»   » 2013: ನಿಮ್ಮ ನೆಚ್ಚಿನ ಚಿತ್ರವನ್ನು ಆಯ್ಕೆ ಮಾಡಿ

2013: ನಿಮ್ಮ ನೆಚ್ಚಿನ ಚಿತ್ರವನ್ನು ಆಯ್ಕೆ ಮಾಡಿ

By: ಮಲೆನಾಡಿಗ
Subscribe to Filmibeat Kannada

2013ರಲ್ಲಿ ಕನ್ನಡ ಚಿತ್ರರಂಗ ಹಳೆ ಬೇರು ಹೊಸ ಚಿಗುರು ತತ್ವದಂತೆ ಉತ್ತಮ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿದೆ. ಹೊಸತನವನ್ನು ಪರಿಚಯಿಸಿದ ಕೀರ್ತಿ ಪ್ರತಿಭಾವಂತ ನಿರ್ದೇಶಕರಿಗೆ ಸಲ್ಲುತ್ತದೆಯಾದರೂ ನಿರ್ದೇಶಕರು ಹಾಗೂ ಸ್ಟಾರ್ ನಟರನ್ನು ನಂಬಿಕೊಂಡು ದುಡ್ಡು ಹಾಕಿ ಗೆದ್ದು ಸಾಹಸ ಮೆರೆದ ನಿರ್ಮಾಪಕರಿಗೂ ಇದರ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕಾಗುತ್ತದೆ.

ಈ ವರ್ಷದಲ್ಲಿ ಹೊಸ ಹೊಸ ನಿರ್ದೇಶಕರು, ನಟ, ನಟಿಯರಿಂದ ನಿರ್ಮಾಪಕರ ಜೋಳಿಗೆ ತುಂಬಿದೆ. ಕನ್ನಡ ಚಿತ್ರಗಳ ಗುಣಮಟ್ಟ ಕುಸಿದಿದೆ ಎನ್ನುವ ಕೂಗಿನ ಜತೆಗೆ ಹೊಸ ಬಗೆ ಚಿತ್ರಗಳು ಗೆದ್ದಿರುವುದು ನಿರ್ಮಾಪಕರಿಗೆ ಇನ್ನಷ್ಟು ಉತ್ಸಾಹ ಹೆಚ್ಚಿಸಿದೆ. ಕೊಬ್ರಿ ಮಂಜುರಂಥ ನಿರ್ದೇಶಕರು ಒಂದೇ ಬಾರಿಗೆ ಏಳೆಂಟು ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡು ದಾಖಲೆ ನಿರ್ಮಿಸಿದರೆ, ಪವನ್ ಕುಮಾರ್ ಅವರ ಲೂಸಿಯಾ ಚಿತ್ರಕ್ಕೆ ಪ್ರೇಕ್ಷಕರಿಗೆ ದುಡ್ಡು ಹಾಕಿ ವಿತರಣೆ ಮಾಡಿ, ಪ್ರಚಾರ, ಪ್ರದರ್ಶನದ ಜವಾಬ್ದಾರಿ ಹೊತ್ತುಕೊಂಡು ಚಿತ್ರವನ್ನು ಗೆಲ್ಲಿಸಿದ್ದಾರೆ.[ಅತ್ಯಂತ ಯಶಸ್ವಿ ನಿರ್ದೇಶಕ ಯಾರು?]

ಸುಮಾರು 120 ಕ್ಕೂ ಅಧಿಕ ಚಿತ್ರಗಳು ಬೆಳ್ಳಿತೆರೆಯಲ್ಲಿ ಕಾಣಿಸಿವೆ. ಇದರಲ್ಲಿ ಸುಮಾರು 15 ಚಿತ್ರಗಳು ಗೆದ್ದಿದೆ. 2013 ರಲ್ಲಿ ಕನ್ನಡ ಚಿತ್ರರಂಗ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕಂಡಿದೆ.

ಗಿರೀಶ್ ಕಾಸರವಳ್ಳಿ ಅವರು ಕುರ್ಮಾವಾತಾರ ಚಿತ್ರ ಮಾಡಿ ಪಿವಿಆರ್ ನಲ್ಲಿ ರಿಲೀಸ್ ಮಾಡಿದ್ದು ಸಾಧನೆ ಎನಿಸಿತು. ಪಿಆರ್ ರಾಮದಾಸ್ ನಾಯ್ಡು ಅವರ ಹೆಜ್ಜೆಗಳು, ಫಣೀಶ್ ಎಸ್ ರಾಮನಾಥಪುರ ನಿರ್ದೇಶನದ ಅಂದರ್ ಬಾಹರ್, ಮಲ್ಲಿಕಾರ್ಜುನ ಮುಟ್ಟಲಗೇರಿ ಅವರ ಮದರಂಗಿ, ಅಶೋಕ್ ಕೆಎಸ್ ಅವರ 6-5=2, ವಿಜಯ್ ಗಡ್ಡ ಅವರ ದ್ಯಾವ್ರೇ, ಇನ್ನೂ ಘರ್ಜಿಸುತ್ತಿರುವ ರಾಜಾಹುಲಿ ಚಿತ್ರಗಳು ಕೂಡಾ ಸದ್ದು ಮಾಡಿವೆ. ಎಲ್ಲದಕ್ಕಿಂತ ಮುಖ್ಯವಾಗಿ ದುನಿಯಾ ಸೂರಿ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ 'ಕಡ್ಡಿಪುಡಿ' ಉತ್ತಮ ಚಿತ್ರಗಳ ರೇಸ್ ನಲ್ಲಿ ಹೆಸರಿಸಬಹುದಾದ ಮತ್ತೊಂದು ಚಿತ್ರ.[ಕನ್ನಡ ಚಿತ್ರಗಳ ವಾರ್ಷಿಕ ವರದಿ]

ಗಲ್ಲಾ ಪೆಟ್ಟಿಗೆಯಲ್ಲಿ ಸೋತ ಚಿತ್ರಗಳು, ಒಂದೇ ವಾರಕ್ಕೆ ಚಿತ್ರಮಂದಿರದಿಂದ ಖಾಲಿಯಾದ ಚಿತ್ರಗಳು ಸೇರಿದಂತೆ ಭರ್ಜರಿ ಯಶಸ್ಸು ಗಳಿಸಿದ ಚಿತ್ರಗಳು ಈ ಪಟ್ಟಿಯಲ್ಲಿದೆ ನಿಮ್ಮ ನೆಚ್ಚಿನ ಚಿತ್ರವನ್ನು ಆಯ್ಕೆ ಮಾಡಿ

ಬಚ್ಚನ್

ನಿರ್ಮಾಪಕ ಉದಯ್ ಕೆ ಮೆಹ್ತಾ, ಸುದೀಪ್ ಭಾವನಾ ಮೆನನ್ ಅಭಿನಯ, ನಿರ್ದೇಶನ : ಶಶಾಂಕ್, ಗಳಿಕೆ ಸುಮಾರು 25 ಪ್ಲಸ್ ಕೋಟಿ ರು..

ಮಸಾಲೆ ಭರಿತ ಚಿತ್ರವಾದರೂ ಸುದೀಪ್ ಅಭಿನಯ, ಶಶಾಂಕ್ ಕಥಾ ನಿರೂಪಣಾ ಶೈಲಿ, ಪೋಷಕ ಪಾತ್ರಗಳ ಸದ್ಬಳಕೆ, ಗಣಿಗಾರಿಕೆಯ ಕರಾಳ ಮುಖ ಅನಾವರಣ ಎಲ್ಲವೂ ಪ್ರೇಕ್ಷಕರು ಮೆಚ್ಚಬಲ್ಲ ಅಂಶಗಳೆನಿಸಿದೆ.

ಬುಲ್ ಬುಲ್

ನಿರ್ಮಾಪಕ ತೂಗುದೀಪ ಪ್ರೊಡಕ್ಷನ್, ದರ್ಶನ್, ರಚಿತಾ ರಾಮ್ ಅಭಿನಯ, ನಿರ್ದೇಶನ : ಎಂಡಿ ಶ್ರೀಧರ್, ಗಳಿಕೆ ಸುಮಾರು 39 ಪ್ಲಸ್ ಕೋಟಿ ರು

ಸುಂದರ ಸಾಂಸಾರಿಕ ಚಿತ್ರಗಳನ್ನು ನೀಡುವ ದರ್ಶನ್ ಅವರ ಕುಟುಂಬ ವರ್ಗದ ಮತ್ತೊಂದು ಯಶಸ್ವಿ ಚಿತ್ರ. ಆಮದು ಕಥೆಯಾದರೂ ದರ್ಶನ್, ರಚಿತಾ ಜೋಡಿ ಮೋಡಿ ಮಾಡಿತು. ಅಂಬರೀಷ್ ಹಾಗೂ ಇನ್ನಿತರ ಪೋಷಕ ಪಾತ್ರಗಳ ಜತೆಗೆ ವಿ ಹರಿಕೃಷ್ಣ ಅವರ ಸಂಗೀತ ಚಿತ್ರವನ್ನು ಮೆಚ್ಚುವಂತೆ ಮಾಡಿದೆ.

ಗೂಗ್ಲಿ

ಜಯಣ್ಣ ಫಿಲಂಸ್ ನಿರ್ಮಾಣ, ಯಶ್, ಕೃತಿ ಕರಬಂದಾ ಅಭಿನಯ, ನಿರ್ದೇಶನ : ಪವನ್ ಒಡೆಯರ್, ಗಳಿಕೆ ಸುಮಾರು 15 ಪ್ಲಸ್ ಕೋಟಿ ರು.

ಟ್ರೇಲರ್ ಮೂಲಕವೇ ಎಲ್ಲರಲ್ಲೂ ಕುತೂಹಲ ಕೆರಳಿಸಿದ ಗೂಗ್ಲಿ ಚಿತ್ರ ಗೆದ್ದಿದ್ದು ಪವನ್ ಒಡೆಯರ್ ಅವರ ಜಾಣ್ಮೆಯ ನಿರ್ದೇಶನ,ಯಶ್, ಕೃತಿ, ಅನಂತ್ ನಾಗ್ ಲವಲವಿಕೆ ಅಭಿನಯ ಹಾಗೂ ಜೋಶ್ವ ಶ್ರೀಧರ್ ಸಂಗೀತದಿಂದ ಎನ್ನಬಹುದು. ಪ್ರೀತಿ ಪ್ರೇಮದ ಕಥೆಯನ್ನು ಹೀಗೂ ಹೇಳಬಹುದು ಎಂಬುದನ್ನು ಸರಳವಾಗಿ ತೋರಿಸಿಕೊಟ್ಟ ಚಿತ್ರ

ಲೂಸಿಯಾ

ಹೋಂ ಟಾಕೀಸ್ ಹಾಗೂ ಪ್ರೇಕ್ಷಕರ ಹೂಡಿಕೆ, ನೀನಾಸಂ ಸತೀಶ್, ಶ್ರುತಿ ಹರಿಹರನ್ ಅಭಿನಯ, ನಿರ್ದೇಶನ : ಪವನ್ ಕುಮಾರ್, ಗಳಿಕೆ ಸುಮಾರು 25 ಪ್ಲಸ್ ಕೋಟಿ ರು

ಹೊಸ ನಾಯಕ, ನಾಯಕಿ, ಸಂಗೀತ ನಿರ್ದೇಶಕ, ಹೊಸ ನಿರ್ಮಾಪಕರು, ವಿತಕರರು, ಹೊಸ ಪ್ರೇಕ್ಷಕ ವರ್ಗ, ಹೊಸ ಪ್ರಚಾರ ತಂತ್ರವನ್ನು ಹುಟ್ಟು ಹಾಕಿದ ಕೀರ್ತಿ ಲೂಸಿಯಾ ಚಿತ್ರಕ್ಕೆ ಸಲ್ಲುತ್ತದೆ. ಚಿತ್ರ ನಿರ್ದೇಶಕ ಪವನ್ ಹಲವಾರು ಮಂದಿಗೆ ವೇದಿಕೆ ಒದಗಿಸಿದ್ದಲ್ಲದೆ ಚಿತ್ರದ ಸಂಕೀರ್ಣತೆಯನ್ನು ಸರಳವಾಗಿ ನಿರೂಪಿಸಿ, ಪ್ರೇಕ್ಷಕರ ಮನ ಗೆದ್ದರು.

ಮೈನಾ

ಓಂಕಾರ್ ಮೂವೀಸ್ , ಚೇತನ್ ಕುಮಾರ್, ನಿತ್ಯಾ ಮೆನನ್, ನಿರ್ದೇಶನ : ನಾಗಶೇಖರ್

ಸತ್ಯ ಕಥೆಯನ್ನು ಆಧಾರಿಸಿದ ಮೈನಾ ಚಿತ್ರ ಪ್ರೇಕ್ಷಕರಿಗೆ ಹಲವಾರು ಸಂದೇಶ ಸಾರಿದ್ದಲ್ಲದೆ ಸಂಗೀತಮಯ, ಉತ್ತಮ ಲೊಕೇಷನ್ ಆಯ್ಕೆಮಾಡಿಕೊಂಡ ಚಿತ್ರ ಎನಿಸಿತು. ನಿತ್ಯಾ ಮೆನನ್ ಅಂಗವಿಕಲೆಯಾಗಿ, ಅಬಲೆಯಾಗಿ ಉತ್ತಮ ನಟನೆ ಜತೆಗೆ ಗಾಯಕಿಯಾಗಿ ಡಾ ಮಿಂಚಿದರು. ನೋವಿನ ಕಥೆಯನ್ನು ಹೆಣೆಯುವುದರಲ್ಲಿ ಪ್ರವೀಣರಾಗಿರುವ ನಾಗಶೇಖರ್ ಅವರು ಪ್ರೇಕ್ಷಕರ ಹೃದಯ ತಟ್ಟುವಲ್ಲಿ ಯಶಸ್ವಿಯಾದರು.

ಬೃಂದಾವನ

ಸೀತಾ ಭೈರವೇಶ್ವರ ಕ್ರಿಯೇಷನ್ ನಿರ್ಮಾಣದ ಈ ರಿಮೇಕ್ ಚಿತ್ರದಲ್ಲಿ ದರ್ಶನ್, ಕಾರ್ತಿಕಾ ನಾಯಕ್, ಮಿಲನ್ ನಾಗರಾಜ್ ಅವರ ನಟನೆ, ಸೋದರರಾಗಿ ಸಾಯಿಕುಮಾರ್ ಹಾಗೂ ಸಂಪತ್ ಅಭಿನಯದ ಜತೆಗೆ ಹರಿಕೃಷ್ಣ ಸಂಗೀತ, ಕೆ ಮಾದೇಶ ಅವರ ನಿರ್ದೇಶನ ಪ್ರೇಕ್ಷಕರ ಮೆಚ್ಚುಗೆ ಜತೆಗೆ ಗಲ್ಲಾಪೆಟ್ಟಿಗೆಯಲ್ಲೂ ಸದ್ದು ಮಾಡಿತು.

ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಥಾ ಹಂದರ ಹೊಂದಿರುವ ಈ ಚಿತ್ರ ಟಿಪಿಕಲ್ ದರ್ಶನ್ ಅವರ ಚಿತ್ರ ಎನಿಸಿದೆ.

ಜಟ್ಟ

ಮೈನಾ ಚಿತ್ರದ ನಂತರ ಓಂಕಾರ್ ಮೂವೀಸ್ ನಿರ್ಮಾಣದ ಜಟ್ಟ ರಿಲೀಸ್ ಆಗಿ ನಿರ್ದೇಶಕ ಬಿಎಂ ಗಿರಿರಾಜ್ ರಂಥ ಭರವಸೆ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ನೀಡಿತು.

ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ 'ಜಟ್ಟ' ಚಿತ್ರ ನೋಡುವಂತಹ ಚಿತ್ರವಲ್ಲ, ಇದು ಕಾಡುವಂತಹ ಚಿತ್ರ ಮತ್ತೆ ಮತ್ತೆ ಕನವರಿಸುವಂತಹ ಚಿತ್ರ! ಇಲ್ಲಿ ಭಾವನೆಗಳ ಸಂಘರ್ಷವಿದೆ. ಕಾಡಿನ ಸೌಂದರ್ಯವಿದೆ. ಹೆಣ್ಣಿನ ಕೂಗಿದೆ. ಗಂಡಿನ ಮೌನವಿದ ಎಂದು ಪ್ರೇಕ್ಷಕರು ಕೊಂಡಾಡಿದರು. ಸುಶ್ರುತಾ ವಾಗ್ಲೆ ಅವರ ದಿಟ್ಟ ಅಭಿನಯ ಕಂಡು ಬೆಚ್ಚಿದರು, ಕಿಶೋರ್ ಮೌನ ಕಂಡು ಬೆರಗಾದವರು ಅನೇಕ ಮಂದಿ

ಭಜರಂಗಿ

ಭಜರಂಗಿ ಮೊದಲ ವಾರದಲ್ಲೇ ಹಾಕಿದ ಬಂಡವಾಳ ಹಿಂತಿರುಗಿ ಪಡೆದು ದಾಖಲೆ ನಿರ್ಮಿಸಿದೆ. ಹಣ ಗಳಿಕೆ ಜತೆಗೆ ಶಿವರಾಜ್ ಅವರ ಉತ್ತಮ ಅಭಿನಯ, ಉತ್ತಮ ಸಂಗೀತ, ವಿಲನ್ ಗಳ ಕೊಡುಗೆ ಈ ಚಿತ್ರದಿಂದ ಸಿಕ್ಕಿದೆ. ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಯಶಸ್ವಿ ಚಿತ್ರಗಳಲ್ಲಿ ಮುಂಚೂಣಿಯಲ್ಲಿದೆ.

ಭಾರತ್ ಸ್ಟೋರ್ಸ್

ಬಸಂತ್ ಕುಮಾರ್ ಪಾಟೀಲ್ ನಿರ್ಮಾಣದ ಪಿ ಶೇಷಾದ್ರಿ ನಿರ್ದೇಶನದ ಭಾರತ್ ಸ್ಟೋರ್ಸ್ ಚಿತ್ರ ರಾಷ್ಟ್ರಪ್ರಶಸ್ತಿ ಜತೆಗೆ ಅನೇಕ ದೇಶಗಳ ಪ್ರಶಸ್ತಿಗಳನ್ನು ಬಾಚಿತು.

ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ಚಿಲ್ಲರೆ ಅಂಗಡಿಗಳ ಮೇಲೆ ಆಗುವ ಪರಿಣಾಮಗಳನ್ನು ಮನೋಜ್ಞವಾಗಿ ಶೇಷಾದ್ರಿ ಅವರು ನಿರೂಪಿಸಿದ್ದರೆ, ಪುಟ್ಟ ಅಂಗಡಿ ಇಟ್ಟುಕೊಂಡು ಒದ್ದಾಟ ನಡೆಸುವ ದತ್ತಾತ್ರೇಯ ಅವರ ಅಭಿನಯ ಮನಮೋಹಕವಾಗಿದೆ.

ಗೊಂಬೆಗಳ ಲವ್

ಅರುಣ್, ಪಾವನಾರಂಥ ಹೊಸ ಮುಖಗಳನ್ನು ಹಾಕಿಕೊಂಡು ನಿರ್ದೇಶಕ ಸಂತೋಷ್ ಅವರು ಹೀಗೊಂದು ಪ್ರೇಮ ಕಥೆ ಹೆಣೆದು ಪ್ರೇಕ್ಷಕರ ಮನ ಮುಟ್ಟಿದರು. ಕಥೆ ಹೇಳುವ ತಂತ್ರಗಾರಿಕೆ, ಶ್ರುತಿ, ರಾಮಕೃಷ್ಣ, ಅಚ್ಯುತ್ ಕುಮಾರ್ ಅವರ ನಟನೆ, ಕಥೆಗೆ ಒಪ್ಪುವ ಗೀತೆಗಳು ಚಿತ್ರವನ್ನು ರವಿಚಂದ್ರನ್, ರಾಘವೇಂದ್ರ ರಾಜಕುಮಾರ್ ರಂಥ ಹಿರಿಯ ಚಿತ್ರಕರ್ಮಿಗಳನ್ನು ಚಿತ್ರದತ್ತ ನೋಡುವಂತೆ ಮಾಡಿತು.

ನಿಮ್ಮ ಆಯ್ಕೆ ತಿಳಿಸಿ

ಟಾಪ್ ಟೆನ್ ಆಯ್ಕೆ ನಿಜಕ್ಕೂ ಕಷ್ಟದ ಕೆಲಸ. ಆದರೆ, ಕೂರ್ಮಾವಾತಾರ, ಅಂದರ್ ಬಾಹರ್, ಮದರಂಗಿ, 6-5=2, ದ್ಯಾವ್ರೇ, ರಾಜಾಹುಲಿ, ಕೇಸ್ ನಂ. 18/9 ಬೇರೆ ಬೇರೆ ಕಾರಣಕ್ಕೆ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.. ಈಗ ಕೊಟ್ಟಿರುವ ಪಟ್ಟಿಯಲ್ಲಿ ನಿಮ್ಮ ಆಯ್ಕೆ ತಿಳಿಸಿ

English summary
Here, we are giving an opportunity for our readers to choose the best Kannada movie of the year 2013 from the list. Follow the slideshow to see the list and vote for your favourite movie.
Please Wait while comments are loading...