»   »  ಫಂಕಿಟೌನ್ ಡ್ಯಾನ್ಸ್ ಧಮಾಕಾದಲ್ಲಿ ಚಿಣ್ಣರ ಚಿಲಿಪಿಲಿ

ಫಂಕಿಟೌನ್ ಡ್ಯಾನ್ಸ್ ಧಮಾಕಾದಲ್ಲಿ ಚಿಣ್ಣರ ಚಿಲಿಪಿಲಿ

Posted By:
Subscribe to Filmibeat Kannada

ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್‌ಕುಮಾರ್, ಗಣೇಶ್, ಸುದೀಪ್, ವಿಜಯ್, ದರ್ಶನ್ ಮತ್ತು ಯೋಗೇಶ್, ಸೇರಿದಂತೆ ಪ್ರಮುಖ ನಾಯಕನಟರುಗಳು ಅಭಿನಯಿಸಿದ 80ಕ್ಕೂ ಹೆಚ್ಚು ಚಿತ್ರಗಳ 200 ಹಾಡುಗಳಿಗೆ ನೃತ್ಯ-ನಿರ್ದೇಶನ ಮಾಡಿರುವ ಯಶಸ್ವಿ ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ್ ಅವರು ನೃತ್ಯಾಸಕ್ತರಿಗಾಗಿ ಪ್ರಾರಂಭಿಸಿದ ಫಂಕಿಟೌನ್ ನೃತ್ಯ ತರಬೇತಿ ಶಾಲೆಯ 3ನೇ ವಾರ್ಷಿಕೋತ್ಸವ ಸಮಾರಂಭ ಕಳೆದ 15ರಂದು ನಗರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಿತು.

ಪುಟ್ಟಪುಟ್ಟ ಮಕ್ಕಳು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು, ನಟನಟಿಯರುಗಳಿಗೆ ಫಂಕಿಟೌನ್‌ನಲ್ಲಿ ನೃತ್ಯದ ಪ್ರಾಕಾರಗಳನ್ನು ವ್ಯವಸ್ಥಿತವಾಗಿ ಹೇಳಿ ಮಾಡಲಾಗುತ್ತಿದ್ದು, 40ಕ್ಕೂ ಹೆಚ್ಚು ಮಕ್ಕಳು ಸೇರಿ ಸುಮಾರು 140 ಜನ ಇಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಪುಟ್ಟಮಕ್ಕಳ ಚಿತ್ತಾಕರ್ಷಕ ನೃತ್ಯದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ನಿರ್ದೇಶಕ ಶರಣ್ ಕಬ್ಬೂರ್ ಉದ್ಘಾಟಿಸಿದರು. ನಂತರ ನಡೆದ ಸರಳ ಸಮಾರಂಭದಲ್ಲಿ ನಟ ಪ್ರೇಮ್, ಅಜಯ್ ರಾವ್, ತರುಣ್, ನೀತು, ಪ್ರಜ್ಞಾ, ಅಶ್ವಿನಿ, ಪಟ್ರೆ ಅಜಿತ್, ದೀಪಿಕಾ, ಅಂಬಾರಿ ನಿರ್ದೇಶಕ ಎ.ಪಿ. ಅರ್ಜುನ್, ನಿರ್ಮಾಪಕರಾದ ಬಿ.ವಿ. ಪ್ರಮೋದ್, ರಾಜಶೇಖರ್ ನಾಯ್ಡು, ಆರ್. ಅನಂತರಾಜು, ಎಂ.ಎಸ್. ರಮೇಶ್ ಭಾಗವಹಿಸಿದ್ದರು.

ನಟ ಪ್ರೇಮ್ ಮಾತನಾಡಿ, ಶ್ರೀನಿವಾಸ್ ನನ್ನ ಪ್ರೀತಿಯ ಗೆಳೆಯ, ಅವರ ಹಾಗೂ ನನ್ನ ವೃತ್ತಿ ಜೀವನ ಒಂದೇ ಸಮಯದಲ್ಲಿ ಪ್ರಾರಂಭವಾಯಿತು. 2002ರಲ್ಲಿ ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆದಾಡುತ್ತಿದ್ದಾಗ ಪ್ರಾರಂಭದಲ್ಲಿ ನನಗೆ ಉಚಿತವಾಗಿ ಡ್ಯಾನ್ಸ್ ಕಲಿಸಿದರು ಎಂದು ಆರಂಭದ ದಿನಗಳನ್ನು ಸ್ಮರಿಸಿಕೊಂಡರು. ನಟ ಅಜಯ್ ನನಗೆ ತುಂಬಾ ಇಷ್ಟವಾದಂತ ಡ್ಯಾನ್ಸ್ ಮಾಸ್ಟರ್, ಶ್ರಮಜೀವಿ, ಯಾವಾಗಲೂ ಹೊಸದನ್ನು ಹುಡುಕುತ್ತಿರುತ್ತಾರೆ ಎಂದು ಮೆಚ್ಚಿಕೊಂಡರು.

ಸಂಭಾಷಣೆಗಾರ, ನಿರ್ಮಾಪಕ-ನಿರ್ದೇಶಕ ಎಂ.ಎಸ್. ರಮೇಶ್ ಮಾತನಾಡುತ್ತಾ ಇಡೀ ಕಾರ್ಯಕ್ರಮದಲ್ಲಿ ಮಾಲೂರು ಶ್ರೀನಿವಾಸ್‌ರವರ ಪರಿಶ್ರಮ ಎದ್ದು ಕಾಣುತ್ತದೆ. ಪ್ರತಿ ಮಕ್ಕಳು ಹುರುಪಿನಿಂದ ನೃತ್ಯ ಮಾಡಿದ್ದಾರೆ ಎಂದು ಕಾರ್ಯಕ್ರಮವನ್ನು ಮೆಚ್ಚಿಕೊಂಡರು. ನಟಿ ನೀತು ಮಾತನಾಡಿ ಈಗಲೂ ಜನ ನನ್ನನ್ನು ಪೂಜಾರಿ ಚಿತ್ರದ ನೀತು ಎಂದು ಗುರುತಿಸುತ್ತಾರೆ. ಅದಕ್ಕೆ ಆ ಚಿತ್ರದ ಹಾಡುಗಳೇ ಕಾರಣ. ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದವರು ಮಾಲೂರು ಶ್ರೀನಿವಾಸ್ ಎಂದು ಹೇಳಿದರು. ನಂತರ ತಾಕತ್ ಚಿತ್ರದ ಅರೆರೆ ಬಂತು ದಸರಾ ಹಾಡಿಗೆ ವೇದಿಕೆ ಮೇಲಿದ್ದ ಎಲ್ಲರೂ ಒಟ್ಟಾಗಿ ನೃತ್ಯ ಮಾಡಿದರು.

ನಟಿ ಪೂಜಾ ಗಾಂಧಿ, ರಾಧಿಕಾ ಗಾಂಧಿ ಕೊನೆಯಲ್ಲಿ ಬಂದು ಮಕ್ಕಳನ್ನು ಅಭಿನಂದಿಸಿದರು. ಅನುಶ್ರೀರವರ ಕಾರ್ಯಕ್ರಮ ನಿರೂಪಣೆ ಸಮಾರಂಭಕ್ಕೆ ಮೆರುಗನ್ನು ನೀಡಿತು. ಪುಟ್ಟ ಮಕ್ಕಳು ಹಾಗೂ ಫಂಕಿಟೌನ್ ನೃತ್ಯಕಲಾವಿದರು ಹಳೆಯ ಹಾಗೂ ಹೊಸ ಹೆಸರಾಂತ ಚಿತ್ರಗಳ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿ ಕಲಾಸಕ್ತರ ಮನತಣಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada