ರೇಣುಕಾಸ್ವಾಮಿ ಪ್ರಕರಣ ಆಧರಿಸಿ ಸಿನಿಮಾ ಬಂದೇಬಿಡ್ತು? ಟೈಟಲ್ ಏನು? ಯಾರೆಲ್ಲಾ ನಟಿಸಿದ್ದಾರೆ?
ಒಂದೂವರೆ ವರ್ಷದಿಂದ ರೇಣುಕಾಸ್ವಾಮಿ ಪ್ರಕರಣದ ಭಾರೀ ಚರ್ಚೆ ಹುಟ್ಟಾಕ್ಕಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರಕರಣದ ಆರೋಪಿಯಾಗಿ ಜೈಲು ಸೇರಿದ್ದಾರೆ. ಪವಿತ್ರಾ ಗೌಡಗೆ ಕೆಟ್ಟದಾಗಿ ಮಸೇಜ್ ಕಳುಹಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಬುದ್ಧ ಕಲಿಸುವ ವೇಳೆ ಆತನ ಪ್ರಾಣ ಹೋಗಿತ್ತು.
ನಟ ದರ್ಶನ್ ಸೂಚನೆಯಂತೆ ರೇಣುಕಸ್ವಾಮಿಯನ್ನು ಅಪಹರಿಸಿ ಕರೆತರಲಾಗಿತ್ತು. ದರ್ಶನ್ ಹಾಗೂ ಪವಿತ್ರಾ ಗೌಡ ಕೂಡ ರೇಣುಕಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇದೇ ಕಥೆ ಆಧರಿಸಿ ಕನ್ನಡದಲ್ಲಿ ಸಿನಿಮಾ ಮಾಡಲು ಕೆಲವರು ಮುಂದಾಗಿದ್ದರು. ಒಂದಷ್ಟು ಟೈಟಲ್‌ಗಳು ಹರಿದಾಡಿದ್ದವು. ಸದ್ಯ ಬಿಡುಗಡೆ ಆಗಿರುವ 'ಬಾಸ್' ಸಿನಿಮಾ ಪೋಸ್ಟರ್ ಸಾಕಷ್ಟು ಊಹಾಪೋಹಕ್ಕೆ ಕಾರಣವಾಗಿದೆ. ಇದು ರೇಣುಕಾಸ್ವಾಮಿ ಪ್ರಕರಣ ಕತೆ ಆಧರಿಸಿದ ಸಿನಿಮಾನಾ? ಎನ್ನುವ ಅನುಮಾನ ಮೂಡಿಸಿದೆ.

ಸಿರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಬಾಸ್' ಸಿನಿಮಾ ನಿರ್ಮಾಣವಾಗ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಡಿಸೆಂಬರ್ ವೇಳೆಗೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ದೇಶಕ ಲವ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಇದು ರೇಣುಕಾಸ್ವಾಮಿ ಪ್ರಕರಣದ ಕುರಿತಾದ ಸಿನಿಮಾ ಹೌದೋ ಅಲ್ಲವೋ ಎಂದು ಈಗ ಹೇಳಲು ಸಾಧ್ಯವಿಲ್ಲ. ಅದನ್ನು ತೆರೆಮೇಲೆ ನೋಡಬೇಕು ಎಂದಿದ್ದಾರೆ.
ನಮ್ಮದು ನೈಜ ಘಟನೆ ಆಧರಿಸಿ ಮಾಡಿರುವ ಸಿನಿಮಾ. ಒಂದು ಕೊಲೆ ನಡೆಯುತ್ತದೆ ಅದರ ಸುತ್ತಾ ಏನೆಲ್ಲಾ ಆಗುತ್ತದೆ ಅನ್ನುವುದು ಈ ಸಿನಿಮಾ ಕಥೆ, ಉಳಿದಿದ್ದು ಟೀಸರ್, ಟ್ರೈಲರ್ ಬಿಡುಗಡೆ ಬಳಿಕ ನಿಮಗೆ ಅರ್ಥವಾಗುತ್ತದೆ ಎಂದು ಲವ ಪ್ರತಿಕ್ರಿಯಿಸಿದ್ದಾರೆ. ನಟ ದರ್ಶನ್ ಅವರನ್ನು ಬಾಸ್, ಡಿಬಾಸ್ ಎಂದೇ ಅಭಿಮಾನಿಗಳು ಕರೆಯುತ್ತಾರೆ. ಸದ್ಯ ಈ ಚಿತ್ರದ ಟೈಟಲ್ ಕೂಡ ಅದೇ ಆಗಿರುವುದು ಕುತೂಹಲ ಮೂಡಿಸಿದೆ.

"ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಕ್ರೈಂ ಸ್ಟೋರಿ ಆಧರಿಸಿದ ಚಿತ್ರ" ಎಂದು ಪೋಸ್ಟರ್‌ನಲ್ಲಿ ಹಾಕಿದ್ದಾರೆ. ಎಟಿ ಪಾಳ್ಯದ ಪೈಪ್‌ಲೈನ್ ಬಳಿ ಗುರುತುಸಿಗದ ವ್ಯಕ್ತಿಯ ಶವ ಸಿಕ್ಕಿದೆ ಎಂದು ಪತ್ರಿಕೆ ಮುಖಪುಟದ ಫೋಟೊ ಇದೆ. ಪೊಲೀಸ್ ಠಾಣೆಯಲ್ಲಿ ಆರೋಪಿಗಳಾಗಿ ಯುವಕ, ಯುವತಿ ನಿಂತಿರುವ ಫೋಟೊ ಕೂಡ ಇದೆ. ಈ ಹಿಂದೆ ರೇಣುಕಾಸ್ವಾಮಿ ಪ್ರಕರಣದ ಚಾರ್ಚ್‌ಶೀಟ್‌ನಲ್ಲಿ ದರ್ಶನ್, ಪವಿತ್ರಾ ಗೌಡ ಇದೇ ರೀತಿ ಪೊಲೀಸ್ ಠಾಣೆಯಲ್ಲಿ ನಿಂತಿದ್ದ ಫೋಟೊ ವೈರಲ್ ಆಗಿತ್ತು.
'ನಟ್ವರ್‌ಲಾಲ್', 'ಮಡಮಕ್ಕಿ' ಸೇರಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ತುನುಷ್ ಶಿವಣ್ಣ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಮೋನಿಕಾ ಗೌಡ ಹಾಗೂ ಪಾಯಲ್ ಚೆಂಗಪ್ಪ ನಾಯಕಿಯರಾಗಿ ನಟಿಸಿದ್ದಾರೆ. ಇಷ್ಟು ಸಾಕಷ್ಟ ಜನ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ದಿವ್ಯ ಸುರೇಶ್ ಸಂಗೀತ, ಶರತ್ ಛಾಯಾಗ್ರಹಣ ಚಿತ್ರಕ್ಕಿದೆ. 'ಬಾಸ್' ಎನ್ನುವ ಟೈಟಲ್‌ಗೆ 'ಸತ್ಯಮೇವ ಜಯತೇ' ಎನ್ನುವ ಸಬ್‌ಟೈಟಲ್ ಕೂಡ ಇದೆ.
ನವೆಂಬರ್ 15ರ ವೇಳೆಗೆ 'ಬಾಸ್' ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಬಳಿಕ ಪ್ರಮೋಷನ್ ಶುರು ಮಾಡುತ್ತೇವೆ. ಡಿಸೆಂಬರ್ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ ಎಂದು ಲವ ತಿಳಿಸಿದ್ದಾರೆ. ಭಾರೀ ಚರ್ಚೆ ಹುಟ್ಟುಹಾಕುವ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವುದು ಹೊಸದೇನು ಅಲ್ಲ. ರೇಣುಕಾಸ್ವಾಮಿ ಪ್ರಕರಣವನ್ನು ಆಧರಿಸಿ 'ಬಾಸ್' ಸಿನಿಮಾ ಬಂದಿದ್ಯಾ? ಯಾವುದೇ ಸಮಸ್ಯೆ ಇಲ್ಲದೇ ಸಿನಿಮಾ ತೆರೆಗೆ ಬರುತ್ತಾ ಕಾದು ನೋಡಬೇಕಿದೆ.


Click it and Unblock the Notifications











