For Quick Alerts
  ALLOW NOTIFICATIONS  
  For Daily Alerts

  ವಾಮಾಚಾರದ ವಿರುದ್ದ ತಿರುಗಿಬಿದ್ದ 'ಜಯಮ್ಮನ ಮಗ'

  By ಬಾಲರಾಜ್ ತಂತ್ರಿ
  |

  ಚಿತ್ರ ಬಿಡುಗಡೆಗೆ ಮುನ್ನ ಭೀಮನ ಅಮವಾಸ್ಯೆಯ ದಿನ ದುನಿಯಾ ವಿಜಯ್ ಬೆಂಗಳೂರಿನ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ಪ್ರತ್ಯಂಗಿರಾ ಹೋಮ ನಡೆಸಿದ್ದರು. ಜಯಮ್ಮನ ಮಗ ಚಿತ್ರದ ಕಥೆ, ಕ್ಲೈಮ್ಯಾಕ್ಸ್ ನಲ್ಲಿ ವಿಜಯ್ ಗೆಟ್ ಅಪ್ ನೋಡಿದರೆ ಬಹುಷ: ಈ ಹೋಮದ ಅವಶ್ಯಕತೆ ಇದೆ ಎಂದೆನಿಸಿದರೆ ತಪ್ಪಾಗುವುದಿಲ್ಲ.

  ಮಾಟ, ಮಂತ್ರ, ವಾಮಾಚಾರ ಮತ್ತು ಅಥರ್ವಣ ಶಾಸ್ತ್ರ ಪ್ರಯೋಗಗಳು ಸಮಾಜವನ್ನು ಹೇಗೆ ದಿಕ್ಕು ತಪ್ಪಿಸುತ್ತದೆ ಎನ್ನುವುದಕ್ಕೆ ಮತ್ತು ಅದರದೇ ಆದ ಶೈಲಿಯಲ್ಲಿ ಅವುಗಳ ವಿರುದ್ದ ಪ್ರಯೋಗ ನಡೆಸಿ, ಜೊತೆಗೆ ಸ್ವಲ್ಪ ಮಸಾಲ ಬೆರೆಸಿ ತೆರೆ ಮೇಲೆ ಬಂದ ವಿಭಿನ್ನ ಮತ್ತು ವಿಶಿಷ್ಟ ಚಿತ್ರ.

  Rating:
  4.0/5

  ಸುಮಾರು 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದು ಬಿಡುಗಡೆಯಾದ ಜಯಮ್ಮನ ಮಗ ಚಿತ್ರ "ನನ್ನ ಅಚ್ಚುಮೆಚ್ಚಿನ ನಟ" ಶೀರ್ಷಿಕೆಯೊಂದಿಗೆ ಸ್ಟೈಲ್ ಕಿಂಗ್ ರಜನೀಕಾಂತ್ ಭಾವಚಿತ್ರದೊಂದಿಗೆ, ಅಭಿಮಾನಿಗಳ ಶಿಳ್ಳೆಯೊಂದಿಗೆ ಆರಂಭವಾಗುತ್ತದೆ.

  ದುಷ್ಟ ಶಕ್ತಿಯು ವಿರುದ್ದ ದೈವ ಶಕ್ತಿಯ, ಬಲಿ ಪೀಠದ ವಿರುದ್ದ ದೈವ ಪೀಠದ ಪ್ರತೀಕಾರವೇ ಚಿತ್ರದ ಕಥಾಹಂದರ. ದೈವ ಶಕ್ತಿಯ ಮುಂದೆ ವಾಮಾಚಾರದ ಪ್ರಯೋಗಕ್ಕೆ ಯಶಸ್ಸು ಇಲ್ಲ ಎನ್ನುವುದೇ ಚಿತ್ರದ ಒಟ್ಟಾರೆ ಕಥೆ. ಮೊದಲಾರ್ಥ ಕಾಮಿಡಿ, ಫೈಟ್, ಡ್ಯಾನ್ಸ್ ಮೂಲಕ ಸಾಗಿದರೂ ಚಿತ್ರಕ್ಕೆ ಫುಲ್ ಥ್ರಿಲ್ ಸಿಗುವುದೇ ಮಧ್ಯಂತರದ ನಂತರ.

  ಚಿತ್ರದ ಪ್ಲಸ್, ಮೈನಸ್ ಪಾಯಿಂಟ್ ಏನು? ಸ್ಲೈಡಿನಲ್ಲಿ..

  ಜಯಮ್ಮನ ಮಗ

  ಜಯಮ್ಮನ ಮಗ

  ಚಿತ್ರದ ಚಿತ್ರೀಕರಣ ಹೆಚ್ಚಾಗಿ ಸಾಗುವುದೇ ಚಂದಕಧಾಮಸ್ವಾಮಿ ದೇವಾಲಯ, ಆನೇಕಲ್ ಮತ್ತು ಬನ್ನೇರುಘಟ್ಟ ಪ್ರದೇಶದಲ್ಲಿ. ವಾಮಾಚಾರಕ್ಕೆ ಬಳಸುವ ಸೆಟ್ಟನ್ನು ಅಧ್ಭುತವಾಗಿ ನಿರ್ಮಿಸಲಾಗಿದ್ದು, ಕಲಾ ನಿರ್ದೇಶಕರಿಗೆ ಫುಲ್ ಮಾರ್ಕ್ ಕೊಡಬಹುದು.

  ಚಿತ್ರದ ನಿರೂಪಣೆ

  ಚಿತ್ರದ ನಿರೂಪಣೆ

  ಚಿತ್ರದ ಕಥೆ, ಚಿತ್ರಕಥೆ, ನಿರೂಪಣೆ ಬಿಗಿಯಾಗಿದ್ದು ನಿರ್ದೇಶಕ ವಿಕಾಸ್ (ಯೋಗರಾಜ್ ಭಟ್ರ ಶಿಷ್ಯ) ಬೆನ್ನು ತಟ್ಟಲೇ ಬೇಕು. ಹಾಸ್ಯ, ಡ್ಯಾನ್ಸ್, ಸಾಹಸ ದೃಶ್ಯಗಳನ್ನು ಹದವಾಗಿ, ಹಿತವಾಗಿ ಬಳಸಿ ಚಿತ್ರ ಎಲ್ಲೂ ಟ್ರ್ಯಾಕ್ ತಪ್ಪದಂತೆ ಅದಕ್ಕಿಂತ ಹೆಚ್ಚಾಗಿ ಪ್ರೇಕ್ಷಕ ಆಕಳಿಸದಂತೆ ಕೊಂಡೊಯ್ಯುವಲ್ಲಿ ವಿಕಾಸ್ ಸಮರ್ಥವಾಗಿ ಬೆನ್ನು ಕೊಟ್ಟಿದ್ದಾರೆ.

  ಕ್ಯಾಮಾರಾ ವರ್ಕ್

  ಕ್ಯಾಮಾರಾ ವರ್ಕ್

  ಸುಜ್ಞಾನ್ ಅವರ ಕ್ಯಾಮರಾ ಕೈಚಳಕ ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್. ಕಾಡಿನ ದೃಶ್ಯ ಮತ್ತು ಸಾಹಸ ದೃಶ್ಯಗಳನ್ನು ಸುಜ್ಞಾನ್ ಉತ್ತಮವಾಗಿ ಸೆರೆ ಹಿಡಿದಿದ್ದಾರೆ. ಕ್ಲೋಸ್ ಮತ್ತು ಲಾಂಗ್ ಶಾಟ್ ನಲ್ಲಿ ಕ್ಯಾಮಾರಾ ಕೆಲಸ ಚೆನ್ನಾಗಿ ಮೂಡಿ ಬಂದಿದೆ.

  ಸಂಗೀತ ಮತ್ತು ಹಿನ್ನಲೆ ಸಂಗೀತ

  ಸಂಗೀತ ಮತ್ತು ಹಿನ್ನಲೆ ಸಂಗೀತ

  ಚಿತ್ರದ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಎಂದರೆ ಈ ವಿಭಾಗ. ಕೆಲವೊಂದು ಕಡೆ ಹಿನ್ನಲೆ ಸಂಗೀತದ ಅಬ್ಬರದಲ್ಲಿ ಸಂಭಾಷಣೆಯೇ ಕೇಳದಂತಾಗುತ್ತದೆ. ಚಿತ್ರಮಂದಿರದಿಂದ ಹೊರ ಬಂದ ಮೇಲೂ ಯಾವ ಹಾಡು ಮನಸ್ಸಿನಲ್ಲಿ ಉಳಿಯುವುದಿಲ್ಲ ಎಂದರೆ ಅರ್ಜುನ್ ಜನ್ಯಾ ಅನ್ಯಥಾ ಭಾವಿಸಬಾರದು. ಆದರೂ ಒಟ್ಟಾರೆ ಚಿತ್ರದ ಬ್ಯಾಕ್ ಗ್ರೌಂಡ್ ಸಂಗೀತ ಪ್ರೇಕ್ಷಕರ ಕುತೂಹಲವನ್ನು ದ್ವಿಗುಣಗೊಳಿಸುತ್ತದೆ.

  ಸಾಹಸ ದೃಶ್ಯಗಳು, ಸಂಭಾಷಣೆ

  ಸಾಹಸ ದೃಶ್ಯಗಳು, ಸಂಭಾಷಣೆ

  ಮೂವರು ಸ್ಟಂಟ್ ಮಾಸ್ಟರುಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಕೆ.ಡಿ.ವೆಂಕಟೇಶ್, ಮಾಸ್ ಮಾದ ಮತ್ತು ವಿಜಯ್ ಚೆನ್ನೈ. 360 ಡಿಗ್ರಿ crescent ಸಾಹಸ ಸನ್ನಿವೇಶಗಳು ಮೈನವೀರೇಳೆಸುತ್ತವೆ. ಚಿಂತನ್ ಅವರ ಸಂಭಾಷಣೆ ಚಿತ್ರಕಥೆಗೆ ಪೂರಕವಾಗಿದೆ.

  ಕಲಾವಿದರ ಪರ್ಫಾರ್ಮೆನ್ಸ್

  ಕಲಾವಿದರ ಪರ್ಫಾರ್ಮೆನ್ಸ್

  ಚಿತ್ರದಲ್ಲಿ ಬಂದು ಹೋಗುವ ಎಲ್ಲಾ ಕಲಾವಿದರೂ ತಮ್ಮ ತಮ್ಮ ಪಾತ್ರವನ್ನು ಸುಸೂತ್ರವಾಗಿ ಮಾಡಿಕೊಂಡು ಹೋಗಿದ್ದಾರೆ. ಚಿತ್ರದಲ್ಲಿ ಭಗವಂತ ಫೋಟೋಗಾಫರ್ ಪಾತ್ರಧಾರಿ ರಂಗಾಯಣ ರಘು ಅವರದ್ದು ಒಮ್ಮೊಮ್ಮೆ ಓವರ್ ಆಕ್ಟಿಂಗ್ ಎನಿಸಿದರೂ ಸಹಿಸಿಕೊಳ್ಳ ಬಹುದು. ಚಿತ್ರದ ನಾಯಕಿ ದಿವ್ಯ (ಡಾ.ಭಾರತಿ) ನಟನೆ ಅಚ್ಚುಕಟ್ಟು. ತಾಯಿಯ ಪಾತ್ರದಲ್ಲಿ ನಟಿಸಿದ ರಾಜ್ಯ ಪಶಸ್ತಿ ನಟಿ ಕಲ್ಯಾಣಿ ಅವರ ನಟನೆಗೆ ಫುಲ್ ಮಾರ್ಕ್, ಇನ್ನು ತಂದೆ ಪಾತ್ರದಲ್ಲಿನ ಮುನಿಯ ನಟನೆ ಕೆಮ್ಮಂಗಿಲ್ಲ. ದೇವಾಲಯದ ಸ್ವಾಮಿಯ ಪಾತ್ರದಲ್ಲಿ ನಟಿಸಿದ ಮಾಜಿ ಶಾಸಕ ನೆ.ಲ.ನರೇಂದ್ರಬಾಬು ನಟನೆ ಅವರಿಗೆ ಕಲಾ ಜಗತ್ತಿನಲ್ಲಿ ಉತ್ತಮ ಭವಿಷ್ಯ ಇದೆ ಅನ್ನಬಹುದು. ನಾಯಕಿಯ ಮಾವನ ಪಾತ್ರದಲ್ಲಿ ನಟಿಸಿದ ಹೊನ್ನವಳ್ಳಿ ಕೃಷ್ಣ ಅವರ ನಟನೆ ಸಲೀಸು.

  ಹೀರೋ ವಿಜಯ್

  ಹೀರೋ ವಿಜಯ್

  ಇಲ್ಲಿ ಹೀರೋ ಮತ್ತು ವಿಲನ್ ಇಬ್ಬರೂ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಚಿತ್ರದ್ಲಲಿನ ನಾಗ ಪಾತ್ರದ ಮೂಲಕ ದುನಿಯಾ ವಿಜಯ್ ಪರಕಾಯ ಪ್ರವೇಶ ಮಾಡಿದ್ದಾರೆ. ಸಾಹಸ ಮತ್ತು ಪ್ರತೀಕಾರ ತೆಗೆದುಕೊಳ್ಳುವ ಪಾತ್ರದಲ್ಲಂತೂ ವಿಜಯ್ ತಾನೊಬ್ಬ ಎಂಥಹ ಕಲಾವಿದ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ಅಷ್ಟ ದುರ್ಗೆಯ ಪಾತ್ರದಲ್ಲಿನ ಅವರ ನಟನೆ ಸೂಪರ್.

  ವಿಲನ್ ಉದಯ್

  ವಿಲನ್ ಉದಯ್

  ಎಲ್ಲಕ್ಕಿಂತ ಹೆಚ್ಚಾಗಿ ಲಾಸ್ಟ್ ಬಟ್ ನಾಟ್ ಲೀಸ್ಟ್ ಎನ್ನುವ ಹಾಗೆ ಚಿತ್ರದಲ್ಲಿನ ರಕ್ತಾಕ್ಷ (ವಿಲನ್) ಪಾತ್ರಧಾರಿ ಉದಯ್ ಅವರ ನಟನೆ mind blowing. ಕನ್ನಡಕ್ಕೆ ಮತ್ತೊಬ್ಬ ಖಳನಾಯಕ ಲಭಿಸಿದ್ದಾನೆ. ಅಹಂ ರಕ್ತಾಕ್ಷ: ಎಂದು ತೆರೆ ಮೇಲೆ ಅಬ್ಬರಿಸುತ್ತಿದ್ದರೆ ಪ್ರೇಕ್ಷಕ ಅವರ ನಟನೆಗೆ ಫುಲ್ ಫಿದಾ ಆಗುತ್ತಾನೆ.

  Verdict

  Verdict

  ದುನಿಯಾದ ಸಮಸ್ತ ತಾಯಂದಿರು ಅರ್ಪಿಸುವ, ದುನಿಯಾ ಟಾಕೀಸಿನ ಚೊಚ್ಚಲ ಕಾಣಿಕೆ 'ಜಯಮ್ಮನ ಮಗ' ಚಿತ್ರ ಒಂದು ಉತ್ತಮ ಪ್ರಯತ್ನ. ಚಿತ್ರದಲ್ಲಿ ಕೆಲವೊಂದು ಸಿಲ್ಲಿ ದೃಶ್ಯಗಳಿದ್ದರೂ ಮುಲಾಜಿಲ್ಲದೇ ಚಿತ್ರ ನೋಡಲಡ್ಡಿಲ್ಲ. ಚೆನ್ನೈ ಎಕ್ಸ್ ಪ್ರೆಸ್, ತಲೈವಾ ಚಿತ್ರದ ಬಗ್ಗೆ ಮಾತು, ಚರ್ಚೆ, ಟಿಪ್ಪಣಿಗಳು ಸಾಕು ಜಯಮ್ಮನ ಚಿತ್ರ ಒಮ್ಮೆ ನೋಡಿ, ಚಿತ್ರತಂಡದ ಬೆನ್ನುತಟ್ಟಿ.

  English summary
  Duniya Vijay starer "Jayammana Maga' released in 120 theaters today. Film get good opening throught the state. Film is all about black magic and kashmora theme. Revenge saga between Dushta Shakti and Daiva Shakti. Film is worth watching. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X