»   »  ರಮೇಶ್ ಗೆ ಹುಟ್ಟುಹಬ್ಬದ ಶುಭಾಶಯಗಳು

ರಮೇಶ್ ಗೆ ಹುಟ್ಟುಹಬ್ಬದ ಶುಭಾಶಯಗಳು

Posted By:
Subscribe to Filmibeat Kannada

ಅಮೆರಿಕ ಅಮೆರಿಕಾದ 'ಸೂರ್ಯ', ಅಮೃತ ವರ್ಷಿಣಿಯ 'ಅಭಿಷೇಕ್', ಉಲ್ಟಾಪಲ್ಟಾದ 'ದೇವರಾಜ್', ಸತಿ ಸಾವಿತ್ರಿಯ 'ಅರುಣ್', ಜೋಕ್ ಫಾಲ್ಸ್ ನ 'ಪ್ರೊಫೆಸರ್ ಅನಂತ ಪಾಟೀಲ್' ಅರ್ಥಾತ್ ನಟ, ನಿರ್ದೇಶಕ ರಮೇಶ್ ಅವರಿಗೆ ಸೆಪ್ಟೆಂಬರ್ 10ರಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಶುಭಾಶಯಗಳು. ತಮ್ಮ ವಿಶಿಷ್ಟ, ವಿಭಿನ್ನ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆ ಒತ್ತಿದ ನಟ.

ಕನ್ನಡಚಿತ್ರರಸಿಕರು ಅವರನ್ನು ರಮೇಶ್ ಎಂದು ಕರೆದರೆ ತಮಿಳು, ತೆಲುಗು ಉಳಿದ ಭಾಷೆಯ ಪ್ರೇಕ್ಷಕರ ಪಾಲಿಗೆ ಅವರು ರಮೇಶ್ ಅರವಿಂದ್ ಎಂದೇ ಚಿರಪರಿಚಿತ. ಇದುವರೆಗೂ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಚಿತ್ರದಿಂದ ಚಿತ್ರಕ್ಕೆ ತಮ್ಮ ಅಭಿನಯ ಪ್ರೌಢಿಮೆಯನ್ನು ಮೆರೆಯುತ್ತಲೇ ಇರುವ ನಟ.

ಕೆ ಬಾಲಚಂದರ್ ಅವರ 'ಸುಂದರ ಸ್ವಪ್ನಗಳು'(1987) ಚಿತ್ರ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ರಮೇಶ್ ಅವರ ಬಣ್ಣದ ಕನಸುಗಳಿಗೆ ನೀರೆರೆಯಿತು. ನಂತರ ಬಂದ 'ಪಂಚಮವೇದ' ಮತ್ತು 'ಮಧುಮಾಸ' ಚಿತ್ರಗಳಲ್ಲಿ ಅವರ ಪ್ರೌಢ ಅಭಿನಯವೇ ಇದಕ್ಕೆ ಸಾಕ್ಷಿ.

ಅನುರಾಗ ಸಂಗಮ(1996) ಮತ್ತು ಕರ್ಪೂರದ ಗೊಂಬೆ(1997) ಚಿತ್ರಗಳು ಜಯಭೇರಿ ಬಾರಿಸಿದ ನಂತರ ರಮೇಶ್ ಬೆಂಗಳೂರಿನಲ್ಲೇ ನೆಲೆನಿಂತರು. ಆನಂತರ ಅಮೆರಿಕಾ ಅಮೆರಿಕಾ, ಅಮೃತ ವರ್ಷಿಣಿ, ಮುಂಗಾರಿನ ಮಿಂಚು, ಓ ಮಲ್ಲಿಗೆ, ಉಲ್ಟಾಪಲ್ಟಾ ಚಿತ್ರಗಳು ಗೆಲುವಿನ ನಗೆ ಬೀರಿದ್ದು ಇತಿಹಾಸ. 1997ರಲ್ಲಿ ರಮೇಶ್ ಅವರ ಒಂಭತ್ತು ಚಿತ್ರಗಳು ಶತಕ ಬಾರಿಸಿ ದಾಖಲೆ ನಿರ್ಮಿಸಿದವು.

ಬರಿ ನಟನೆಗಷ್ಟೇ ಸೀಮಿತವಾಗದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಹೂ ಮಳೆ' ಚಿತ್ರದ ಮೂಲಕ ಚಿತ್ರಕಥೆಯನ್ನೂ ರಚಿಸಿದರು. ರಾಮ ಶಾಮ ಭಾಮ, ಸತ್ಯವಾನ್ ಸಾವಿತ್ರಿ ಮತ್ತು ಆಕ್ಸಿಡೆಂಟ್ ಚಿತ್ರಗಳ ಮೂಲಕ ಆಕ್ಷನ್ ಕಟ್ ಹೇಳಿ ನಿರ್ದೇಶನದಲ್ಲೂ ಗೆದ್ದರು.

ರಮೇಶ್ ಚಿತ್ರಗಳೆಂದರೆ ಕುಟುಂಬ ಪ್ರಧಾನ ಚಿತ್ರಗಳು. ಮನೆಮಂದಿಯಲ್ಲಾ ಯಾವುದೇ ಮುಜುಗರಕ್ಕ್ಕೆ ಒಳಗಾಗದೆ ನೋಡಬಹುದಾದ ಚಿತ್ರಗಳು. ಹಾಸ್ಯಕ್ಕೆ ಬರವಿರಲ್ಲ. ನವರಸಗಳಲ್ಲಿ ಹಾಸ್ಯರಸವನ್ನು ಉಕ್ಕಿಸುವ ನಟ. ನಟನಾಗಿ, ಹಾಸ್ಯ ನಟನಾಗಿ, ನಿರ್ದೇಶಕನಾಗಿ ಸೈ ಎನಿಸಿಕೊಂಡ ಇನ್ನೊಬ್ಬ ವಿಶೇಷ ವ್ಯಕ್ತಿ ರಮೇಶ್.

ಇದೀಗ ನಟಿಸುತ್ತಿರುವ 'ಕೃಷ್ಣ ನೀ ಲೇಟಾಗಿ ಬಾರೋ' ಚಿತ್ರ ಬೇಗನೆ ಬರಲಿ ಎಂದು ಆಶಿಸೋಣ. ಈ ಚಿತ್ರದಲ್ಲಿ ರಮೇಶ್ ಅರವಿಂದ್, ನಿಧಿ ಸುಬ್ಬಯ್ಯ, ಮೋಹನ್ ಮತ್ತು ನೀತೂ ಚಿತ್ರದ ಮುಖ್ಯ ಪಾತ್ರಧಾರಿಗಳು. ಈ ಚಿತ್ರದಲ್ಲಿ ಹುಡುಗಿಯರ ಕಾಲೇಜಿನ ಏಕೈಕ ಪುರುಷ ಉಪನ್ಯಾಸಕನಾಗಿ ರಮೇಶ್ ಅಭಿನಯಿಸಿದ್ದಾರೆ.

ಇನ್ನೇಕೆ ತಡ ಇಂದೇ ನಿಮ್ಮ ನೆಚ್ಚಿನ ನಟ ರಮೇಶ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ. ''ನಿಮ್ಮ ಚಿತ್ರಗಳನ್ನು ನೋಡುವಾಗಲೆಲ್ಲಾ ನಿಮ್ಮನ್ನು ನೆನಸಿಕೊಳ್ಳುತ್ತಲೇ ಇರುತ್ತೇವೆ. ನೀವು ಮಾತ್ರ ನಮ್ಮನ್ನು ನೆನಸಿಕೊಳ್ಳುತ್ತೀರೋ ಇಲ್ಲವೋ ಗೊತ್ತಿಲ್ಲ. ಈ ಬಾರಿ ಕೇಟ್ ಕಟ್ ಮಾಡುವಾಗಲಾದರೂ ನಮ್ಮನ್ನು ನೆನಪಿಸಿಕೊಳ್ಳಿ ಎನ್ನುತ್ತಿದ್ದಾರೆ ರಮೇಶ್ ರ ಅಭಿಮಾನಿಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada