For Quick Alerts
  ALLOW NOTIFICATIONS  
  For Daily Alerts

  ನಿಮ್ಮ ನೆಚ್ಚಿನ ಟಿವಿ ಚಾನಲ್ ಯಾವುದು?

  By Staff
  |
  ಕನ್ನಡ ಟಿವಿ ಒದಗಿಸುವ ಸುದ್ದಿ ಮತ್ತು ಮನರಂಜನೆ ಸಾಮಗ್ರಿಗಳಿಗೆ ರಾಜ್ಯ ಮತ್ತು ವಿದೇಶಿ ವೀಕ್ಷಕ ಸಮುದಾಯದ ಒಟ್ಟಾರೆ ಬೇಡಿಕೆ ಚೆನ್ನಾಗಿಯೇ ಇದೆ. ಕರ್ನಾಟಕದ ಆಗುಹೋಗುಗಳನ್ನು ಕಣ್ಣಾರೆ ಕಾಣಲು ಕನ್ನಡ ಟಿವಿ ಕಾರ್ಯಕ್ರಮಗಳನ್ನು ತಪ್ಪದೆ ವೀಕ್ಷಿಸುವ ಒಂದು ವರ್ಗ ಹಾಗೇಯಿದೆ. ಕೆಲವೊಮ್ಮೆ ಸಿಎನ್ಎನ್, ಎನ್ ಡಿಟಿವಿ ಅಥವಾ ತಮ್ಮ ದೇಶದಲ್ಲಿ ಜನಪ್ರಿಯವಾಗಿರುವ, ಸ್ಥಳೀಯ ವಾರ್ತೆಗಳನ್ನು ಕೊಡುವ ಇಂಗ್ಲಿಷ್ ಚಾನಲ್ಲುಗಳನ್ನು ನೋಡುವವರೂ ಕೂಡ ಮತ್ತೆ ಕನ್ನಡ ವಾಹಿನಿಗೆ ಟ್ಯೂನ್ ಮಾಡುವುದು ನಮ್ಮ ಟಿವಿ ಚಾನಲ್ಲುಗಳ ಜನಪ್ರಿಯತೆಗೆ ಸಾಕ್ಷಿಯಾಗಿದೆ.

  ಕನ್ನಡ ಟಿವಿ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ಇದೆ. ನಿಜ. ಟಿಆರ್ ಪಿ, ಅಂದರೆ ಎಷ್ಟು ಜನ ತಮ್ಮ ಟಿವಿ ನೋಡುತ್ತಾರೆ ಎಂಬ ಅಂಕಿಅಂಶದ ಮೇಲೆ ಟಿವಿಗೆ ಬಂಡವಾಳ ಹೂಡಿದ ಖಾಸಗಿ ಉದ್ಯಮಿ ಗಮನ ಇಟ್ಟೇ ಇರುತ್ತಾನೆ. ಅಂತೆಯೇ, ಅವನ ಇಚ್ಛೆಯಂತೆ ಕಾರ್ಯಕ್ರಮದ ರೂವಾರಿಗಳು ಜನಮನ ಗೆಲ್ಲುವ ರಸಗವಳವನ್ನು ರೂಪಿಸುತ್ತಲೇ ಇರಬೇಕಾಗುತ್ತದೆ, ಹಗಲೂ ಇರುಳೂ.

  ನಮ್ಮಲ್ಲಿ ಈಗ ಇರುವ ಟಿವಿ ಚಾನಲ್ಲುಗಳ ಪಟ್ಟಿಯತ್ತ ಗಮನ ಹರಿಸೋಣ. ಕೇಂದ್ರ ಸರಕಾರದ ದೂರದರ್ಶನ ಮತ್ತು ಚಂದನ, ಉದಯ ಟಿವಿ, ಮತ್ತು ಇದೇ ಗುಂಪಿನ ಉದಯ ವಾರ್ತೆಗಳು, ಉಷೆ, ಈಟಿವಿ ಕನ್ನಡ, ಕಸ್ತೂರಿ, ಜೀ ಕನ್ನಡ, ಟಿವಿ9, ಸುವರ್ಣ ಚಾನಲ್ ಪ್ರಮುಖವಾದ ಟಿವಿ ಕಟ್ಟೆಗಳಾಗಿವೆ. ಒಂದೊಂದೂ ಚಾನಲ್ಲುಗಳು ತಮ್ಮದೇ ಆದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳಿಂದ ತನ್ನ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಆದರೆ, ಕನ್ನಡದಲ್ಲೇ ತಿಳಿಯ ಬಯಸುವ ಕರ್ನಾಟಕ ನಾಗರಿಕನ ಅಪೇಕ್ಷೆಯನ್ನು ಸಮಗ್ರವಾಗಿ ಅರ್ಥೈಸಿಕೊಂಡು ಕಾರ್ಯಕ್ರಮ ರೂಪಿಸುವ ಚಾನಲ್ಲು ಇನ್ನೂ ಬಂದಿಲ್ಲ ಎಂದು ಹೇಳಬಹುದಾಗಿದೆ.

  ನೋಡಿ : ಧಾರಾವಾಹಿಗೆ ಈಟಿವಿ, ಚಲನಚಿತ್ರಗಳಿಗೆ ಉದಯ, ರಿಯಾಲಿಟಿ ಶೋಗಳಿಗೆ ಜೀ ಕನ್ನಡ, ಥಟ್ ಅಂತ ಹೇಳಿಗೆ ಚಂದನ, ಹೀಗೂ ಉಂಟೆಗೆ ಟಿವಿ9, ಬಾಲಜ್ಞಾನಿಗೆ ಸುವರ್ಣ, ಕೇವಲ ಹಾಡುಗಳು ಮತ್ತು ಚಿತ್ರ ತಮಾಶೆಗಳಿಗೆ ಉಷೆ ಮತ್ತು ನೆನಪು ಇಟ್ಟಕೊಳ್ಳುವಂತಹ ಯಾವುದೇ ಕಾರ್ಯಕ್ರಮ ಇಲ್ಲದ ಕಸ್ತೂರಿ ಚಾನಲ್ಲು. ಮನರಂಜನೆ ಬೇಕಾದವರು ಉದಯ ಮತ್ತು ಈಟಿವಿಗೆ ಮುಖಮಾಡಿದರೆ ಬ್ರೇಕಿಂಗ್ ನ್ಯೂಸ್ ಹಪಾಹಪಿಯ ಜನತೆ ಟಿವಿ9 ನೋಡುತ್ತಾರೆ, ಅದೂ ಯಾಕೋ ಬೋರಾದರೆ ಸುವರ್ಣ ಚಾನಲ್ಲು ಬಟನ್ ಒತ್ತುವುದು ರೂಢಿಯಾಗಿದೆ. ಈ ಮಧ್ಯೆ ಚಾನಲ್ಲುಗಳ ಹಂಗಿಲ್ಲದೆ ಜನ ರಾಶಿಭವಿಷ್ಯ, ಅಡುಗೆ, ವಿಸ್ಮಯ, ಸಿನಿಮಾ ಹಾಡುಗಳ ತುಣುಕುಗಳನ್ನು ನಿರಂತರವಾಗಿ ಬಯಸುತ್ತಾರೆ.

  ಟಿವಿ ಲೋಕದ ಈ ಏಕತಾನತೆಯನ್ನು ಮುರಿದು, ಪತ್ರಿಕೆಯ ಭಾಷೆಯಲ್ಲಿ ಹೇಳುವಂತೆ 'ಸಮಗ್ರ ಕುಟುಂಬಕ್ಕೆ ಸಮೃದ್ಧ ಸಾಪ್ತಾಹಿಕ' ಎನ್ನುವಂತ ಚಾನಲ್ಲು ಬರುತ್ತದೆ ಎಂದು ಟಿವಿ ಖರೀದಿಸಿ, ಕೇಬಲ್ ಸಂಪರ್ಕ ಪಡೆದಿರುವ ಗ್ರಾಹಕ ಕಾಯುತ್ತಲೇ ಇದ್ದಾನೆ. ಇಂಥವನ ನೀರೀಕ್ಷೆಯನ್ನು ನಾನು ಹುಸಿಮಾಡುವುದಿಲ್ಲ, ಒಳ್ಳೆ ಚಾನಲ್ಲು ಕೊಡುತ್ತೇನೆ ಎಂದು ಹೇಳುತ್ತಲೇ ಬಂದಿರುವ ಸಮಯ ಟಿವಿ ಈಗ ಮತ್ತೆ ಸುದ್ದಿಯಲ್ಲಿದೆ.

  ರಾಜಕಾರಣಿ ಜಾರಕಿಹೊಳಿ ಒಡೆತನದ ಸಮಯ ಟಿವಿ 2010ರ ಫೆಬ್ರವರಿಯಲ್ಲಿ ತೆರೆಕಾಣುತ್ತದೆ ಎಂಬ ಮಾತು ಈಗ ಮತ್ತೆ ಚಾಲ್ತಿಗೆ ಬಂದಿದೆ. ಜಾರಕಿಹೊಳಿ ನಿರ್ಮಾಣದ ಸಮಯ ಟಿವಿಗೆ ಮುಹೂರ್ತ ಆಗಿ ನಾಲಕ್ಕು ವರ್ಷಗಳೇ ಆದವು. ಈ ಮಧ್ಯೆ ಸಿನಿಮಾಗೆ ಹೀರೋ ಅಥವಾ ಹೀರೋ ದಿಢೀರ್ ಬದಲಾಗುವುವಂತೆ ಸಮಯ ಟಿವಿಯ ಚಾನಲ್ಲಿನ ನಿರ್ದೇಶಕರು ಬದಲಾಗುತ್ತಲೇ ಬಂದಿದ್ದಾರೆ. ಈ ನಿರ್ದೇಶಕರ ಸಾಲಿನಲ್ಲಿ ನಾವು ಕೇಳುತ್ತಿರುವ ಹೊಸ ಹೆಸರು ಶಿವಶಂಕರ್.

  ಮುಖ್ಯಸ್ಥರಾಗದೆ ಮುಖ್ಯರಾಗಿ ಈಟಿವಿಯಲ್ಲಿ ಕತ್ತೆಯಂತೆ ದುಡಿದ ಅನುಭವ ಶಿವಶಂಕರ್ ಅವರಿಗಿದೆ. ಟಿವಿ ಸಹವಾಸ ಸಾಕು ಎಂದು ಅವರ ಕೆಲಕಾಲ ಮುದ್ರಣ ಪತ್ರಿಕೋದ್ಯಮಕ್ಕೆ ಜಂಪ್ ಆಗಿ ಕನ್ನಡಪ್ರಭ ಮತ್ತು ಮಿಡ್ ಡೇ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದುಂಟು. ಈಗ ಅವರ ಗಮನ ಪುನಃ ಟಿವಿಕಡೆ ಹರಿದಿದ್ದು ಸಮಯ ಟಿವಿ ಚಾನಲ್ಲಿನ ಚುಕ್ಕಾಣಿ ಹಿಡಿದಿದ್ದಾರೆ. ಟಿವಿ ಜರ್ನಲಿಸ್ಟ್ ಅಥವಾ ಟಿವಿ ಭಾಷೆಗೆ ಒಗ್ಗುವ ಪರ್ತಕರ್ತರನ್ನು ಅವರ ಚಾನಲ್ ವತಿಯಿಂದ ನೇಮಕ ಮಾಡಿಕೊಳ್ಳಲಾಗುತ್ತಿದೆ ಕೂಡ. ಕೊನೆಗೂ ಜಾರಕಿಹೊಳಿ ಟಿವಿಯನ್ನು ತೇಲಿಬಿಡುತ್ತಾರಾ ಅಥವಾ ಮತ್ತೊಮ್ಮೆ ಅದು ನೇಪಥ್ಯಕ್ಕೆ ಸರಿದುಹೊಗುತ್ತದಾ ಎಂಬುದನ್ನು ಸಮಯವೇ ನಿರ್ಧರಿಸಬೇಕಾಗಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X