»   »  ತಪ್ಪು ತಿದ್ದಿಕೊಳ್ಳಲು ದಯಾಳ್ ಹರಸಾಹಸ

ತಪ್ಪು ತಿದ್ದಿಕೊಳ್ಳಲು ದಯಾಳ್ ಹರಸಾಹಸ

By: * ಜಯಂತಿ
Subscribe to Filmibeat Kannada

ನಿರ್ದೇಶಕ ದಯಾಳ್ ಪದ್ಮನಾಭನ್ ತಪ್ಪುಗಳನ್ನು ತಿದ್ದಿಕೊಳ್ಳಲು ನಿರ್ಧರಿಸಿದ್ದಾರೆ. ಅವರು ನಿರ್ದೇಶಿಸಲಿರುವ ಶ್ರೀಹರಿ ಸಿನಿಮಾ ಅದಕ್ಕೆ ವೇದಿಕೆ. ಒಂದಿಷ್ಟು ಹಣವನ್ನೂ ಅವರು ತೊಡಗಿಸುತ್ತಿರುವುದರಿಂದ ಈ ಸಿನಿಮಾ ಮೇಲೆ ಅವರಿಗೆ ಪ್ರೀತಿಯೂ ಇದೆ.

ಇದುವರೆಗೆ ಭಾವನಾತ್ಮಕ ದೃಶ್ಯಗಳನ್ನು ಸರಿಯಾಗಿ ತೋರುವಲ್ಲಿ ತಾವು ಎಡವುತ್ತಿರುವುದು ದಯಾಳ್‌ರ ಗಮನಕ್ಕೆ ಬಂದಿದೆ. ಅವರ ಬಂಧುಮಿತ್ರರೇ ಈ ಸಂಗತಿಯನ್ನು ಮನದಟ್ಟು ಮಾಡಿಸಿದ್ದಾರೆ. ಇದುವರೆಗೆ ತಾವೇ ಸಂಭಾಷಣೆ ಬರೆಯುತ್ತಿದ್ದ ದಯಾಳ್, ಈ ಬಾರಿ ಆ ಕೆಲಸ ಮಾಡಲು ಹೋಗಿಲ್ಲ. ಪ್ರಸನ್ನ ಎಂಬ ಹೊಸಬರ ಕೈಗೆ ಪೆನ್ನು ಕೊಟ್ಟಿದ್ದಾರೆ. ಮೂರು ನಾಲ್ಕು ಚಿತ್ರಗಳಿಗೆ ಸಂಭಾಷಣೆ ಬರೆದ ಅನುಭವ ಇರುವ ಪ್ರಸನ್ನ ನಿರ್ಮಾಪಕರಲ್ಲಿ ಒಬ್ಬರಾದ ಚಿನ್ನೇಗೌಡರನ್ನು ಮೆಚ್ಚಿಸಲಿಕ್ಕೂ ಹೆಣಗಾಡಿದ್ದಾರೆ.

ಸಾಕಷ್ಟು ಹೋಮ್‌ವರ್ಕ್ ಮಾಡಿದ ನಂತರವೇ ಈ ಚಿತ್ರ ಮಾಡುತ್ತಿದ್ದೇವೆ. ರುಬ್ಬಿದ್ದಾಗಿದೆ. ಕಾವಲಿ ಮೇಲೆ ಹಾಕೋದಷ್ಟೇ ಬಾಕಿ. ಹೇಗೆ ಬೇಯುತ್ತೋ ನೋಡಬೇಕು. ರುಚಿಯಾಗಿದ್ದರೆ ಅಷ್ಟೇ ಸಾಕು ಎನ್ನುತ್ತಾ ಚಿನ್ನೇಗೌಡರು ಪಾಂಡುರಂಗನನ್ನು ನೆನೆದರು. ಅವರ ಮಗ ಶ್ರೀಮುರಳಿಯೇ ಚಿತ್ರದ ನಾಯಕ. ಇದು ಡಿಫರೆಂಟ್ ಚಿತ್ರ ಅಂತ ಅವರು ಪದೇಪದೇ ಹೇಳಿದರು.

ಪೂಜಾ ಗಾಂಧಿ ಶ್ರೀಹರಿ ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಲು ಸಿದ್ಧರಾಗಿದ್ದಾರೆ. ಅವರ ಸಹೋದರಿ ರಾಧಿಕಾ ಗಾಂಧಿಗೆ ಪಾಸಿಟಿವ್ ಪಾತ್ರ. ಮೊಟ್ಟ ಮೊದಲ ಬಾರಿಗೆ ಅಕ್ಕ ತಂಗಿ ಒಂದೇ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ವೇದದ ಬಗ್ಗೆ ಭಾಷಣ ಹೊಡೆಯುವ ಹತ್ತು ಪುಟಗಳ ಕನ್ನಡ ಸಂಭಾಷಣೆಯನ್ನು ಇಂಗ್ಲಿಷ್‌ನಲ್ಲಿ ಬರೆದು, ರಾಧಿಕಾಗೆ ಕೊಟ್ಟು ಉರುಹೊಡೆದು ಹತ್ತು ದಿನಗಳಲ್ಲಿ ಒಪ್ಪಿಸುವಂತೆ ದಯಾಳ್ ಸವಾಲೊಡ್ಡಿದ್ದಾರೆ. ಆ ಪರೀಕ್ಷೆಯಲ್ಲಿ ರಾಧಿಕಾ ಪಾಸಾಗಿದ್ದು ಖುದ್ದು ದಯಾಳ್‌ಗೇ ಅಚ್ಚರಿ ತಂದಿದೆ. ಹೀಗೆ ಎಲ್ಲರನ್ನೂ ತಯಾರು ಮಾಡುತ್ತಾ, ಸಾಕಷ್ಟು ಸಿದ್ಧತೆ ನಡೆಸಿ ಚಿತ್ರ ಮಾಡುತ್ತಿದ್ದೇವೆ ಎಂದು ತಮಿಳು ಆಕ್ಸೆಂಟ್‌ನಲ್ಲಿ ದಯಾಳ್ ಹೇಳಿ ಕೂತರು. ಚಿನ್ನೇಗೌಡರು ಮತ್ತೊಮ್ಮೆ ಪಾಂಡುರಂಗ ಅಂದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada