ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ ಅಮೆಜಾನ್: ಅಯೋಧ್ಯೆಗೆ ಹೊರಟ ಅಕ್ಷಯ್
ಬಿಜೆಪಿ 'ಪೋಸ್ಟರ್ ಬಾಯ್' ಎಂದು ಕರೆಯಲಾಗುವ ಅಕ್ಷಯ್ ಕುಮಾರ್, 'ರಾಮ್ ಸೇತು' ಸಿನಿಮಾದ ಚಿತ್ರದಲ್ಲಿ ನಟಿಸುತ್ತಿದ್ದು. ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ.
'ರಾಮ್-ಸೇತು' ಚಿತ್ರೀಕರಣಕ್ಕಾಗಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ ಅಕ್ಷಯ್ ಕುಮಾರ್. ಸಿನಿಮಾದ ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನುಶ್ರತ್ ಬರೂಚಾ ಅವರುಗಳು ಸಹ ಅಕ್ಷಯ್‌ಗೆ ಜೊತೆಯಾಗಿದ್ದಾರೆ.
ಸಿನಿಮಾದ ಮೊದಲ ದೃಶ್ಯವನ್ನು ಅಯೋಧ್ಯೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು. ಇಂದು ಅಯೋಧ್ಯೆಯಲ್ಲಿ ಮುಹೂರ್ತ ಸಹ ನೆರವೇರಿದೆ.

ಈ ಸಿನಿಮಾದ ಮೂಲಕ ಒಟಿಟಿ ದೈತ್ಯ ಎನಿಸಿಕೊಂಡಿರುವ ಅಮೆಜಾನ್ ಪ್ರೈಂ ಮೊದಲ ಬಾರಿಗೆ ಭಾರತದ ಸಿನಿಮಾ ಒಂದರ ನಿರ್ಮಾಣದಲ್ಲಿ ಕೈಜೋಡಿಸಿದೆ. 'ರಾಮ್-ಸೇತು' ಸಿನಿಮಾಕ್ಕೆ ಅಮೆಜಾನ್ ಪ್ರೈಂ ಬಂಡವಾಳ ಹೂಡಿದೆ. ಅಮೆಜಾನ್ ಪ್ರೈಂ ಜೊತೆಗೆ ಕೇಪ್ ಆಫ್ ಗುಡ್ ಫಿಲಮ್ಸ್, ಅಬಂಡನ್ಶಿಯಾ ಎಂಟರ್ಟೇನ್‌ಮೆಂಟ್, ಲೈಕಾ ಪ್ರೊಡಕ್ಷನ್ಸ್ ಸಹ ಸಿನಿಮಾಕ್ಕೆ ಬಂಡವಾಳ ಹೂಡಿವೆ.
ರಾಮ್-ಸೇತು ಸಿನಿಮಾವನ್ನು ಅಭಿಷೇಕ್ ಶರ್ಮಾ ನಿರ್ದೇಶನ ಮಾಡಲಿದ್ದು, ಸಿನಿಮಾವು ನೇರವಾಗಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು 240 ದೇಶಗಳ ಅಮೆಜಾನ್ ಪ್ರೈಂ ವೀಕ್ಷಕರಿಗೆ ಲಭ್ಯವಾಗುವಂತೆ ಮಾಡುವುದಾಗಿ ಅಮೆಜಾನ್ ಈಗಾಗಲೇ ಹೇಳಿದೆ.

ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಚಿತ್ರಕತೆ ರೀಡಿಂಗ್ ಕಾರ್ಯಾಗಾರ ನಡೆದಿತ್ತು. ಕಾರ್ಯಾಗಾರದಲ್ಲಿ ಅಕ್ಷಯ್ ಕುಮಾರ್, ಜಾಕ್ವೆಲಿನ್ ಫರ್ನಾಂಡೀಸ್, ನುಶ್ರತ್ , ನಿರ್ದೇಶಕ ಅಭಿಷೇಕ್ ಇನ್ನೂ ಕೆಲವರು ಪಾಲ್ಗೊಂಡಿದ್ದರು ಆ ಚಿತ್ರಗಳನ್ನು ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಅಕ್ಷಯ್ ಕುಮಾರ್ ಇತ್ತೀಚೆಗಷ್ಟೆ ಬೆಲ್ ಬಾಟಮ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. 'ಬಚ್ಚನ್ ಪಾಂಡೆ' ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. 'ಸೂರ್ಯವಂಶಿ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ರಾಮ್-ಸೇತು ಬಳಿಕ 'ಅತರಂಗೀ ರೇ', 'ಮಹಿಳಾ ಮಂಡಳಿ', 'ಹೇರಾಪೇರಿ 3', 'ರಕ್ಷಾ ಬಂಧನ್', 'ಪೃಥ್ವಿರಾಜ್' ಸಿನಿಮಾಗಳಲ್ಲಿ ನಟಿಸಲಿದ್ದಾರೆ ಅಕ್ಷಯ್.


Click it and Unblock the Notifications











