»   » ಚಿತ್ರ ವಿಮರ್ಶೆ: ರೋಚಕ ರವಿಚಂದ್ರನ್ 'ದೃಶ್ಯ' ವೈಭವ

ಚಿತ್ರ ವಿಮರ್ಶೆ: ರೋಚಕ ರವಿಚಂದ್ರನ್ 'ದೃಶ್ಯ' ವೈಭವ

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕಥೆಗಳ ಆಯ್ಕೆಯಲ್ಲಿ ಸಾಕಷ್ಟು ಬದಲಾಗಿದ್ದಾರೆ. ಅವರ ವಯಸ್ಸು, ಮನಸ್ಸು, ಕನಸಿಗೆ ಬಹಳ ಹತ್ತಿರವಾದ ಕಥೆಗಳನ್ನು ಅವರು ಇತ್ತೀಚೆಗೆ ಆಯ್ಕೆ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಇದು ಸಹ ಅಷ್ಟೇ. ಅವರಿಗೆ ಹೇಳಿ ಮಾಡಿಸಿದ ಸಬ್ಜೆಕ್ಟ್. ಮಲಯಾಳಂ ಮೂಲದ 'ದೃಶ್ಯಂ' ಚಿತ್ರದ ರೀಮೇಕ್ ಆದರೂ ತಮ್ಮದೇ ಶೈಲಿಯಲ್ಲಿ ಪಾತ್ರಕ್ಕೆ ಜೀವತುಂಬಿದ್ದಾರೆ.

Rating:
3.5/5

ಆಪ್ತಮಿತ್ರ, ಆಪ್ತರಕ್ಷಕ ಚಿತ್ರಗಳ ಬಳಿಕ ಪಿ.ವಾಸು ಈ ಚಿತ್ರವನ್ನು ಮಲಯಾಳಂನಿಂದ ಯಥಾವತ್ತಾಗಿ ಎತ್ತಿಕೊಂಡಿರುವುದನ್ನು ಪ್ರತಿ ದೃಶ್ಯದಲ್ಲೂ ಕಾಣಬಹುದು. ಇಲ್ಲಿ ಮುಖ್ಯವಾಗಿ ಕಥೆಯೇ ಚಿತ್ರದ ಹೀರೋ. ಕಥೆ ಸಾಗುತ್ತಾ ಸಾಗುತ್ತಾ ಹೋದಂತೆ ಪ್ರೇಕ್ಷಕರು ಸೀಟಿನ ತುದಿಗೆ ಬಂದು ಕೂರುವಂತೆ ಮಾಡುತ್ತದೆ.

ಈ ರೀತಿಯ ಥ್ರಿಲ್ಲಿಂಗ್, ಸಸ್ಪೆನ್ಸ್ ಅಂಶಗಳನ್ನು ಬಯಸುವ ಪ್ರೇಕ್ಷಕರಿಗೆ 'ದೃಶ್ಯ' ಚಿತ್ರ ಖಂಡಿತ ನಿರಾಸೆಪಡಿಸುವುದಿಲ್ಲ. ಕೇಬಲ್ ಆಪರೇಟರ್ ರಾಜೇಂದ್ರ ಪೊನ್ನಪ್ಪ ಓದಿರುವುದು ನಾಲ್ಕನೇ ಕ್ಲಾಸ್ ಆದರೂ ಹಾಲಿವುಡ್ ನಿಂದ ಕೋಲಿವುಡ್ ತನಕ ಸಿನಿಮಾಗಳನ್ನು ನೋಡಿನೋಡಿ ಬಹಳ ಕಲಿತಿರುತ್ತಾನೆ.

ಚಿತ್ರ: ದೃಶ್ಯ
ನಿರ್ಮಾಪಕರು: ಮುಖೇಶ್.ಆರ್.ಮೆಹತಾ (ಇ4 ಎಂಟರ್ ಟೈನ್ ಮೆಂಟ್)
ಚಿತ್ರಕಥೆ, ನಿರ್ದೇಶನ: ಪಿ. ವಾಸು
ಸಂಗೀತ: ಇಳಯರಾಜ
ಛಾಯಾಗ್ರಹಣ: ಮಧು ನೀಲಕಂಠನ್
ಸಂಭಾಷಣೆ: ಎಂ.ಎಸ್.ರಮೇಶ್
ಗೀತರಚನೆ: ವಿ.ನಾಗೇಂದ್ರಪ್ರಸಾದ್
ಪಾತ್ರವರ್ಗ: ರವಿಚಂದ್ರನ್, ನವ್ಯನಾಯರ್, ಶ್ರೀನಿವಾಸಮೂರ್ತಿ, ಜೈಜಗದೀಶ್, ಅಚ್ಯುತರಾವ್, ಶಿವಾಜಿಪ್ರಭು, ಸುಚೀಂದ್ರಪ್ರಸಾದ್, ಆಶಾ ಶರತ್, ಸಾಧುಕೋಕಿಲ, ಸ್ವರೂಪಿಣಿ, ಉನ್ನತಿ ಮುಂತಾದವರಿದ್ದಾರೆ.

ಇದ್ದಕ್ಕಿದ್ದಂತೆ ನಡೆಯುವ ಒಂದು ಘಟನೆ

ಪತ್ನಿ ಹಾಗೂ ತನ್ನಿಬ್ಬರು ಹೆಣ್ಣುಮಕ್ಕಳೊಂದಿಗೆ ಒಂದಷ್ಟು ಜಮೀನು ನೋಡಿಕೊಂಡು ಕೇಬಲ್ ಆಪರೇಟರ್ ಆಗಿ ಸುಖಿ ಜೀವನ ನಡೆಸುತ್ತಿರುತ್ತಾನೆ. ಇಂತಹವನ ಬಾಳಿನಲ್ಲಿ ಇದ್ದಕ್ಕಿದ್ದಂತೆ ಒಂದು ಘಟನೆ ನಡೆದುಹೋಗುತ್ತದೆ.

ಕೊಲೆಯಾಗುವ ಯುವಕ ಯಾರು?

ರಾಜೇಂದ್ರ ಪೊನ್ನಪ್ಪ ಮಗಳಿನ ಅಶ್ಲೀಲ ಎಂಎಂಎಸ್ ಒಂದನ್ನು ತೆಗೆದ ಯುವಕ (ರೋಹಿತ್) ಆಕೆಯೊಂದಿಗೆ ಒಂದು ರಾತ್ರಿ ಕಳೆಯಲು ಬಯಸುತ್ತಾನೆ. ಇಲ್ಲದಿದ್ದರೆ ಅಂತರ್ಜಾಲದಲ್ಲಿ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಸುತ್ತಾನೆ. ಆ ರೀತಿ ಒಂದು ರಾತ್ರಿ ಕಳೆಯಲು ಬಂದವನನ್ನು ರಾಜೇಂದ್ರನ ಪತ್ನಿ ಹಾಗೂ ಮಗಳು ಸಾಯಿಸಿಬಿಡುತ್ತಾರೆ.

ಐಜಿ ಪುತ್ರನನ್ನು ಕೊಂದವರು ಯಾರು?

ಆ ಹೆಣವನ್ನು ತಮ್ಮ ತೋಟದಲ್ಲೇ ಮಣ್ಣುಮಾಡುತ್ತಾರೆ. ರಾತ್ರಿ ಕೆಲಸ ಮುಗಿಸಿಕೊಂಡು ಬೆಳಗ್ಗೆ ಮನೆಗೆ ಬರುವ ರಾಜೇಂದ್ರನಿಗೆ ಎಲ್ಲ ವಿಷಯಗಳನ್ನೂ ತಿಳಿದುಕೊಳ್ಳುತ್ತಾನೆ. ಮುಂದೇನು ಮಾಡಬೇಕು ಎಂದೂ ಆಲೋಚಿಸುತ್ತಾನೆ. ಸತ್ತ ಯುವಕ ಐಜಿ ಪುತ್ರನಾಗಿರುತ್ತಾನೆ. ಕೆಲವು ಪೂರಕ ಘಟನೆಗಳು ರಾಜೇಂದ್ರನೇ ಈ ಕೊಲೆ ಮಾಡಿರಬೇಕು ಎಂದು ಪೊಲೀಸರು ಬಲವಾಗಿ ಶಂಕಿಸುವಂತಾಗುತ್ತದೆ.

ರಾಜೇಂದ್ರ ಸಿಕ್ಕಿಬೀಳುತ್ತಾನಾ? ಇಲ್ಲವೇ?

ರಾಜೇಂದ್ರನ ಕುಟುಂಬದ ಹಿಂದೆ ಪೊಲೀಸರು ಬೀಳುತ್ತಾರೆ. ಈ ಪರಿಸ್ಥಿತಿಯಿಂದ ರಾಜೇಂದ್ರ ಹೇಗೆ ಪಾರಾಗುತ್ತಾನೆ? ಏನೆಲ್ಲಾ ಮಾಡುತ್ತಾನೆ? ಎಂಬುದನ್ನು ಚಿತ್ರ ನೋಡಿಯೇ ಆನಂದಿಸಬೇಕು. ಮೊದಲರ್ಧದ ಬಳಿಕ ಚಿತ್ರ ಹಂತಹಂತದಲ್ಲೂ ರೋಚಕವಾಗಿ ಸಾಗಿಹೋಗುತ್ತದೆ.

ರವಿಚಂದ್ರನ್ ಅವರದು ಸರಳ,ವಿರಳ ಪಾತ್ರ

ಸಾಮಾನ್ಯವಾಗಿ ರವಿಚಂದ್ರನ್ ಚಿತ್ರಗಳೆಂದರೆ ಅದ್ದೂರಿಯಿಂದ ಕೂಡಿರುತ್ತವೆ. ಆದರೆ ಇಲ್ಲಿ ಪಾತ್ರ ತುಂಬ ಸರಳ ಹಾಗೂ ವಿರಳ. ಕೇಬಲ್ ಆಪರೇಟರ್ ಆಗಿ ಅವರು ತಮ್ಮ ಪಾತ್ರದಲ್ಲಿ ಲೀನವಾಗಿರುವುದನ್ನು ತೆರೆಯ ಮೇಲೆ ನೋಡಿಯೇ ಸವಿಯಬೇಕು.

ದರ್ಪದ ಪೊಲೀಸ್ ಪೇದೆಯಾಗಿ ಅಚ್ಯುತರಾವ್

ಇನ್ನು ರಾಜೇಂದ್ರ ಪೊನ್ನಪ್ಪನ ಪತ್ನಿಯಾಗಿ ನವ್ಯಾ ನಾಯರ್ ಅವರು ತಮ್ಮ ಪಾತ್ರಕ್ಕೆ ಜೀವತುಂಬಿದ್ದಾರೆ. ಪೊಲೀಸ್ ಪೇದೆಯಾಗಿ ಅಚ್ಯುತರಾವ್ ತಮ್ಮ ದರ್ಪ ಪ್ರದರ್ಶಿಸಿದ್ದಾರೆ. ಐಜಿಪಿ ಪಾತ್ರದಲ್ಲಿ ಆಶಾ ಶರತ್ ಹಾಗೂ ಅವರ ಪತಿಯಾಗಿ ಶಿವಾಜಿ ಪ್ರಭು ಜೋಡಿ ಗಮನಸೆಳೆಯುತ್ತದೆ.

ಪ್ರೇಕ್ಷಕರನ್ನು ಸೀಟಿನ ಅಂಚಿಗೆ ತಳ್ಳುವ ಕಥೆ

ಚಿತ್ರದ ಮೊದಲರ್ಧದಲ್ಲಿ ವೇಗ ಇಲ್ಲ ಅನ್ನಿಸಿದರೂ ಕಥೆ ಸಾಗುತ್ತಿದ್ದಂತೆ ವೇಗ ಪಡೆದುಕೊಳ್ಳುತ್ತದೆ. ದ್ವಿತೀಯಾರ್ಧಕ್ಕೆ ಹೊರಳುತ್ತಿದ್ದಂತೆ ಹಂತ ಹಂತದಲ್ಲೂ ನಿರೂಪಣೆ ಬಿಗಿಯಾಗುತ್ತಾ ಸಾಗುತ್ತದೆ. ಎಲ್ಲೂ ತನ್ನ ಪಟ್ಟು ಬಿಡದೆ ಪ್ರೇಕ್ಷಕರನ್ನು ಸೀಟಿನ ಅಂಚಿಗೆ ಬಂದು ಕೂರುವಂತೆ ಮಾಡುತ್ತದೆ.

ನೀಲಕಂಠನ್ ದೃಶ್ಯ, ಇಳಯರಾಜ ಸಂಗೀತ

ಇದಕ್ಕೆ ಕಾರಣವಾಗಿರುವುದು ಸುರೇಶ್ ಅರಸ್ ಅವರ ಸಂಕಲನ ಹಾಗೂ ಮಧು ನೀಲಕಂಠನ್ ಅವರ ಛಾಯಾಗ್ರಹಣ. ಕಥೆ, ಸನ್ನಿವೇಶ, ದೃಶ್ಯಕ್ಕೆ ತಕ್ಕಂತೆ ಇಳಯರಾಜ ಅವರ ಸಂಗೀತ ಮಿಡಿದಿರುವುದು ಇನ್ನೊಂದು ಪ್ಲಸ್ ಪಾಯಿಂಟ್. ಕನ್ನಡದ ನೇಟಿವಿಟಿಗೆ ತಕ್ಕಂತೆ ಎಂ.ಎಸ್.ರಮೇಶ್ ಅವರ ಸಂಭಾಷಣೆ ಇದೆ.

ಕೊನೆಯ ತನಕ ಕಾಡುವ ಪಾತ್ರ ರೋಹಿತ್

ಚಿತ್ರದಲ್ಲಿ ಇದ್ದೂ ಇಲ್ಲದಂತೆ ಕೊನೆಯತನಕ ಕಾಡುವ ಪಾತ್ರ ರೋಹಿತ್ ಅವರದು. ಅಶ್ಲೀಲ ಎಂಎಂಎಸ್ ನೊಂದಿಗೆ ನೆಗಟೀವ್ ಪಾತ್ರದಲ್ಲಿ ಕಾಣಿಸುವ ಪುಟ್ಟ ಪಾತ್ರವಾದರೂ ಕೊನೆಯ ತನಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಿದೆ. ಅಷ್ಟರ ಮಟ್ಟಿಗೆ ರೋಹಿತ್ ಪ್ರೇಕ್ಷಕರ ಮನಸ್ಸಿನಲ್ಲಿ ಮುದ್ರೆ ಒತ್ತುತ್ತಾರೆ.

ಮಿಸ್ ಮಾಡಿಕೊಳ್ಳದೆ ನೋಡುವ ಚಿತ್ರ

ಒಟ್ಟಾರೆಯಾಗಿ ತೀರಾ ಥ್ರಿಲ್ಲಿಂಗ್, ಸಸ್ಪೆನ್ಸ್ ಅಲ್ಲದ ವಿಭಾಗಕ್ಕೆ ಈ ಚಿತ್ರವನ್ನು ಸೇರಿಸಬಹುದು. ಕೌಟುಂಬಿಕ ಕಥಾಹಂದರದ ಚೌಕಟ್ಟಿನಲ್ಲೇ ಸಾಗುವ ಥ್ರಿಲ್ಲರ್ ಇದು. ಹಾಗಾಗಿ ಸಕುಟುಂಬ ಸಪರಿವಾರ ಸಮೇತ ನೋಡುವಂತಹ ಚಿತ್ರ. ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುವಂತಹ ಚಿತ್ರವಂತೂ ಅಲ್ಲ.

English summary
Kannada movie Drishya review. The movie is a sensational journey by a family as they go through a bitter crisis, which is perhaps more than what they can chew. The movie is a must watch for all the audiences of family and thriller movies.
Please Wait while comments are loading...