»   » ಕನ್ನಡ 'ತ್ರಿ ಇಡಿಯಟ್ಸ್'ಗೆ ಗೋಲ್ಡನ್ ಸ್ಟಾರ್

ಕನ್ನಡ 'ತ್ರಿ ಇಡಿಯಟ್ಸ್'ಗೆ ಗೋಲ್ಡನ್ ಸ್ಟಾರ್

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಹೊಸ ಸಂಚಲನಕ್ಕೆ ಕಾರಣವಾದ 'ತ್ರಿ ಇಡಿಯಟ್ಸ್' ಚಿತ್ರವನ್ನು ಕನ್ನಡಕ್ಕೆ ತರುತ್ತಿರುವುದು ಗೊತ್ತೇ ಇದೆಯಲ್ಲ. ಇದೀಗ ಬಂದ ವರ್ತಮಾನದ ಪ್ರಕಾರ ಕನ್ನಡದ ತ್ರಿ ಇಡಿಯಟ್ಸ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಲು ಒಲವು ತೋರಿದ್ದಾರೆ. ಅವರು ಈ ಸಂಬಂಧ ಈಗಾಗಲೆ ನಿರ್ಮಾಪಕರನ್ನೂ ಭೇಟಿ ಮಾಡಿ ಮಾತುಕತೆಗೆ ಕುಳಿತಿದ್ದಾರೆ ಎನ್ನ್ನುತ್ತವೆ ಮೂಲಗಳು.

ಈಗಾಗಲೆ ಇಬ್ಬರು ನಿರ್ಮಾಪಕರನ್ನು ಸಂಪರ್ಕಿಸಿದ್ದೇನೆ. ತ್ರಿ ಇಡಿಯಟ್ಸ್ ಚಿತ್ರದಲ್ಲಿನ ಅಮೀರ್ ಖಾನ್ ಪಾತ್ರವನ್ನು ಮಾಡುವುದಾಗಿ ತಿಳಿಸಿದ್ದೇನೆ ಎನ್ನುತ್ತಾರೆ ಗಣೇಶ್. ಕಳೆದ ವಾರ ಕುಟುಂಬ ಸಮೇತ ತ್ರಿ ಇಡಿಯಟ್ಸ್ ಚಿತ್ರವನ್ನು ಗಣೇಶ್ ನೋಡಿ ಖುಷಿ ಪಟ್ಟರಂತೆ. ಕನ್ನಡಲ್ಲಿ ಅಮೀರ್ ಪಾತ್ರವನ್ನು ನಾನೇ ಏಕೆ ಮಾಡಬಾರದು ಅನ್ನಿಸಿ ಗಣೇಶ್ ಮುಂದಡಿಯಿಟ್ಟಿದ್ದಾರೆ.

ಸದ್ಯಕ್ಕೆ 'ಏನೋ ಒಂಥರಾ' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಗಣೇಶ್, ಅಮೀರ್ ಪೋಷಿಸಿದ್ದ ರಾಂಚೋ ಪಾತ್ರದ ಬಗ್ಗೆ ತೀವ್ರವಾಗಿ ತಲೆಕೆಡಿಸಿಕೊಂಡಿದ್ದಾರಂತೆ. ಹಾಗಿದ್ದರೆ ಮಾಧವನ್, ಶರ್ಮನ್ ಜೋಷಿ ಮತ್ತು ಕರೀನಾ ಕಪೂರ್ ಪಾತ್ರಗಳನ್ನು ಯಾರು ಪೋಷಿಸುತ್ತಾರೆ? ಎಂಬ ಪ್ರಶ್ನೆಗೆ ಗಣೇಶ್ ಬಳಿ ಉತ್ತರವಿಲ್ಲ.

ಈ ಬಗ್ಗೆ ಇನ್ನೂ ಅಂತಿಮವಾಗಿಲ್ಲದ ಕಾರಣ ಏನನ್ನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಗಣೇಶ್. ರಾಂಚೋ ಮತ್ತು ಪಿಯಾ (ಕರೀನಾ ಕಪೂರ್ ಪೋಷಿಸಿದ್ದ ಪಾತ್ರ) ಚುಂಬನ ದೃಶ್ಯ ನಿಮ್ಮ ಚಿತ್ರದಲ್ಲಿರುತ್ತದೆಯೇ? ಎಂಬ ಪ್ರಶ್ನೆಗೆ ಗಣೇಶ್ ಕೊಟ್ಟ ಉತ್ತರ, ಚುಂಬನಕ್ಕೆ ಬದಲಾಗಿ ಅಪ್ಪಿಕೊಳ್ಳುವ ದೃಶ್ಯವನ್ನು ಇಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎನ್ನುತ್ತಾರೆ.

ಈ ಹಿಂದೆ ಇದೇ ಕನ್ನಡದ ತ್ರಿ ಇಡಿಯಟ್ಸ್ ಚಿತ್ರದಲ್ಲಿ ಸುದೀಪ್ ಅಥವಾ ಪುನೀತ್ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಇದೀಗ ಸ್ವತಃ ಗಣೇಶ್ ಅವರೇ ತಮ್ಮ ಮುಂದಿನ ಚಿತ್ರದ ಬಗ್ಗೆ ಬಾಯ್ಬಿಟ್ಟಿರುವ ಕಾರಣ ಅಂತೆಕಂತೆಗಳಿಗೆ ತಾತ್ಕಾಲಿಕವಾಗಿ ತೆರೆಬಿದ್ದಂತಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada