»   » 'ಜಟ್ಟ' ಚಿತ್ರ ವಿಮರ್ಶೆ: ನಮ್ಮ ಮಾರ್ಕ್ಸ್ ಐದಕ್ಕೆ ನಾಕು

'ಜಟ್ಟ' ಚಿತ್ರ ವಿಮರ್ಶೆ: ನಮ್ಮ ಮಾರ್ಕ್ಸ್ ಐದಕ್ಕೆ ನಾಕು

Posted By:
Subscribe to Filmibeat Kannada

ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ 'ಜಟ್ಟ' ಚಿತ್ರ ನೋಡುವಂತಹ ಚಿತ್ರವಲ್ಲ, ಇದು ಕಾಡುವಂತಹ ಚಿತ್ರ ಮತ್ತೆ ಮತ್ತೆ ಕನವರಿಸುವಂತಹ ಚಿತ್ರ! ಇಲ್ಲಿ ಭಾವನೆಗಳ ಸಂಘರ್ಷವಿದೆ. ಕಾಡಿನ ಸೌಂದರ್ಯವಿದೆ. ಹೆಣ್ಣಿನ ಕೂಗಿದೆ. ಗಂಡಿನ ಮೌನವಿದೆ. ಹೆಣ್ಣು ಗಂಡಿನ ಬದುಕಿನ ವೈರುಧ್ಯಗಳ ಜಟಾಪಟಿ ಇದೆ.

ಇವೆಲ್ಲವೂ ಅಭಿವೃದ್ಧಿ, ಸಂಪ್ರದಾಯ ಹಾಗೂ ಸಂಸ್ಕೃತಿಯ ನಡುವಿನ ಘರ್ಷಣೆಗಳ ತಾಕಲಾಟದಲ್ಲಿ ಸಾಗುತ್ತವೆ. ಇವುಗಳ ಸುತ್ತ ರಾಜಕೀಯ ವಿದ್ಯಮಾನಗಳ ದೊಂಬರಾಟವೂ ನಡೆಯುತ್ತದೆ. 'ಜಟ್ಟ' (ಕಿಶೋರ್) ಎಂಬ ಫಾರೆಸ್ಟ್ ಗಾರ್ಡ್ ನ ವೈಯಕ್ತಿಕ ಬದುಕಿನ ಒಯ್ದಾಟಗಳೇ ಚಿತ್ರದ ಕಥಾವಸ್ತು.

ಜಟ್ಟನ ಹೆಂಡತಿ ಬೇರೊಬ್ಬನೊಂದಿಗೆ ಓಡಿಹೋಗಿರುತ್ತಾಳೆ. "ಅವಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದೆನಲ್ಲಾ. ಅವಳಿಗೆ ಮತ್ತೊಬ್ಬನ ಸಂಗ ಬೇಕಾಗಿತ್ತಾ? ಗಟ್ಟಿಯಾಗಿ ಮಾತನಾಡುವವನೂ ಅಲ್ಲ ನಾನು. ಆದರೂ ಹೀಗೇಕಾಯಿತು" ಎಂದು ವಿದೇಶಿ ಸಂಸ್ಕೃತಿ ವಿರುದ್ಧ ಜಾಗೃತಿ ಮೂಡಿಸುವ ಸ್ವಯಂ ಸೇವಕ ಸಂಘದ ಸ್ವಾಮೀಜಿ (ಬಿ.ಸುರೇಶ್) ಬಳಿ ಜಟ್ಟ ಕಷ್ಟ ಹೇಳಿಕೊಳ್ಳುತ್ತಾನೆ.

Rating:
4.0/5

ಚಿತ್ರ: ಜಟ್ಟ
ನಿರ್ಮಾಪಕರು: ಎನ್.ಎಸ್. ರಾಜಕುಮಾರ
ಲಾಂಛನ: ಓಂಕಾರ್ ಮೂವೀಸ್
ರಚನೆ, ನಿರ್ದೇಶನ: ಬಿ.ಎಂ.ಗಿರಿರಾಜ
ಸಂಗೀತ: ಆಶ್ಲೆ-ಅಭಿಲಾಷ್
ಛಾಯಾಗ್ರಹಣ: ಕಿರಣ್ ಹಂಪಾಪುರ
ಸಂಕಲನ: ಕೆ.ಎಂ.ಪ್ರಕಾಶ್
ಸಾಹಸ: ಡಿಫರೆಂಟ್ ಡ್ಯಾನಿ
ಪಾತ್ರವರ್ಗ: ಕಿಶೋರ್ ಕುಮಾರ್, ಬಿ.ಸುರೇಶ್ (ಬೀಸು), ಪ್ರೇಮ್‌ಕುಮಾರ್, ಪಾವನಾ ಹಾಗೂ ಸುಕ್ರುತಾ ವಾಗ್ಲೆ ಮುಂತಾದವರು.

ಜಟ್ಟನಿಗೆ ಸ್ವಯಂ ಸೇವಕ ಸಂಘದ ಪಾಠ

"ಹೆಣ್ಣಿಗೆ ಸಲುಗೆ ಕೊಟ್ಟಿದ್ದೇ ಇದಕ್ಕೆಲ್ಲಾ ಕಾರಣ, ಅವಳನ್ನು ನೀನು ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದಿದ್ದರೆ ಹೀಗಾಗುತ್ತಿರಲಿಲ್ಲ. ಕಾಡು ಪ್ರಾಣಿಗಳನ್ನು ಪಳಗಿಸುವ ನಿನಗೆ. ಹೆಂಡ್ತಿಯನ್ನು ಪಳಗಿಸಿಕೊಳ್ಳಲು ಆಗಲಿಲ್ಲವಲ್ಲೋ ಮೂರ್ಖ? ಅಂತಹವಳನ್ನು ಬದುಕಕ್ಕೇ ಬಿಡಬಾರದು" ಎಂದು ಜಟ್ಟನಿಗೆ ಹೇಳುತ್ತಾನೆ.

ಹೆಣ್ಣಿನ ಬಗ್ಗೆ ಸಿಟ್ಟು, ಸೇಡು ಹುಟ್ಟಿಕೊಳ್ಳುವ ಸಮಯ

ಅಲ್ಲಿಂದ ಜಟ್ಟನ ಮನಸ್ಸು ಪರಿವರ್ತನೆಯಾಗುತ್ತದೆ. ಅನ್ಯಾಯ ಮಾಡಿದ ಹೆಣ್ಣಿನ ಬಗ್ಗೆ ಜಟ್ಟನಿಗೆ ಸಿಟ್ಟು, ಸೇಡುಗಳು ಬೆಸೆಯುತ್ತವೆ. ಈ ಸಂದರ್ಭದಲ್ಲೇ ಅವನಿಗೆ ಕುಡಿದು ಕಾರು ಓಡಿಸಿ ಮರಕ್ಕೆ ಡಿಕ್ಕಿ ಹೊಡೆದು ಪ್ರಜ್ಞೆ ತಪ್ಪಿದ ಅವಸ್ಥೆಯಲ್ಲಿ ಯುವತಿಯೊಬ್ಬಳು ಸಿಗುತ್ತಾಳೆ.

ಅವಳಿಗೆ ಬುದ್ಧಿ ಕಲಿಸಲು ಕಾಲಿಗೆ ಸರಪಳಿ

ಅವಳಿಗೆ ಬುದ್ಧಿ ಕಲಿಸಬೇಕು, ಭಾರತೀಯ ಸಂಸ್ಕೃತಿ ಸಂಪ್ರದಾಯದ ಬಗ್ಗೆ ತಿಳಿಸಬೇಕು ಎಂದು ಕಾಡಿನ ನಡುವಿನ ತನ್ನ ಮನೆಗೆ ತರ್ತಾನೆ. ಕಾಲಿಗೆ ಸರಪಳಿ ಬಿಗಿದು ಕಟ್ಟಿ ಹಾಕುತ್ತಾನೆ. ಅವಳಿಗೆ ಪ್ರಜ್ಞೆ ಬಂದ ನಂತರ ಚಿತ್ರ ಇನ್ನೊಂದು ತಿರುವು ಪಡೆದುಕೊಳ್ಳುತ್ತದೆ.

ಅವಳ ಬಟ್ಟೆಯನ್ನೆಲ್ಲಾ ಹರಿದು ಹಾಕುತ್ತಾನೆ

ಅವಳು ಅಂತಿಂಥ ಹೆಣ್ಣಲ್ಲ. ಹಠಮಾರಿ ಹೆಂಗಸು. ಅವಳನ್ನು ಪಳಗಿಸಲು ಹೊಡೆಯುತ್ತಾನೆ, ಬಡಿಯುತ್ತಾನೆ. ಯಾವುದಕ್ಕೂ ಅವಳು ಸೋಲಲ್ಲ, ಬಗ್ಗಲ್ಲ. ಸೀರೆ ಉಟ್ಟಿಕೊಳ್ಳಲು ಹೇಳ್ತಾನೆ. ಒಲ್ಲೆ ಅಂತಾಳೆ. ಅವಳ ಬಟ್ಟೆಯನ್ನೆಲ್ಲಾ ಹರಿದು ಹಾಕುತ್ತಾನೆ.

ಅವಳ ಕೈಲಿ ಶಿಖಂಡಿ ಅನ್ನಿಸಿಕೊಳ್ತಾನೆ

ಅವಳೇ ಇವನಿಗೆ ಸೀರೆ ಉಟ್ಟು ತೋರಿಸು ಅಂತಾಳೆ. ಕುಂಕುಮ ಹುಬ್ಬುಗಳ ನಡುವೆ ಇಟ್ಟುಕೊಳ್ಳಬೇಕಾ, ಇಲ್ಲಾ ಹಣೆ ಮೇಲಾ ಎಲ್ಲಿ ಎಂದು ತೋರಿಸು ಅಂತಾಳೆ. ಅವಳಿಗೆ ಉಡಲು ಹೋದಾಗ. ನಿನಗೆ ನನ್ನ ಮೈಮುಟ್ಟಬೇಕಾಗಿತ್ತಲ್ಲಾ ಅಂತಾಳೆ. ಛೀ ನಿನ್ನಂತಹ ನಾಯಿಯನ್ನು ಆ ದೃಷ್ಟಿಯಲ್ಲಿ ನೋಡಿಲ್ಲ ಅಂತಾನೆ.

ಜಟ್ಟ ಬಗ್ಗುತ್ತಾನೆ, ಬಾಗುತ್ತಾನೆ, ಸೋಲುತ್ತಾನೆ

ಕಡೆಗೆ ಅವನೇ ಸೀರೆಯುಟ್ಟು, ಹುಬ್ಬುಗಳ ನಡುವೆ ಕುಂಕುಮದ ಬೊಟ್ಟು ಇಟ್ಟುಕೊಂಡು ತೋರಿಸಿದ ಮೇಲೆ ಶಿಖಂಡಿ ಎಂದು ಗಹಗಹಿಸಿ ನಕ್ಕಿ ಛೇಡಿಸುತ್ತಾಳೆ. ಊಟ ಮಾಡಲ್ಲ ಅಂತಾಳೆ. ಸೀರೆ ಉಟ್ಟು ತಿನ್ನಿಸು ಅಂತಾಳೆ. ಇದೆಲ್ಲಕ್ಕೂ ಜಟ್ಟ ಬಗ್ಗುತ್ತಾನೆ, ಬಾಗುತ್ತಾನೆ, ಸೋಲುತ್ತಾನೆ.

ಓಡಿ ಹೋಗಿದ್ದ ಬೆಳ್ಳಿ ಮತ್ತೆ ಬರುತ್ತಾಳೆ

ಅವಳಿಗೆ ಬುದ್ಧಿ ಕಲಿಸಲು ಹೋಗಿ ಇವನು ಬದಲಾಗುತ್ತಾನೆ. ಇಂತಹ ಸಂದರ್ಭದಲ್ಲಿ ಓಡಿ ಹೋಗಿದ್ದ ಹೆಂಡತಿ ಬೆಳ್ಳಿ (ಪಾವನಾ) ಮತ್ತೆ ಮನೆಗೆ ವಾಪಸ್ಸಾಗುತ್ತಾಳೆ. ಅಲ್ಲಿಂದ ಕಥೆ ಮತ್ತೊಂದು ಮಜಲನ್ನು ತಲುಪುತ್ತದೆ. ಜಟ್ಟನಿಗೆ ಹೆಂಡತಿ ಸಿಗುತ್ತಾಳಾ? ಯುವತಿ (ಸುಕ್ರುತಾ ವಾಗ್ಲೆ) ಏನಾಗುತ್ತಾಳೆ? ಮುಂದೇನು ಕಥೆ ಎಂಬ ಕುತೂಹಲ ಆಸಕ್ತಿ ನಿರೀಕ್ಷೆಯಲ್ಲಿ ಸಾಗುತ್ತದೆ.

ಅದ್ಭುತ ಕಾಂಬಿನೇಷನ್ ಚಿತ್ರ

ಈ ರೀತಿಯ ಕಾಂಬಿನೇಷನ್ ಸಿಗಬೇಕಷ್ಟೆ. ಎಲ್ಲವೂ ಕೂಡಿಬರಬೇಕು ಅಂತರಲ್ಲಾ ಹಾಗೆ. 'ಜಟ್ಟ' ಚಿತ್ರದ ವಿಚಾರದಲ್ಲಿ ಈ ಮಾತು ನಿಜವಾಗಿದೆ. ಕಿಶೋರ್ ಅವರಂತಹ ಅಪ್ಪಟ ಕಲಾವಿದ, ಗಿರಿರಾಜ್ ಅವರಂತಹ ಪ್ರಯೋಗಶೀಲ ನಿರ್ದೇಶಕರು ಕೈಜೋಡಿಸಿದರೆ ಈ ರೀತಿಯ ಅದ್ಭುತಗಳನ್ನು ಸೃಷ್ಟಿಸಲು ಸಾಧ್ಯ. ಜೊತೆಗೆ ನಿರ್ಮಾಪಕರ ವಿಶಾಲ ಮನಸ್ಸು ಬೇಕು ಅನ್ನಿ.

'ಜಟ್ಟ' ಎಂಬ ಶೀರ್ಷಿಕೆಯೇ ಒಂಥರಾ ಆಕರ್ಷಕ

'ಜಟ್ಟ' ಎಂಬ ಶೀರ್ಷಿಕೆಯೇ ಒಂಥರಾ ಆಕರ್ಷಕ ಹಾಗೂ ವಿಚಿತ್ರವಾಗಿದೆ. ಕೆಲವರು ಇದೇನು ಶೀರ್ಷಿಕೆ ಎಂದುಕೊಂಡರೆ ಇನ್ನೂ ಕೆಲವರಿಗೆ ಏನಿರಬಹುದು? ಎಂಬ ಕುತೂಹಲ ಹುಟ್ಟಿಸಿತ್ತು. ಈ ಬಗ್ಗೆ ಗಿರಿರಾಜ್ ತಮ್ಮ ಫೇಸ್ ಬುಕ್ ನಲ್ಲಿ, 'ಜಟ್ಟ' ಗೇರುಸೊಪ್ಪ ಕಾಡಿನ, ಬುಡಕಟ್ಟು ಜನಾಂಗದಲ್ಲಿ ಜನಿಸಿರುವ, ಇವತ್ತಿನ ಕಾಲಘಟ್ಟದಲ್ಲಿ ಇರುವ ಒಬ್ಬ ವ್ಯಕ್ತಿಯ ಹೆಸರು ಎಂದು ಸ್ಪಷ್ಟಪಡಿಸಿದ್ದರು.

ಈ ರೀತಿಯ ಪಾತ್ರವನ್ನು ಅವರು ಮಾತ್ರ ಮಾಡಲು ಸಾಧ್ಯ

ಫಾರೆಸ್ಟ್ ಗಾರ್ಡ್ 'ಜಟ್ಟ' ಪಾತ್ರದಲ್ಲಿ ಕಿಶೋರ್ ತಮ್ಮದೇ ಆದಂತಹ ಮುದ್ರೆಯನ್ನು ಒತ್ತಿದ್ದಾರೆ. ಈ ರೀತಿಯ ಪಾತ್ರವನ್ನು ಅವರು ಮಾತ್ರ ಮಾಡಲು ಸಾಧ್ಯ. ಹಠಮಾರಿ ಯುವತಿಯಾಗಿ, ಸ್ತ್ರೀವಾದಿ ಪಾತ್ರದಲ್ಲಿ ರಂಗಭೂಮಿ ಕಲಾವಿದೆ ಸುಕ್ರುತಾ ವಾಗ್ಲೆ ತಮ್ಮ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ.

ಮಲೆನಾಡಿನ ಗ್ರಾಮ್ಯ ಭಾಷೆಯ ಸೊಗಡು

ಗುಡ್ಡಗಾಡು ಪ್ರದೇಶದ ಹುಡುಗಿಯಾಗಿ ಬೆಳ್ಳಿ ಪಾತ್ರದಲ್ಲಿ ಪಾವನಾ ಅವರದು ಮನಮಿಡಿಯುವ ಅಭಿನಯ. ಫಾರೆಸ್ಟ್ ಆಫೀಸರ್ ಭೀಮ್ ಕುಮಾರ್ ಪಾತ್ರದಲ್ಲಿ ತಮಿಳು ನಟ ಪ್ರೇಮ್ ಕುಮಾರ್ ಅವರ ಪಾತ್ರವೂ ಸೊಗಸಾಗಿ ಮೂಡಿಬಂದಿದೆ. ಚಿತ್ರದಲ್ಲಿ ಬಳಸಿಕೊಂಡಿರುವ ಮಲೆನಾಡಿನ ಗ್ರಾಮ್ಯ ಭಾಷೆ ಚಿತ್ರಕ್ಕೆ ಮತ್ತೊಂದು ಫ್ರೇಂ ವರ್ಕ್ಸ್ ಹಾಕಿಕೊಟ್ಟಿದೆ.

ಟೆಕ್ನಿಕಲಿ ಚಿತ್ರ ಯಾವ ರೀತಿ ಇದೆ?

ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ನಿಜಕ್ಕೂ ಕಣ್ಣಿಗೆ ಹಬ್ಬ. ರಾಮತೀರ್ಥ, ತುಂಬೆ, ಗೇರುಸೊಪ್ಪ, ಹೊನ್ನಾವರದ ರಮಣೀಯ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕೆ ತನ್ನದೇ ಆದಂತಹ ಚೌಕಟ್ಟನ್ನು ಹಾಕಿಕೊಟ್ಟಿದೆ. ಕಾಡಿನ ರಮಣೀಯತೆಯ ಜೊತೆಗೆ ಆಶ್ಲೆ-ಅಭಿಲಾಷ್ ಅವರ ಹಿನ್ನೆಲೆ ಸಂಗೀತ ಜುಳುಜುಳು ಎಂದು ಹರಿಯುವ ನದಿಯಂತೆ ಭಾಸವಾಗುತ್ತದೆ.

ನೈಜ ಅನುಭವ ಕೊಡುವ ಚಿತ್ರ

ಬೆಂಗಳೂರು, ಭೂಗತ ಜಗತ್ತು, ಪ್ರೀತಿ ಪ್ರೇಮ ಪ್ರಣಯ ಸುತ್ತ ಗಿರಿಕಿ ಹೊಡೆಯುತ್ತಿದ್ದ ಗಾಂಧಿನಗರವನ್ನು ಬೇರೆ ಒಂದು ಪ್ರದೇಶಕ್ಕೆ 'ಜಟ್ಟ' ಚಿತ್ರ ಕರೆದೊಯ್ಯುತ್ತದೆ. 'ನವಿಲಾದವರು, ಅದ್ವ್ತೈತ' ಚಿತ್ರಗಳ ಮೂಲಕ ಗಮನಸೆಳೆದಿದ್ದ ನಿರ್ದೇಶಕ ಗಿರಿರಾಜ್ ಈಗ ನೈಜ ಅನುಭವ ಕೊಡುವಂತಹ ಚಿತ್ರದ ಮೂಲಕ ಮತ್ತೊಮ್ಮೆ ಗೆದ್ದಿದ್ದಾರೆ.

English summary
Kannada film Jatta review. The movie has Kishore, Sukrutha Wagale and Pavana in the lead roles. The movie which is directed by Giriraj. Kishore is essaying the role of a forest guard. It's an Realistic Feel Film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada