»   » ಚಿತ್ರವಿಮರ್ಶೆ: ನನ್ನುಸಿರೇ, ಕಥೆ ಅಷ್ಟೇ ಓಕೆ..

ಚಿತ್ರವಿಮರ್ಶೆ: ನನ್ನುಸಿರೇ, ಕಥೆ ಅಷ್ಟೇ ಓಕೆ..

By: ವಿನಾಯಕರಾಮ್ ಕಲಗಾರು
Subscribe to Filmibeat Kannada
Kannada movie Nannusire review
ಕನ್ನಡ ಸಿನಿಮಾ ಮಂದಿಗೆ ಕತೆ ಆಯ್ಕೆ ಮಾಡಲು ಬರುವುದಿಲ್ಲ. ಅದೇ ಡಬ್ಬಾ ಕಾಲೇಜು, ಬಿಟ್ಟರೆ ಲವ್, ಬಿಟ್ಟಿ ಸಿಕ್ಕರೆ ಲಾಂಗು-ಮಚ್ಚು... ಇಷ್ಟಿದ್ದರೆ ಕೋಟಿ ಬಜೆಟ್ ಸಿನಿಮಾ ಮಾಡಿ ಮುಗಿಸಿಬಿಡುತ್ತಾರೆ...ಇದು ಇಂದು ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಬಿತ್ತರ ವಾದ ಸುದ್ದಿ ಗದ್ದಲ. ಆದರೆ ಅದರಲ್ಲೇ ಭಿನ್ನ ಕತೆ ಆಯ್ಕೆ ಮಾಡಿಕೊಂಡಿದ್ದಾರೆ ಸಂತೋಷ್- ವೇಲು ಪ್ರಿಯನ್

ಇತ್ತೀಚೆಗೆ ಪ್ರೀತಿಯ ಹೆಸರಲ್ಲಿ ಹುಡುಗಿಯರಿಗೆ ಮೋಸ ಮಾಡುವವರು ಹೆಚ್ಚಾಗಿದ್ದಾರೆ. ಅಕಸ್ಮಾತ್ ಅವಳು ಸಿಗದಿದ್ದರೆ ಆಸಿಡ್ ಎರಚಿ, ಕೈ ತೊಳೆದು ಕೊಳ್ಳುವವರೂ ಇದ್ದಾರೆ. ಆದರೆ ಅದರಿಂದ ಆ ಹೆಣ್ಣುಮಗಳು ಅನುಭವಿಸುವ ಕಷ್ಟವೇನು? ಅಂಥದ್ದೇ ಕಷ್ಟ ಅವನಿಗೂ ಬಂದರೆ ಪರಿಸ್ಥಿತಿ ಹೇಗಿರುತ್ತದೆ? ಈ ಎಲ್ಲಾ ಪ್ರಶ್ನೆಗೆಳಿಗೆ ಎರಡೂವರೆ ಗಂಟೆಯಲ್ಲಿ ಉತ್ತರ ಕೊಡುತ್ತೇವೆ ಎಂದು ಹೊರಟಿದ್ದಾರೆ ನನ್ನುಸಿರೇ ಚಿತ್ರತಂಡ.

ಆದರೆ ಇಂಥದ್ದೊಂದು ಗಟ್ಟಿ ಕತೆ ಆಯ್ಕೆ ಮಾಡಿಕೊಂಡಾಗ ಅದನ್ನು ಹೇಗೆ ನಿರೂಪಿಸಬೇಕು, ಚಿತ್ರಕತೆಯನ್ನು ಹೇಗೆ ಹೆಣೆಯಬೇಕು, ಯಾವ ದೃಶ್ಯಗಳನ್ನು ಎಲ್ಲೆಲ್ಲಿ ಜೋಡಿಸಬೇಕು, ಪಾತ್ರಪೋಷಣೆ ಮಾಡುವವರಿಂದ ಹೇಗೆ ಕೆಲಸ ತೆಗೆಸಬೇಕು ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಆದರೆ ಈ ಎಲ್ಲ ಅಂಶಗಳು 'ನನ್ನುಸಿರೇ'ಯಿಂದ ಹೊರತಾಗಿದೆ ಎಂದರೆ ನೀವು ನಗಬಾರದು!

'ಎಲ್ಲಾ ಹೊಡೆತಗಳೂ ತೆಂಡೂಲ್ಕರ್ ಹೊಡೆತಗಳಾಗುವುದಿಲ್ಲ. ಎಲ್ಲ ನಿರೂಪಕರೂ ಮುಂಗಾರುಮಳೆ ಗಣೇಶ್ ಆಗಲು ಸಾಧ್ಯವಿಲ್ಲ' ಈ ಹೊಸ ಗಾದೆಗೆ ಹಿಡಿದ ಕೈಗನ್ನಡಿ ನಿರೂಪಕ ರಾಹುಲ್. ಟಿವಿ ಮುಂದೆ ಪಟಪಟ ಎಂದು ಮಾತನಾಡುವ ಈತ ಬೆಳ್ಳಿತೆರೆಯಲ್ಲಿ ಸೂತ್ರ ಹರಿದ ಗಾಳಿಪಟ. ಹತ್ತು ಮಂದಿ ಮಧ್ಯೆ ಈತ ಇದ್ದರೆ,ಇಲ್ಲಿ ರಾಹುಲ್ ಯಾರು' ಎಂದು ದುರ್ಬೀನು ಹಿಡಿದು ಹುಡುಕಬೇಕು. ಇನ್ನು ನಾಯಕಿಯರು. ಒಬ್ಬಾಕೆ ಗಾಯತ್ರಿ. ಮೊದಲೊಂದಿಷ್ಟು ದೃಶ್ಯಗಳಲ್ಲಿ ಶ್ರದ್ಧೆಯಿಟ್ಟು ನಟಿಸಿದ್ದಾಳೆ. ಆದರೆ ಬರಬರುತ್ತಾ ರಾಯರ ಕುದುರೆ...

ಮತ್ತೊಬ್ಬಾಕೆ ಕೀರ್ತಿ. ಮುಖಕ್ಕೆ ಮಾತ್ರ ಕ್ಯಾಮೆರಾ ಹಿಡಿದರೆ ಸೂಪರ್. ಆದರೆ ಬಾಡಿ ಲ್ಯಾಂಗ್ವೇಜ್ ಬಗ್ಗೆ ಎಬಿಸಿಡಿ ಗೊತ್ತಿಲ್ಲ. ಮೈಕೈಯನ್ನು ಹಗ್ಗದಲ್ಲಿ ಬಿಗಿದು, ಕಟ್ಟಿದ್ದಾರೇನೊ ಎಂಬಂತೆ ಆಡುತ್ತಾಳೆ. ದತ್ತಣ್ಣ, ಕಿಶೋರಿ ಬಲ್ಲಾಳ್ ಪಾತ್ರ ಬಹುಕಾಲ ಮನಸ್ಸಿನಲ್ಲಿ ಉಳಿಯುತ್ತದೆ.   ಹಾಡುಗಳಲ್ಲಿ ಎರಡು ಮಾತ್ರ ಕೇಳಬಲ್. ಉಳಿದದ್ದು ಡಸ್ಕುಡಬಲ್. ನೃತ್ಯ ಸಂಯೋಜನೆ ಹಲವು ಭಾಷೆಗಳ, ಕೆಲವು ಕುಣಿತಗಳ ಸಂಗಮ. ಹಾಸ್ಯಕ್ಕೂ ಅಪಹಾಸ್ಯಕ್ಕೂ ವ್ಯತ್ಯಾಸ ತಿಳಿಯಬೇಕಾ? ಹಾಗಾದರೆ 'ನನ್ನುಸಿರೇ'ಗೆ ಬನ್ನಿ. ಕಾಲೆಳೆಯುವ ಭಾಷೆಯಲ್ಲಿ ಅದನ್ನು ಕಾಮಿಡಿ ಆಫ್ ಟೆರರ್' ಎನ್ನಬಹುದು. ಅದನ್ನು ನೋಡಿ ನಿಮಗೆ ತಲೆನೋವು ಬಂದರೆ- ಹಚ್ಚಿ ಜಂಡೂ ಬಾಮ್!

ನಿರ್ದೇಶಕದ್ವಯರು ಸಾಕಷ್ಟು ಕಲಿಯುವುದಿದೆ. ಹೊಸಬರನ್ನು ಬಳಸಿ, ಮೂರು ಕೋಟಿ ವ್ಯಯಿಸಿ, ಇಂಥದ್ದೊಂದು ಸಿನಿಮಾ ಮಾಡುವ ಮುನ್ನ ಕೊಂಚ ಯೋಚಿಸಿದ್ದರೆ ಟಾಕೀಸ್‌ನಲ್ಲಿ ಇಷ್ಟೊಂದು ಉಸಿರುಗಟ್ಟುವ ವಾತಾವರಣ ಇರುತ್ತಿರಲಿಲ್ಲ!

Read more about: kannada, movie, review
English summary
Kannada movie Nannusire review

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada