For Quick Alerts
  ALLOW NOTIFICATIONS  
  For Daily Alerts

  ಸೈಕೊದಿಂದ ಕನ್ನಡಕ್ಕೆ ಮೂವರು ಪ್ರತಿಭೆಗಳ ಬಳುವಳಿ

  By Staff
  |

  ಮಾನಸಿಕ ಅಸ್ವಸ್ಥನೊಬ್ಬನ ಪ್ರಣಯ ಪ್ರಸಂಗದ ಕಥೆ ಪ್ರೇಕ್ಷಕರ ಮೇಲೆ ಮಾಡಿರುವ ಪರಿಣಾಮ ಏನೇ ಇರಲಿ, ಮೂವರು ಅಪ್ಪಟ ಕನ್ನಡದ ಪ್ರತಿಭೆಗಳಾದ ರಘು ದೀಕ್ಷಿತ್, ಧನುಷ್ ಮತ್ತು ಅನಿತಾರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ದೇವದತ್ ಮತ್ತು ನಿರ್ಮಾಪಕ ಗುರುದತ್ತ ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು.

  * ಪ್ರಸಾದ ನಾಯಿಕ

  'ಸೈಕೊ' ಬಿಡುಗಡೆಯಾಗುವವರೆಗೆ ಚಿತ್ರದ ನಾಯಕ ಮತ್ತು ನಾಯಕಿಯ ಹೆಸರುಗಳನ್ನು ನಿರ್ದೇಶಕ ದೇವದತ್ ಬಹಿರಂಗಪಡಿಸಿರಲಿಲ್ಲ. ಅವರಿಬ್ಬರ ಹೆಸರುಗಳನ್ನು ರಹಸ್ಯವಾಗಿಟ್ಟಿದ್ದು ಏಕೆಂಬುದು ಚಿತ್ರದ ಬಿಡುಗಡೆಯ ನಂತರವೂ ಚಿದಂಬರ ರಹಸ್ಯವೆ. ಪ್ರಥಮ ಪ್ರದರ್ಶನದಂದು ಕಂಡುಬಂದ ಜನಜಂಗುಳಿಯನ್ನು ನೋಡಿದರೆ ನಾಯಕ, ನಾಯಕಿ ಮತ್ತು ಚಿತ್ರದ ಪ್ಲಾಟ್ ಬಗ್ಗೆ ನಿರ್ದೇಶಕರು ಚಿತ್ರಪ್ರೇಮಿಗಳಲ್ಲಿ ಹುಟ್ಟುಹಾಕಿದ್ದ ಕುತೂಹಲಕ್ಕೆ ಸಾಕ್ಷಿ. ನಿರ್ದೇಶಕರ ಪ್ರಚಾರ ಗಿಟ್ಟಿಸುವ ತಂತ್ರಗಾರಿಕೆ ಏನೇ ಆಗಿದ್ದರೂ ಚಿತ್ರದ ಪ್ರಮುಖ ಆಕರ್ಷಣೆ ರಘು ದೀಕ್ಷಿತ್ ಸಂಯೋಜಿಸಿ ಹಾಡಿದ 'ನಿನ್ನ ಪೂಜೆಗೆ ಬಂದೆ ಮಹದೇಶ್ವರ' ಹಾಡೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇನ್ಮುಂದೆ ಪ್ರತಿ ಸಮಾರಂಭಗಳಲ್ಲಿ, ಜಾತ್ರೆಗಳಲ್ಲಿ ಸಾಂಪ್ರದಾಯಿಕ ಹಾಡುಗಳ ಜೊತೆ ರಾಕ್ ಮಿಶ್ರಿತ ಈ ಹಾಡು ಕೂಡ ಗುಡುಗುಡಿಸಿದರೆ ಆಶ್ಚರ್ಯವೂ ಇಲ್ಲ.

  ಮಾನಸಿಕ ಅಸ್ವಸ್ಥನೊಬ್ಬನ ಪ್ರಣಯ ಪ್ರಸಂಗದ ಕಥೆ ಪ್ರೇಕ್ಷಕರ ಮೇಲೆ ಮಾಡಿರುವ ಪರಿಣಾಮ ಏನೇ ಇರಲಿ, ಮೂವರು ಅಪ್ಪಟ ಕನ್ನಡದ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ದೇವದತ್ ಮತ್ತು ನಿರ್ಮಾಪಕ ಗುರುದತ್ತ ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು. ಒಬ್ಬರು ಹಾಡು ಮತ್ತು ಸಂಗೀತದ ಮುಖಾಂತರ ಕನ್ನಡನಾಡಿನ ಮನೆಮಾತಾಗಿರುವ ರಘು ಆದರೆ, ಇನ್ನಿಬ್ಬರು ನಾಯಕ ಧನುಷ್ ಮತ್ತು ನಾಯಕಿ ಅನಿತಾ. ರಘು ಈಗಾಗಲೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಗೀತದ ಸಹಿ ಹಾಕಿದ್ದರೆ, ಧನುಷ್ ಮತ್ತು ಅನಿತಾ ಚಿತ್ರರಂಗದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಕನ್ನಡದ ಪ್ರತಿಭೆಗಳು.

  ತಮಾಷೆಯೆಂದರೆ, ಧನುಷ್ ಮತ್ತು ಅನಿತಾ ಇಬ್ಬರೂ ಚಿತ್ರರಂಗದಲ್ಲಿ ಮಿಂಚಬೇಕೆಂಬ ಕನಸನ್ನು ಹೊತ್ತುಕೊಂಡೇ ಅಡಿಯಿಟ್ಟಿದ್ದರೂ ಇಬ್ಬರೂ 'ಸೈಕೊ' ಚಿತ್ರಕ್ಕೆ ನಾಯಕ, ನಾಯಕಿಯರಾಗಿದ್ದು ವಿಧಿಯ ಲೀಲೆ. ನಿರ್ಮಾಪಕ ಗುರುದತ್ತ ಹೇಳುವ ಪ್ರಕಾರ, ಇಬ್ಬರನ್ನೂ ಚಿತ್ರದ ನಾಯಕ ಮತ್ತು ನಾಯಕಿ ಪಾತ್ರಕ್ಕೆ ಪರಿಗಣಿಸಿರಲಿಲ್ಲ. ಗುರುದತ್ತ ಅವರ ಭಾವಮೈದ ಆಗಿರುವ ಧನುಷ್ ಚಿತ್ರದ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು. ಅಂತಿಮ ಹಂತದವರೆಗೆ ಪಾತ್ರಕ್ಕೆ ಹೊಂದುವ ನಾಯಕ ದೊರೆಯದ ಕಾರಣ ಧನುಷ್ ಅವರನ್ನೇ ನಾಯಕನನ್ನಾಗಿ ಆರಿಸಲಾಯಿತು.

  ನಾಯಕಿ ವಿಷಯದಲ್ಲಿಯೂ ಆದದ್ದು ಅದೇ. ಮುಂಬೈನಿಂದ ಸಾಲೋಸಾಲು ಸುಂದರಿಯರನ್ನು ಕರೆಸಿ ನಾಯಕಿಯ ಪಾತ್ರಕ್ಕಾಗಿ ಸ್ಕ್ರೀನ್ ಟೆಸ್ಟ್ ಮಾಡಲಾಯಿತು. ಆಯ್ಕೆಯಾಗಬೇಕಿರುವ ಕನ್ನಡ ಬರದ ನಾಯಕಿಯ ಜೊತೆ ಕನ್ನಡ ಗೊತ್ತಿರುವ ನಟಿಯೊಬ್ಬಳು ಇರಲೆಂದು ಅನಿತಾರನ್ನು ಕರೆಸಲಾಗಿತ್ತು. ಪೂಜಾರಿ ಕೊಡದಿದ್ದರೂ ದೇವರು ಕೊಟ್ಟ ಎಂಬಂತೆ ಮುಂಬೈ ಲಲನಾಮಣಿಗಳು ಸ್ಕ್ರೀನ್ ಟೆಸ್ಟಲ್ಲಿ ಫೇಲಾಗಿ ಅನಿತಾ ನಾಯಕಿಯಾಗಿ ಆಯ್ಕೆಯಾದರು. ಧನುಷ್ ಮತ್ತು ಅನಿತಾ ಕಷ್ಟಪಟ್ಟು ಅಭಿನಯಿಸಿದ್ದಾರೆ. ಸಾಗಬೇಕಾದ ದಾರಿ ಇನ್ನೂ ದೂರ ಇದೆ.

  ಯಾರೀ ಧನುಷ್ ಮತ್ತು ಅನಿತಾ? : ಚಿತ್ರಕ್ಕೆ ಅನಿರೀಕ್ಷಿತವಾಗಿ ಇಬ್ಬರೂ ಆಯ್ಕೆಯಾಗಿದ್ದರೂ ಧನುಷ್ ಮತ್ತು ಅನಿತಾ ಚಿತ್ರರಂಗದಲ್ಲಿ ಮಿಂಚಬೇಕೆಂದೇ ಗಾಂಧಿನಗರಕ್ಕೆ ಅದೃಷ್ಟ ಅರಸಿ ಬಂದವರು. ಧನುಷ್ ಸೈಕೊ ಚಿತ್ರದ ನಿರ್ಮಾಪಕರಲ್ಲೊಬ್ಬರು. ನಾಯಕನಿಗಿರಬೇಕಾದ ಮೈಕಟ್ಟು, ಚಾರ್ಮ್, ನೈಪುಣ್ಯತೆ ಧನುಷ್ ರಲ್ಲಿ ಇದ್ದರೂ ನಾಯಕನಾಗಬೇಕೆಂದು ಎಂದೂ ಕನಸು ಕಂಡವರಲ್ಲ. ಇಡೀ ಜಗತ್ತು ತಿರುಗಿ ನೋಡಬೇಕಂಥ ಕನ್ನಡ ಚಿತ್ರ ನಿರ್ಮಿಸಬೇಕೆಂಬುದು ಮಾತ್ರ ಅವರ ಮಹತ್ವಾಕಾಂಕ್ಷೆ. ಅವರಿಗೆ ಹೆಗಲು ನೀಡಿ ನಿಂತವರು ಅವರ ಭಾವ ನಿರ್ಮಾಪಕ ಗುರುದತ್ತ. ಗುರುದತ್ತ ಅವರಿಗೆ ಕೂಡ ಇದು ಮೊದಲ ಚುಂಬನ. ಸಾಫ್ಟ್ ವೇರ್ ಉದ್ಯಮದಲ್ಲಿ ಅಪಾರ ಅನುಭವ ಗಳಿಸಿರುವ ಗುರುದತ್ತ ಅವರಲ್ಲಿಯೂ ಚಿತ್ರ ನಿರ್ಮಿಸಬೇಕೆಂಬ ಮೊಳಕೆ ಬಲಿತಿತ್ತು. ಇವರಿಬ್ಬರ ಕನಸಿಗೆ ತಮ್ಮ ಕಲ್ಪನೆಯನ್ನು ಬೆರೆಸಿ ಮೂರ್ತ ರೂಪ ನೀಡಿದವರು ನಿರ್ದೇಶಕ ದೇವದತ್. ಇವರಿಗೂ ಇದು ಪ್ರಥಮ ನಿರ್ದೇಶನದ ಚಿತ್ರ.

  ನಾಯಕಿ ಅನಿತಾ ದಕ್ಷಿಣ ಕನ್ನಡ ಜಿಲ್ಲೆಯ ದೂರದ ಬೈಂದೂರಿನಿಂದ ಕನ್ನಡ ಚಿತ್ರನಟಿಯಾಗಬೇಕೆಂದೇ ಬೆಂಗಳೂರಿಗೆ ಕಾಲಿಟ್ಟವರು. ಅನಿತಾ ಅವರ ದೇಹ ಎಮ್.ಎಸ್. ರಾಮಯ್ಯ ಕಾಲೇಜಿನಲ್ಲಿ ಫ್ಯಾಷನ್ ಡಿಸೈನಿಂಗ್ ಕಲಿಯುತ್ತಿದ್ದರೆ ಮನಸ್ಸೆಲ್ಲ ಚಿತ್ರರಂಗದ ಮೇಲೆ ನೆಟ್ಟಿತ್ತು. ಶಿರಸಿ ಬಳಿಯ ಮುಂಡಗೋಡಿನಲ್ಲಿ ಸರ್ಕಾರಿ ಕೆಲಸದಲ್ಲಿರುವ ತಂದೆ ಮತ್ತು ತಾಯಿಯ ಒತ್ತಾಸೆಯೂ ಅನಿತಾ ಬೆಂಬಲಕ್ಕಿದೆ. ಸೈಕೊ ಚಿತ್ರದ ನಾಯಕಿಯಾಗಿರುವುದು ಬಯಸಿಯೂ ಬಯಸದೆ ಬಂದ ಭಾಗ್ಯ. ಚಿಕ್ಕ ಅವಕಾಶವನ್ನು ಎರಡೂ ಕೈಯಿಂದ ಅನಿತಾ ಬಾಚಿಕೊಂಡಿದ್ದಾರೆ. ಗ್ಲಾಮರ್ ಬೊಂಬೆಯಲ್ಲದಿದ್ದರೂ ನಟಿಗಿರಬೇಕಾಗ ಗ್ರಾಮರ್ ಅವರಿಗೆ ತಿಳಿದಿದೆ.

  ಪೂರಕ ಓದಿಗೆ

  ಚಿತ್ರ ವಿಮರ್ಶೆ : ದೇವದತ್ ನಿರ್ದೇಶನದ ಸೈಕೊಚಿತ್ರ ವಿಮರ್ಶೆ : ದೇವದತ್ ನಿರ್ದೇಶನದ ಸೈಕೊ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X