»   » ಯುಎಸ್ ನಲ್ಲಿ "ರಂಗಿನ ತರಂಗ" ಅಮೆರಿಕನ್ನಡಿಗನ ಅನುಭವ

ಯುಎಸ್ ನಲ್ಲಿ "ರಂಗಿನ ತರಂಗ" ಅಮೆರಿಕನ್ನಡಿಗನ ಅನುಭವ

By ನಾಗರಾಜ್ .ಎಂ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಎಲ್ಲರೂ ಬೇಗ ಡಿನ್ನರ್ ಮುಗಿಸಿದರೆ , ಅಪರೂಪಕ್ಕೆ ಬಂದಿರೋ ಕನ್ನಡ ಮೂವಿ ನೋಡಲಿಕ್ಕೆ ಹೋಗೋಣಾ ..ಸರಿನಾ? ಅಂತಾ ನಾ ಅಂದಾಗ ...
  "ರೀ , ನೀವೊಬ್ಬರೇ ಹೋಗಿಬರೋದಿದ್ರೆ ಹೋಗಿ ಬನ್ನಿ ... ರಾತ್ರಿ ೧೦ ಗಂಟೆ ಶೋ ಬೇರೆ...ಕಿಡ್ಸ್ ಕರ್ಕೊಂಡು ಹೋದ್ರೆ ಸುಮ್ನೆ ಗಲಾಟೆ ಮಾಡಿ ಮೂವಿ ನೋಡೋಕು ಬಿಡೋಲ್ಲ ! " ಅಂತಾ ಅರ್ಧಾಂಗಿನಿ ನುಡಿದಾಗ, ಅರ್ಧ ಮನಸ್ಸಿನಿಂದಲೇ ಥೀಯೇಟರ್ ಕಡೆ ಕಾರ್ ಓಡಿಸಿದ್ದೆ.

  ಟಿಕೆಟ್ ಕಲೆಕ್ಟ್ ಮಾಡಿದ ಬಿಳಿಯವ " ಇಂಡಿಯನ್ ಮೂವಿ ಇನ್ ಥೀಯೇಟರ್ ನಂಬರ್ ಸೆವೆನ್ "..ಅಂತಾ ಹೇಳಿ ಕೈ ತೋರಿಸಿದ ಕಡೆ , ಬಟರ್ ಪಾಪ್ ಕಾರ್ನ್ ಕೈಲಿಡಿದು ಬರ ಬರ ಹೆಜ್ಜೆ ಹಾಕಿದ್ದೆ, ಛೆ ಲೇಟ್ ಆಗ್ಬಿಡ್ತಲ್ಲ ಅಂತಾ...!

  ಒಳಗಡೆ ಹೆಜ್ಜೆ ಇಟ್ಟ ಕೂಡಲೇ ಪೂರ್ತಿ ಕತ್ತಲೆ. ಇನ್ನೇನು ಕಮರ್ಷಿಯಲ್ ಆಡ್ಸ್ ಮುಗಿದು ಸಿನಿಮಾ ಸ್ಟಾರ್ಟಿಂಗ್ ಮ್ಯೂಸಿಕ್ ಬರ್ತಾ ಇತ್ತು.
  ಅಪರೂಪಕ್ಕೆ ಫುಲ್ ಹೌಸ್ ಆಗಿರೋ ಥಿಯೇಟರ್ ನಲ್ಲಿ ಸೀಟ್ ಗಾಗಿ ಕತ್ತಲಲ್ಲೇ ಹುಡುಕಾಡಿ, ಕೊನೆಗೆ ಯಾವುದೋ ಒಂದು ಸೀಟ್ ಸಿಕ್ಕಾಗ ಉಸ್ಸ್ ಅಂತಾ ಕುಕ್ಕರಿಸಿದ್ದೆ.
  ಯಾರಾರ ಪರಿಚಯದ ಮುಖಗಳು ಕಾಣಿಸ್ತಾವ ಅಂತಾ ನೋಡಿದರೆ ಕತ್ತಲಲ್ಲಿ ಏನು ಕಾಣಿಸಲೇ ಇಲ್ಲ. [ಭಜರಂಗಿ ಬಾಹುಬಲಿಗೆ ಸೆಡ್ಡು ಹೊಡೆದ ರಂಗಿಯ ರಹಸ್ಯ?]

  ಎಲ್ಲ ಹೊಸಬರೇ ಮಾಡಿರೋ ಮೂವಿ ಅಂತಾ ಕೇಳಿದ್ದರಿಂದ ಒಂದು ರೀತಿಯ ಕುತೂಹಲದಿಂದ ಮೂವಿ ನೋಡ ತೊಡಗಿದೆ.
  ನೀಳಕಾಯದ ಸ್ವಲ್ಪ ಗಡ್ಡ ಬಿಟ್ಟಿರೋ ಹೊಸ ಹೀರೋ, ಕೆನ್ನೆ ಮೇಲೆ ಗುಳಿ ಇರೋ ಸುಂದರ ಹೀರೋಯಿನ್ ಜೊತೆಗೆ ಅ ಸುಂದರವಾದ ಊಟಿ,
  ಆಮೇಲೆ ದಕ್ಷಿಣ ಕನ್ನಡದ ಸುಂದರ ಹಸಿರಿನಿಂದ ಆವರಿಸಿದ್ದ ಹಳ್ಳಿ "ಕಮರೊಟ್ಟು" ನೋಡಿದಾಗ ಇಷ್ಟದ ಜೊತೆ ಕುತೂಹಲದಿಂದ ರೆಪ್ಪೆ ಪಿಳುಕಿಸದೆ, ನೋಡ್ತಾ ಇದ್ದೆ ಕಣ್ಣು, ಬಾಯಿ ಬಿಟ್ಟು.

  "ಡೆನ್ನಾನ ಡೆನ್ನಾನ... ಡೆನ್ನಾನ ಡೆನ್ನಾನ ..ತುಳುನಾಡ ಸೀಮೇದ ಕಮರೊಟ್ಟು ಗ್ರಾಮೋಡು , ಗುಡ್ಡದ ಭೂತ ಉಂಡುಯೇ " ಅಂತಾ ಹಾಡಿನ ಜೊತೆ ಹೆದರಿಕೆ ಬರೋ ಮ್ಯೂಸಿಕ್ ಕೇಳತೊಡಗಿದಾಗ, ನಾನು ಸಣ್ಣವನಿದ್ದಾಗ ದೂರದರ್ಶನದಲ್ಲಿ ಬರುತ್ತಿದ್ದ "ಗುಡ್ಡದ ಭೂತ" ಧಾರವಾಹಿಯನ್ನ ದೂರದಲ್ಲೇ ಕೂತು ನೋಡುತ್ತಿದ್ದ ನೆನಪಾಯಿತು.
  "ಓಹ್ ಓಹ್ಹೋ " ಅಂತಾ ಸ್ವಲ್ಪ ಹೆದರಿಕೆ ಹುಟ್ಟಿಸೋ ಆ ಹಳ್ಳಿಯ ಭೂತದ ಮನೆ , ಆ ಸನ್ನಿವೇಶಗಳು ಸ್ಕ್ರೀನ್ ಮೇಲೆ ಬಂದಾಗ, ಸದ್ಯ ಮಕ್ಕಳನ್ನು ಕರ್ಕೊಂಡು ಬರ್ದೇ ಇದ್ದದ್ದು ಒಳ್ಳೇದೆ ಆಯಿತು ಅಂದುಕೊಂಡೆ.
  ಅದುವರೆಗೂ ಕೈಯಲ್ಲೇ ಹಿಡಿದಿದ್ದ ಬಿಸಿಯಾರಿದ ಪಾಪ್ ಕಾರ್ನ್ ಬಾಯಲ್ಲಿ ಹಾಕೊಂಡು, ಹಾಗೇ ಮೂವಿ ನೋಡ್ತಾ ಇದ್ದಾಗ ಇದ್ದಕಿದ್ದಂತೆ ಪಾಪ್ ಕಾರ್ನ್ ಹಿಡಿದಿದ್ದ ನನ್ನ ಎಡಗೈ ಜೋರಾಗಿ ಅಲುಗಾಡಿತ್ತು.
  ಹ್ಹುಂ..ಅಂತಾ ನೋಡಿದರೆ ಅಕ್ಕ ಪಕ್ಕ ಕೂತಿದ್ದ ಎಲ್ಲರು ಒಂಥರಾ ಹೆದರಿಕೆಯ ಕಣ್ಣುಗಳಲ್ಲೇ ಮೂವಿ ನೋಡ್ತಾ ಇರೋದು ಕಂಡಿತ್ತು. ಛೇ! ನಂದು ಒಂದು ಭ್ರಮೆ ಅಂತಾ ಮತ್ತೆ ಮೂವಿ ನೋಡ್ತಾ ಇದ್ದೆ . ['ರಂಗಿತರಂಗ'ನೋಡಿ ಭೇಷ್ ಎಂದ ಅಲ್ಲು ಅರ್ಜುನ್]

  ಸ್ವಲ್ಪ ಹೊತ್ತಲ್ಲೇ ನನ್ನ ಎಡಗೈಯನ್ನು ಜೋರಾಗಿ ಹಿಡಿದು ಪರಚಿದಂತಾದಾಗ ನಿಜವಾಗಲು ಸ್ವಲ್ಪ ಗಾಬರಿ ಜೊತೆ ಹೆದರಿಕೆನು ಆದಂಗೆ ಆಗಿ ಎಡಗಡೆ ನೋಡಿದರೆ, ನನ್ನ ಕೈಯನ್ನೇ ಬಲವಾಗಿ ಹಿಡಿದು ಬೆವರಿದ್ದ ಕೋಮಲ ಕೈಗಳು.
  ಯಾರಪ್ಪ ಅಂತಾ ನೋಡಿದರೆ ಬರೀ ಕತ್ತಲಲ್ಲಿ ಕಂಡಿದ್ದು, ಬೆದರಿದ ಹುಡುಗಿಯ ಕಂಗಳು.

  ಯಾಕ್ರೀ, ಹೆದರಿಕೆಯಾಯ್ತ? ಅಂತಾ ಸ್ವಲ್ಪ ಧೈರ್ಯ ತುಂಬೋ ಮಾತಲ್ಲೇ ಕೇಳಿದಾಗ, ಹೂಂ ಅಂತಾ ಮೆಲ್ಲಗೆ ನುಡಿದಿದ್ದ ಆ ಹುಡುಗಿ ಸರ್ರನೆ ತನ್ನ ಕೈ ವಾಪಸು ತೆಗೆದುಕೊಂಡಿದ್ದಳು.
  ಮತ್ತೆ ಮೂವಿ ಕಡೆ ನೋಡುತ್ತಿದ್ದಾಗ ಮತ್ತೆ ನನ್ನ ಕೈ ಬಿಗಿಯಾಗಿ ಹಿಡಿದುಕೊಂಡ ಆ ಹುಡುಗಿಗೆ ಹೇಳಿದ್ದೆ "ನಿಮಗೆ ಹೆದರಿಕೆಯಾಗ್ತಾ ಇದ್ದರೆ , ನೋ ಪ್ರಾಬ್ಲಮ್, ಅಭ್ಯಂತರ ಏನು ಇಲ್ಲ, ಕೈಹಿಡಿದು ಕೊಂಡೇ ಮೂವಿ ನೋಡಿ" ಅಂತ ಹೇಳಿ ಪಾಪ್ ಕಾರ್ನ್ ಆಫರ್ ಮಾಡಿದ್ದೆ.

  ಆ ಕೋಮಲ ಕೈಗಳಿಂದ ಬಿಗಿಯಾಗಿ ಹಿಡಿಯಲ್ಪಟ್ಟಿದ್ದ ನನ್ನ ಆ ಎಡಗೈ ಅನ್ನು ಸ್ವಲ್ಪವು ಅಲುಗಾಡಿಸದೆ ತದೇಕಚಿತ್ತದಿಂದ ಮೂವಿ ನೋಡ್ತಾ ಇದ್ದೆ. ಆದರೆ ಏಕಾಗ್ರತೆ ಕಳೆದೋಗಿತ್ತು !

  ತೆರೆ ಮೇಲೆ ಹಾಡು ಬರ್ತಾ ಇದ್ದರೆ , ನನ್ನ ಮನದಲ್ಲಿ
  "ಕೇಳೆ ಚೆಲುವೆ ...
  ಹೆದರ ಬೇಡ ..ನಾನಿರುವೆ.." ಅಂದುಕೊಳ್ಳುತ್ತಾ ,

  "ಅಕ್ಕ ಪಕ್ಕ ...ಯಾರರ ಮುಕ್ಕ ,
  ನೋಡಿ ಕಥೆ ಕಟ್ಟಿ
  ಅದಕ್ಕೆ ಹಚ್ಚಿದರೆ ಹಕ್ಕಿ ಪುಕ್ಕ
  ನಾ ಎಲ್ಲಿ ಹೋಗಲಿ ಯಕ್ಕ ?"

  ಅಂತ ಗಾಬರಿಯಿಂದ ಒಮ್ಮೆ ಆ ಕಡೆ, ಈ ಕಡೆ ನೋಡಿ ಯಾರ ಗಮನವು ನನ್ನ ಮೇಲೆ ಇಲ್ಲದಿದ್ದರಿಂದ ನಿಟ್ಟುಸಿರು ಬಿಟ್ಟು ಸ್ಕ್ರೀನ್ ಕಡೆ ಕಣ್ಣಾಯಿಸಿದ್ದೆ !

  ಅ ಭೂತದ ಮನೆ , ಆ ಡೆನ್ನಾನ ಡೆನ್ನಾನ ಮ್ಯೂಸಿಕ್ ಬಂದಾಗಲೆಲ್ಲ, ಅವಳ ಆ ಹಿಡಿತ ಜೋರಾಗುವುದರ ಜೊತೆಗೆ ಅವಳ ತಲೆ ನನ್ನ ಭುಜಕ್ಕೆ ಆನಿಸಿದ್ದರೂ, ಅವಳ ಬೆರಳ ಉಗುರುಗಳು ಪರಚಿದಂತೆ ಅನ್ನಿಸಿದರೂ ಸಹ ನೋವೆನಿಸದೆ ಒಮ್ಮೆ ಆ ಬೆಳ್ಳಿ ಪರದೆಯ ಬೆಳ್ಳಿ ಬೆಳಕಲ್ಲಿ ಕಂಡಾಗ ಬೆದರಿದ ಆ ಹರಿಣಿಯ ಆ ಸುಂದರವಾದ ಮೊಗ, ಮೂಡಿಸಿತ್ತು ಮನದಲ್ಲಿ ಒಂತರಾ ಒಲವಿನ "ರಂಗಿನ ತರಂಗ"...! [ಅಂಕಲ್ ಸ್ಯಾಮ್ ನೆಲದಲ್ಲಿ ರಂಗಿತರಂಗದ ಮಿಂಚು]

  "ಸುಂದರ ಚೆಂದಿರ ಮೊಗದ ವಿಶಾರದೆ
  ಬಂದರೆ ತೊಂದರೆ ಎಂದವ , ಮಂದ ಬುದ್ದಿಯ ಮಾನವ !" ಅಂತಾ ಆಶು ಕವಿ ಕಾಳಿಂಗ ಪರದೆ ಮೇಲೆ ಹೇಳ್ತಾ ಇದ್ದರೆ,

  "ಸುಂದರ ಚೆಂದಿರ ಮೊಗದ ಈ ವಿಶಾರದೆ
  ಈಗೆಯೇ ಕೈಹಿಡಿದಿದ್ದರೆ...ಎದುರಿಸುವೆ ಬಂದರೂ, ಎಂತಹ ತೊಂದರೆ 'ಅಂತಾ ನಾ ಗೊಣಗಿದ್ದೆ.

  ಇನ್ನೇನು ಮೂವಿ ಮುಗಿಯೋ ಲಕ್ಷಣಗಳು ಕಾಣತೊಡಗಿದಾಗ , "ಈ ಸಂಜೆ ಏಕೆ ಜಾರುತಿದೆ? ಸದ್ದಿಲ್ಲದಂತೆ , ಈ ಸಿನೆಮಾ ಏಕೆ ಮುಗಿಯುತಿದೆ?"

  ಅಂತ ಬೇಸರದ ಮನದಲ್ಲೇ ಇರುವಾಗ ಮೂವಿ ಮುಗಿದು ಥಿಯೇಟರ್ ನ ಎಲ್ಲ ಲೈಟ್ ಗಳು ಹೊತ್ತಿಕೊಂಡ ತಕ್ಷಣ, ಹಿಡಿದ ಕೈ ಬಿಟ್ಟು "ಸಾರೀ ರೀ..ನಿಮಗೆ ಬಹಳ ತೊಂದರೆ ಕೊಟ್ಟೆ. [ಭಜರಂಗಿ ಬಾಹುಬಲಿಗೆ ಸೆಡ್ಡು ಹೊಡೆದ ರಂಗಿಯ ರಹಸ್ಯ?]
  ವೆರಿ ಸಾರೀ ...By the way , ಮೈ ನೇಮ್ ಇಸ್ ಪ್ರಿಯಾ " ಅಂತಾ ಮಧುರವಾಗಿ ನುಡಿದು ಕೈ ಮುಂದೆ ಚಾಚಿದಾಗ ನಾ ಅವಳ ಕೈ ಹಿಡಿದಿದ್ದೆ, ಧನ್ಯವಾದ ತಿಳಿಸಲು.

  ಗುಡ್ ನೈಟ್ ಅಂತ ಹೇಳಿ ಹೋಗಿ, ಮತ್ತೆ ದೂರದಿಂದಲೇ ಕೈ ಬೀಸಿದ ಅವಳತ್ತ ನೋಡಿ, ನಾನೂ ನನ್ನ ಮನೆ ಕಡೆ ಹೊಂಟಿದ್ದೆ !

  ಮರು ದಿನ ಬೆಳಿಗ್ಗೆ ಸ್ನಾನ ಮಾಡಿ ಆಫೀಸಿಗೆ ಹೋಗುವ ತರಾತುರಿಯಲ್ಲಿ ನಾನಿದ್ದಾಗ ..." ಮೂವಿ ಹೇಗಿತ್ತು ? ಯಾಕ್ರೀ ನಿಮ್ಮ ಎಡಗೈ ಮೇಲೆ ಪರಚಿದ ಕಲೆಗಳು ?" ಅಂತಾ ಒಮ್ಮೆಲೇ ಕೇಳಿ ಬಂದ ಅರ್ಧಾಂಗಿನಿಯ ಪ್ರಶ್ನೆಗೆ, ತಡವರಿಸಿದರೂ, ಸಾವಧಾನಿಸಿ, " ಓಹ್ ಇದ, ನಮ್ಮ ಹಳ್ಳಿ ಥಿಯೇಟರ್ ನಲ್ಲಿ ಇರೋ ಥರ, ಅಮೆರಿಕಾದ ಈ ಮಲ್ಟಿಪ್ಲೆಕ್ಸ್ ಥಿಯೇಟರ್ ನಲ್ಲೂ ಸೊಳ್ಳೆ ಕಾಟ ಕಣೆ, ಆ ಹಿಡಿತಕ್ಕೆ, ಅಲ್ಲಲ್ಲ ಆ ಕಡಿತಕ್ಕೆ ಚೆನ್ನಾಗಿ ಪರಚಿ ಕೊಂಡು ಬಿಟ್ಟೆ ಅನ್ನಿಸುತ್ತೆ.
  ಅದೇನೇ ಇರ್ಲಿ, ಮೂವಿ ಮಾತ್ರ ಸೂಪರ್ ಕಣೆ, ಭಂಡಾರಿ ಬ್ರದರ್ಸ್ ರಿಯಲಿ ಮೇಡ್ awesome ಮೂವಿ, ಯು ಶುಡ್ have ಕಂ " ಅಂತಾ ಬರ ಬರ ಹೇಳಿ , ಸರ ಸರ ಹೊರ ಬಿದ್ದಿದ್ದೆ !

  "ಹೊಟ್ಟೆಯಲಿ ಚಿಟ್ಟೆಗಳು ಮೆಟ್ಟಿ ನಿಂತಬ್ಬರಲಿ
  ತಟ್ಟೆಯಲಿ ಹಿಟ್ಟಿದ್ದರೂ, ಬೆದರಿದ ಆ ಹರಿಣಿಯ ನೆನಪಲ್ಲೇ ಕುಂತಿರುವೆ...
  ರಂಗಿನ ತರಂಗಗಳು ಮೂಡಿರುವ ಈ ಮನದಲ್ಲಿ
  ಇನ್ನೊಮ್ಮೆ ಅವಳೊಂದಿಗೆ ಮೂವಿ
  ನೋಡಬೇಕೆಂಬ ಆಸೆ ಆಗಿದೆಯಲ್ಲಾ , ಅನುಪ್ ಮಾಸ್ತರೇ...?" ಏನು ಮಾಡಲಿ...

  English summary
  NRI Kannadiga Nagaraj M shares his experience watching Rangitaranga movie in US theatre. The movie directed by Anup Bhandari got good response all over US and Canada.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more