ಯುವ ಪ್ರೇಮಿಗಳ ಹೃದಯ ಕದಿಯುವ'ಇನಿಯ'

ಶ್ರೀಧರ್ ಸಂಗೀತದಲ್ಲಿ ಮೂಡಿ ಬಂದಿರುವ ಚಿತ್ರದ ಹಾಡುಗಳು ಈಗಾಗಲೇ ಅಭಿಮಾನಿಗಳ ಮನ ಸೂರೆಗೊಂಡಿದ್ದು, ಚಿತ್ರ ಕೂಡ ಪ್ರೇಕ್ಷಕನ ಮೆಚ್ಚುಗೆಗೆ ಪಾತ್ರವಾಗಲಿದೆ ಎನ್ನುತ್ತಾರೆ ನಿರ್ಮಾಪಕ ಶೈಲೇಂದ್ರ ಬಾಬು.ಕಳೆದ ಸಾಲಿನ ಯಶಸ್ವಿ ಚಿತ್ರಗಳಲ್ಲಿ 'ಮುಸ್ಸಂಜೆ ಮಾತು' ಕೂಡ ಒಂದು. ಈ ಸದಭಿರುಚಿ ಚಿತ್ರವನ್ನು ನಿರ್ದೇಶಿಸಿದ ಮಹೇಶ್ ಈಗ 'ಇನಿಯ' ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರ ಯುವ ಪ್ರೇಮಿಗಳ ಹೃದಯಗಳಿಗೆ ಹತ್ತಿರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಬಾಲಾಜಿ ಅವರು ಚಿತ್ರದ ನಾಯಕರಾಗಿದ್ದು, ಪೂಜಾ ಗಾಂಧಿ 'ಇನಿಯ'ನ ನಾಯಕಿಯಾಗಿದ್ದಾರೆ. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸುಂದರನಾಥ ಸುವರ್ಣರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮದುಸೂಧನ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಕವಿರಾಜ್, ಶ್ರೀಧರ್ ಗೀತರಚನೆ, ಮೋಹನ್ ಸಂಕಲನ, ರವಿವರ್ಮರ ಸಾಹಸವಿರುವ ಚಿತ್ರದ ತಾರಾಬಳಗದಲ್ಲಿ ಜೈಜಗದೀಶ್, ಊರ್ವಶಿ, ರೇಖಾ, ಜ್ಯೋತಿ, ನೀನಾಸಂ ಅಶ್ವತ್, ಹರೀಶ್ ರಾಯ್, ಲೋಕನಾಥ್, ಬಿ.ವಿ.ರಾಧ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











