»   »  ನಂದಿನಿ ಲೇಔಟ್ ನಲ್ಲಿ ಗರಿಬಿಚ್ಚಿಕೊಂಡ ಗಿಲ್ಲಿ!

ನಂದಿನಿ ಲೇಔಟ್ ನಲ್ಲಿ ಗರಿಬಿಚ್ಚಿಕೊಂಡ ಗಿಲ್ಲಿ!

Subscribe to Filmibeat Kannada
Rakhu Preth Singh
ತಮಿಳು, ತೆಲುಗಿನಲ್ಲಿ ಯಶಸ್ವಿ ಪ್ರದರ್ಶನ ಕಂಡ '7/ಜಿ ರೈನ್‌ಬೋ ಕಾಲೋನಿ' ಚಿತ್ರವನ್ನು ಕನ್ನಡದಲ್ಲಿ 'ಗಿಲ್ಲಿ'ಯಾಗಿ ನಿರ್ಮಿಸುತ್ತಿದ್ದಾರೆ ನಿರ್ಮಾಪಕರಾದ ಅಣಜಿ ನಾಗರಾಜ್, ಜಯಣ್ಣ ಹಾಗೂ ಪ್ರತಾಪ್. ಜೆ.ಎನ್. ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ರಾಘವ್ ಲೋಕಿ ನಿರ್ದೇಶಿಸುತ್ತಿದ್ದಾರೆ.

ಜಗ್ಗೇಶ್‌ರ ಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸುತ್ತಿದ್ದು, ಉತ್ತರ ಭಾರತ ಮೂಲದ ರಾಕುಲ್ ಪ್ರೀತ್ ಸಿಂಗ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ದುರಂತ ಪ್ರೇಮಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಹುಡುಗಿಯರನ್ನು ರೇಗಿಸುತ್ತಾ ಉಂದಾಡಿಯಾಗಿದ್ದ ನಾಯಕನ ಮನಸ್ಥಿತಿಯನ್ನು ಸುಂದರ ಹುಡುಗಿಯೊಬ್ಬಳು ಬದಲಾಯಿಸುತ್ತಾಳೆ. ನಂದಿನಿ ಲೇ ಔಟ್ ಸುತ್ತಮುತ್ತ ಹೆಚ್ಚಿನ ಭಾಗದ ಚಿತ್ರೀಕರಣ ಮಾಡಲಾಗಿದ್ದು, 40 ದಿನಗಳಲ್ಲಿ 5 ಹಾಡುಗಳು ಹಾಗೂ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ.

ನಾಯಕನ ಪರಿಚಯದ ಹಾಡೊಂದು ಮಾತ್ರ ಬಾಕಿ ಇದೆ. ಆಕಾಶ್ ಧ್ವನಿಗ್ರಹಣ ಕೇಂದ್ರದಲ್ಲಿ ಕಳೆದ 15 ದಿನಗಳಿಂದ ಮಾತುಗಳ ಮರುಲೇಪನ ಕಾರ್ಯ ನಡೆದು ಅದೂ ಮುಗಿದಿದ್ದು, ಮುಂದಿನ ವಾರದಿಂದ ರೀ-ರೆಕಾರ್ಡಿಂಗ್‌ಗೆ ಹೋಗಲು ಅಣಿಯಾಗುತ್ತಿದೆ. ಮೇ ಅಂತ್ಯದಲ್ಲಿ ಧ್ವನಿಸುರುಳಿ ಬಿಡುಗಡೆಯಾಗಿ, ಜೂನ್ ಅಂತ್ಯದಲ್ಲಿ ಗಿಲ್ಲಿ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾನೆ.

ಮಳೆ ಮೋಡಿಗಾರ ಕೃಷ್ಣ ಇಲ್ಲಿಯೂ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಮೂಲ ಚಿತ್ರಕ್ಕೆ ಸಂಗೀತ ನೀಡಿದ್ದ ಯುವನ್ ಶಂಕರ್ ರಾಜಾ ಅವರೇ ಈ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಧಾ ಬೆಳವಾಡಿ, ವೀಣಾ ವೆಂಕಟೇಶ್, ಶ್ರೀನಿವಾಸ್ ಅಲ್ಲದೆ, ಜಗ್ಗೇಶ್‌ರ ಇನ್ನೊಬ್ಬ ಪುತ್ರ ಯತಿರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada