»   » ಸರಕಾರದ ವಿರುದ್ದ ವಿಷ್ಣು ಅಭಿಮಾನಿಗಳ ಆಕ್ರೋಶ

ಸರಕಾರದ ವಿರುದ್ದ ವಿಷ್ಣು ಅಭಿಮಾನಿಗಳ ಆಕ್ರೋಶ

Posted By:
Subscribe to Filmibeat Kannada
Actor Vishnuvardhan 3rd death anniversary
ಭಾರತೀಯ ಚಿತ್ರರಂಗ ಕಂಡ ಮಹಾನ್ ನಟ ಮರೆಯದ ಮಾಣಿಕ್ಯ, ಸಾಹಸಸಿಂಹ ಡಾ. ವಿಷ್ಣುವರ್ಧನ್ ನಮ್ಮನ್ನು ಅಗಲಿ ಇಂದಿಗೆ (ಡಿ 30) ಮೂರು ವರ್ಷ.

ಅಖಿಲ ಕರ್ನಾಟಕ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಭಾನುವಾರ (ಡಿ 30) ವಿಷ್ಣು ಮೂರನೇ ಪುಣ್ಯತಿಥಿ ಸ್ಮರಣಾರ್ಥ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಡಾ.ವಿಷ್ಣುವರ್ಧನ್ ಸಾಂಸ್ಕೃತಿಕ ಪರಿಷತ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 'ಕೋಟಿಗೊಬ್ಬ 2013' ಕ್ಯಾಲೆಂಡರ್ ಅನ್ನು ಸಂಸದ ಅನಂತಕುಮಾರ್ ಶನಿವಾರ (ಡಿ 29) ಬಿಡುಗಡೆ ಮಾಡಿದ್ದರು.

ಈ ಮಧ್ಯೆ, ವಿಷ್ಣುವರ್ಧನ್ ಸಮಾಧಿಗೆ ಪೂಜೆ ಸಲ್ಲಿಸಲು ಭಾರೀ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ನೆರೆದಿದ್ದಾರೆ. ವಿಷ್ಣುವರ್ಧನ್ ಅಗಲಿ ಮೂರು ವರ್ಷವಾದರೂ ಅವರ ಸ್ಮಾರಕ ನಿರ್ಮಾಣ ಮಾಡಲಿಲ್ಲ ಎಂದು ಅಭಿಮಾನಿಗಳು ಸರಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಿಮ್ಮ ಕೈಯಲ್ಲಿ ಸಾಧ್ಯವಾಗದೇ ಇದ್ದಲ್ಲಿ ಹೇಳಿ. ವಿಷ್ಣುವರ್ಧನ್ ಅವರ ಸಮಾಧಿಯನ್ನು ನಾವೇ ಕಟ್ಟುತ್ತೇವೆ ಎಂದು ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ಬನಶಂಕರಿ - ಕೆಂಗೇರಿ ರಸ್ತೆಗೆ ವಿಷ್ಣು ಹೆಸರಿಡಬೇಕೆಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

ವಿಷ್ಣುವರ್ಧನ್ ಧರ್ಮಪತ್ನಿ ಭಾರತಿ ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಈ ಸಮಯದಲ್ಲಿ ನಿರ್ಮಾಪಕ ಕೊಬ್ಬರಿ ಮಂಜು ಭಾರತಿ ಜೊತೆಗಿದ್ದರು. ವಿಷ್ಣು ಸಮಾಧಿ ನಿರ್ಮಾಣಕ್ಕಾಗಿ ಮೂರು ವರ್ಷಗಳಿಂದ ತಾಳ್ಮೆಯಿಂದ ಕಾದಿದ್ದೇವೆ. ಬರುವ ಜನವರಿ 26ರೊಳಗೆ ಸಮಾಧಿ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಸರಕಾರ ಭರವಸೆ ನೀಡಿದೆ ಎಂದು ಭಾರತಿ ವಿಷ್ಣುವರ್ಧನ್ ಈ ಸಂದರ್ಭದಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಡಿಸೆಂಬರ್ 30, 2009ರಂದು ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್ ನಲ್ಲಿ ವಿಷ್ಣುವರ್ಧನ್ ಹೃದಯಾಘಾತದಿಂದ ತನ್ನ 59ನೇ ವಯಸಿನಲ್ಲಿ ವಿಷ್ಣು ನಿಧನ ಹೊಂದಿದ್ದರು.

ಮೈಸೂರಿನ ಎಚ್ ಎಲ್ ನಾರಾಯಣ ರಾವ್ ಮತ್ತು ಕಾಮಾಕ್ಷಮ್ಮ ದಂಪತಿಗಳಿಗೆ ಜನಿಸಿದ ಸಂಪತ್ ಕುಮಾರ್ ಆಲಿಯಾಸ್ ವಿಷ್ಣುವರ್ಧನ್ 1972 ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ವಿಷ್ಣುಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಉಡುಪಿಯ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಆಧ್ಯಾತ್ಮಿಕ ಗುರುವಾಗಿ ಸ್ವೀಕರಿಸಿದ್ದ ವಿಷ್ಣು ಸಂಖ್ಯಾಸಾಸ್ತ್ರವನ್ನು ಬಹುವಾಗಿ ನಂಬಿಕೊಂಡಿದ್ದರು.

ತನ್ನ ಕಾರು ಮತ್ತು ಮೊಬೈಲ್ ಸಂಖ್ಯೆಯ ಕೊನೆಯ ಮೂರು ನಂಬರನ್ನು '321' ಬಳಸುತ್ತಿದ್ದರು. ಆಪ್ತರಕ್ಷಕ ಅವರ 201ನೇ ಮತ್ತು ಕೊನೆಯ ಕನ್ನಡ ಚಿತ್ರವಾಗಿತ್ತು.

ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ವಿಷ್ಣು 220 ಚಿತ್ರಗಳಲ್ಲಿ ನಟಿಸಿದ್ದರು. 8 ಫಿಲಂಫೇರ್ ಮತ್ತು 10 ರಾಜ್ಯಪ್ರಶಸ್ತಿಯನ್ನು ವಿಷ್ಣು ಪಡೆದಿದ್ದರು.

English summary
Fans of Kannada actor Vishnuvardhas observe his 3rd death anniversary today. Several events organized in Karnataka to mark the day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada