»   » ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ

ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ

Posted By: Super
Subscribe to Filmibeat Kannada

ಗೋವಿಂದಾನಾ ಸಲ್ಮಾನ್‌ ಖಾನಾ ? ಇವರ್ಯಾರೂ ಅಲ್ಲ ... ಪ್ರೇಮಿ ನಂಬರ್‌ ವನ್‌

ಇದು ಪ್ರೇಮಿ ನಂಬರ್‌ ವನ್‌ ಚಿತ್ರದ ಹಾಡೊಂದರ ಸಾಲು. ಹಾಡಿನ ಸಾಹಿತ್ಯ ಸರಿಯಾಗಿಯೇ ಇದೆ ಅನ್ನೋದು ಚಿತ್ರ ನೋಡಿದ ಮೇಲೆ ಖಾತ್ರಿಯಾಗುತ್ತದೆ. ಯಾಕೆಂದರೆ ನಾಯಕ ಪಾತ್ರಧಾರಿ ರಮೇಶ್‌ ಅವರು ಸಲ್ಮಾನ್‌ ಥರಾನೂ ಕಾಣಿಸೋದಿಲ್ಲ, ಗೋವಿಂದನ ಥರಾನೂ ಇಲ್ಲ. ಅವರಿಲ್ಲಿ ಭಾಗ್ಯರಾಜ್‌ ಆಗಿದ್ದಾರೆ.

ರಮೇಶ್‌ರಂಥ ಒರಿಜಿನಲ್‌ ನಟ ಕೂಡ ಅನುಕರಣೆ ಮಾಡುವ ಪರಿಸ್ಥಿತಿ ಬಂದಿರುವುದಕ್ಕೆ ಕಾರಣವೇನು ? ಪ್ರೇಮಿ ನಂಬರ್‌ ವನ್‌ ಚಿತ್ರ ತಮಿಳಿನಲ್ಲಿ ಭಾಗ್ಯರಾಜ್‌ ನಟಿಸಿ, ನಿರ್ದೇಶಿಸಿದ ಡಾರ್ಲಿಂಗ್‌ ಡಾರ್ಲಿಂಗ್‌ ಚಿತ್ರದ ರಿಮೇಕು. ಅಲ್ಲಿ ಚಿತ್ರದುದ್ದಕ್ಕೂ ನಾಯಕ ಸ್ಟುಪಿಡ್‌ ಅಥವಾ ಮುಠ್ಠಾಳನ ಥರ ಕಾಣಿಸಬೇಕು. ರಮೇಶ್‌ ಹಾಗೆ ಕಾಣಿಸೋದು ಸಾಧ್ಯವಿಲ್ಲ. ಅವರ ಬಾಡಿ ಲಾಂಗ್ವೇಜ್‌ ಆಗಲಿ, ಕಣ್ಣ ನೋಟವಾಗಲಿ ಹಾಗಿಲ್ಲ. ಅದಕ್ಕಾಗಿಯೇ ರಮೇಶ್‌ ಒಂದು ಕೃತಕ ಮೀಸೆಯನ್ನು ಅಂಟಿಸಿಕೊಂಡಿದ್ದಾರೆ.

ಹದಿನೈದು ವರ್ಷದ ಹಿಂದೆ ಬಿಡುಗಡೆಯಾದ ಚಿತ್ರದ ರಿಮೇಕು ಅಂದ ಮೇಲೆ ಅಲ್ಲಿ ಹೊಸದೇನೂ ಇರೋದಕ್ಕೆ ಸಾಧ್ಯವಿಲ್ಲ. ನಿರ್ದೇಶಕರು ಕೊಂಚ ಬುದ್ಧಿವಂತಿಕೆ ತೋರಿದ್ದರೆ, ಕೆಲವು ಸೀನ್‌ಗಳನ್ನು ಈಗಿನ ಕಾಲಕ್ಕೆ ತಕ್ಕಂತೆ ರೀರೈಟ್‌ ಮಾಡಬಹುದಾಗಿತ್ತು. ಅವರು ಆ ತೊಂದರೆ ತೆಗೆದುಕೊಂಡಿಲ್ಲ ಅಥವಾ ಇಂಥಾ ರೀ ಕ್ರಿಯೇಷನ್‌ ಅವರ ಕೈ ಮೀರಿದ ಸಂಗತಿಯೂ ಆಗಿದ್ದಿರಬಹುದು. ಅಂದ ಹಾಗೆ ಚಿತ್ರದ ನಿರ್ದೇಶಕರು ಕೋಡ್ಲು ರಾಮಕೃಷ್ಣ. ಕನ್ನಡದ ಮಟ್ಟಿಗೆ ಅವರು ಸದಾ ಭರವಸೆಯ ನಿರ್ದೇಶಕ. ಅವರ ಮೊದಲ ಚಿತ್ರ ಉದ್ಭವ ನೋಡಿದಾಗಲೇ ಈ ಮಾತನ್ನು ಹೇಳಿದ ಜನ ಪ್ರೇಮಿ ನಂ. ವನ್‌ ನೋಡಿದ ಮೇಲೆಯೂ ಮತ್ತದೇ ಮಾತನ್ನು ರಿಪೀಟ್‌ ಮಾಡಬಹುದು !

ಯಜಮಾನನ ಮಗಳನ್ನು ಪ್ರೀತಿಸುವ ಕತೆ

ಚಿತ್ರದ ಕತೆ ತುಂಬಾ ಸರಳವಾಗಿದೆ. ವಾಚ್‌ಮನ್‌ ಮಗನೊಬ್ಬ ತನ್ನ ಯಜಮಾನನ ಮಗಳನ್ನು ಪ್ರೀತಿಸುವ ಕತೆ. ಅದಕ್ಕೆ ಕಾರಣ ಅವನು ಅವಳೊಂದಿಗೆ ಕಳೆದ ಬಾಲ್ಯದ ಸಿಹಿ ನೆನಪುಗಳು. ಆತ ಅದನ್ನು ಮರೆಯಲಾರ, ಆದರೆ ಆಕೆಗೆ ಇವ್ಯಾವುದೂ ನೆನಪಾಗಲೊಲ್ಲದು. ಅವಳು ಊರು ಬಿಟ್ಟು 15 ವರ್ಷ ಅಮೆರಿಕಾದಲ್ಲಿದ್ದುದೇ ಅದಕ್ಕೆ ಕಾರಣ. ನಾಯಕಿ ಅಂಥಾ ಕೆಟ್ಟವಳೇನಲ್ಲ. ಅವಳಿಗೆ ತನ್ನ ಅಂತಸ್ತಿನ ಬಗ್ಗೆಯೂ ಅಂತಹ ಮೋಹವಿಲ್ಲ. ಆದರೆ ವಾಚ್‌ಮನ್‌ ಮಗನೊಬ್ಬ ಬಾಲ್ಯದ ಹುಡುಗಾಟವನ್ನೇ ನಿಜವೆಂದು ನಂಬಿ ತನ್ನನ್ನು ಪ್ರೀತಿಸುತ್ತಿದ್ದಾನೆ ಅನ್ನುವ ಸಂಗತಿಯೇ ಆಕೆಯಲ್ಲಿ ಅಚ್ಚರಿ, ವಿಷಾದ, ಕುತೂಹಲವನ್ನು ಮೂಡಿಸುತ್ತದೆ. ಅದಕ್ಕೆ ತಕ್ಕಂತೆ ಅವಳು ಮದುವೆಯಾಗಬೇಕಿದ್ದ ಶ್ರೀಮಂತರ ಹುಡುಗನ ಕೊಳಕು ಮನಸ್ಸು ಬಯಲಾಗುತ್ತಾ ಹೋಗುತ್ತದೆ. ಒಂದೆಡೆ ಆತನ ದುಷ್ಟತನ ವಿಜೃಂಭಿಸುತ್ತಿದ್ದರೆ, ಅದಕ್ಕೆ ಪ್ರತಿಯಾಗಿ, ಪ್ರತಿಕ್ರಿಯೆಯಾಗಿ ನಾಯಕನ ಒಳ್ಳೇತನವೂ ಜಾಹೀರಾಗುತ್ತಾ ಹೋಗುತ್ತದೆ. ಅಂತಿಮವಾಗಿ ನಾಯಕಿಯ ಮನಸ್ಸು ಮುಗ್ಧ, ಪೆದ್ದ, ಮುಟ್ಠಾಳ ನಾಯಕನತ್ತ ಹೊರಳುತ್ತದೆ. ಆಗ ಇನ್ನೊಂದು ಆಕಸ್ಮಿಕ ತಿರುವು, ಪ್ರೇಮಿಗಳು ಬೇರೆಯಾಗುವ ಭಯ, ಕ್ಲೈಮಾಕ್ಸ್‌ನಲ್ಲಿ ಮತ್ತೆ ಒಂದಾಗುವ ವೈಚಿತ್ರ್ಯ - ಇವಿಷ್ಟು ಘಟನೆಗಳು ಚಕಚಕಾಂತ ನಡೆಯುತ್ತವೆ.

ಚಿತ್ರವನ್ನು ಕಾಪಾಡಬೇಕಿದ್ದ ರಮೇಶ್‌ ಕೈ ಬಿಟ್ಟಿದ್ದಾರೆ

ಸರಳ ಕತೆಯನ್ನು ಸರಳವಾಗಿ ನಿರೂಪಿಸುವುದು ನಿರ್ದೇಶಕರಿಂದ ಸಾಧ್ಯವಾಗಿಲ್ಲ. ಆ ಲಾಲಿತ್ಯವಾಗಲಿ, ನಯವಂತಿಕೆಯಾಗಲಿ, ಚಿತ್ರದಲ್ಲಿಲ್ಲ. ಪಾತ್ರಗಳೆಲ್ಲಾ ಪ್ರೇಕ್ಷಕರು ಕಿವುಡರೇ ಇರಬೇಕೆಂಬ ಅನುಮಾನದಲ್ಲಿ ಜೋರಾಗಿ ಕಿರುಚಾಡುತ್ತವೆ. ವಾಚ್‌ಮನ್‌ ಮತ್ತು ಮಾರವಾಡಿ ನಡುವಣ ಹಾಸ್ಯ ಪ್ರಸಂಗಗಳು ನಾಟಕದ ಮಟ್ಟದಿಂದ ಮೇಲೇರುವುದಿಲ್ಲ. ನಾಯಕನ ಪೆದ್ದುತನವನ್ನು ಉಕ್ಕಿಸುವ ನಗುವಿಗಿಂತ, ಆತನ ಸಜ್ಜನಿಕೆ ಸೃಷ್ಟಿಸುವ ಸೆಂಟಿಮೆಂಟ್‌ಗಳೇ ಎಷ್ಟೋ ವಾಸಿ. ಉದಾಹರಣೆಗೆ ಖಳನಾಯಕನ ಬೂಟ್‌ ಪಾಲಿಶ್‌ ಮಾಡುವ ದೃಶ್ಯ, ಆತನಿಗೆ ಗುಂಡು ಸಪ್ಲೈ ಮಾಡುವ ದೃಶ್ಯ.

ಚಿತ್ರವನ್ನು ಕಾಪಾಡಬೇಕಿದ್ದ ರಮೇಶ್‌ ಅವರೇ ಕೈ ಬಿಟ್ಟ ಮೇಲೆ ಮಿಕ್ಕವರ ಪಾಡೇನು ? ಕರಿಬಸಯ್ಯ ಕಿರುಚುತ್ತಾರೆ, ನವನಟ ಸಲಾವುದ್ದೀನ್‌ ಸಪ್ಪೆ, ಶ್ರೀನಾಥ್‌ ಮತ್ತು ಶ್ರೀನಿವಾಸ ಮೂರ್ತಿ ಅವರಿಗೆ ಅವಕಾಶ ಕಡಿಮೆ. ಪ್ರೇಮಾ ಅಷ್ಟೇನೂ ಚಂದ ಕಾಣಿಸದೇ ಇದ್ದರೂ ಮೂರು ದೃಶ್ಯಗಳಲ್ಲಿ ರಮೇಶ್‌ಗೆ ಪೈಪೋಟಿ ನೀಡಿದ್ದಾರೆ. ಗೌರಿಶಂಕರ್‌ ಛಾಯಾಗ್ರಹಣ ಎಂದಿನ ಮಟ್ಟದಲ್ಲಿಲ್ಲ. ಹೊರಾಂಗಣ ಸ್ವಲ್ಪ ಮಟ್ಟಿಗೆ ನೋಡುವಂತಿದೆ. ಸಂಕಲನದಲ್ಲಿ ಬಳಸಲಾದ ತಂತ್ರಗಳೂ ಔಟ್‌ ಡೇಟೆಡ್‌.

ಚಿತ್ರದಲ್ಲಿ ಗಮನ ಸೆಳೆಯುವ ಏಕೈಕ ಅಂಶವೆಂದರೆ ಸಂಗೀತ. ಗುರುಕಿರಣ್‌ ಅವರ ನಾಲ್ಕು ಟ್ಯೂನ್‌ಗಳು ಮತ್ತೆ ಮತ್ತೆ ಗುನುಗುವಂತಿವೆ. ಹಿನ್ನೆಲೆ ಸಂಗೀತ ಮಧ್ಯಂತರದ ತನಕ ಓಕೆ.

ಪ್ರೇಮಿ ನಂಬರ್‌ ವನ್‌ ಚಿತ್ರ ಶುದ್ಧ ಮನಸ್ಸಿನ ಪ್ರೇಮಿಯಾಬ್ಬನ ಸುಖದುಃಖದ ಕತೆ. ಇಲ್ಲೊಂದು ವಿಷಾದವೂ ಸ್ಥಾಯಿಯಾಗಬೇಕಿತ್ತು. ಅದು ನಿರ್ದೇಶಕರ ಗಮನಕ್ಕೆ ಬಂದಿಲ್ಲ. ಹಾಗಾಗಿ ಪ್ರೇಮಿ ನಂಬರ್‌ ವನ್‌ ಪ್ರೇಕ್ಷಕರ ಪಾಲಿಗೆ ಪ್ರೇಮಿ ನಂಬರ್‌ ಇಲೆವನ್‌ ಆಗ್ತಾನೆ.

English summary
simple story not depicted in a simple style

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada