ಟಿವೆ. 'ಮಳೆಯಲಿ ಜೊತೆಯಲಿ' ಚಿತ್ರದಲ್ಲೂ ಗಣೇಶ್ ಮತ್ತೆ 'ದೇವದಾಸ್'ಗೆ ಶರಣಾದರೆ? ಚಿತ್ರದ ಭಿತ್ತಿ ಚಿತ್ರಗಳನ್ನು ನೋಡಿದರೆ ಈ ಅನುಮಾನ ಕಾಡದಿರದು.

'ಮುಂಗಾರು ಮಳೆ' ಚಿತ್ರದಲ್ಲಿ 'ದೇವದಾಸ್' ಹೆಸರಿನ ಮೊಲ ಗಣೇಶ್ ಗೆ ಸಾಥ್ ನೀಡಿತ್ತು. ಗಣೇಶನ ಕಷ್ಟ ಸುಖ, ನೋವು ನಲಿವಿಗೆ ಮೂಕ ಸಾಕ್ಷಿಯಾಗಿತ್ತು. ಗಣೇಶ್ ತನ್ನ್ನ ಪ್ರೇಮವನ್ನು ದೇವದಾಸನ ಬಳಿ ನಿವೇದಿಸಿಕೊಂಡಿದ್ದ. ದೇವದಾಸ್ ಸಹ ಗಣೇಶನ ಚೆಲ್ಲಾಟ, ತುಂಟಾಗಳನ್ನು ಹೇಗೋ ಸಹಿಸಿಕೊಂಡಿತ್ತು. ಇದೀಗ ಗಣೇಶ್ ಮತ್ತೊಮ್ಮೆ ದೇವದಾಸನ ಹಿಂದೆ ಬಿದ್ದಿದ್ದಾನೆಯೇ?

ಈ ಪ್ರಶ್ನೆಗೆ ಉತ್ತರಕ್ಕಾಗಿ ಡಿಸೆಂಬರ್ 11ರ ತನಕ ಕಾಯಬೇಕು. ಕಾರಣ 'ಮಳೆಯಲಿ ಜೊತೆಯಲಿ' ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಾಕತಾಳೀಯ ಎಂಬಂತೆ ಈ ಚಿತ್ರದಲ್ಲೂ ಮೊಲದೊಂದಿಗೆ ಗಣೇಶ ಕಾಣಿಸಿದ್ದಾನೆ. ಸಾಲದಕ್ಕೆ 2006 ಡಿಸೆಂಬರ್ ತಿಂಗಳಲ್ಲೇ 'ಮುಂಗಾರು ಮಳೆ' ತೆರೆಕಂಡಿತ್ತು. ಗೋಲ್ಡನ್ ಮೂವೀಸ್ ಲಾಂಛನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಗಣೇಶ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸುತ್ತಿರುವ 12ನೇ ಚಿತ್ರವಾಗಲಿದೆ.

ಕಣ್ಮನ ಸೆಳೆಯುವ ಛಾಯಾಗ್ರಹಣ, ಕಿವಿಗೆ ಇಂಪಾದ ಹಾಡುಗಳು, ಕುತೂಹಲಕಾರಿ ತಿರುವುಗಳು ಚಿತ್ರದ ಹೈಲೈಟ್ ಎನ್ನುತ್ತಾರೆ ಗಣೇಶ್. 'ಹಾಗೆ ಸುಮ್ಮನೆ' ಚಿತ್ರದ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ಪ್ರೀತಂ ಗುಬ್ಬಿ ಈ ಚಿತ್ರವನ್ನು ಬಹಳ ಜಾಣ್ಮೆಯಿಂದ ತೆರೆಗೆ ತರುತ್ತಿದ್ದಾರೆ.

ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಪ್ರತಿವರ್ಷ ಒಂದೊಂದು ಚಿತ್ರ ನಿರ್ಮಿಸುವ ಭರವಸೆಯನ್ನು ಚಿತ್ರದ ನಿರ್ಮಾಪಕಿ ಹಾಗೂ ಗಣೇಶ್ ರ ಪತ್ನಿ ಶಿಲ್ಪಾ ಈಗಾಗಲೆ ನೀಡಿದ್ದಾರೆ. ಚಿತ್ರಕ್ಕಾಗಿ ಶಿಲ್ಪಾ ಬಹಳಷ್ಟು ಶ್ರಮ ತೆಗೆದುಕೊಂಡಿದ್ದು ಎರಡು ತಿಂಗಳ ಮಗು ಚಾರಿತ್ಯ್ರಾ ಜೊತೆಗೆ ಮಳೆಯಲಿ ಜೊತೆಯಲಿ ಬಹಳಷ್ಟು ನೆಂದಿದ್ದಾರೆ ಎನ್ನುತ್ತಾರೆ ಗಣೇಶ್. ಒಟ್ಟಾರೆಯಾಗಿ ಮುಂಗಾರು ಮಳೆ ದಿನಗಳು ಗಣೇಶನಿಗೆ ಮತ್ತೆ ಬರುವಂತಾಗಲಿ ಎಂದು ಆಶಿಸೋಣ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada