twitter
    For Quick Alerts
    ALLOW NOTIFICATIONS  
    For Daily Alerts

    ರಿಲೀಸ್ಗೆ ಕಾದಿರುವ 7 ಭಾರೀ ಚಿತ್ರಗಳ ಮುನ್ನೋಟ

    |

    ಮುಂಬರುವ ಎರಡು ತಿಂಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಬಹು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗಲಿವೆ. ಒಂದಲ್ಲಾ ಒಂದು ರೀತಿಯಲ್ಲಿ ಕುತೂಹಲ ಹುಟ್ಟಿಸಿರುವ ಈ ಚಿತ್ರಗಳು ಪ್ರೇಕ್ಷಕರ ಕ್ರೇಜ್ ಹೆಚ್ಚುವಂತೆ ಮಾಡಿವೆ.

    ಕಳೆದ ವರ್ಷಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗದ ಸಾಧನೆ ಗಣನೀಯವಾಗಿ ಅಲ್ಲದಿದ್ದರೂ ಬಹಳಷ್ಟು ಸುಧಾರಿಸಿದೆ. ಗೆಲ್ಲುತ್ತಿರುವ ಚಿತ್ರಗಳ ಸಂಖ್ಯೆ ಹೆಚ್ಚುತ್ತಿರುವುದು ಸಮಾಧಾನಕಾರ ಸಂಗತಿ.

    ಚಿತ್ರ ವೀಕ್ಷಿಸಿಸದೇ ಕನ್ನಡ ಚಿತ್ರಗಳ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದ ಕೆಲ ನಮ್ಮವರೂ ಸೇರಿದಂತೆ ಪರಭಾಷಿಗರಿಗೆ ಚಿಂಗಾರಿ, ಕಠಾರಿವೀರ ಸುರಸುಂದರಾಂಗಿ, ಅದ್ದೂರಿ, ದಂಡುಪಾಳ್ಯ, ಗೋವಿಂದಾಯ ನಮ:, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮುಂತಾದ ಚಿತ್ರಗಳು ಸರಿಯಾದ ಉತ್ತರವನ್ನು ನೀಡಿವೆ.

    ನಿರೀಕ್ಷೆ ಹುಟ್ಟಿಸಿರುವ ಬಿಗ್ ಬಜೆಟ್ ಮತ್ತು ಹೈಪ್ ಇರುವ ಚಿತ್ರಗಳು ಬಿಡುಗಡೆಗೆ ಸನ್ನದ್ದವಾಗಿ ನಿಂತಿವೆ. ದರ್ಶನ್ ಅಭಿನಯದ ಬಹುಕೋಟಿ ಸಂಗೊಳ್ಳಿ ರಾಯಣ್ಣ ಚಿತ್ರದ ಬಿಡುಗಡೆ ಮತ್ತು ಚಿತ್ರದ ಅದ್ದೂರಿ ಪ್ರದರ್ಶನದಿಂದಾಗಿ ಇತರ ಚಿತ್ರಗಳ ಬಿಡುಗಡೆ ಕೊಂಚ ವಿಳಂಬವಾಗುತ್ತಿವೆ.

    ಡಿಸೆಂಬರ್ ಅಂತ್ಯದೊಳಗೆ ಪ್ರಳಯವಾಗುತ್ತೆ ಅನ್ನುವ ಹುಸಿ/ಹಸಿ ಗಾಸಿಪ್ ಗಳ ನಡುವೆಯೂ ಚಿತ್ರಮಂದಿರದ ಬಾಗಿಲು ತಟ್ಟುತ್ತಿರುವ ಪ್ರಮುಖ ಚಿತ್ರಗಳೆಂದರೆ ಅಟ್ಟಹಾಸ, ಡ್ರಾಮಾ, ಎದೆಗಾರಿಕೆ, ವರದನಾಯಕ, ಪ್ರೇಮ್ ಅಡ್ಡಾ, ಚಾರ್ಮಿನಾರ್, ರಾಧಿಕಾನ ಗಂಡ, ರಾಗಿಣಿ ಐಪಿಎಸ್, ಲಕ್ಷ್ಮಿ, ಯಾರೇ ಕೂಗಾಡಲಿ ಮುಂತಾದವು.

    ಇದರಲ್ಲಿ ಪ್ರೇಕ್ಷಕ ಪ್ರಭು ಯಾವ ಚಿತ್ರದ ಮೇಲೆ ಒಲವು ತೋರಿಸಾಲಿದ್ದಾನೆ ಎನ್ನುವುದನ್ನು ಕಾಲ ನಿರ್ಧರಿಸಲಿದೆ. ಬಿಡುಗಡೆಗೊಳ್ಳುತ್ತಿರುವ ಕೆಲ ಪ್ರಮುಖ ಚಿತ್ರಗಳ ಒಂದು ಝಲಕ್ ಫೋಟೊ ಸ್ಲೈಡ್ ಮೂಲಕ ನಿಮಗಾಗಿ..

    ಬಿಡುಗಡೆಯಾಗಲಿರುವ ಈ ಏಳು ಬಹುನಿರೀಕ್ಷಿತ ಚಿತ್ರಗಳ ಪೈಕಿ ನಿಮ್ಮ ನಿರೀಕ್ಷೆ ಯಾವ ಚಿತ್ರದ ಮೇಲೆ?

    ಪುನೀತ್, ಯೋಗಿ ಅಭಿನಯದ 'ಯಾರೇ ಕೂಗಾಡಲಿ'

    ಪುನೀತ್, ಯೋಗಿ ಅಭಿನಯದ 'ಯಾರೇ ಕೂಗಾಡಲಿ'

    ಕನ್ನಡ ಬಾಕ್ಸಾಫಿಸಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಲೂಸ್ ಮಾದ ಯಾನೆ ಯೋಗೀಶ್ ಅಭಿನಯದ ಯಾರೇ ಕೂಗಾಡಲಿ ಚಿತ್ರ ತಮಿಳಿನ ಪೋರಾಲಿ ಚಿತ್ರದ ರಿಮೇಕ್. ಮೂಲ ಚಿತ್ರದ ನಿರ್ದೇಶಕ ಸಮುದ್ರಖಣಿ ಈ ಚಿತ್ರಕ್ಕೂ ನಿರ್ದೇಶಕರು. ಡಾ.ರಾಜ್ ಸ್ವಂತ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಉಳಿದ ತಾರಾಗಣದಲ್ಲಿ ಭಾವನಾ, ಗಿರೀಶ್ ಕಾರ್ನಾಡ್, ಸಿಂಧು ಮುಂತಾದವರಿದ್ದಾರೆ. ಚಾರ್ಮಿ ಕೌರ್ ಅವರ ಐಟಂ ಹಾಡು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಈ ವರ್ಷಾಂತ್ಯದೊಳಗೆ ಚಿತ್ರ ಬಿಡುಗಡೆ ಕಾಣಬಹುದು.

    ಸುದೀಪ್, ಚಿರಂಜೀವಿ ಅಭಿನಯದ 'ವರದನಾಯಕ'

    ಸುದೀಪ್, ಚಿರಂಜೀವಿ ಅಭಿನಯದ 'ವರದನಾಯಕ'

    ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಒನ್ ಅಂಡ್ ಒನ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿರುವ ವರದನಾಯಕ ಚಿತ್ರದ ನಿರ್ದೇಶಕ ಅಯ್ಯಪ್ಪ ಶರ್ಮಾ. ಕೆಂಪೇಗೌಡ ಚಿತ್ರದ ಗೆಲುವಿನ ನಂತರ ಶಂಕ್ರೇಗೌಡ ನಿರ್ಮಿಸುತ್ತಿರುವ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಚಿರಂಜೀವಿ ಸರ್ಜಾ, ನಿಕೇಶಾ ಪಟೇಲ್, ಸಮೀರಾ ರೆಡ್ಡಿ ಮುಂತಾದವರಿದ್ದಾರೆ. ಬಿಡುಗಡೆಗೆ ಮುನ್ನವೇ ಚಿತ್ರ ಹತ್ತುವರೆ ಕೋಟಿ ವಹಿವಾಟು ನಡೆಸಿದೆ ಎನ್ನಲಾಗಿದೆ. ತೆಲುಗಿನ ಲಕ್ಷ್ಯಂ ಚಿತ್ರದ ರಿಮೇಕ್ ಆಗಿರುವ ವರದನಾಯಕ ಇನ್ನೆರಡು ವಾರದೊಳಗೆ ಬಿಡುಗಡೆಯಾಗಲಿದೆ.

    ವೀರಪ್ಪನ್ ಜೀವನಾಧಾರಿತ ’ಅಟ್ಟಹಾಸ’

    ವೀರಪ್ಪನ್ ಜೀವನಾಧಾರಿತ ’ಅಟ್ಟಹಾಸ’

    ಮಹೂರ್ತದಿಂದ ಹಿಡಿದು ಸೆನ್ಸಾರ್ ಬೋರ್ಡ್ ಹೋಗುವ ತನಕ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡುತ್ತಿರುವ ಚಿತ್ರ. ಎಎಂಆರ್ ರಮೇಶ್ ನಿರ್ದೇಶಿಸಿ, ನಿರ್ಮಿಸುತ್ತಿರುವ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಕಿಶೋರ್, ಅರ್ಜುನ್ ಸರ್ಜಾ, ವಿಜಯಲಕ್ಷ್ಮಿ ಮುಂತಾದವರಿದ್ದಾರೆ. ಡಾ.ರಾಜ್ ಪಾತ್ರದಲ್ಲಿ ಬಾಲಿವುಡ್ ದಿಗ್ಗಜ ಸುರೇಶ್ ಒಬೆರಾಯ್ ನಟಿಸುತ್ತಿರುವುದು ಚಿತ್ರದ ಇನ್ನೊಂದು ವಿಶೇಷ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಸಂಗೀತ ನೀಡಿದವರು ಸಂದೀಪ್ ಚೌಟ. ಚಿತ್ರದ ಸಹ ನಿರ್ಮಾಪಕರಾಗಿದ್ದ ಶ್ರೀನಿವಾಸ್ ಆತ್ಮಹತ್ಯೆಗೆ ಶರಣಾಗಿದ್ದು ದುರಂತ. ಚಿತ್ರದ ಬಿಡುಗಡೆಯನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ.

    ಯೋಗರಾಜ್ ಭಟ್ರ 'ಡ್ರಾಮಾ'

    ಯೋಗರಾಜ್ ಭಟ್ರ 'ಡ್ರಾಮಾ'

    ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಸಹನಿರ್ಮಾಪಕ ಯೋಗರಾಜ್ ಭಟ್ ಅವರದ್ದು. ಅಂಬರೀಶ್, ಯಶ್, ನೀನಾಸಂ ಸತೀಶ್, ರಾಧಿಕಾ ಪಂಡಿತ್, ಸಿಂಧು ಲೋಕನಾಥ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಹರಿಕೃಷ್ಣ ಸಂಗೀತ ನೀಡಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಯು' ಸರ್ಟಿಫಿಕೇಟ್ ನೀಡಿದೆ. ಬರುವ ನವೆಂಬರ್ 23ಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಪುನೀತ್ ರಾಜಕುಮಾರ್ ಅಭಿನಯದ ಪರಮಾತ್ಮ ಚಿತ್ರದ ನಂತರ ಭಟ್ರು ಡೈರೆಕ್ಟ್ ಮಾಡುತ್ತಿರುವ ಚಿತ್ರವಿದು.

    ಅಗ್ನಿ ಶ್ರೀಧರ್, ಸುಮನ ಕಿತ್ತೂರು ಕಾಂಬಿನೇಶನಿನ 'ಎದೆಗಾರಿಕೆ'

    ಅಗ್ನಿ ಶ್ರೀಧರ್, ಸುಮನ ಕಿತ್ತೂರು ಕಾಂಬಿನೇಶನಿನ 'ಎದೆಗಾರಿಕೆ'

    ಸಯ್ಯದ್ ಅಮಾನ್ ಬಚ್ಚನ್ ಮತ್ತು ಎಂ ಎಸ್ ರವೀಂದ್ರ ನಿರ್ಮಿಸುತ್ತಿರುವ ಎದೆಗಾರಿಕೆ ಚಿತ್ರದ ನಿರ್ದೇಶಕಿ ಸುಮನಾ ಕಿತ್ತೂರು. ಪತ್ರಕರ್ತ ಅಗ್ನಿ ಶ್ರೀಧರ್ ಅವರ ಪುಸ್ತಕಾಧಾರಿತ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಆದಿತ್ಯ, ಆಕಾಂಕ್ಷ, ಅತುಲ್ ಕುಲಕರ್ಣಿ, ರವಿಶಂಕರ್, ಸೃಜನ್ ಲೋಕೇಶ್, ಅಚ್ಯುತ್ ಕುಮಾರ್ ಮುಂತಾದವರಿದ್ದಾರೆ. ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನೀಡಿದ್ದಾರೆ. ಚಿತ್ರದ ಟ್ರೈಲರ್ ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದು, ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಉತ್ತಮ ಮಾತು ಕೇಳಿ ಬರುತ್ತಿವೆ. ಇದೇ ಶುಕ್ರವಾರದಂದು (ನ 23) ಚಿತ್ರ ಬಿಡುಗಡೆಯಾಗಲಿದೆ.

    ಶಿವಣ್ಣ, ಪ್ರಿಯಾಮಣಿ ಅಭಿನಯದ 'ಲಕ್ಷ್ಮಿ'

    ಶಿವಣ್ಣ, ಪ್ರಿಯಾಮಣಿ ಅಭಿನಯದ 'ಲಕ್ಷ್ಮಿ'

    ರಾಘವ್ ಲೋಕಿ ಚಿತ್ರಕಥೆ ಹಣೆದು ಮತ್ತು ನಿರ್ದೇಶಿಸುತ್ತಿರುವ ಚಿತ್ರ ಲಕ್ಷ್ಮಿ. ಶಿವರಾಜ್ ಕುಮಾರ್, ಪ್ರಿಯಾಮಣಿ, ಸಲೋನಿ ಆಸ್ವಾನಿ, ರಂಗಾಯಣ ರಘು, ಅವಿನಾಶ್ ಪ್ರಮುಖ ತಾರಗಣದಲ್ಲಿರುವ ಈ ಚಿತ್ರದ ಸಂಗೀತ ನಿರ್ದೇಶಕರು ಗುರುಕಿರಣ್. ಭಾಸ್ಕರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿಯ ಐಟಂ ಸಾಂಗಿದೆ. ಶಿವರಾಜ್ ಕುಮಾರ್ ಅಭಿನಯದ ಶಿವ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಪಡೆಯದ ಹಿನ್ನಲೆಯಲ್ಲಿ ಶಿವಣ್ಣ ಅಭಿಮಾನಿಗಳು ಈ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    ಜೋಗಿ ಪ್ರೇಮ್ ಅಭಿನಯದ 'ಪ್ರೇಮ್ ಅಡ್ಡಾ'

    ಜೋಗಿ ಪ್ರೇಮ್ ಅಭಿನಯದ 'ಪ್ರೇಮ್ ಅಡ್ಡಾ'

    ಯಾವುದೇ ಚಿತ್ರ ನಟಿಸಲಿ ಅಥವಾ ನಿರ್ದೇಶಿಸಲಿ ಸದಾ ಸುದ್ದಿಯಲ್ಲಿರುವವರು ಪ್ರೇಮ್. "ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ.." ಎನ್ನುವ ಸಾಹಿತ್ಯವಿರುವ ಹಾಡನ್ನು ಜನರು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದರು. ಆದರೆ ಮೇಲುಕೋಟೆ ಜನ ಪ್ರತಿಭಟನೆ, ಬಂದ್ ನಡೆಸಿದ ನಂತರ ಹಾಡಿನ ಸಾಹಿತ್ಯಕ್ಕೆ ಕತ್ತರಿ ಹಾಕಲಾಗಿತ್ತು. ಪ್ರೇಮ್, ಮುರಳಿ ಕೃಷ್ಣ, ಕೀರ್ತಿ ಕರಬಂದ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ನಿರ್ದೇಶಕ ಮಹೇಶ್ ಬಾಬು. ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.

    English summary
    There are atleast 7 mega movies in line for release before the end of the year 2012. Attahasa, Prem Adda, Varadanayaka, Lakshmi, Yare Kugadali, Edegarike, Drama...are bound to compete with one another for highest glory
    Sunday, January 20, 2013, 17:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X