»   » ಅಣ್ಣಾವ್ರ ಅಭಿಮಾನಿ ದೇವರಿಗಾಗಿ ಹುಡುಕಾಟ

ಅಣ್ಣಾವ್ರ ಅಭಿಮಾನಿ ದೇವರಿಗಾಗಿ ಹುಡುಕಾಟ

Posted By:
Subscribe to Filmibeat Kannada

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಅತಿದೊಡ್ಡ ಅಭಿಮಾನಿ ಯಾರು? ಬಹುಶಃ ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟದ ಕೆಲಸ. ವರನಟ ರಾಜ್ ರ ಅತಿದೊಡ್ಡ ಅಭಿಮಾನಿಯನ್ನು ಪತ್ತೆಹಚ್ಚಲು ಕನ್ನಡದ ಸುವರ್ಣ ವಾಹಿನಿ ಮುಂದಾಗಿದೆ. ಈ ಕಾರ್ಯಕ್ರಮದ ಮೂಲಕ ಅಣ್ಣಾವ್ರಿಗೆ ಸುವರ್ಣ ವಾಹಿನಿ ಶ್ರದ್ಧಾಂಜಲಿ ಸಲ್ಲಿಸಲಿದೆ.

ಸುವರ್ಣ ವಾಹಿನಿ ನಡೆಸಿಕೊಡುವ ಹೊಸ ಕಾರ್ಯಕ್ರಮದ ಹೆಸರು 'ಅಭಿಮಾನಿ ದೇವರು'. ಅಣ್ಣಾವ್ರ ದೇವರಂತ ಅಭಿಮಾನಿ ಯಾರು? ಎಂಬುದನ್ನು ಪತ್ತೆಹಚ್ಚಲು ಸುವರ್ಣ ವಾಹಿನಿ ರಾಜ್ಯದಾದ್ಯಂತ ಕರೆಕೊಟ್ಟಿತ್ತು. ಒಟ್ಟು ಮುವ್ವತ್ತೆರಡು ಮಂದಿ ಅಭಿಮಾನಿಗಳನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ 16 ಮಂದಿಯನ್ನು ಸೆಮಿಫೈನಲ್ ಗೆ ಹಾಗೂ ಕೊನೆಗೆ ಎಂಟು ಮಂದಿ ಫೈನಲ್ಸ್ ನಲ್ಲಿ ಸೆಣೆಸಲಿದ್ದಾರೆ ಎಂದು ಕಾರ್ಯನಿರ್ವಾಹಕ ನಿರ್ಮಾಪಕರಾದ ವಿಷ್ಣು ಮತ್ತು ಧನಂಜಯ್ ತಿಳಿಸಿದ್ದಾರೆ.

ಪ್ರತಿ ಕಂತಿನಲ್ಲಿ ಐದು ಮಂದಿ ಸ್ಪರ್ಧಿಗಳಿಗೆ ಡಾ.ರಾಜ್ ಕುಮಾರ್ ಅಭಿನಯಿಸಿದ ಚಿತ್ರಗಳ ಕುರಿತು ರಸಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರ ಜೊತೆಗೆ ಡಾ.ರಾಜ್ ನಟನೆ ಮತ್ತು ಅವರ ವ್ಯಕ್ತಿತ್ವವನ್ನು ಹೇಗೆ ಆದರ್ಶವಾಗಿ ಸ್ವೀಕರಿಸಿದ್ದಾರೆ ಎಂಬುದನ್ನು ಸ್ಪರ್ಧಿಗಳು ತೋರಿಸಬೇಕಾಗುತ್ತದೆ. ಪ್ರತಿ ಜಿಲ್ಲೆಯಿಂದ ರಾಜ್ ಅಭಿಮಾನಿಯಾಗಿರುವ ಒಬ್ಬ ಜನಪ್ರಿಯ ವ್ಯಕ್ತಿಯನ್ನು ಆಹ್ವಾನಿಸಿ ಕಾರ್ಯಕ್ರಮದ ಅಂದವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ.

ಅಂತಿಮವಾಗಿ ಗೆದ್ದ ಸ್ಪರ್ಧಿಗೆ ''ಅಭಿಮಾನಿ ದೇವರು'' ಎಂಬ ಟೈಟಲ್ ಹಾಗೂ ನಗದು ಬಹುಮಾನವನ್ನು ನೀಡಲಾಗುತ್ತದೆ. ಅಂತಿಮ ಸ್ಪರ್ಧೆಯಲ್ಲಿ ರಾಜ್ ಕುಟುಂಬಿಕರು ಹಾಗೂ ಚಿತ್ರರಂಗದ ಹಲವರು ಭಾಗವಹಿಸುವ ಸಾಧ್ಯತೆಯಿದೆ. ಸ್ವತಃ ರಾಜ್ ಅಭಿಮಾನಿಯಾಗಿರುವ ಚಿತ್ರಶ್ರೀ ಕಾರ್ಯಕ್ರಮದ ನಿರೂಪಕಿ. ಅಣ್ಣಾವ್ರ ಹುಟ್ಟುಹಬ್ಬದಂದು ಏಪ್ರಿಲ್ 24ರಂದು ಕಾರ್ಯಕ್ರಮ ಪ್ರಸಾರವಾಗಲಿದೆ. ಹೆಚ್ಚಿನ ಮಾಹಿತಿಗೆ ಸುವರ್ಣ ವಾಹಿನಿಯನ್ನು ವೀಕ್ಷಿಸಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada