»   » ರಾಜ್ ಗೆ ನಿಸಾರ್ ಮನೆಯ ಬಿರಿಯಾನಿ ಊಟ

ರಾಜ್ ಗೆ ನಿಸಾರ್ ಮನೆಯ ಬಿರಿಯಾನಿ ಊಟ

Posted By: Staff
Subscribe to Filmibeat Kannada

ರಾಜ್ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡವರು ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹಮದ್. ಹಾಗೇ ರಾಜ್ ಗೆ ನಿಸಾರ್ ಬಗ್ಗೆ ಎಲ್ಲಿಲ್ಲದ ಪ್ರೀತಿ. ಕವಿ, ಕಲಾವಿದರ ಬಗ್ಗೆ ರಾಜ್ ಗೆ ಅಪಾರ ಗೌರವ. ಪರಸ್ಪರ ಇಬ್ಬರಲ್ಲೂ ಅಂಥ ನಿರ್ಮಲ ಸ್ನೇಹಭಾವ ಇತ್ತು. ರಾಜ್ ಕುಮಾರ್ ಅವರನ್ನು ತಮ್ಮ ಮನೆಯ ಊಟಕ್ಕೆ ಒಮ್ಮೆ ಆಹ್ವಾನಿಸಿದರು ನಿಸಾರ್.

ಘಮಭರಿತ ಬಿಸಿಬಿಸಿ ಬಿರಿಯಾನಿ ಊಟ ನಿಸಾರರ ಮನೆಯಲ್ಲಿ ರಾಜ್ ಗಾಗಿ ಸಿದ್ದವಾಗಿತ್ತು. ಮಾಂಸದ ಊಟದಲ್ಲಿ ಒಂದು ಕೈ ಮೇಲೆ ಎಂಬಂತೆ ಬಿರಿಯಾನಿಯನ್ನು ಅವತ್ತು ಚಪ್ಪರಿಸಿ ತಿಂದಿದ್ದರು ರಾಜ್. ಊಟ ಮುಗಿದ ಬಳಿಕ ಪಾರ್ವತಮ್ಮ ರಾಜ್ ಕುಮಾರ್ ಕೈತೊಳೆಯಲು ಹೋದರು.ಆದರೆ ರಾಜ್ ಕುಮಾರ್ ಮಾತ್ರ ಕೈತೊಳೆಯಲಿಲ್ಲ. ಎಲ್ಲರಿಗೂ ಆಶ್ಚರ್ಯ.

11 dr rajkumar nissar ahmed and biryani

ಕಡೆಗೆ 'ಯಾಕ್ರೀ, ಕೈ ತೊಳೆಯಲಿಲ್ಲ?' ಎಂದು ಪಾರ್ವತಮ್ಮ ಕುತೂಹಲ ತಡೆಯಲಾಗದೆ ಕೇಳಿಯೇ ಬಿಟ್ಟರು.ಇದನ್ನು ಗಮನಿಸುತ್ತಿದ್ದ ನಿಸಾರ್ ಮನೆಯಲ್ಲಿದ್ದ ಎಲ್ಲರಿಗೂ ರಾಜ್ ಕುಮಾರ್ ಏನು ಹೇಳುತ್ತಾರೆ ಎಂಬುದನ್ನು ಕೇಳುವುದಕ್ಕೆ ಕಿವಿಗೊಟ್ಟರು. ನಿಸಾರರಿಗೆ ಒಂದು ರೀತಿ ಆತಂಕ. 'ಏನಾದರೂ ಊಟದಲ್ಲಿ ವ್ಯತ್ಯಾಸವಾಯಿತಾ?' ಎಂದು ಆಲೋಚಿಸುತ್ತಿದ್ದರು.

ಎಲ್ಲರೂ ತನ್ನತ್ತಲೇ ದೃಷ್ಟಿ ನೆಟ್ಟಿರುವುದನ್ನು ಗ್ರಹಿಸಿಕೊಂಡ ರಾಜ್ ಕುಮಾರ್ "ಪಾರ್ವತೀ, ಗೆಳೆಯ ನಿಸಾರ್ ನಮಗೆ ಅದ್ಭುತ ಬಿರಿಯಾನಿ ಊಟ ಮಾಡಿಸಿದ್ದಾರೆ. ನಾನು ಈಗಲೇ ಕೈ ತೊಳೆದು ಬಿಟ್ಟರೆ ಅದರ ಘಮ್ಮನೆಯ ಗಮ್ಮತ್ತನ್ನು ಕಳೆದುಕೊಂಡುಬಿಡುತ್ತೇನೆ. ಕಡೆಯ ಪಕ್ಷ ಅದರ ಸವಿಸವಿ ಊಟದ ಘಮಲು ಸಂಜೆವರೆಗಾದರೂ ಇರಲಿ" ಎನ್ನುತ್ತಾ ಮತ್ತೊಮ್ಮೆ ಕೈ ಮೂಸಿಕೊಂಡರು.ರಾಜ್ ಅವರ ಇಂಥ ರುಚಿಕಟ್ಟು ಊಟದ ಸವಿನೆನಪು ನಿಸಾರರಲ್ಲಿ ಶಾಶ್ವತವಾಗಿ ಉಳಿದು ಹೋಯ್ತು. ನಿಸಾರರಲ್ಲಿ ರಾಜ್ ಬಗ್ಗೆ ಇವತ್ತಿಗೂ ಧನ್ಯತಾ ಭಾವವಿದೆ. (ಕೃಪೆ: ಹಾಯ್ ಬೆಂಗಳೂರು)

English summary
11 dr rajkumar nissar ahmed and biryani

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada