»   » ವಿಮರ್ಶೆ : ಮೈನಸ್ ಮೈನಸ್ '+' ಆದ್ರೆ '-' ಮೈನಸ್.!

ವಿಮರ್ಶೆ : ಮೈನಸ್ ಮೈನಸ್ '+' ಆದ್ರೆ '-' ಮೈನಸ್.!

By: ಹರಾ
Subscribe to Filmibeat Kannada

'ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು' ಅನ್ನೋದು ಹಳೇ ಮಾತು. ಮೈನಸ್ ನ ಮೈನಸ್ ನಿಂದಲೇ ಇರಿದು 'ಪ್ಲಸ್' ಆಗ್ಬೇಕು ಅನ್ನೋದು ಲೇಟೆಸ್ಟ್ ಮಾತು. ಗಡ್ಡ ವಿಜಿ ನಿರ್ದೇಶನದ '+' ಸಿನಿಮಾ ಪ್ರೇಕ್ಷಕರಿಗೆ ನೀಡುವ ಸಂದೇಶ ಇದು.


ಹಾಗಂದ ಮಾತ್ರಕ್ಕೆ '+' ಸಿನಿಮಾ 'ಬಿ ಪಾಸಿಟೀವ್' ತತ್ವ ಪಾಲಿಸುತ್ತದೆ ಅಂತ ಭಾವಿಸಿ, 'ಅತಿ'ಯಾದ ನಿರೀಕ್ಷೆ ಹೊತ್ತು ನೀವು ಚಿತ್ರಮಂದಿರಕ್ಕೆ ನುಗ್ಗಿದರೆ, ನಿಮಗೆ ನಿರಾಸೆ ಆಗುವುದು ಖಂಡಿತ.

ಯಾಕಂದ್ರೆ, '+' ಸಿನಿಮಾದಲ್ಲಿ ಮೈನಸ್ ಪ್ಲಸ್ ಆಗುವುದಕ್ಕಿಂತ ಹೆಚ್ಚಾಗಿ ಮೈನಸ್ ನ ಮೈನಸ್ ಮಾಡೋ ಪ್ರಯತ್ನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಿಂಪಲ್ಲಾಗ್ ಹೇಳ್ಬೇಕು ಅಂದ್ರೆ, ಸೇಡಿನ ಕಥೆಯೇ '+' ಪಾಯಿಂಟ್.


'+' ಸಿನಿಮಾದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....


Rating:
3.0/5

ಚಿತ್ರ - '+'
ನಿರ್ಮಾಣ
- ಯೋಗರಾಜ್ ಭಟ್, ರಿತೇಶ್
ಚಿತ್ರಕಥೆ, ನಿರ್ದೇಶನ
- ಗಡ್ಡ ವಿಜಿ
ಸಂಗೀತ
- ಬಿ.ಜೆ.ಭರತ್
ಛಾಯಾಗ್ರಹಣ
- ಗುರುಪ್ರಶಾಂತ್ ರೈ
ತಾರಾಗಣ
- ಅನಂತ್ ನಾಗ್, ಚೇತನ್ ಚಂದ್ರ, ರಿತೇಶ್, ಸುಧಾರಾಣಿ, ರವಿಶಂಕರ್, ಅಚ್ಯುತ್ ಕುಮಾರ್, ಬಿ.ಸುರೇಶ್, ಶಾಲಿನಿ ವಾದ್ನಿಕಟ್ಟಿ, ಐಶಾನಿ ಶೆಟ್ಟಿ ಮತ್ತು ಇತರರು.
ಬಿಡುಗಡೆ - 16 ಅಕ್ಟೋಬರ್ 2015


'+' ಸಿನಿಮಾದ ಕಥೆ ಏನು?

'+' ಸಿನಿಮಾ ಕಥೆಯನ್ನ ಒಂದೇ ಸಾಲಿನಲ್ಲಿ ವಿವರಿಸುವುದು ಕಷ್ಟ. ಯಾಕಂದ್ರೆ, ಇಲ್ಲಿ ಪುರಾಣ ಪುಣ್ಯ ಕಥೆ ಇದೆ. ಸುರ-ಅಸುರರ ನಡುವಿನ ಯುದ್ಧವಿದೆ. ಪುನರ್ಜನ್ಮವಿದೆ. ಶಾಪವಿದೆ. ಸೇಡಿದೆ. ಎಲ್ಲದರ ಜೊತೆಗೆ Misophonia, Hemophobia, Narcissistic personality disorder ನಂತಹ ಮಾನಸಿಕ ಸಮಸ್ಯೆಗಳಿವೆ.


ಮೈನಸ್-ಪ್ಲಸ್-ಮೈನಸ್

ಸುರ-ಅಸುರ ನಡುವಿನ ಯುದ್ಧದಲ್ಲಿ ಸುರ ಮೈನಸ್ ಆಗ್ತಾನೆ. ಇದೇ ತಿಕ್ಕಾಟ ಭೂಲೋಕದಲ್ಲಿ ನಡೆದಾಗ ಅಸುರ ಮೈನಸ್ ಆಗ್ತಾನೆ. ಆ ಮೈನಸ್ 'ಪ್ಲಸ್' ಆಗುತ್ತದೆ. ಅಷ್ಟಕ್ಕೂ, ಅಸುರ ಸಂಹಾರ ನಡೆಯುವುದು ಹೇಗೆ? ಎರಡಕ್ಕೂ ಲಿಂಕ್ ಏನು? ಯಾವುದು ಪ್ಲಸ್? ಯಾವುದು ಮೈನಸ್? ಮಾನಸಿಕ ನ್ಯೂನತೆಗಳು ಇರುವುದು ಯಾರಿಗೆ? ಇದನ್ನೆಲ್ಲಾ ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ರೆ '+' ಸಿನಿಮಾನ ಥಿಯೇಟರ್ ನಲ್ಲಿ ನೋಡಿ.....


ಅನಂತ್ ನಾಗ್ '+' ಪಾಯಿಂಟ್

ಇಡೀ ಚಿತ್ರದಲ್ಲಿ ಪ್ರೇಕ್ಷಕರನ್ನು ಅಟ್ರ್ಯಾಕ್ಟ್ ಮಾಡುವುದು ಮಿಸ್ಟರ್ ಹ್ಯಾಂಡ್ಸಮ್ ಅನಂತ್ ನಾಗ್. ಅವರ ವಯಸ್ಸಿಗೆ ತಕ್ಕಂತೆ ನೀಡಿರುವ ಇಮೇಜ್ ಮೇಕ್ ಔವರ್ ಫ್ರೇಮ್ ಟು ಫ್ರೇಮ್ ಚೆನ್ನಾಗಿದೆ. ಪ್ರಖ್ಯಾತ ಉದ್ಯಮಿಯಾಗಿ ಸಖತ್ ಸ್ಟೈಲಿಶ್ ಆಗಿ ಕಾಣುವ ಅನಂತ್ ನಾಗ್ ಫ್ಲ್ಯಾಶ್ ಬ್ಯಾಕ್ ಮತ್ತು ಸುರ-ಅಸುರ ಸನ್ನಿವೇಶದಲ್ಲಿ ಮಾತ್ರ 'ಸಪ್ಪೆ' ಆಗಿ ಕಾಣಿಸುತ್ತಾರೆ.


ರವಿಶಂಕರ್ ಆರ್ಭಟ.!

ಅಸುರನಾಗಿ ರವಿಶಂಕರ್ ರದ್ದು ಅಬ್ಬರದ ನಟನೆ. ಅದೇ ಅಬ್ಬರ-ಆರ್ಭಟದಲ್ಲಿ ರವಿಶಂಕರ್ ಕಚಗುಳಿ ಕೂಡ ಇಡುತ್ತಾರೆ. ನಿಜ ಹೇಳ್ಬೇಕಂದ್ರೆ, ಸ್ಕ್ರೀನ್ ಮೇಲೆ ರವಿಶಂಕರ್ ಕಾಣಿಸಿಕೊಂಡಾಗ ಪ್ರೇಕ್ಷಕರಿಗೆ ಕೊಂಚ ರಿಲೀಫ್ ಸಿಗುತ್ತದೆ.


ಚೇತನ್ ಚಂದ್ರ-ರಿತೇಶ್ ನಟನೆ ಹೇಗಿದೆ?

ನಟ ಚೇತನ್ ಚಂದ್ರ ಮತ್ತು ನವ ಪ್ರತಿಭೆ ರಿತೇಶ್ ಜಿದ್ದಿಗೆ ಬಿದ್ದವರಂತೆ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ನಟಿಸಿದ್ದಾರೆ. ಇಬ್ಬರ ಆಕ್ಟಿಂಗ್ ಮತ್ತು ಸ್ಟಂಟ್ಸ್ ನಲ್ಲಿ ತುಟಿ ಎರಡು ಮಾಡುವ ಹಾಗಿಲ್ಲ.


ಉಳಿದವರ ಬಗ್ಗೆ.....

ಸುಧಾರಾಣಿ, ಬಿ.ಸುರೇಶ್, ಅಚ್ಯುತ್ ಕುಮಾರ್ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಐಶಾನಿ ಶೆಟ್ಟಿ, ಪ್ರಶಾಂತ್ ಸಿದ್ಧಿ, ಶ್ವೇತಾ ಪಂಡಿತ್ ಗೆ ಹೆಚ್ಚು ಸ್ಕೋಪ್ ಇಲ್ಲ.


'+'ನಲ್ಲಿ ಮೈನಸ್ ಏನು?

ಶುರುವಿನಿಂದ ಹಿಡಿದು ಮುಕ್ತಾಯದವರೆಗೂ ಒಂದೇ ವೇಗದಲ್ಲಿ '+' ಸಾಗುತ್ತದೆ. ಅಲ್ಲಲ್ಲಿ ಸಸ್ಪೆನ್ಸ್ ಇರುವುದರಿಂದ ಎಲ್ಲೂ ಬೋರಾಗಲ್ಲ. ಆದ್ರೆ, ಅದೇ ಸಸ್ಪೆನ್ಸ್ ಕೊನೆಗೆ 'ಪೇಲವ' ಅಂತ ಅನಿಸಿಕೊಂಡಾಗ ಸಿನಿಮಾ '+' ಆಗುವುದಕ್ಕಿಂತ ಹೆಚ್ಚಾಗಿ '-' ಆಗುತ್ತದೆ.


ಹಳೆ ಕಥೆಗೆ ಹೊಸ ಲೇಪನ

ಹೆಂಡತಿಯನ್ನು ಕೊಂದ ದ್ವೇಷ, ತಮ್ಮನ್ನು ಕೊಲ್ಲುವ ಪ್ರಯತ್ನಕ್ಕೆ ಕೇಡಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ನಾಯಕನ ಕಥೆಯನ್ನ ನಾವು ಈಗಾಗಲೇ ಹಲವು ಸಿನಿಮಾಗಳಲ್ಲಿ ನೋಡಿದ್ದೀವಿ. ಇಲ್ಲೂ ಅಂತದ್ದೇ ಕಥೆ ಇದೆ. ಆದ್ರೆ '+' ಸಿನಿಮಾ ವಿಭಿನ್ನ ಅಂತ ಅನಿಸಿಕೊಳ್ಳೋದು ನಿರೂಪಣಾ ಶೈಲಿ ಮತ್ತು ಅದಕ್ಕೆ ಮಿಕ್ಸ್ ಆಗಿರುವ ಮಾನಸಿಕ ನ್ಯೂನತೆಗಳಿಂದ.


ಪ್ರೇಕ್ಷಕರು ಗಣಿತದಲ್ಲಿ ವೀಕ್ ಆದ್ರೆ?

ಪುರಾಣ (ಸುರ-ಅಸುರ), ಪುನರ್ಜನ್ಮ, ಸೈಕಾಲಜಿ ಜೊತೆಗೆ ಗಣಿತ (-*-=+) ....ಎಲ್ಲವನ್ನ ಒಂದೇ ಕಥೆಯಲ್ಲಿ ನಿರ್ದೇಶಕ ಗಡ್ಡ ವಿಜಿ ಕಲಸಿರುವ ಕಾರಣ ಸಾಮಾನ್ಯ ಪ್ರೇಕ್ಷಕರಿಗೆ ಜೀರ್ಣವಾಗುವುದು ಕಷ್ಟ. ಗಡ್ಡ ವಿಜಿಯ ಲೆಕ್ಕದ ಪಾಠ ಅಲ್ಲಲ್ಲಿ ತಲೆಕೆರೆದುಕೊಳ್ಳುವ ಹಾಗೆ ಮಾಡುತ್ತದೆ.


ಅತಿಯಾದ ನಿರೀಕ್ಷೆ ಬೇಡ.!

ಮನರಂಜನೆಗೆ ಮಾತ್ರ ಸಿನಿಮಾ ನೋಡ ಬಯಸುವವರಿಗೆ '+' ಸಿನಿಮಾದಲ್ಲಿ ಮನರಂಜನೆಯ ಎಲ್ಲಾ ಸರಕುಗಳಿವೆ. '+' ಬಗ್ಗೆ ಅತಿಯಾದ ನಿರೀಕ್ಷೆ ಇಟ್ಕೊಂಡು, ಸೈಕಾಲಜಿ ಬಗ್ಗೆ ಊಹಿಸಿಕೊಂಡು ಚಿತ್ರಮಂದಿರಕ್ಕೆ ಹೋದರೆ ನಿಮಗೆ ಲಾಸು. ಹೀಗಾಗಿ '+' ಸಿನಿಮಾ ಬಗ್ಗೆ ಪೂರ್ವಾಗ್ರಹ ಪೀಡಿತರಾಗದೆ, ಚಿತ್ರ ನೋಡಿ...ನಿಮಗೆ ವಿಭಿನ್ನ ಅನುಭವ ಆಗಬಹುದು.


English summary
Kannada Actor Anant Nag starrer 'Plus' movie has hit the screens today (October 16th). Review of Gadda Viji directorial 'Plus' is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada