»   » ಅತ್ತೆ ಮೇಲಿನ ಕೋಪವನ್ನು ಕೊತ್ತಿ (ಬೆಕ್ಕು) ಮೇಲೆ ತೀರಿಸಿಕೊಂಡರಂತೆ...

ಅತ್ತೆ ಮೇಲಿನ ಕೋಪವನ್ನು ಕೊತ್ತಿ (ಬೆಕ್ಕು) ಮೇಲೆ ತೀರಿಸಿಕೊಂಡರಂತೆ...

Posted By: Staff
Subscribe to Filmibeat Kannada

ಖ್ಯಾತ ಮನೋವೈದ್ಯನ ಮಗಳು, ಆಕೆಯ ಪ್ರೇಮಿ ಹಾಗೂ ವೈದ್ಯನಿಗೆ ಮಗಳ ಮೇಲಿರುವ ಅತಿಯಾದ ಮಮಕಾರ ಅರ್ಥಾತ್‌ ಹುಚ್ಚು ಪ್ರೀತಿಯನ್ನು ಹಿಡಿದು ಹೆಣೆದ ಅಸಂಬದ್ಧ ಕಥೆ ಅದಕ್ಕೆ ಬಾಬು ನೀಡಿರುವ ಸೊರಗಿದ ನಿರ್ದೇಶನ ಪ್ರೇಕ್ಷಕರನ್ನು ನರಳಿಸುವಲ್ಲಿ ಯಶಸ್ವಿಯಾಗಿದೆ.

ಐದು ನಿಮಿಷದ ಒಂದು ಸುಂದರ ಸಣ್ಣಕಥೆಯನ್ನು ಎರಡೂವರೆ ಗಂಟೆಗೆ ಎಳೆಯುವ ಯತ್ನದಲ್ಲಿ ಆಗಿರುವುದೆಲ್ಲವೂ ಎಡವಟ್ಟೆ. ಚಿಟ್ಟೆಯ ಫಸ್ಟ್‌ ಹಾಫ್‌ ಚಿತ್ರದ ರೀಮೇಕ್‌ನಂತಿದ್ದರೆ, ಸೆಕೆಂಡ್‌ ಹಾಫ್‌ ಲಾಲಿಯ ಹುರುಳನ್ನು ಕಲಸುಮೇಲೋಗರ ಮಾಡಿದಂತನಿಸುತ್ತದೆ.

ಆರಂಭದ ಪ್ರೇಮ ಕಥೆ, ಮಧ್ಯದ ಲವ್‌ಲವಿಕೆ ಆನಂತರ ಮುಕ್ತಾಯ ಮಾಡುವುದು ಹೇಗೆ ಎಂಬ ಜಿಜ್ಞಾಸೆಯಿಂದ ಚಿತ್ರ ಸೊರಗಿದೆ. ಅಮೃತವರ್ಷಿಣಿ, ಲಾಲಿ, ಸುಪ್ರಭಾತದಂತಹ ಉತ್ತಮ ಚಿತ್ರ ನೀಡಿದ ಬಾಬು ಹೀಗೇಕಾದರು ಎಂದು ಚಿತ್ರ ನೋಡಿದ ಪ್ರೇಕ್ಷಕರಿಗನಿಸಿದರೆ ಅಚ್ಚರಿಯಿಲ್ಲ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಎಲ್ಲದರ ಹೊಣೆ ಹೊತ್ತ ದಿನೇಶ್‌ಬಾಬುಗೆ ಭಾರ ಹೆಚ್ಚಾಗಿ ಹೀಗಾಯಿತೋ, ಇಲ್ಲ ಛೇಂಬರ್‌ ವಿಧಿಸಿರುವ ಬಹಿಷ್ಕಾರ ಮಂಕಾಗಿಸಿತೋ ಗೊತ್ತಿಲ್ಲ.

ಕಾಲೇಜು ಕ್ಯಾಂಪಸ್‌, ಲವ್‌ ಅಟ್‌ ಫಸ್ಟ್‌ ಸೈಟ್‌, ಹುಡುಗಿಯರಿಗೆ ಹಾಯ್‌ ಎನ್ನಲೂ ಪರದಾಡುವ ನಾಯಕ (ಅನಿರುದ್ಧ್‌) ಪ್ರಣಯದ ಪಕ್ಷಿಯಾಗುವ ನಡುವೆ ನಡೆವ ಪ್ರಣಯದ ಫಜೀತಿಗಳು ಮಾತ್ರ ನೋಡಬಲ್‌. ಸಂಪತ್ತಿಗೆ ಸವಾಲ್‌ ಮಂಜುಳಾರಂತೆ ಚುರುಕು ಅಭಿನಯದಲ್ಲಿ ಛಾಯಾಸಿಂಗ್‌, ಮುಗ್ಧ ಅಭಿನಯದಲ್ಲಿ ಅನಿರುದ್ಧ್‌ ಮಿಂಚಿದ್ದಾರೆ ಎಂಬುದು ಸಮಾಧಾನ ತರುವ ಅಂಶ.

ಹುಚ್ಚು ಮಮಕಾರದ ತಂದೆಯ ಪಾತ್ರದಲ್ಲಿ ಅನಂತ್‌ನಾಗ್‌ ತಮ್ಮ ಎಂದಿನ ಸಹಜ ಅಭಿನಯ ಮೆರೆದಿದ್ದಾರೆ. ಉಳಿದ ಪಾತ್ರವರ್ಗದಲ್ಲಿ ಉಮೇಶ್‌, ದ್ವಾರಕೀಶ್‌, ಅವಿನಾಶ್‌, ರಮೇಶ್‌ ಪಂಡಿತ್‌, ಚಿತ್ರಾಶೆಣೈ, ಮನದೀಪ್‌ ರಾಯ್‌, ವಿಜಯಲಕ್ಷ್ಮೀ ಸಿಂಗ್‌ ಇದ್ದರೂ ನಿರ್ದೇಶಕರಿಗೆ ಪಾತ್ರಗಳನ್ನು ದುಡಿಸಿಕೊಳ್ಳಲು ಬಂದಿಲ್ಲ. ಹೀಗಾಗಿ ಇಲ್ಲಿ ಯಾವ ಪಾತ್ರಕ್ಕೂ ದಮ್ಮಿಲ್ಲ.

ಕೆಲವು ಸನ್ನಿವೇಶಗಳಂತೂ ತುಂಬಾ ಬಾಲಿಶವಾಗಿವೆ. ಚಿತ್ರದ ಅಂತ್ಯವಂತೂ ಅರ್ಥಹೀನವಾಗಿದೆ. ಮನೋಹರ್‌ ಸಂಗೀತ ನಿರ್ದೇಶನದಲ್ಲಿ ಅಶ್ವತ್ಥ್‌ ಹಾಡಿರುವ ಹಾಡುಗಳೂ ಕೇಳಬಲ್‌ ಏನಲ್ಲ. 'ಯಾರಿಗೂ ಹೇಳೋಣು ಬ್ಯಾಡ" ಗೀತೆ ಬೇಸತ್ತು ಮಲಗಿದ ಪ್ರೇಕ್ಷಕರನ್ನು ಬಡಿದೆಬ್ಬಿಸಿದರೆ, ಉಳಿದ ಗೀತೆಗಳು ಕಷ್ಟ ಪಟ್ಟು ಎದ್ದುಕೂತಿರುವವರನ್ನೂ ಮತ್ತೆ ಮಲಗಿಸುತ್ತವೆ.

ಒಟ್ಟಾರೆಯಾಗಿ ಚಿಟ್ಟೆಯ ಸಾಮರ್ಥ್ಯವೇ ಅಷ್ಟು. ಅದು ಹೆಚ್ಚು ಮೇಲೆ ಹಾರಲಾರದು. 'ಚಿತ್ರಾ" ಚಿತ್ರ ನೋಡದಿದ್ದವರು ಚಿಟ್ಟೆಯ ಮೊದಲರ್ಧ ನೋಡಲು ಅಡ್ಡಿಯಿಲ್ಲ. ಇಂಟರ್‌ವಲ್‌ ನಂತರವೂ ಚಿತ್ರಮಂದಿರದಲ್ಲಿ ಕೂತಿದ್ದರೆ, ಅವರಿಗಿಂತ ತಾಳ್ಮೆ ಇರುವ ವ್ಯಕ್ತಿ ಪ್ರಪಂಚದಲ್ಲಿ ಬೇರಿಲ್ಲ.

ಬಾಲಂಗೋಸಿ : ಚಿಟ್ಟೆ ನೋಡಿಕೊಂಡು ಚಿತ್ರಮಂದಿರದಿಂದ ಹೊರಬರುತ್ತಿದ್ದ ಪ್ರೇಕ್ಷಕರೊಬ್ಬರು ಹೇಳಿದ್ದು- ಸದ್ಯ ಇನ್ನಾರು ತಿಂಗಳು ಬಾಬು ನಮಗೆ ತೊಂದರೆ ಕೊಡಲ್ಲ. ಛೇಂಬರ್‌ ಅವರಿಗೆ ಒಂದೆರಡು ವರ್ಷ ನಿರ್ದೇಶನ ಮಾಡದಂತೆ ಬಹಿಷ್ಕಾರ ಹಾಕಿದ್ರೇ ಚೆನ್ನಾಗಿರುತ್ತಿತ್ತು.

Read more about: kannada, sandalwood, film
English summary
Film review Chitte kannada cinema, dinish babu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada