»   »  ವಿಮರ್ಶೆ: ಮಚ್ಚು ಲಾಂಗು ಸಂಗಮ ಗುಲಾಮ !

ವಿಮರ್ಶೆ: ಮಚ್ಚು ಲಾಂಗು ಸಂಗಮ ಗುಲಾಮ !

Posted By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಚಿತ್ರ : ಗುಲಾಮ
ಕತೆ - ಚಿತ್ರಕತೆ - ಸಂಭಾಷಣೆ - ನಿರ್ದೇಶನ : ತುಷಾರ್ ರಂಗನಾಥ್
ನಿರ್ಮಾಪಕ : ರಾಮು
ತಾರಾಗಣ : ಪ್ರಜ್ವಲ್ ದೇವರಾಜ್, ಬಿಯಾಂಕಾ ದೇಸಾಯಿ, ಸೋನು, ಅವಿನಾಶ್, ಸುಧಾ ಬೆಳವಾಡಿ,ರಂಗಾಯಣ ರಘು, ಕಾಶಿ
ಸಂಗೀತ : ಗುರುಕಿರಣ್
ಛಾಯಾಗ್ರಹಣ : ವಿಷ್ಣು ವರ್ಧನ್
ಸಂಕಲನ : ದೀಪು ಕುಮಾರ್

Gulama: Kannada movie review
*A ಎಂಬ ಆಸಾಮಿ B ಎಂಬ ಬೆಡಗಿಯನ್ನು ಪ್ರೀತಿ ಮಾಡುತ್ತಿರುತ್ತಾನೆ.
*ಆದರೆ B ಗೆ A ಬಗ್ಗೆ ಆ ರೀತಿಯ ಭಾವನೆ ಇರುವುದಿಲ್ಲ.
*C ಎಂಬ ಮತ್ತೊಬ್ಬ ಹುಡುಗಿ ಇರುತ್ತಾಳೆ. ಆಕೆಗೆ A ಮೇಲೆ ಎಲ್ಲಿಲ್ಲದ ಪ್ರೀತಿ.
*A ಗೆ ಏನಿದ್ದರೂ Bದೇ ಧ್ಯಾನ. ಅವಳಿಗಾಗಿ D, E,F,G,H... ಗಳನ್ನು ಎದುರು ಹಾಕಿಕೊಳ್ಳುತ್ತಾನೆ.
*I,J,Kಎಂಬ ರೌಡಿಗಳನ್ನು ಕೊಲೆ ಮಾಡುತ್ತಾನೆ. A ಅಪ್ಪ L ಮಗನಿಂದಾದ ಅವಮಾನ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಾನೆ.
* ಅಮ್ಮ, ತಂಗಿ M,N ಅನಾಥರಾಗುತ್ತಾರೆ. B ಮುಂಬಯಿಗೆ ಹೋಗಿ, ದೊಡ್ಡ ಸ್ಟಾರ್ ಆಗುತ್ತಾಳೆ.
*ಭಗ್ನ ಪ್ರೇಮಿ C, ಪ್ರಿಯತಮ A ಜೈಲಿನಿಂದ ಹೊರಬರುವುದನ್ನು ಕಾಯುತ್ತಿರುತ್ತಾಳೆ.
*ಇತ್ತ O,P,Q,R,S,Tಗಳು Aನನ್ನು ಮರ್ಡರ್ ಮಾಡಲು ಸ್ಕೆಚ್ ಹಾಕುತ್ತಿರುತ್ತಾರೆ....

-ಇದು ಗುಲಾಮ ಚಿತ್ರದ ಕಥಾಹಂದರ. ಇದು ನಿಮಗೆ ಅರ್ಥ ಆಯಿತೊ ಅಥವಾ ಇಲ್ಲವೋ ಗೊತ್ತಿಲ್ಲ. ಇದು ಸತ್ಯ!

ನಿರ್ದೇಶಕ ತುಷಾರ್ ರಂಗನಾಥ್ ಚಿತ್ರಕತೆಯನ್ನು ಇದೇ ರೀತಿ ಹೆಣೆದಿದ್ದಾರೆ. ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಸಂಬಂಧವೇ ಇಲ್ಲ. ಅದು ಯಾಕೆ ಬಂತು ಎನ್ನುವುದಕ್ಕೆ ಲಾಜಿಕ್ ಇಲ್ಲ. ಸಿನಿಮಾ ನೋಡಲು ಕುಳಿತ X,Y,Z ಗಳು ಈ 'ದಂತಕತೆ" ಯಾವಾಗ ಮುಗಿಯುತ್ತಪ್ಪಾ ಎಂದು ತಲೆ ಕೆರೆದುಕೊಳ್ಳುವುದು, ಅದು ಗಾಯವಾಗಿ ರೂಪಗೊಳ್ಳುವುದು ಗುಲಾಮನಿಗೆ ಸಲ್ಲಬೇಕಾದ ಕ್ರೆಡಿಟ್ಟು!

ಇದು ಈ ವರ್ಷದ ಮೊದಲ ಚಿತ್ರ. ತುಷಾರ್‌ಗೂ ಇದು ಪ್ರಥಮ ಚುಂಬನ. ಹತ್ತಾರು ವರ್ಷದಿಂದ ಉದ್ಯಮದಲ್ಲಿದ್ದು, ಹೊಡೆದಾಟ, ಬಡಿದಾಟದ ನೂರಾರು ಚಿತ್ರಗಳನ್ನು ನೋಡುತ್ತಾ ಬೆಳೆದಿದ್ದಾರೆ. ಅವುಗಳ ಅಪೂರ್ವ ಸಂಗಮವೇ ಗುಲಾಮ. ಪ್ರಜ್ವಲ್ ಎಂಬ ಅಮುಲ್ ಬೇಬಿ ಕೈಗೆ ಮಚ್ಚು ಕೊಟ್ಟರೆ ಹೇಗಾಗಬಹುದು ಹೇಳಿ? ನಿನ್ನೆಯವರೆಗೆ ಚಾಕಲೇಟ್ ಹೀರೊ ಥರ ಇದ್ದ ಪ್ರಜ್ಜು ಈಗ ಚಾಕು ಹಿಡಿದ ಚಾಲೆಂಜಿಂಗ್ ಸ್ಟಾರ್. ನಟನೆ ಬಗ್ಗೆ ಎರಡು ಮಾತಿಲ್ಲ. ಆದರೆ ಜಗ್ಗೇಶ್, ರವಿಚಂದ್ರನ್ ಏಕಾಏಕಿ ಭೂಗತ ದೊರೆಯ ಪಾತ್ರ ಮಾಡಿಬಿಟ್ಟರೆ ಹೇಗಿರುತ್ತೆ? ಅದು ಪಕ್ಕಾ ಕಾಮಿಡಿ ಚಿತ್ರವಾಗುತ್ತೆ!

ಗನ್ನು-ಲಾಂಗಿಗೆ ಇಲ್ಲಿ ಮೋಸವಿಲ್ಲ. ಮಾತೆತ್ತಿದರೆ ಏಕ್ ಮಾರ್ ದೊ ಟುಕಡಾ. ಮೈ ಕೈ ಹರಿದುಕೊಳ್ಳುವ ಹೊಡೆದಾಟವಿದೆ. ಅಪಸ್ವರದಲ್ಲಿ ಕೂಗುವ ಅಪರಾಧಿಗಳಿದ್ದಾರೆ. ಗಲ್ಲಿ ಗಲ್ಲಿ ತಿರುಗುವ ರೌಡಿಗಳಿದ್ದಾರೆ. ಮಚ್ಚು ಮಾತಾಗುತ್ತದೆ. ಮಾತು ಮಚ್ಚಾಗುತ್ತದೆ. ಇದೊಂಥರಾ ರೋಡ್ ಶೊ. ನಾಯಕ-ಖಳನಾಯಕರನ್ನು ಓಡಿಸಿಕೊಂಡು ಹೋಗುತ್ತಾನೆ. ಖಳನಾಯಕರು-ನಾಯಕನನ್ನು ಅಟ್ಟಿಸಿಕೊಂಡು ಬರುತ್ತಾರೆ...

ನಾಯಕಿ ಬಿಯಾಂಕಾ ದೇಸಾಯಿ ಎಷ್ಟು ಸಾಧ್ಯವೋ ಅಷ್ಟು ಕೆಟ್ಟದಾಗಿ ನಟಿಸಿದ್ದಾಳೆ. ಆಕೆಯನ್ನು ಕನ್ನಡಿಗರು ಒಪ್ಪಿಕೊಳ್ಳುವುದು ಕಷ್ಟ. ಅದು ಬಾಲಿವುಡ್‌ಗೆ ಮಾತ್ರ ಲಾಯಕ್ಕು. ಆ ಲುಕ್ಕು, ಥಳುಕು, ಬಳುಕು...ಬಾಯಿ ಬಿಟ್ಟರೆ ಮಾತ್ರ ಬೊಂಬಾಯಿ!

ಸೋನುಗೆ ಕನ್ನಡದಲ್ಲಿ ನಟಿಯಾಗಿ ನಿಲ್ಲಬಲ್ಲ ಎಲ್ಲ ಲಕ್ಷಣಗಳೂ ಇವೆ. ರಂಗಾಯಣ ರಘು ಎಂದಿನಂತೆ ಮೇಲ್‌ಸ್ತರದಲ್ಲಿ ಅರಚುತ್ತಾರೆ. ಆ ಪಾತ್ರ ಹತ್ತರಲ್ಲಿ ಇನ್ನೊಂದು. ಅವಿನಾಶ್, ಮಲ್ಲೇಶ್ ರೆಡ್ಡಿ, ಕಾಶಿ, ಸುಧಾ ಬೆಳವಾಡಿ ಮುಂತಾದವರಿಂದ ಕೆಲಸ ತೆಗೆಸಲು ನಿರ್ದೇಶಕರು ಹೆಣಗಾಡಿದ್ದಾರೆ. ವಿಲನ್ ವಿಶ್ವ ಕೂಗಾಟ ಮುಗಿಲು ಮುಟ್ಟುತ್ತದೆ. ಚಂದ್ರು ಖಳನ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ದುನಿಯಾದಿಂದ ಗಮನ ಸೆಳೆದ ಈ ನಟ ಪಕ್ಕಾ ಖಳನಾಗಿ ಮಿಂಚಿದ್ದಾರೆ.

ಸಂಭಾಷಣೆ ಸಹಿಸಿಕೊಳ್ಳಲು ಏಳು ಗುಂಡಿಗೆ ಬೇಕು. ಸಂಕಲನದಲ್ಲಿ ಹೊಸತನ ಇಲ್ಲ. ಕೆಲವು ಕಡೆ ಜನ- 'ಅರೆ ಈತ ಆಗಲೇ ಸತ್ತು ಹೋಗಿದ್ದಾನೆ, ಮತ್ತೆ ಯಾಕೆ ಬಂದ? ನಾಯಕ ಜೈಲಿಗೆ ಯಾವಾಗ ಹೋದ? ಇಲ್ಲಿ ಈ ದೇಹಕ್ಕೇನು ಕೆಲಸ...?" ಇಂಥ ಪ್ರಶ್ನಾರ್ಥಕ ಚಿಹ್ನೆಗೆ ಉತ್ತರ ಹುಡುಕುತ್ತಾರೆ. ಗುರುಕಿರಣ್ ಸಂಗೀತದಲ್ಲಿ ಆತ್ಮವಿದೆ, ಆದರೆ ಜೀವವಿಲ್ಲ. ರೀ ರೆಕಾರ್ಡಿಂಗ್ ಮಾತ್ರ ಕಿವಿಗೆ ಆಸಿಡ್ ಸುರಿಯುತ್ತದೆ. ಅದೇನೆ ಇರಲಿ, ರಾಮು ಮಾತ್ರ ಕಾಸಿನ ತೇರು ಎಳೆದಿದ್ದಾರೆ. ಅದ್ದೂರಿತನವನ್ನು ಮತ್ತೊಮ್ಮೆ ಮೆರೆದಿದ್ದಾರೆ.

ಒಟ್ಟಾರೆ ಇದು ಪಕ್ಕಾ ಪಡ್ಡೆ ಹುಡುಗರ ಸಿನಿಮಾ. ಹಾಗಂತ ಹಿಟ್ ಆಗಬಾರದು ಎಂದಲ್ಲ. ಮೆಂಟಲ್ ಮಂಜ, ನಂದನಂದಿತಕ್ಕೆ ಹೋಲಿಸಿದರೆ ಯಾವ ಆಂಗಲ್‌ನಲ್ಲೂ ಸೋಲುವುದಿಲ್ಲ. ಆ ಮಟ್ಟಿಗೆ ತುಷಾರ್ ರಂಗನಾಥ್ ಗೆದ್ದಿದ್ದಾರೆ. ಇನ್ನಷ್ಟು ಬೆವರು ಹರಿಸಿದರೆ ಒಳ್ಳೆಯ ನಿರ್ದೇಶಕ ಅನ್ನಿಸುವಂಥ ಸಿನಿಮಾ ಮಾಡುತ್ತಿದ್ದರು. ಮಾಡಿಲ್ಲ ಎನ್ನುವುದು ನಿಜ, ಮಾಡಲಿ ಎನ್ನುವುದು...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada