»   »  ಈ ಹೆಣ್ಮಕ್ಕಳು ಅನೂಷಾಳ ಎರಡು ಕಣ್ಣುಗಳು

ಈ ಹೆಣ್ಮಕ್ಕಳು ಅನೂಷಾಳ ಎರಡು ಕಣ್ಣುಗಳು

Subscribe to Filmibeat Kannada

'ವೆಂಕಟ ಇನ್ ಸಂಕಟ' ಚಿತ್ರದ ನಾಯಕಿ ಅನೂಷಾ ಸಿನ್ಹಾ ಸಂಕಟದಲ್ಲಿದ್ದ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರು. ಈಗ ಆ ಮಕ್ಕಳು ಎದೆಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ತಮ್ಮ ಸ್ವಂತ ಮಕ್ಕಳೇನೋ ಎನ್ನುವಷ್ಟು ಖುಷಿ ಅನೂಷಾ ಅವರ ಕಣ್ಣುಗಳಲ್ಲಿ ಎದ್ದು ಕಾಣುತ್ತದೆ. ಈ ಬಗ್ಗೆ ರೂಪದರ್ಶಿಯೂ ಆಗಿರುವ ಅನೂಷಾ ವಿವರ ನೀಡಿದರು.

ಮೊದಲು ಸಂಗೀತಾ(12) ಎಂಬ ಮಗುವನ್ನು ಏಳು ವರ್ಷಗಳ ಹಿಂದೆಯೇ ದತ್ತು ತೆಗೆದುಕೊಂಡಿದ್ದೆ. ನಂತರ ಎರಡು ವರ್ಷಗಳ ಹಿಂದಷ್ಟೇ ಮತ್ತೊಂದು ಮಗು ಮಹೇಶ್ವರಿ(7)ಯನ್ನು ದತ್ತು ತೆಗೆದುಕೊಂಡೆ. ಇದೀಗ ಇಬ್ಬರೂ ಮಕ್ಕಳೂ ಓದಿನಲ್ಲಿ ಮುಂದಿದ್ದಾರೆ. ಅವರ ಉದ್ಯೋಗ, ಮದುವೆ ಎಲ್ಲವನ್ನೂ ನೋಡಿ ಆನಂದಿಸಬೇಕೆಂದಿದ್ದೇನೆ ಎನ್ನುತ್ತಾರೆ ಅನೂಷಾ.

''ಈ ಇಬ್ಬರು ಮಕ್ಕಳು ಹೈದರಾಬಾದಿನ ಸೂರ್ಯಪೇಟೆಯ ಬಡಕುಟುಂಬಕ್ಕೆ ಸೇರಿದವರು. ನಮ್ಮ ತಾಯಿ ಸಹಾ ಹೈದರಾಬಾದ್ ಮೂಲದವರು. ತುಂಬಾ ಚಿಕ್ಕ ವಯಸ್ಸಿನಲ್ಲೇ ನಾನು ತಂದೆಯನ್ನು ಕಳೆದುಕೊಂಡೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವುದು ಎಷ್ಟು ಕಷ್ಟ ಎಂಬುದರ ಅರಿವು ನನಗಿತ್ತು. ಬಡ ಮಕ್ಕಳಿಗೆ ನನ್ನ ಕೈಲಾದ ಸಹಾಯ ಮಾಡಬೇಕು ಎಂದು ನನ್ನ ಕಾಲೇಜು ದಿನಗಳಲ್ಲೇ ನಿರ್ಧರಿಸಿದ್ದೆ '' ಎನ್ನ್ನುತ್ತಾರೆ ಅನೂಷಾ.

ಬಡ ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಅವರನ್ನು ಜೀವನದಲ್ಲಿ ದಡ ಮುಟ್ಟಿಸಬೇಕು ಎಂದು ಕನಸು ಕಂಡಿದ್ದೆ.ಹಾಗಾಗಿ ಈ ಮಕ್ಕಳನ್ನು ದತ್ತ್ತು ತೆಗೆದುಕೊಂಡೆ. ಈ ಇಬ್ಬರೂ ಮಕ್ಕಳು ಈಗ ಹೆಚ್ಎಸ್ ಆರ್ ಬಡಾವಣೆಯಲ್ಲಿ ಓದುತ್ತಿದ್ದಾರೆ. ಕ್ರೈಸ್ಟ್ ಸ್ಕೂಲ್ ನಲ್ಲಿ ಸಂಗೀತಾ ಏಳನೇ ತರಗತಿ ಓದುತ್ತಿದ್ದರೆ ಮಹೇಶ್ವರಿ ಜಾನ್ಸನ್ ಪಬ್ಲಿಕ್ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದಾರೆ. ಇಬ್ಬರೂ ಓದಿನಲ್ಲಿ ಮುಂದು ಎಂದು ಹೇಳುವಾಗ ಅನೂಷಾ ಮುಖದಲ್ಲಿನ ಆನಂದ ಹೇಳತೀರದು.

ನಾನು ಡಾಕ್ಟರ್ ಆಗ್ತೀನಿ ಎಂದು ಸಂಗೀತಾ ಹೇಳಿದರೆ, ಶಿಕ್ಷಕಿಯಾಗಬೇಕು ಎಂಬುದು ಮಹೇಶ್ವರಿ ಕನಸು ಕಟ್ಟಿದ್ದಾಳೆ. ಇವರಿಬ್ಬರ ಕನಸುಗಳಿಗೆ ಅನೂಷಾ ನೀರೆರೆಯುತ್ತಿದ್ದಾರೆ. ಮಕ್ಕಳ ಹೋಂವರ್ಕ್ ಮಾಡಲು ಸಹಾಯ ಮಾಡುವುದು. ಅವರಿಗೆ ಪಾಠ ಹೇಳಿಕೊಡುವುದು ಅನೂಷಾ ಅವರಿಗೆ ಖುಷಿ ಕೊಟ್ಟಿದೆಯಂತೆ.

ಇವರಿಬ್ಬರೂ ನನ್ನ ಮತ್ತು ನಮ್ಮ ತಾಯಿಯನ್ನು ಬಳಹಷ್ಟು ಹಚ್ಚಿಕೊಂಡಿದ್ದಾರೆ. ನನ್ನನ್ನು ಅಕ್ಕ ಎಂದರೆ ನಮ್ಮ ತಾಯಿಯನ್ನು ಅಮ್ಮ ಎಂದು ಕರೆಯುತ್ತಾರೆ. ಸಂಗೀತಾ ಅವರ ತಾಯಿ ಮನೆಕೆಲಸ ಮಾಡಿದರೆ ಅವರ ತಂದೆ ಕೂಲಿ ಕೆಲಸ ಮಾಡುತ್ತಾರೆ. ಹಾಗೆಯೇ ಮಹೇಶ್ವರಿ ಅವರ ತಾಯಿ ಮನೆವಾರ್ತೆ ನೋಡಿಕೊಳ್ಳುತ್ತಾರೆ, ತಂದೆಯದು ಕೂಲಿ ಕೆಲಸ.

ರಜಾ ದಿನಗಳಲ್ಲಿ ಮಕ್ಕಳನ್ನು ನೋಡಿಕೊಂಡು ಹೋಗುವಂತೆ ಅವರ ತಂದೆತಾಯಂದಿರನ್ನು ಕರೆಯುತ್ತೇವೆ. ಅವರು ಬಂದು ಮಕ್ಕಳೊಂದಿಗೆ ಕಾಲ ಕಳೆದು ಬೆಂಗಳೂರು ಸುತ್ತಾಡಿ ಹೊರಟು ಹೋಗುತ್ತಾರೆ. ಇವರಿಬ್ಬರನ್ನೂ ಆಗಾಗ ಪಿವಿಆರ್ ಗೆ ಕರೆದುಕೊಂಡು ಹೋಗಿ ಸಿನಿಮಾಗಳನ್ನೂ ತೋರಿಸುತ್ತೇನೆ. ಈ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದರೆ ನಿಜಕ್ಕೂ ಖುಷಿಯಾಗುತ್ತದೆ ಎನ್ನುತ್ತಾರೆ ಅನೂಷಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada