»   » ಕನ್ನಡಕ್ಕೆ ತೆಲುಗು, ತಮಿಳಿನ 'ಸ್ವಾತಿ' ಮುತ್ತು

ಕನ್ನಡಕ್ಕೆ ತೆಲುಗು, ತಮಿಳಿನ 'ಸ್ವಾತಿ' ಮುತ್ತು

Posted By:
Subscribe to Filmibeat Kannada

ತಮಿಳು, ತೆಲುಗು ಚಿತ್ರರಂಗದಿಂದ ಮತ್ತೊಬ್ಬ ಜನಪ್ರಿಯ ತಾರೆ ಸ್ವಾತಿ ಕನ್ನಡ ಚಿತ್ರರಂಗದಲ್ಲಿ ಸ್ವಾತಿ ಮುತ್ತಿನ ಮಳೆ ಹನಿಗರೆಯಲು ಬರುತ್ತಿದ್ದಾರೆ. ತೆಲುಗಿನ 'ಆಡವಾರಿ ಮಾಟಲಕು ಅರ್ಥಾಲೆ ವೇರುಲೆ' ಹಾಗೂ ತಮಿಳಿನ 'ಸುಬ್ರಮಣಿಪುರಂ'ಎಂಬ ಎರಡು ಸದಭಿರುಚಿಯ ಚಿತ್ರಗಳಲ್ಲಿ ಸ್ವಾತಿ ತಮ್ಮ ಅಭಿನಯವನ್ನು ಮೆರೆದಿದ್ದಾರೆ.

ಸ್ವಾತಿ ನಟಿಸಲಿರುವ ಕನ್ನಡದ ಚೊಚ್ಚಲ ಚಿತ್ರ 'ಮೈಲಾರಿ'. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರದ ನಾಯಕ ನಟ.ಚಿತ್ರದ ನಿರ್ದೇಶಕ ಚಂದ್ರು ಮಾತನಾಡುತ್ತಾ, ಸ್ವಾತಿ ಅವರೊಂದಿಗೆ ಈಗಾಗಲೇ ಮಾತುಕತೆ ನಡೆದಿದೆ. ಡೇಟ್ಸ್ ಹೊಂದಾಣಿಕೆ ಇನ್ನೂ ಅಂತಿಮವಾಗಿಲ್ಲ ಎಂದಿದ್ದಾರೆ.

ಸದ್ಯಕ್ಕೆ ಸ್ವಾತಿ ತಮಿಳಿನಲ್ಲಿ ವಿಕ್ರಂಗೆ ಜತೆಯಾಗಿ ನಟಿಸುತ್ತಿದ್ದಾರೆ.ದೊಡ್ಡ ಬಜೆಟ್ ನ ಚಿತ್ರವಾದ ಕಾರಣ ಚಂದ್ರು ಅವರಿಗೆ ಸ್ವಲ್ಪ ಸಮಯಾವಕಾಶವನ್ನು ಕೇಳಿದ್ದಾರೆ ಎನ್ನುತ್ತವೆ ಮೂಲಗಳು. ಶಿವರಾಜ್ ಕುಮಾರ್ ಅವರೊಂದಿಗೆ 'ಯುವರಾಜ' ಮತ್ತು 'ಸಂತ' ಚಿತ್ರಗಳನ್ನು ನಿರ್ಮಿಸಿದ್ದ ಶ್ರೀನಿವಾಸ್ ಚಿತ್ರದ ನಿರ್ಮಾಪಕರು. ಗುರುಕಿರಣ್ ಸಂಗೀತ ಚಿತ್ರಕ್ಕಿರುತ್ತದೆ.

ಏತನ್ಮಧ್ಯೆ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರು 'ಮೈಲಾರಿ' ಎಂಬ ಶೀರ್ಷಿಕೆಯನ್ನು ಈಗಾಗಲೇ ಕೆಎಫ್ ಸಿಸಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಇದೇ ಶೀರ್ಷಿಕೆಯನ್ನು ಪಡೆಯುವ ಬಗ್ಗೆ ಪ್ರಯತ್ನ ನಡೆಸಲಾಗುತ್ತಿದೆ. ಸದ್ಯಕ್ಕೆ ಚಿತ್ರದ ಸಹ ನಿರ್ಮಾಪಕ ಶ್ರೀಕಾಂತ್ ಈ ಪ್ರಯತ್ನದಲ್ಲಿದ್ದಾರೆ.

ತೆಲುಗು ದೂರದರ್ಶನದಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾತಿ ಅವರಿಗೆ 'ಆಡವಾರಿ ಮಾಟಲಕು ಅರ್ಥಾಲೆ ವೇರುಲೆ' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ವೆಂಕಟೇಶ್ ಮತ್ತು ತ್ರಿಶಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ. ಈ ಚಿತ್ರದಲ್ಲಿ ಸ್ವಾತಿ ಉತ್ತಮ ಪ್ರಶಂಸೆಗೆ ಪಾತ್ರರಾಗಿದ್ದರು. ಬಳಿಕ ತಮಿಳಿನ ಸುಬ್ರಮಣಿ ಪುರಂ ಚಿತ್ರದಲ್ಲಿ ಅವಕಾಶ ಸಿಕ್ಕಿ ಅಲ್ಲೂ ಮನೆಮಾತಾಗಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada