For Quick Alerts
  ALLOW NOTIFICATIONS  
  For Daily Alerts

  ರೆಡ್ಡಿ ಸಹೋದರರಿಂದ ಆಪರೇಷನ್ ಕನ್ನಡ ಟಿವಿ

  By Shami
  |

  ಬಳ್ಳಾರಿಯ ಗಣಿ ಧಣಿಗಳೂ ಮಂತ್ರಿ ಮಹೋದಯ ದ್ವಯರೂ ಆಗಿರುವ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮಹತ್ವಾಕಾಂಕ್ಷೆಯ ಟಿವಿ ಚಾನಲ್ ಇನ್ನೇನು ಆರಂಭ ಆಗೇಬಿಡುತ್ತದೆ ಎಂಬ ಬಿಟ್ ನ್ಯೂಸ್ ಈಗ ಬ್ರೇಕಿಂಗ್ ನ್ಯೂಸ್ ಮಟ್ಟಕ್ಕೆ ಬೆಳೆಯುವ ಹಂತ ತಲುಪುತ್ತಿದೆ. ಬಲ್ಲ ಮೂಲಗಳ ಪ್ರಕಾರ, ರೆಡ್ಡಿಗಳ ಟಿವಿ ಚಾನಲ್ ಇದೇ ನವೆಂಬರ್ 8ಕ್ಕೆ ಅಲ್ಲ, ಜನೆವರಿ 1ಕ್ಕೆ ಪರದೆ ಮೇಲೆ ಮೂಡುವ ಲಕ್ಷಣಗಳು ಢಾಳವಾಗಿ ಗೋಚರಿಸುತ್ತಿವೆ. ಟಿವಿ ವಾಹಿನಿಯ ಹೆಸರು ಜನಶ್ರೀ. ಜನಾರ್ದನ ಪ್ಲಸ್ ಶ್ರೀರಾಮುಲು ಈಸ್ ಈಕ್ವಲ್ಸ್ ಟು ಜನಶ್ರೀ.

  ಕೋರಮಂಗಲ ಬಿಗ್ ಬಜಾರ್ ಬಳಿ ತೆರೆಯಲಾಗಿರುವ ಜನಶ್ರೀ ಟಿವಿ ಕಚೇರಿ ಈಗ ಚಟುವಟಿಕೆಗಳ ಆಗರವಾಗಿದೆ. ಮೂಲಸೌಕರ್ಯಗಳ ವ್ಯವಸ್ಥೆ, ಸ್ಟೂಡಿಯೋ ಜೋಡಣೆ ಮತ್ತು ನೇಮಕಾತಿಗಳು ಭರದಿಂದ ಆರಂಭವಾಗಿದ್ದು ವಾಹಿನಿಯ ಮುಖ್ಯಸ್ಥರಾಗಿ ಅನಂತ್ ಚಿನಿವಾರ ಚುಕ್ಕಾಣಿ ಹಿಡಿದಿದ್ದಾರೆ. ಕ್ಯಾಮರಾ, ಎಡಿಟರ್, ಮಿಕ್ಸರ್, ಗ್ರಾಫಿಕ್ಸ್ ಮುಂತಾದ ತಾಂತ್ರಿಕ ಉಪಕರಣಗಳ ಶಾಪಿಂಗ್ ಮುಗಿದಿದ್ದು ಈಗ ಮಾನವ ಸಂಪನ್ಮೂಲಗಳ ಕ್ರೋಢೀಕರಣದತ್ತ ಚಾನಲ್ ಆಡಳಿತ ವರ್ಗ ಗಮನ ಹರಿಸಿದೆ.

  ಟಿವಿ ವಾಹಿನಿಗಳಲ್ಲಿ ಈಗಾಗಲೇ ದುಡಿಯುತ್ತಿರುವ ಅನುಭವಿ ತಂತ್ರಜ್ಞರು ಮತ್ತು ಪತ್ರಕರ್ತರನ್ನು ತನ್ನ ವಾಹಿನಿಯತ್ತ ಸೆಳೆದುಕೊಳ್ಳುವ ಪ್ರಯತ್ನವನ್ನು ರೆಡ್ಡಿಗಳು ಶುರುಹಚ್ಚಿಕೊಂಡಿದ್ದಾರೆ. ಮುಖ್ಯವಾಗಿ ಹಗಲಿರುಳೂ ಸುದ್ದಿ ಪ್ರಸಾರ ಮಾಡುವ ಚಾನಲ್ಲುಗಳಾದ ಟಿವಿ9 ಮತ್ತು ಸುವರ್ಣ ನ್ಯೂಸ್ ಜೇನುಗೂಡಿಗೆ ರೆಡ್ಡಿ ಸಹೋದರರು ಕೈ ಹಾಕಿದ್ದಾರೆ. ಈ ಬೆಳವಣಿಗೆಯನ್ನು ರೆಡ್ಡಿಗಳು ಕೈಗೆತ್ತಿಕೊಂಡಿರುವ 'ಆಪರೇಷನ್ ಕನ್ನಡ ಚಾನಲ್' ಅಥವಾ ಟಿವಿ ಪತ್ರಕರ್ತರ 'ಕುದುರೆ ವ್ಯಾಪಾರ' ಎಂದು ಕನ್ನಡ ಮಾಧ್ಯಮಲೋಕದಲ್ಲಿ ಬಣ್ಣಿಸಲಾಗುತ್ತಿದೆ.

  ಇದಲ್ಲದೆ, ಮುದ್ರಣ ಮಾಧ್ಯಮದಲ್ಲಿ ಪಳಗಿರುವ ವರದಿಗಾರರು ಹಾಗೂ ಟಿವಿ ಲೋಕದಲ್ಲಿ ಮಿಂಚಿ ಮೂಲೆಗುಂಪಾಗಿರುವ ಮುಖಗಳಿಗಾಗಿಯೂ ಜನಶ್ರೀ ತಡಕಾಟ ಆರಂಭಿಸಿದೆ ಎಂದು ವಿಶ್ವಸನೀಯವಾಗಿ ಗೊತ್ತಾಗಿದೆ. ಒಟ್ಟಾರೆ ಟಿವಿ ಮಾಧ್ಯಮದ ವ್ಯಾಕರಣವನ್ನು ಬಲ್ಲ ಮಾನವ ಸಂಪನ್ಮೂಲವನ್ನು ತನ್ನ ವಾಹಿನಿಯತ್ತ ಸೆಳೆದುಕೊಳ್ಳುವ ಗಂಭೀರ ಯತ್ನ ನಡೆದಿದೆ. ಅಂತೂ ಕ್ಯಾಮರಾಮನ್, ಕಾರ್ಯಕ್ರಮ ನಿರ್ವಾಹಕ, ವಾರ್ತಾ ವಾಚಕ ವಾಚಕಿ ಹುದ್ದೆಗಳಿಗೆ ಹೊಸ ಮಾರುಕಟ್ಟೆ ನಿರ್ಮಾಣವಾಗಿದೆ.

  ರಾಜಕಾರಣಿ ಜಾರಕಿಹೊಳಿ ಒಡೆತನದ ಕನ್ನಡ ಟಿವಿ ಸಮಯ 24x7 ಕನ್ನಡ ಟಿವಿ ಮಾರುಕಟ್ಟೆ ಪ್ರವೇಶಿಸಿದ್ದು TRP Graph ಮೇಲಕ್ಕೆತ್ತಲು ಅಂದರೆ ಜನಮನ ಗೆಲ್ಲಲು ಅನೇಕ ಕಸರತ್ತುಗಳನ್ನು ಮಾಡುತ್ತಿದೆ. ಈಟಿವಿ ಎಂದಿನಂತೆ ಕಾಲಕಾಲಕ್ಕೆ ಸುದ್ದಿಗಳನ್ನು ಓದಿ ಸುಮ್ಮನಾಗುತ್ತಿದ್ದರೆ ಉದಯ ಟಿವಿ ಮಾತ್ರ ಇಲ್ಲಿ ಏನೇನೂ ಸಂಭವಿಸುತ್ತಿಲ್ಲವೇನೋ ಎಂಬಂತೆ ಹಾಯಾಗಿದೆ. ಆದರೆ, ಅನಿತಾ ಕುಮಾರಸ್ವಾಮಿ ಮಾಲಿಕತ್ವದ ಕಸ್ತೂರಿ ಟಿವಿ ಹಾಗೂ ಜೀ ಕನ್ನಡ ಚಾನಲ್ ಕನ್ನಡಿಗರಿಗೆ ಮನರಂಜನೆ ಪೂರೈಸುವುದರಲ್ಲೇ ಕೃತಾರ್ಥತೆ ಕಂಡುಕೊಳ್ಳುತ್ತಿವೆ.

  ಕಸ್ತೂರಿ ಚಾನಲ್ ಸತತವಾಗಿ ನಷ್ಟ ಅನುಭವಿಸುತ್ತಿರುವುದರಿಂದ ಅದನ್ನು ಮಾರಿಬಿಟ್ಟರೆ ಹೇಗೆ ಎಂಬ ಯೋಚನೆಗಳು ಮಾಲಿಕರ ಮನೆಯಂಗಳದಲ್ಲಿ ರಾತ್ರಿ ಊಟದ ವೇಳೆ ಚರ್ಚೆಗೆ ಬರತ್ತೆ. ಇದಕ್ಕೆ ಪೂರಕವಾಗಿ ಸೋನಿ ಟಿವಿ ಕಸ್ತೂರಿಯನ್ನು ಕೊಳ್ಳಲು ಆಸಕ್ತಿಯಿಂದ ಮುಂದೆ ಬಂದಿವೆ ಎಂಬ ಸುದ್ದಿಗೆ ಹೊಸ ಜೀವ ಬಂದಿದೆ.

  ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X