»   » ನಾಗತಿಹಳ್ಳಿಗೊಂದು ಬಹಿರಂಗ ಪತ್ರ

ನಾಗತಿಹಳ್ಳಿಗೊಂದು ಬಹಿರಂಗ ಪತ್ರ

By: *ಡಾ. ಗುರುಪ್ರಸಾದ್‌ ಕಾಗಿನೆಲೆ
Subscribe to Filmibeat Kannada

ಪ್ರಿಯ ಚಂದ್ರು,

ನಿಮ್ಮ ಹೊಸ ಸಿನಿಮಾದ ಬಗ್ಗೆ ಕೇಳಿದೆ. ಯಾರೋ ಒಬ್ಬ ಪರವಾಗಿಲ್ಲ ಅಂತ ಬರೆದಿದ್ದಾನೆ. ಇನ್ನೊಬ್ಬ ಸುಮಾರಾಗಿದೆ ಅಂದ. ಮತ್ತೊಬ್ಬ ಚೆನ್ನಾಗಿಲ್ಲ ಅಂದ. ನಿಮ್ಮನ್ನು ಕೇಳಿದರೆ ಚೆನ್ನಾಗಿಲ್ಲ ಎಂದು ಹೇಳುವುದಿಲ್ಲವಲ್ಲ. ಆದರೆ ನಿಮ್ಮನ್ನೊಮ್ಮೆ ನೀವು ಕೇಳಿಕೊಳ್ಳಿ. ನೀವು ನಿಜವಾಗಿಯೂ ಮಾಡಲಿಚ್ಚಿಸಿದ ಸಿನಿಮಾ ಇದೇನೇ ? ನಿಮಗೆ ಇದು ಪೂರಾ ತೃಪ್ತಿ ಕೊಟ್ಟಿದೆಯೇ. ಪೇಪರ್‌ ಓದುವವರಿಗಾಗಿ , ನಿಮ್ಮ ಸಿನಿಮಾಕ್ಕೆ ದುಡ್ಡು ಹಾಕಿರುವವರಿಗಾಗಿ ನೀವು ಉತ್ತರ ಕೊಡಬೇಕಾಗಿಲ್ಲ. ನೀವು ಉತ್ತರ ಕೊಡದೇ ಇದ್ದರೂ ಪರವಾಗಿಲ್ಲ. ಕೆಲವೊಂದು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುವುದು ಚೆನ್ನ.

ನಾನು ನಿಮ್ಮನ್ನು ನಾಗಮಂಗಲದಿಂದ ನೋಡಿದ್ದೇನೆ. ಅಲ್ಲಿನ ಯುವಜನ ಮೇಳದಲ್ಲಿ ನೀವೇ ಬರೆದ ನಿಮ್ಮ ಕವಿತೆಗಳನ್ನು ಓದುತ್ತಿದ್ದಾಗಿನಿಂದ ಇಲ್ಲಿಯವರೆಗೆ ನಿಮ್ಮ ಕೆಲಸ ನೋಡಿದ್ದೇನೆ. ಬೆಲ್‌ ಬಾಟಂ ಹಾಕಿ ಗಾಂಧಿ ಭವನದ ಮುಂದೆ ನಿಂತು ಪಾಠ ಒಪ್ಪಿಸಿದಂತೆ ಹೇಳುತ್ತಿದ್ದ ನಿಮ್ಮ ಕವಿತೆಯ ಬಿಗಿ ಇತ್ತೀಚೆಗಿನ ನಿಮ್ಮ ಸಿನಿಮಾಗಳಲ್ಲಿ ಇಲ್ಲವಲ್ಲ. ಈ ರೀತಿ ನಿಮ್ಮ ಮನಸ್ಸಿನ ಭಾವನೆಗಳಿಗೆ ತುಡಿಯಲಾಗುತ್ತಿಲ್ಲವೇ ? ಕಾರಣ ಏನೆಂದು ಗೊತ್ತಾಗುತ್ತಿಲ್ಲ ಅಲ್ಲವೇ ?

ಕಾಲೇಜಿನಲ್ಲಿದ್ದಾಗ ನಿಮ್ಮ ಕಥೆಗಳು ಪತ್ರಿಕೆಗಳಲ್ಲಿ ಬರಲು ಶುರುವಾಗಿದ್ದವು. ನಿಮಗೂ ಹರೆಯ. ಪ್ರೇಮಕಥೆಗಳನ್ನು ಚೆನ್ನಾಗಿಯೇ ಬರೆದಿರಿ. ಸಾಹಿತ್ಯ ಇಷ್ಟ ಅಂತ ಹೇಳೋ ಪಡ್ಡೆ ಹುಡುಗರಿಗೆ ನಿಮ್ಮ ಕಥೆ ತುಂಬಾ ಇಷ್ಟವಾಗುತ್ತಿತ್ತು. ನಾನೂ ಓದಿದ್ದೀನಿ, ನಿಮ್ಮ ಮೊದಲ ಕಥೆಗಳನ್ನು . ತುಂಬಾನೇ ಚೆನ್ನಾಗಿವೆ.

ನೀವು ವಾಸ್ತವಕ್ಕೆ ಮತ್ತು ನಿಮಗೆ ಸ್ವಲ್ಪ ಮೋಸ ಮಾಡಿದ್ದೀರಿ

ಇಂಡಿಯಾ ಬಿಟ್ಟ ಮೇಲೆ ಕನ್ನಡದ ಕಥೆ ಕಾದಂಬರಿಗಳು ಸಿಗೋದು ಕಷ್ಟವಾಗಿಬಿಟ್ಟಿತು. ಇಂಟರ್‌ನೆಟ್‌ ಬಂದ ಮೇಲೆ ಸ್ವಲ್ಪ ಪರವಾಗಿಲ್ಲ. ಕನ್ನಡದಲ್ಲಿ ಏನೇ ಬಂದರೂ ಸರಿ ಓದುತ್ತೇನೆ ಅಂತನ್ನೋ ನನ್ನಂಥವರಿಗೆ ಕಾಲ ಕಳೆಯಲು ಏನೂ ತೊಂದರೆಯಿಲ್ಲ. ಕನ್ನಡದ ಬಗ್ಗೆ, ಕನ್ನಡ ಸಿನಿಮಾದ ಬಗ್ಗೆ ಓದ್ತಾ ಇದ್ದಾಗ ನೀವೂ ಸಿನಿಮಾ ತೆಗೀತಾ ಇದ್ದೀರಾ ಅನ್ನೋದು ಗೊತ್ತಾಯಿತು. ಪರವಾಗಿಲ್ಲವೇ ನಮ್ಮೂರ ಹುಡುಗ ಅನ್ನಿಸಿತು. ಕಾಲೇಜಿನಲ್ಲಿ ನಿಮ್ಮ ಕಥೆಗಳ ಬಗ್ಗೆ ಯಾರಾದರೂ ಮಾತನಾಡಿದಾಗ 'ಅವ್ನಾ ನಾಗತಿಹಳ್ಳಿ, ನಮ್ಮೂರವ್ನೇ " ಅಂತ ಹೇಳೋದು ಒಂದು ರೀತಿಯ ಖುಷಿ ಕೊಡುವ ವಿಷಯವಾಗಿತ್ತು. ಈಗ ಇವ ಸಿನಿಮಾ ಮಾಡ್ತಾ ಇದ್ದಾನಲ್ಲ, ಇವನೆಲ್ಲಿ ಕಲಿತುಕೊಂಡ ಸಿನಿಮಾ ಮಾಡೋದು ಅಂತ ಅನ್ನಿಸಿತು. ಇಂಡಿಯಾದಲ್ಲಿದ್ದಾಗಲೇ ನಿಮ್ಮದೊಂದೆರಡು ಸಿನಿಮಾ ನೋಡಿದ್ದೆ. ನಿಮ್ಮದೇ ಕಥೆ ಆಧರಿಸಿ ನೀವು ಮಾಡಿದ ಬಾ ನಲ್ಲೆ ಮಧು ಚಂದ್ರಕೆ ಮತ್ತು ಉಂಡೂ ಹೋದ ಕೊಂಡೂ ಹೋದ. ಎರಡನೆಯದು ಪರವಾಗಿಲ್ಲ ಅನ್ನಿಸಿತು . ಮೊದಲನೆಯದರ ಬಗ್ಗೆ ಏನೂ ಹೇಳದೇ ಇರುವುದೇ ಮೇಲು ಅಲ್ಲವೇ ?

ಎರಡು ವರ್ಷದ ಕೆಳಗೆ ಅಮೆರಿಕಾದ ಮೇಲೆ ಒಂದು ಸಿನಿಮಾ ಮಾಡಿದ್ದೀರಿ ಅಂತ ಗೊತ್ತಾಯಿತು. ಡೆಟ್ರಾಯಿಟ್‌ಗೆ ಬಂದಿದ್ದೀರಿ ಅಂತಲೂ ಗೊತ್ತಾಯಿತು. ಅಮೆರಿಕಾದಲ್ಲೆಲ್ಲಾ ನಿಮ್ಮ ಸಿನಿಮಾ ಎಲ್ಲ ಕಡೆ ಓಡಿಸಿದ್ರಿ. ನಾನು ನೋಡಿದೆ. ನಿಮ್ಮನ್ನು ಬಲ್ಲ ಅಥವಾ ನಿಮ್ಮ ಕಥೆಗಳನ್ನು ಓದಿರುವ ಯಾವನೂ ಊಹಿಸಬಲ್ಲ ಸಿನಿಮಾ ಅದು. ನಿಮ್ಮ ಅತಿ ಸೆಂಟಿಮೆಂಟಾಲಿಟಿಗೆ ಅಮೆರಿಕಾದ ಫಿನಿಶಿಂಗ್‌ ಕೊಟ್ಟು ಇಲ್ಲಿನ ರಿಯಾಲಿಟಿಯನ್ನು ಹೇಳುವ ನೆಪ ಮಾಡಿದ್ದೀರಿ. ಚಿತ್ರ ಚೆನ್ನಾಗಿರಲಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಬಾಕ್ಸಾಫೀಸಿನ ಗೆಲುವಿನ ಸೂತ್ರಗಳನ್ನು ಫಾಲೋ ಮಾಡುತ್ತಾ ನಿಮ್ಮ ಸಿನಿಮಾಕ್ಕೆ ದುಡ್ಡು ಹಾಕಿರುವವರನ್ನು ಗೆಲ್ಲಿಸಲು ನೀವು ವಾಸ್ತವಕ್ಕೆ ಮತ್ತು ನಿಮಗೆ ಸ್ವಲ್ಪ ಮೋಸ ಮಾಡಿದ್ದೀರಿ ಅಂತ ನನಗೆ ಅನ್ನಿಸಿತು. ನಾನೂ ಪಕ್ಕಾ ಅಭಿಮಾನೀನೇ. ಸ್ವಲ್ಪ ಕಣ್ಣು ಬಿಟ್ಟು ನೋಡಿರಪ್ಪ . ಎಲ್ಲ ಡಾಟ್‌ ಕಾಂ ಕಂಪೆನಿಗಳು ದಿವಾಳಿ ಹೋದ ಮೇಲೂ ಇಲ್ಲೆಯೇ ಹೇಗಾದರೂ ಉಳಿಯಬೇಕು ಅಂತ ಯೋಚಿಸುವವರು ನಮ್ಮ ಯುವಕರು. ಮುಕ್ಕಾಲುವಾಸಿಯೆಲ್ಲಾ ಅಂತಹವರೇ. ನೀವು ಯಾರೋ ಒಬ್ಬ ದೇಶಪ್ರೇಮಿಯನ್ನು ತೋರಿಸಿ ಈ ರೀತಿ ಕರ್ನಾಟಕದ ಹುಡುಗರೆಲ್ಲಾ ಮಾಡಬೇಕು ಅಂತಂದುಬಿಟ್ಟರೆ ಅದು ವಾಸ್ತವಾನ ಸ್ವಾಮಿ ? ನಿಮ್ಮ ಸಿನಿಮಾ ಗೆಲ್ಲಲು ನೀವೇ ಕಂಡು ಕೊಂಡ ಕ್ಲೈಮಾಕ್ಸ್‌ ಅದು. ಹುಡುಗ ಹುಡುಗಿ ಅಮೆರಿಕಾದಲ್ಲೇ ಉಳಿದುಬಿಟ್ಟರೆ ನಿಮ್ಮ ಟಾರ್ಗೆಟ್‌ ಆಡಿಯನ್ಸ್‌ ಸಿನಿಮಾನ ಒಪ್ಪಬೇಕಲ್ಲ,

ಪಾಪ ನೀವೇನು ಮಾಡುತ್ತೀರಿ ? ನಮ್ಮ ಸಿನಿಮಾದವರೆಲ್ಲ ಹಾಗೇನೇ ತಾನೇ ? ಸಿನಿಮಾದಲ್ಲಿ ತೋರಿಸೋದಕ್ಕೆ ಅಂತಾನೇ ಹೊಸ ಹೊಸ ರೀತಿಯ ಕಥೆಗಳನ್ನು ಬರೆಯುತ್ತಾರೆ. ಅದು ಸರಿ, ನಿಮ್ಮ ಮಲೆನಾಡಿನ ಹುಡುಗಿ ಬಯಲು ಸೀಮೆಯ ಹುಡುಗ ಕಥೆಗೆ ನಿಜವಾಗಿಯೂ ಅಮೆರಿಕಾದ ಬ್ಯಾಕ್‌ ಡ್ರಾಪ್‌ ಬೇಕಿತ್ತೇ. ನಾನು ಪಡ್ಡೆಯಾಗಿದ್ದಾಗ ಓದಿದ ಕಥೆಯಿದು. ಮನಸ್ಸಿನ ತುಂಬಾ ನವಿರು ಭಾವನೆಗಳನ್ನು ಕೆದಕಿದ ಕಥೆಯದು. ಅಂಥ ಕಥೆಯನ್ನು ಗೆಲ್ಲಿಸಲು ನಿಮಗೆ ನಿಜವಾಗಿಯೂ ಬೇಕಿತ್ತೇ ಡೆಟ್ರಾಯಿಟ್‌, ಇಲ್ಲಿನ ಮಿಚಿಗನ್‌ ಸ್ಟೇಟ್‌ ಯೂನಿವರ್ಸಿಟಿ, ಇಲ್ಲಿನ ಮನೋಮೂರ್ತಿ, ಇಲ್ಲಿನ ದೀಪಾಲಿ. ಯಾಕೆ, ನಮ್ಮ ಕರ್ನಾಟಕ ಕರಾವಳಿ ಬಯಲು ಸೀಮೆ ಸುಂದರವಾಗಿಲ್ಲವೇ. ನಿಜ, ನಿಮ್ಮ ಈ ಚಿತ್ರವನ್ನೂ ಜನ ನೋಡುತ್ತಾರೆ. ಈ ಅಮೆರಿಕಾನೇ ಹಾಗೆ. ಬರೀ ಹೆಸರಿನಿಂದಲೇ ಮಾರ್ಕೆಟ್‌ ಮಾಡಿಸ್ಕೊಂಡುಬಿಡುತ್ತದೆ. ಮತ್ತೆ ನಿಮಗೆ ತುಂಬಾ ಕೆಲಸ, ಮತ್ತಿನ್ನೊಂದರೆಡು ಬಾರಿ ಅಮೆರಿಕಾ ಟ್ರಿಪ್‌ ಹೊಡೆಯಬೇಕು. ಇಲ್ಲಿ ನಿಮ್ಮ ಸಿನಿಮಾನ ಪ್ರಮೋಟ್‌ ಮಾಡಬೇಕು. ಕರ್ನಾಟಕದಲ್ಲಾದ ನಷ್ಟವನ್ನು ಇಲ್ಲಿ ತುಂಬಿಸಿಕೊಳ್ಳಬೇಕು. ನಿಮ್ಮ ನಿರ್ಮಾಪಕರನ್ನು ಚೆನ್ನಾಗಿಡಬೇಕು. ಮುಂದೆಯೂ ಅಮೆರಿಕಾದಲ್ಲಿ ಚಿತ್ರ ಮಾಡಬೇಕು.

ಒಬ್ಬ ಸೃಜನಶೀಲ ವ್ಯಕ್ತಿ ಯಾವಾಗ ಹಾಳಾಗುತ್ತಾನೆ ಗೊತ್ತೇ ?

ತನ್ನನ್ನು ತಾನು ಅರಿತುಕೊಳ್ಳದೇ ಹೋದಾಗ ಒಬ್ಬ ಸೃಜನಶೀಲ ವ್ಯಕ್ತಿ ಹಾಳಾಗುತ್ತಾನೆ. ನೀವು ಬುದ್ಧಿ ವಂತರು. ಹುಡುಗ ಹುಡುಗಿಯರಿಗೆ ಪಾಠ ಮಾಡುತ್ತೀರ. ಕಥೆ ಬರೆಯುತ್ತೀರ. ಕಾದಂಬರಿ ಬರೆಯುತ್ತೀರ. ಎಲ್ಲವನ್ನೂ ಮಾಡಲು ಹೋಗುತ್ತೇನೆ ಅಂತ ಹೋದಾಗ ನೀವು ಮೂಲತಃ ಏನೋ, ಅದು ಬಡಕಲಾಗಿ ಬಿಡುತ್ತದೆ. ನಿಮಗೆ ನೀವೇ ಕೇಳಿಕೊಳ್ಳಿ. ನೀವು ಏನು ಅಂತ. ರಾಷ್ಟ್ರಪ್ರಶಸ್ತಿ ಬರುತ್ತದಪ್ಪ. ಒಂದು ಸರಳವಾದ ಕಥೆಯನ್ನಿಟ್ಟುಕೊಂಡು ಅದನ್ನು ಪ್ರಾಮಾಣಿಕವಾಗಿ ನಿರೂಪಿಸಿದಲ್ಲಿ ಪ್ರಶಸ್ತಿ ಬರುವುದೇನೂ ಕಷ್ಟವಲ್ಲ. ಅಮೆರಿಕಾ ಅಮೆರಿಕಾ ಬಿಡಿ. ಕ್ಯಾಲಿಫೋರ್ನಿಯಾಕ್ಕೆ ಹೋಗಿ ಯಾರೊಬ್ಬರ ಮನೆಯಲ್ಲಿ ಕೂತು ಹ್ಯಾಂಡಿ ಕ್ಯಾಮ್‌ ಇಟ್ಟಿದ್ದರೂ ಚಿತ್ರವಾಗುತ್ತಿತ್ತು.

ಸಾರಿ. ತುಂಬಾ ಬರೆದುಬಿಟ್ಟೆ ಅನ್ನಿಸುತ್ತೆ. ನಿಮ್ಮ ಮೇಲೆ ಬೇಜಾರಿನಿಂದಲ್ಲ. ಕಳಕಳಿಯಿಂದ. ನಮ್ಮೂರಿನ ಒಬ್ಬ ಪ್ರತಿಭಾವಂತ ಗೆಳೆಯ ಹಾಳಾಗುತ್ತಿದ್ದಾನಲ್ಲ ಅನ್ನುವ ನೋವಿನಿಂದ. ಇನ್ನಾದರೂ ಈ ನಿಮ್ಮ ಕೆಟ್ಟ ಅಮೆರಿಕಾ ಮೋಹವನ್ನು ಬಿಡಿ. ನಮ್ಮ ಊರಿನಲ್ಲೀ ಏನಾದರೂ ಮಾಡುವುದನ್ನು ನೋಡಿ. ಹೋದ ವರ್ಷ ಇಂಡಿಯಾಕ್ಕೆ ಬಂದಾಗ ನಿಮ್ಮ ಟೀವಿ ಸೀರಿಯಲ್ಲನ್ನ ನೋಡಿದೆ. ಹೆಸರು ನೆನಪಿಗೆ ಬರುತ್ತಿಲ್ಲ . ಬಹುಶಃ ಕಾವೇರಿ ಅಂತಿರಬಹುದು. ಅಲ್ಲಿ ನಿಮ್ಮ ಪ್ರಾಮಾಣಿಕತೆ ಎದ್ದು ಕಾಣುತ್ತಿತ್ತು. ನೀವು ನಿಮಾಗಾಗಿ ಏನೋ ಮಾಡುತ್ತಿದ್ದೀರ ಅನ್ನಿಸಿತು. ಈ ಅಮೆರಿಕಾದಲ್ಲಿ ನೀವು ಮಾಡಿದ್ದೆಲ್ಲಾ ನಿಮ್ಮ ಪ್ರೊಡ್ಯೂಸರನ್ನು ಗೆಲ್ಲಿಸಲು ಮಾತ್ರವೇ ಮಾಡುತ್ತಿದ್ದೀರ ಅಂತ ಅನ್ನಿಸುತ್ತದೆ.

ನಿಮ್ಮ ಪ್ರೀತಿಯ ಹುಡುಗಿ ನಗಲಿ. ಗೆಲ್ಲಲಿ. ಗುಡ್‌ ಲಕ್‌. ಅಮೆರಿಕಾಕ್ಕೆ ಬಂದಾಗ ಬೇಜಾರಿಲ್ಲದಿದ್ದರೆ ಒಂದು ಕಾಲ್‌ ಮಾಡಿ. ಮಾತಾಡೋಣ.

ನಿಮ್ಮ ಗೆಳೆಯ,

ಡಾ. ಗುರುಪ್ರಸಾದ್‌ ಕಾಗಿನೆಲೆ
1109, ಸೆವೆಂತ್‌ ಸ್ಟ್ರೀಟ್‌ ಸೌತ್‌ ಬಿ-114
ವೈಟ್‌ ಪಾರ್ಕ್‌, ಮಿನೆಸೋಟಾ- 56387
ಯುಎಸ್‌ಎ

English summary
Nagathihalli chandra shekhars writes a letter to him

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada