»   »  ಪ್ರಿಯಾಮಣಿ ಕಣ್ಣಲ್ಲಿ ಪುನೀತ್, ಅಭಿಷೇಕ್

ಪ್ರಿಯಾಮಣಿ ಕಣ್ಣಲ್ಲಿ ಪುನೀತ್, ಅಭಿಷೇಕ್

Posted By: *ಜಯಂತಿ
Subscribe to Filmibeat Kannada
ಪುನೀತ್‌ಗೂ ಅಭಿಷೇಕ್ ಬಚ್ಚನ್‌ಗೂ ಇರುವ ವ್ಯತ್ಯಾಸವೇನು ಅಂತ ಗೊತ್ತಾಗಬೇಕೆ? ಉತ್ತರ ಹೇಳಲು ಬೆಂಗಳೂರಲ್ಲೇ ಇದ್ದಾರೆ ಪ್ರಿಯಾಮಣಿ. ಒಂದು ಕಾಲದಲ್ಲಿ ಇದೇ ಬೆಂಗಳೂರಲ್ಲಿ ಓದಿದ ಹುಡುಗಿ. ಆಗ ಅವಕಾಶಕ್ಕಾಗಿ ಎಷ್ಟೇ ಅಂಡಲೆದರೂ ಪ್ರಯೋಜನವಾಗಿರಲಿಲ್ಲ. ಆಮೇಲೆ ತೆಲುಗು, ತಮಿಳು ಸಿನಿಮಾ ಜಗತ್ತಿಗೆ ಈ ಹುಡುಗಿ ಹೋದದ್ದೇ ಇಲ್ಲಿಯವರಿಗೆ ಪರಕೀಯರಾದರು. ಒಂದು ರಾಷ್ಟ್ರ ಪ್ರಶಸ್ತಿ ಬೇರೆ ಸಿಕ್ಕಿತು. ಗ್ಲ್ಯಾಮರ್, ಎತ್ತರ ಹಾಗೂ ಅಭಿನಯ ಸಾಮರ್ಥ್ಯ ಎಲ್ಲವೂ ಹದಗೊಂಡಂಥ ಹುಡುಗಿ ಪ್ರಿಯಾಮಣಿ ಈಗ ರಾಮ್ ಚಿತ್ರದ ಶೂಟಿಂಗ್‌ಗಾಗಿ ಮತ್ತೆ ತವರುಮನೆಗೆ ಬಂದಿದ್ದಾರೆ.

ಮಣಿರತ್ನಂ ನಿರ್ದೇಶನದ ದ್ವಿಭಾಷಾ ಚಿತ್ರ ಅಶೋಕವನಂ (ರಾವಣ). ಅದರಲ್ಲಿ ಅಭಿಷೇಕ್ ಬಚ್ಚನ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಅಲ್ಲಿ ಮೇಕಪ್ ಅಳಿಸಿದ ಮೇಲೆ ಪುನೀತ್ ಜೊತೆ ಕುಣಿಯುವ ಭಾಗ್ಯ. ಪುನೀತ್ ಭೂಮಿ ತೂಕದ ನಟ. ಹಮ್ಮಿಲ್ಲ, ಬಿಮ್ಮಿಲ್ಲ. ಮೊದಲಿನಿಂದಲೂ ನಾನು ಅವರ ಅಭಿಮಾನಿ. ಶೂಟಿಂಗ್‌ನಲ್ಲಿ ಅವರು ಉತ್ಸಾಹದ ಬುಗ್ಗೆ. ಕುರ್ಚಿ ಮೇಲೆ ವಿರಮಿಸುವಾಗ ಸ್ನೇಹಜೀವಿ. ಅಭಿಷೇಕ್ ಏನು ಅಂತ ಶೂಟಿಂಗ್ ನಡೆಯುವಾಗಲೇ ಹೆಚ್ಚು ಗೊತ್ತಾಗುತ್ತಿದ್ದುದು. ಕ್ಯಾಮೆರಾ ಸ್ಟಾರ್ಟ್ ಆದಮೇಲೆ ಅವರು ಅವರಾಗಿ ಇರುತ್ತಿರಲಿಲ್ಲ; ಪಾತ್ರವೇ ಆಗಿಬಿಡುತ್ತಿದ್ದರು... ಹೀಗೆ ಪುನೀತ್ ಹಾಗೂ ಅಭಿಷೇಕ್ ನಡುವಿನ ವ್ಯತ್ಯಾಸವನ್ನು ಪ್ರಿಯಾಮಣಿ ವಿವರವಾಗಿ ಬಿಚ್ಚಿಡುತ್ತಾರೆ.

ಇಲ್ಲಿಯವರೆಗೆ ಕನ್ನಡ ಚಿತ್ರಗಳನ್ನು ಯಾಕೆ ಒಪ್ಪಿಕೊಳ್ಳಲಿಲ್ಲ ಅಂದರೆ, ಈ ಪ್ರಶ್ನೆ ಎದುರಾಗುತ್ತೆ ಅಂತ ನನಗೆ ಗೊತ್ತಿತ್ತು ಎಂದು ಹೇಳಿದ ನಂತರವೇ ಅವರು ಉತ್ತರ ಕೊಟ್ಟಿದ್ದು. ಕೆಲವು ಅವಕಾಶಗಳು ನನ್ನ ಆಯ್ಕೆಗೆ ಹೊಂದುವಂತಿರಲಿಲ್ಲ. ಅಪರೂಪಕ್ಕೆ ಪಾತ್ರ ಇಷ್ಟವಾದರೂ, ನನ್ನ ಡೇಟ್ಸ್ ಇರುತ್ತಿರಲಿಲ್ಲ. ಈಗ ಕಾಲ ಕೂಡಿಬಂದಿದೆ. ಗಜ ಚಿತ್ರದಲ್ಲಿ ನಿರ್ದೇಶಕ ಮಾದೇಶ್ ಮಾಡಿರುವ ಕೆಲಸವನ್ನು ನಾನು ನೋಡಿದ್ದೇನೆ. ಪುನೀತ್ ಏನು ಅಂತ ನಮಗೆಲ್ಲಾ ಗೊತ್ತು. ರಾಮ್ ಔಟ್ ಅಂಡ್ ಔಟ್ ಕಾಮಿಡಿ ಚಿತ್ರ. ಅದಕ್ಕೇ ಹಿಂದೂಮುಂದೂ ನೋಡದೆ ಒಪ್ಪಿಕೊಂಡೆ ಅಂತಾರೆ ಪ್ರಿಯಾಮಣಿ.

ಬೆಳಗಿನಿಂದ ರಾತ್ರಿ ಎಂಟರವರೆಗೆ ಶೂಟಿಂಗ್. ಪ್ಯಾಕಪ್ ಆದಮೇಲೆ ಮನೆಯಲ್ಲಿ ಇಷ್ಟವಾದ ತಿನಿಸಿನ ಈಟಿಂಗ್. ಬೆಂಗಳೂರಲ್ಲಿ ಶೂಟಿಂಗ್ ನಡೆಯೋವರೆಗೂ ತಾನು ಸುಖಜೀವಿ. ಯಾಕೆಂದರೆ, ಓದಿ, ಬೆಳೆದ ಊರಿನ ತಂಪು ಜೊತೆಗಿರುತ್ತದೆ. ಆಗೀಗ ಹಳೆ ಗೆಳತಿಯರ ದರುಶನವಾಗುತ್ತದೆ ಅನ್ನುವ ಪ್ರಿಯಾಮಣಿ ಬದುಕಿನ ಕನಸು? ಮೇ ಬಿ ಹಾಲಿವುಡ್ ಅನ್ನುತ್ತಾ ಐಷಾರಾಮಿ ಕಾರಿನ ಬಾಗಿಲನ್ನು ಅವರು ಮುಚ್ಚಿಕೊಂಡರು.

ಬಲಗಾಲಿಟ್ಟು ಒಳಗೆ ಬಾಮ್ಮಾ ಪ್ರಿಯಾಮಣಿ!
ಕನ್ನಡಕ್ಕೆ ಶೂರ್ಪನಖಿಯಾದ ಪ್ರಿಯಾಮಣಿ
ಬಳೆ ತೊಡಲು ಕನ್ನಡಕ್ಕೆ ಬರುವರೆ ಪ್ರಿಯಾಮಣಿ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada