»   »  ಸಿಂಗ್ಪುರದಿಂದ ಬೆಂಗ್ಳೂರ್ಗೆ ಜಸ್ಟ್ ಮಾತ್ ಮಾತಲಿ

ಸಿಂಗ್ಪುರದಿಂದ ಬೆಂಗ್ಳೂರ್ಗೆ ಜಸ್ಟ್ ಮಾತ್ ಮಾತಲಿ

Subscribe to Filmibeat Kannada

ಸ್ಪರ್ಶ' ಚಿತ್ರದ ಮೂಲಕ ನಾಯಕನಾಗಿ ಪರಿಚಿತರಾದ ಸುದೀಪ್ 'ಮೈ ಆಟೋಗ್ರಾಫ್' ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರೂ ಆದರು. ಪ್ರಸ್ತುತ ಅವರ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ 'ಜಸ್ಟ್ ಮಾತ್ ಮಾತಲಿ.'

ಬೆಂಗಳೂರಿನಲ್ಲಿ ಕೆಲವು ದಿನಗಳ ಚಿತ್ರೀಕರಣ ನಡೆಸಿದ ಚಿತ್ರತಂಡ ಹಾಡಿನ ಚಿತ್ರೀಕರಣಕ್ಕಾಗಿ ದೂರದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿತು. ಅಲ್ಲಿ ಸುದೀಪ್, ರಾಜೇಶ್ ಹಾಗೂ ಅವಿನಾಶ್ ಅವರ ಅಭಿನಯದಲ್ಲಿ 'ಮುಂಜಾನೆ ಮಂಜಲಿ - ಮುಸ್ಸಂಜೆ ತಿಳಿ ತಂಪಲಿ...'ಎಂಬ ಗೀತೆಯನ್ನು ಚಿತ್ರೀಕರಿಸಿಕೊಳ್ಳಲಾಯಿತು.

ರಘುದೀಕ್ಷಿತ್ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿನ ಚಿತ್ರೀಕರಣದೊಂದಿಗೆ ಹಲವು ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡ ನಿರ್ದೇಶಕರು ಈಗ ಚಿತ್ರತಂಡದೊಂದಿಗೆ ಬೆಂಗಳೂರಿಗೆ ಮರಳಿ ಬಂದಿದ್ದಾರೆ ಎಂದು ನಿರ್ಮಾಪಕ ಆರ್.ಶಂಕರ್ ತಿಳಿಸಿದ್ದಾರೆ.

ಸುದೀಪ್ ಮತ್ತು ನೃತ್ಯ ಕಲಾವಿದ ಹರ್ಷ ಅವರೊಂದಿಗೆ ರಮ್ಯಾ ಕಿರಿಕ್ ಮಾಡಿಕೊಂಡ ಕಾರಣ ಸಿಂಗಪುರ ಚಿತ್ರೀಕರಣಕ್ಕೆ ಅವರನ್ನು ಕೈಬಿಡಲಾಗಿತ್ತು. ರಮ್ಯಾ ಇಲ್ಲದೆಯೇ ಜಸ್ಟ್ ಮಾತ್ ಮಾತಲ್ಲಿ ಮಾಡುತ್ತೇನೆ ಎಂದು ಸುದೀಪ್ ಶಪಥಗೈದಿದ್ದರು. ಹಾಗಾಗಿ ರಮ್ಯಾ ಇಲ್ಲದೆಯೇ 13 ದಿನಗಳ ಕಾಲ ಸಿಂಗಪುರದಲ್ಲಿ ಜಸ್ಟ್ ಮಾತ್ ಮಾತಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬರಲಾಗಿದೆ.

ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸುದೀಪ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಶ್ರೀವೆಂಕಟ್ ಛಾಯಾಗ್ರಹಣ, ರಘುದೀಕ್ಷಿತ್ ಸಂಗೀತ, ಕೆಂಪರಾಜ್ ಸಂಕಲನ, ಕೆ.ನಂಜುಂಡ ಸಂಭಾಷಣೆ, ರವಿವರ್ಮ ಸಾಹಸ, ಮುರುಳಿ, ಅಂಜು ಮಹೇಂದ್ರ ನೃತ್ಯ, ನರಸಿಂಹ ನಿರ್ಮಾಣ ನಿರ್ವಹಣೆ ಹಾಗೂ ಅಚ್ಯುತರಾವ್ ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ಸುದೀಪ್, ರಮ್ಯ, ಅವಿನಾಶ್, ರಾಜೇಶ್, ಸಂಗೀತಾ, ಕೀರ್ತೀಗೌಡ, ಯತಿರಾಜ್, ಅರುಣ್‌ಸಾಗರ್, ರಘು ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada