»   » ನಕುಲ್ ಅಭಯಂಕರ್ ಸರಿಗಮಪ ಚಾಂಪಿಯನ್

ನಕುಲ್ ಅಭಯಂಕರ್ ಸರಿಗಮಪ ಚಾಂಪಿಯನ್

Posted By:
Subscribe to Filmibeat Kannada

ಕರ್ನಾಟಕ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಜೀ ಕನ್ನಡದ ಸರಿಗಮಪ ಚಾಲೆಂಜ್ ಸಂಗೀತ ಸಮರದ ಚಾಂಪಿಯನ್ ಆಗಿ ಮಂಗಳೂರಿನ ನಕುಲ್ ಅಭಯಂಕರ್ ಹೊರ ಹೊಮ್ಮಿದ್ದಾರೆ. ಅವರು ಅಂತಿಮ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ಎರಡು ಲಕ್ಷ ರೂಪಾಯಿಗಳ ಬಾರಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತಿಮ ಕಣದಲ್ಲಿ ಕೊಡಗಿನ ದೀಪಕ್, ಮೈಸೂರಿನ ಇಂದು ನಾಗರಾಜ್, ದಿವ್ಯ ಹಾಗೂ ಪುರುಷೋತ್ತಮ್ ಸ್ಪರ್ಧೆಯಲ್ಲಿದ್ದರು.

ಅಂತಿಮ ಹಣಾಹಣಿ ನಾಲ್ಕು ಸುತ್ತುಗಳಲ್ಲಿ ನಡೆಯಿತು. ಮಾಧುರ್ಯ ಗೀತೆಗಳು, ತೀರ್ಪುಗಾರರ ಆಯ್ಕೆ, ಲೆಜೆಂಡರಿ ಸ್ಪೆಷಲ್ ಹಾಗೂ ಫಾಸ್ಟ್ ಬೀಟ್ ಸುತ್ತುಗಳಲ್ಲಿ ಸ್ಪರ್ಧಿಗಳು ಹಾಡಿದರು. ಅಂತಿಮ ಸುತ್ತಿನ ಸ್ಪರ್ಧಿಗಳೆಲ್ಲರೂ ಉತ್ತಮ ಗಾಯಕ ಪ್ರತಿಭೆಗಳಾಗಿದ್ದು ನಿರೀಕ್ಷೆಯಂತೆಯೇ ಎಲ್ಲರ ನಡುವೆ ಕಠಿಣ ಸ್ಪರ್ಧೆ ನಡೆಯಿತು.

ಅಂತಿಮವಾಗಿ ನಕುಲ್ ಅಭಯಂಕರ್ ಚಾಂಪಿಯನ್ ಪ್ರಶಸ್ತಿ ಪಡೆದರೆ ಇವರಿಗೆ ತೀವ್ರ ಪೈಪೋಟಿ ನೀಡಿದ ಮೈಸೂರಿನ ಇಂದು ನಾಗರಾಜ್ ಪ್ರಥಮ ರನ್ನರ್ ಅಪ್ ಸ್ಥಾನಗಳಿಸುವ ಮೂಲಕ 1ಲಕ್ಷ ರೂಪಾಯಿ ಬಹುಮಾನವನ್ನು ತನ್ನದಾಗಿಸಿಕೊಂಡರು, ಮಡಿಕೇರಿಯ ದೀಪಕ್ 2ನೇ ರನ್ನರ್ ಅಪ್ ಆಗುವ ಮೂಲಕ 50 ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ಪಡೆದುಕೊಂಡರು. ಇಂಡಿಯಾಗೇಟ್ ಬಾಸುಮತಿ ರೈಸ್ ಕಂಪೆನಿ ಬಹುಮಾನಗಳನ್ನು ಪ್ರಾಯೋಜಿಸಿತು.

ಫೈನಲ್ಸ್ ಸ್ಪರ್ಧೆಯ ಈ ಸಂಚಿಕೆಗೆ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗೀತರಚನಾಕಾರ ಹಂಸಲೇಖ ಮುಖ್ಯ ತೀರ್ಪುಗಾರರಾಗಿದ್ದು ಖ್ಯಾತ ಗಾಯಕ ಹಾಗೂ ಗಾಯಕಿಯಾರಾದ ರಾಜೇಶ್ ಕೃಷ್ಣನ್, ಹೇಮಂತ್, ನಂದಿತಾ ಹಾಗೂ ಅರ್ಚನಾ ಉಡುಪ ಸಹ ತೀರ್ಪುಗಾರರಾಗಿದ್ದರು. ಕನ್ನಡ ಚಲನಚಿತ್ರ ರಂಗದ ಸಂಗೀತ ನಿರ್ದೇಶಕರಾದ ವಿ. ಮನೋಹರ್, ಮನೋಮೂರ್ತಿ, ಗುರುಕಿರಣ್, ಅರ್ಜುನ್, ಕವಿರಾಜ್ ಹಾಗೂ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ವಿಜೇತರಿಗೆ ಬಹುಮಾನವನ್ನು ಇಂಡಿಯಾಗೇಟ್ ಬಾಸುಮತಿ ರೈಸ್‌ನ ಮುಖ್ಯಸ್ಥ ಶ್ರೀನಿವಾಸ್, ಜೀ ಸಮೂಹದ ಗೌತಮ್ ಮಾಚಯ್ಯ ಮತ್ತು ಜೆ. ಶೇಖರ್ ವಿತರಿಸಿದರು. ಖ್ಯಾತ ಗಾಯಕಿ ಲಕ್ಷ್ಮಿ ಮನಮೋಹನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada