twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು 'ಸ್ಕೂಲ್ ಮಾಸ್ಟರ್' ನಮೋಸ್ತು ನಮೋಸ್ತುತೆ

    By *ಉದಯರವಿ
    |

    ವಿಷ್ಣು ಇಲ್ಲಿ 'ನಾಗರಹಾವಿನ'ರಾಮಾಚಾರಿ ಅಲ್ಲ ಚಾಮಯ್ಯ ಮೇಷ್ಟ್ರು! ಪೋಷಕರಿಗೆ, ವಿದ್ಯಾರ್ಥಿ ಸಮುದಾಯಕ್ಕೆ, ಸಮಾಜಕ್ಕೆ 'ಸ್ಕೂಲ್ ಮಾಸ್ಟರ್' ಒಂದು ಸಂದೇಶಾತ್ಮಕ ಚಿತ್ರ. ಹಳೆಯ 'ಸ್ಕೂಲ್ ಮಾಸ್ಟರ್'(1958) ಚಿತ್ರದ '' ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ... ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ ಮನೆಯ ಮಕ್ಕಳ ಐಕ್ಯಗಾನವ ಲಾಲಿಸೈ ಪರಿಪಾಲಿಸೈ'' ಎಂಬ ಸಾಲುಗಳಿಗೆ ಸಾಹಸ ಸಿಂಹ ಜೀವತುಂಬಿದ್ದಾರೆ. ಬಿಳಿಯ ಕ್ಯಾನ್ವಾಸ್ ಮೇಲೆ ಕಲಾವಿದನ ಕುಂಚ ಸರಾಗವಾಗಿ ಹರಿದಾಡಿದಂತೆ ವಿಷ್ಣು 'ಮಾಸ್ಟರ್' ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.

    ''ಪರೀಕ್ಷೆಯಲ್ಲಿ ಮಕ್ಕಳು ನೂರಕ್ಕೆ ನೂರು ಅಂಕ ಗಳಿಸಬೇಕು. ಒಂದೇ ಒಂದು ಮಾರ್ಕ್ಸ್ ಕಡಿಮೆ ಆದರೂ ಕೊಂದು ಹಾಕುತ್ತೇನೆ ಎಂದು ಹೇಳಿ ಪರೀಕ್ಷೆಯನ್ನು ಭಯದಲ್ಲಿ ಬರೆಯುವಂತೆ ಮಾಡಬೇಡಿ. ಮಕ್ಕಳ ಅತ್ಯಮೂಲ್ಯವಾದ ಬಾಲ್ಯವನ್ನು ಕಿತ್ತುಕೊಳ್ಳಬೇಡಿ. ಅವರ ಪಾಡಿಗೆ ಅವರನ್ನು ಆಡಲು ಬಿಟ್ಟುಬಿಡಿ'' ಎಂದು ಬೆದರಿಕೆ ಒಡ್ಡುವ ಪೋಷಕರಿಗೆ ಮಾಸ್ಟರ್ ಕ್ಲಾಸ್ ತಗೊಳ್ಳುತ್ತಾರೆ. ಪೋಷಕರ ಒತ್ತಡಕ್ಕೆ ಹೆದರಿದ ಎಷ್ಟೋ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಚಿತ್ರಣವನ್ನು ಪೋಷಕರ ಮುಂದಿಡುವ 'ಮಾಸ್ಟರ್' ಪೋಷಕರ ಕಣ್ತೆರೆಸುವಲ್ಲಿ ಗೆಲ್ಲುತ್ತಾರೆ.

    ವಿಷ್ಣು ಮತ್ತು ಸುಹಾಸಿನಿ ಶಾಲಾ ಶಿಕ್ಷಕರ ಪಾತ್ರದಲ್ಲಿ ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲ ದಂಪತಿಗಳಾಗಿ, ಮುದ್ದಿನ ಮಗಳ ಪೋಷಕರಾಗಿ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರನ್ನು ಬಂಧಿಸಿಬಿಟ್ಟಿದ್ದಾರೆ. ಮಕ್ಕಳಿಗೆ ಕೇವಲ ಪಾಠ ಹೇಳದೆ ಜೀವನ ಪಾಠವನ್ನು ಮಾಸ್ಟರ್ ಹೇಳಿಕೊಡುತ್ತಾರೆ. ಮುದ್ದಿನ ಮಗುವಿನ ತಂದೆಯಾಗಿ ನೆಚ್ಚಿನ ಮಡದಿಯ ಗಂಡನಾಗಿ ವಿಷ್ಣು ಅಭಿನಯ ಮತ್ತೆ ಮತ್ತೆ ಕಾಡುತ್ತದೆ.

    ಪೋಲೀಸರಿಗೆ ಸುಮಾರು ವರ್ಷಗಳಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಭೂಗತ ಪಾತಕಿ 'ಪಪ್ಪು' ಎಂಬಾತನನ್ನು ಪೊಲೀಸರು ಬಂಧಿಸುತ್ತಾರೆ. ಭೂಗತ ಪಾತಕಿಗೆ ಕೋರ್ಟ್ ನಲ್ಲಿ ಜೀವಾವಧಿ ಶಿಕ್ಷೆ ಜಾರಿಯಾಗುತ್ತದೆ. ಪಪ್ಪು ಗ್ಯಾಂಗ್ ಅವನನ್ನು ಬಿಡಿಸಿಕೊಳ್ಳಲು ಸಂಚು ರೂಪಿಸುತ್ತದೆ. ಗೃಹಸಚಿವರ ಮಗಳನ್ನು ಅಪಹರಣ ಮಾಡಲು ಸಂಚು ಹೂಡುತ್ತಾರೆ. ಆದರೆ ಗೃಹಸಚಿವರ ಮಗಳೆಂದು ತಪ್ಪಾಗಿ ತಿಳಿದು ಮಾಸ್ಟರ್ ಮಗಳನ್ನು ಅಪಹರಿಸುತ್ತಾರೆ.

    ಮಾಸ್ಟರ್ ಮತ್ತು ಗೃಹಸಚಿವರಿಗೆ ಭಾವಾ ಭಾಮೈದನ ಸಂಬಂಧ. ಈ ವಿಷಯ ಅಪಹರಣಕಾರರಿಗೂ ಗೊತ್ತಾಗುತ್ತದೆ. ಹಾಗಾಗಿ ಆ ಮಗುವನ್ನು ಒತ್ತೆಯಾಗಿಟ್ಟುಕೊಂಡು 'ಪಪ್ಪು'ವನ್ನು ಬಿಡುಗಡೆ ಮಾಡುವಂತೆ ಸರಕಾರಕ್ಕೆ ಒತ್ತಡ ಹೇರುತ್ತಾರೆ.ಆದರೆ ಸರಕಾರಕ್ಕೆ 'ಪಪ್ಪು' ನ ಬಂಧನವೇ ಪ್ರತಿಷ್ಠೆಯ ಪ್ರಶ್ನೆಯಾಗುತ್ತದೆ. ಮಗುವಿನ ಅಪಹರಣವನ್ನು ಕ್ಷುಲ್ಲಕವಾಗಿ ಪರಿಗಣಿಸುತ್ತದೆ. ಇದರ ಪರಿಣಾಮ ಅಪಹರಣಕಾರರಿಗೆ ಮಗು ಬಲಿಯಾಗುತ್ತದೆ.

    ತನ್ನ ಏಕಮಾತ್ರ ಮುದ್ದಿನ ಮಗಳು ಅಪಹರಣಕ್ಕೊಳಗಾದಾಗ ಶಾಂತವಾಗಿದ್ದ ಮಾಸ್ಟರ್ ಸಂಸಾರ ಅಲ್ಲೋಲಕಲ್ಲೋವಾಗುತ್ತದೆ. 'ಮಾಸ್ಟರ್' ದಂಪತಿಗಳು ಅನುಭವಿಸುವ ವೇದನೆ, ಪಡುವ ಪಾಡು ಹೇಳತೀರದು. ಅಪಹರಣಕಾರರಿಂದ ತನ್ನ ಮಗಳು ಇಂದು, ನಾಳೆ ಬಿಡುಗಡೆಯಾಗುತ್ತಾಳೆ ಎಂದು ಕಾದುನೋಡುವ ಮಾಸ್ಟರ್ ಗೆ ಕಡೆಗೆ ಉಳಿಯುವುದು ವಿಷಾದ ಮಾತ್ರ. ಅಪಹರಣಕಾರರು ಮಾಸ್ಟರ್ ರ ಮುಗ್ಧ ಕನಸನ್ನು ಚಿವುಟಿ ಹಾಕುತ್ತಾರೆ. ಮಗಳ ಸಾವಿನ ಸುದ್ದಿಯನ್ನು ಹೆಂಡತಿಗೆ ಗೊತ್ತಾಗದಂತೆ ಮಾಸ್ಟರ್ ಕೊನೆಯವರೆಗೂ ನಿಭಾಯಿಸಿರುವ ರೀತಿ ಪ್ರೇಕ್ಷಕರನ್ನು ಕಣ್ಣೀರಲ್ಲಿ ತೋಯಿಸುತ್ತದೆ.

    ಗೃಹಸಚಿವರಾಗಿ ಅವಿನಾಶ್ ಅಭಿನಯ ಗಮನಸೆಳೆಯುತ್ತದೆ. ಪೊಲೀಸ್ ಅಧಿಕಾರಿಯಾಗಿ ದೇವರಾಜ್ ಅಭಿನಯ ಡೈನಮಿಕ್ ಆಗಿದೆ. ಸುಹಾಸಿನಿ ಅಭಿನಯ ಮತ್ತೊಮ್ಮೆ ಬಂಧನ ಚಿತ್ರವನ್ನುನೆನಪಿಸುವಂತಿದೆ. ಮಗಳ ಸಾವು, ಚಿತೆಗೆ ಬೆಂಕಿಯಿಡುವ ದೃಶ್ಯಗಳು ಮನಕಲಕುವಂತಿವೆ. ಅಲ್ಲೂ ಹೆಂಡತಿಗೆ ಮಾಸ್ಟರ್ ಸತ್ಯವನ್ನು ಹೇಳುವುದಿಲ್ಲ. ಯಾರದೋ ಮಗು ಅದಕ್ಕೆ ತಂದೆತಾಯಿ ಇಲ್ಲ ನಾನೇ ಎಂಬಂತೆ ಹೇಳಿ ಚಿತೆಗೆ ಅಗ್ನಿಸ್ಪರ್ಶ ಮಾಡುವ ದೃಶ್ಯವಂತು ಹೃದಯ ಹಿಂಡುತ್ತದೆ.

    ಕಡೆಗೆ ಪಾತಕಿಗಳ ವಿರುದ್ಧ ಮಾಸ್ಟರ್ ತಿರುಗಿಬೀಳುತ್ತಾರೆ. ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ತನ್ನ ಮಗಳ ಸಾವಿಗೆ ಕಾರಣರಾದ ಪಾತಕಿಗಳನ್ನು ಮಾಸ್ಟರ್ ಕೊಂದು ಹಾಕುತ್ತಾರೆ. ಸೇಡಿನ ಕಿಚ್ಚು ತಣ್ಣಗಾದ ನಂತರ ಮಾಸ್ಟರ್ ಸ್ವತಃ ಶರಣಾಗುತ್ತಾರೆ. ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತಾರೆ. ಕಡೆಗೆ ತಾನು ಮಾಡಿದ ತಪ್ಪ್ಪನ್ನುಯಾರೂ ಮಾಡಬೇಡಿ. ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪು ಎಂಬ ಸಂದೇಶವನ್ನು ನೀಡುತ್ತಾರೆ. ಒಂದು ಮಾತಂತೂ ಸತ್ಯ 'ಸ್ಕೂಲ್ ಮಾಸ್ಟರ್' ಚಿತ್ರ ಎಲ್ಲೂ ಬೇಸರ ಮೂಡಿಸುವುದಿಲ್ಲ.

    ವಿ.ಶ್ರೀಧರ್ ಅವರ ಸಂಗೀತ ಚಿತ್ರದ ಹೈಲೈಟ್. ಪ್ರೇಕ್ಷಕರ ಭಾವನೆಗಳನ್ನು ಮೀಟುವಲ್ಲಿ ಯಶಸ್ವಿಯಾಗಿದ್ದಾರೆ ಶ್ರೀಧರ್. ಕತೆ, ಚಿತ್ರಕತೆ, ಸಂಭಾಷಣೆ, ಛಾಯಾಗ್ರಹಣದ ಜೊತೆಗೆ ನಿರ್ದೇಶನದ ಜಬಾಬ್ದಾರಿಯನ್ನು ಹೊತ್ತಿರುವ ದಿನೇಶ್ ಬಾಬು ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪಪ್ಪು ಪಾತ್ರದಲ್ಲಿ ಮುಕೇಶ್ ರಿಷಿ ಗಮನ ಸೆಳೆಯುತ್ತಾರೆ. ಬೇಬಿ ಬೃಂದಾ, ಬೇಬಿ ಪ್ರೇರಣಾ ಚಿತ್ರಕ್ಕೆ ಎರಡು ಕಣ್ಣುಗಳಿದ್ದಂತೆ.

    ಇಂದಿನ ಮಕ್ಕಳು ಕಂಪ್ಯೂಟರ್ ಗೇಮ್ಸ್ ಬಲಿಯಾಗಿರುವ ಬಗ್ಗೆಯೂ ಚಿತ್ರದಲ್ಲಿ ಸಂದೇಶವಿದೆ. ಕ್ರೀಡೆ ಎಂದರೆ ದೇಹಕ್ಕೆ, ಮನಸಿಗೆ ಖುಷಿ ಕೊಡುವಂತಿರಬೇಕೆ ಎಂಬ ಪ್ರಬುದ್ಧ ಹೇಳಿಕೆಗಳು ಚಿತ್ರದಲ್ಲಿ ಧಾರಾಳವಾಗಿ ಸಿಗುತ್ತವೆ. ಕುಂಟೋ ಬಿಲ್ಲೆ, ಲಗೋರಿ, ಕಣ್ಣಾಮುಚ್ಚಾಲೆ, ಪಗಡೆ, ಸೂರ್ ಚಂಡು, ಜಿಲ್ಲಿದಾಂಡಿನಂತಹ ಆಟಗಳ ಬಗ್ಗೆ ಹೆಣೆದ ಹಾಡು ನೋಡಲು ,ಕೇಳಲು ಚೆಂದಕಿಂತ ಚೆಂದ. ಕೇರಳದ ಅದ್ಭುತ ಕಲೆ 'ಕಳರಿ ಪಯಟ್ಟು'ವನ್ನು ಚಿತ್ರದಲ್ಲಿ ಬಳಸಿಕೊಂಡಿರುವ ರೀತಿ ನಿಜಕ್ಕೂ ಸೋಜಿಗ ಮೂಡಿಸಿತ್ತದೆ. ಬಾರ್ ಗೆ ಹೋಗುವ ಸ್ಕೂಲ್ ಮಾಸ್ಟರ್ ಗ್ಲಾಸಿಗೆ ವಿಸ್ಕಿ ಹಾಕಿಸಿಕೊಂಡು ಕುಡಿಯದೆ ಚೆಲ್ಲುತ್ತಾರೆ.

    ಚಿತ್ರದಲ್ಲಿ ಒಳ್ಳೆಯ ಕಥೆಯಿದೆ, ಉತ್ತಮ ಸಂದೇಶವಿದೆ. ಕತೆಗೆ ತಕ್ಕಂತೆ ವೇಗವಿದೆ. ಸಂಗೀತ, ಛಾಯಾಗ್ರಹಣ ಒಂದಕ್ಕೊಂದು ಜುಗಲ್ ಬಂಧಿಯಾಗಿವೆ. ನಿರ್ಮಾಪಕ ಸಿಆರ್ ಮನೋಹರ್ ಗುಲಾಬಿ ಹೂಗಳ ವ್ಯಾಪಾರಿ. ಇಲ್ಲಿಯೂ ಅವರು ಗುಲಾಬಿ ಹೂವಿನಷ್ಟೇ ಸುಂದರವಾಗಿ ತಮ್ಮ ಚಿತ್ರವನ್ನು ನಿರ್ಮಿಸಿದ್ದಾರೆ. ವಿಷ್ಣು ರೂಪದಲ್ಲಿ ಚಾಮಯ್ಯ ಮೇಷ್ಟ್ರು ಕಣ್ಮುಂದೆ ನಿಲ್ಲುತ್ತಾರೆ.

    Friday, January 22, 2010, 18:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X