»   » ಯಾರೆ ನೀ ದೇವತೆ : ಪ್ರೇಕ್ಷಕ ಹಾಫ್ ಮರ್ಡರ್

ಯಾರೆ ನೀ ದೇವತೆ : ಪ್ರೇಕ್ಷಕ ಹಾಫ್ ಮರ್ಡರ್

By: *ಕಲಗಾರು, ದೇವಶೆಟ್ಟಿ
Subscribe to Filmibeat Kannada

ಸಿನಿಮಾದಲ್ಲಿ ಕೊಲೆಗಳ ಮೇಲೆ ಕೊಲೆ. ಇತ್ತ ಸಿನಿಮಾದಲ್ಲಿ ಇನ್ನೊಂದು ಸಿನಿಮಾ ಶೂಟಿಂಗ್ ನಡೆಯುತ್ತಿರುತ್ತದೆ. ಅತ್ತ ರಕ್ತ ತರ್ಪಣಕ್ಕೆ ದರ್ಪಣ ಹಿಡಿಯಲಾಗುತ್ತದೆ. ಕೊಲೆಗಾರನನ್ನು ಕಲೆಹಾಕಲು ಯಾರಿಂದಲೂ ಆಗುವು ದಿಲ್ಲ. ಆ ಪಾತಕ ಯಾರು ಎಂದು ಹುಡುಕುವ ಹೊತ್ತಿಗೆ ಪ್ರೇಕ್ಷಕನ ಹಾಫ್ ಮರ್ಡರ್ ಆಗಿರುತ್ತದೆ. ಅಲ್ಲಿಗೆ ಮೊದಲಾರ್ಧ ಮುಕ್ತಾಯ.

ಮುಂದಿನ ಹಂತದಲ್ಲಿ ಹಂತಕ ಮತ್ತೆ ರಕ್ತ ತರ್ಪಣಕ್ಕೆ ಸಜ್ಜಾಗುತ್ತಾನೆ. ಈ ಮಧ್ಯೆ ಒಂದಷ್ಟು ಲವ್ವು, ವಿಕ್ಸ್ ಆಕ್ಷನ್ನು, ಅನಾಸಿನ್ನು,ಹೊಡೆತ ತಿನ್ನು... ನಿರ್ದೇಶಕ ನಾಗೇಂದ್ರ ಅರಸ್ ಮೂರನೇ ಇನ್ನಿಂಗ್ಸ್‌ನಲ್ಲಿ ಶೂನ್ಯ ಸಂಪಾದನೆ ಮೂಲಕ ಬೌಂಡ್ರಿ ಲೈನ್‌ನಿಂದ ಹೊರಗುಳಿದಿದ್ದಾರೆ. ಮೊದಲ ಯತ್ನ 'ಹಾರ್ಟ್ ಬೀಟ್ಸ್", ದ್ವಿತೀಯ ಚುಂಬನ 'ರಾಕಿ" ಒಂದು ಹಂತಕ್ಕೆ ಚೆನ್ನಾಗಿಯೇ ಇತ್ತು. ಒಂದಷ್ಟು ವಿಷಯ, ಲವಲವಿಕೆ ಇತ್ತು.

ಆದರೆ 'ಯಾರೇ ನೀ ದೇವತೆ"=ಯಾರೋ... ಯಾರೋ...ಗೀಚಿ... ಹೋದಾ...! ನಾಯಕ ಕುಮಾರ್ ನಟನಾ'ದೇವತೆ"ಯನ್ನು ಒಲಿಸಿಕೊಳ್ಳಲು ಬೆವರು ಹರಿಸಿದ್ದಾರೆ. ಹಾವಭಾವದಲ್ಲಿ ಸೆಳೆತವಿಲ್ಲ. ನಕ್ಕರೆ ಅತ್ತಂತೆ, ಸುಮ್ಮನಿದ್ದರೆ ನಕ್ಕಂತೆ, ಅತ್ತರೆ ಸುಮ್ಮನಿದ್ದಂತೆ ಕಾಣುತ್ತಾರೆ. ಹೊಸ ಪರಿಚಯ ಎಂಬ ಕಾರಣಕ್ಕೆ ಸಹಿಸಿಕೊಳ್ಳಬೇಕು. ನಾಯಕಿ ಸಂಗೀತಾ ಕುಣಿಯಲು ನಿಂತರೆ- ಸ..ನೀ. 'ದಪ್ಪ"..ಮ..ಗ..ರಿ..ಸ... ಅಭಿನಯಕ್ಕೆ ಅಲ್ಲಿ 3ಅಡಿ 6ಅಡಿಯಷ್ಟೂ ಜಾಗವಿಲ್ಲ. ಗಿರಿ ದಿನೇಶ್, ಮೋಹನ್ ಜುನೇಜಾ, ಧರ್ಮ, ಮಳವಳ್ಳಿ ಸಾಯಿಕೃಷ್ಣ ಮೊದಲಾದವರಿಂದ ಕೆಲಸ ತೆಗೆಸಬಹುದಿತ್ತು. ನಿರ್ದೇಶಕರು ಹಾಗೆ ಮಾಡಿಲ್ಲ ಎನ್ನುವುದು ಕಾಮೆಂಟು, ಉಳಿದದ್ದು ಸೆಂಟಿಮೆಂ-ಟು ಒನ್ ಜಾ ಟು, ಟು ಟು ಜಾ ಟೂ ಟೂ ಟೂ...

ನಾಗೇಂದ್ರ ಅರಸ್ ಅವರೇ ತಾವು, ನಿರ್ದೇಶನಕ್ಕಿಂತ ಸಂಕಲನವನ್ನು ಚೆನ್ನಾಗಿ ಮಾಡುತ್ತೀರಿ. ನೀವು ಹೆಣೆದಿರುವ ಕತೆಯ ಎಳೆ ಚೆನ್ನಾಗಿದೆ. ಚಿತ್ರಕತೆ, ಸಂಭಾಷಣೆ, ನಿರೂಪಣೆ ಎಲ್ಲವೂ ಮುಖ್ಯವಾಗುತ್ತದೆ ಎನ್ನುವುದು ನಿಮ್ಮ ತುರ್ತು ಗಮನಕ್ಕೆ. ವೆಂಕಟ್ ನಾರಾಯಣ್ ಸಂಗೀತದಲ್ಲಿ ಎರಡು ಹಾಡುಗಳು ಚೆನ್ನಾಗಿವೆ. ಚಂದ್ರು ಕ್ಯಾಮೆರಾ ಕೆಲಸದ ಬಗ್ಗೆ ಕಾಮೆಂಟ್ ಮಾಡಿದರೆ ತಪ್ಪಾಗುತ್ತದೆ. ಇವೆಲ್ಲ ಚೆನ್ನಾಗಿದ್ದು ನಿಮ್ಮ ಕೆಲಸದಲ್ಲಿ ಹಲವು ಕಡೆ ಅಪಸ್ವರ ಕಾಣುತ್ತದೆ. ನೋಡಿ... ಇನ್ನೊಮ್ಮೆ ಹೀಗಾಗದಂತೆ ನೋಡಿಕೊಳ್ಳಿ... ಮುಂದಿನ ಚಿತ್ರಕ್ಕೆ ಆಲ್ ದಿ ಬೆಸ್ಟ್...! (ಸ್ನೇಹಸೇತು: ವಿಜಯ ಕರ್ನಾಟಕ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada