»   »  ದಯಾಳ್ 'ಹರಿಕಥೆ'ಯಲ್ಲಿ ಗಾಂಧಿ ಸಹೋದರಿಯರು

ದಯಾಳ್ 'ಹರಿಕಥೆ'ಯಲ್ಲಿ ಗಾಂಧಿ ಸಹೋದರಿಯರು

Subscribe to Filmibeat Kannada

ಇದೇ ಮೊದಲ ಬಾರಿಗೆ ಗಾಂಧಿ ಸಹೋದರಿಯರು ಒಟ್ಟಿಗೆ ನಟಿಸುತ್ತಿದ್ದಾರೆ! ಹೌದು ಪೂಜಾಗಾಂಧಿ ಮತ್ತು ರಾಧಿಕಾ ಗಾಂಧಿ ಒಂದೇ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ದಯಾಳ್ ನಿರ್ದೇಶಿಸಲಿರುವ 'ಹರಿಕಥೆ' ಚಿತ್ರಕ್ಕೆ ಈ ಇಬ್ಬರು ಸಹೋದರಿಯರು ಆಯ್ಕೆಯಾಗಿದ್ದಾರೆ.

ಮುಂಗಾರು ಮಳೆ ಚಿತ್ರದ ನಂತರ ಪೂಜಾರನ್ನು ಹಲವಾರು ಅವಕಾಶಗಳು ವರಿಸಿದ್ದವು. ಮಿಲನ, ಬುದ್ಧಿವಂತ ಚಿತ್ರಗಳ ನಂತರ ಈ ಪಂಜಾಬಿ ಬೆಡಗಿಗೆ ಅವಕಾಶಗಳು ಒಂಚೂರು ಕಡಿಮೆಯಾದವು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಅಭಿನಯಕ್ಕೆ ಒತ್ತು ನೀಡುವ 'ಅನು'ವಿನಂತಹ ಚಿತ್ರ ಹುಡುಕಿಕೊಂಡು ಬಂತು.

'ಬಲ್ಲಿ' ಚಿತ್ರದ ಮೂಲಕ ಗಾಂಧಿನಗರಕ್ಕೆ ಅಡಿಯಿಟ್ಟ ನಟಿ ರಾಧಿಕಾ ಗಾಂಧಿ. ಕೆಲ ದಿನಗಳ ಚಿತ್ರೀಕರಣದ ನಂತರ 'ಬಲ್ಲಿ'ಚಿತ್ರ ನಿಂತೇಹೋಯಿತು. 'ಚಿಕ್ಕಮಗಳೂರು ಚಿಕ್ಕಮಲ್ಲಿಗೆ' ಮತ್ತು 'ಕಲಾಕಾರ್' ಚಿತ್ರಗಳ ಮೂಲಕ ಮತ್ತೆ ರಾಧಿಕಾ ಕಾಣಿಸಿಕೊಂಡರು. ಚಿಕ್ಕಮಲ್ಲಿಗೆ ಚಿತ್ರ ಬಾಕ್ಸಾಫೀಸಲ್ಲಿ ಮಕಾಡೆ ಮಲಗಿ 'ಕಲಾಕಾರ್' ಚಿತ್ರ ಪರ್ವಾಗಿಲ್ಲ ಅನ್ನಿಸಿಕೊಂಡಿತ್ತು.

ಗೌಡ ಹಾಗೂ ಲಿಂಗಾಯತ ಸಮುದಾಯದ ಇಬ್ಬರು ಪ್ರೇಮಿಗಳು ಒಂದಾಗುವ ಕಥಾ ಹಂದರದ 'ಕದ್ದು ಮುಚ್ಚಿ' ಚಿತ್ರವನ್ನು ದಯಾಳ್ ಈಗಾಗಲೆ ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ. ''ಈ ಎರಡು ಕುಟುಂಬಗಳ ಯಜಮಾನರ ಹೆಸರು ಕುಮಾರಸ್ವಾಮಿ ಮತ್ತು ಯಡಿಯೂರಪ್ಪ'' ಎಂದು ಚಿತ್ರದ ಕಥಾ ಎಳೆಯನ್ನು ಬಿಚ್ಚಿಟ್ಟಿದ್ದಾರೆ ದಯಾಳ್!

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada