'ಸೀರಿಯಲ್ ಸಂತೆ'ಯಲ್ಲಿ ಲಕ್ಷ್ಮೀ ಬಾರಮ್ಮ
ಕಲರ್ಸ್ ಕನ್ನಡ ವಾಹಿನಿ ಸದಾ ವೀಕ್ಷಕರಿಗೆ ಹತ್ತಿರವಾಗುವ, ನೋಡುಗರ ಭಾವನೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಿರುತ್ತದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ 'ಲಕ್ಷ್ಮೀ ಬಾರಮ್ಮ ಸೀರಿಯಲ್ ಸಂತೆ' ಆಯೋಜಿಸಲಾಗಿತ್ತು.
ಮೊನಚು ಮಾತು, ತಿಳಿಹಾಸ್ಯ, ಅಮೋಘ ನೃತ್ಯಗಳು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ತಂಡದ ಲಚ್ಚಿ, ಗೊಂಬೆ, ಚಂದನ್, ಕಲ್ಪನಾ ಮುಂತಾದ ಜನಪ್ರಿಯ ಪಾತ್ರಧಾರಿಗಳು ಇದರಲ್ಲಿ ಪಾಲ್ಗೊಂಡಿರುವುದು ವಿಶೇಷ.

ಗೊಂಬೆ-ಚಂದನ್ ಜೋಡಿಯ 'ಬೊಂಬೆ ಬೊಂಬೆ ಬೊಂಬೆ' ಹಾಡಿಗೆ ಮಾದಕ ಡ್ಯಾನ್ಸ್, 'ಸನ್ ಸನನನನರೆ' ಹಾಡಿಗೆ ಲಚ್ಚಿಯ ಮೋಹಕ ಹೆಜ್ಜೆಗಳು ಇಡೀ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ಇದಲ್ಲದೇ ಒಂದೇ ಹಾಡಿಗೆ ಲಚ್ಚಿ-ಚಂದನ್-ಗೊಂಬೆ ನರ್ತನ, ಕಲ್ಪನಾ-ಕೈಲಾಶ್ 'ಗಡಿಬಿಡಿ ಗಂಡ' ಡ್ಯಾನ್ಸ್, ಇಡೀ ಕುಟುಂಬಕ್ಕೆಂದು ವಿಶೇಷವಾಗಿ ಸಂಯೋಜಿಸಲಾಗಿದ್ದ ಸಮೂಹ ನೃತ್ಯ ಹೀಗೆ ಎಲ್ಲಾ ಕಲಾವಿದರ 12 ನೃತ್ಯಗಳು 'ಸೀರಿಯಲ್ ಸಂತೆ'ಗೆ ಹೊಸ ಕಳೆ ನೀಡಿವೆ.

ಚಂದನ್ ಪಾತ್ರಧಾರಿಗೆ ಲಚ್ಚಿ ಮತ್ತು ಗೊಂಬೆಯ ಬಗ್ಗೆ ಎಷ್ಟು ಅರಿವಿದೆ ಎಂಬ ಬಗ್ಗೆ ಚುಟುಕು ಪ್ರಶ್ನೋತ್ತರ, ಲಚ್ಚಿಗೆ ವೀಕ್ಷಕರಿಂದ ಗೊಂಬೆಗಳನ್ನು ಸಂಗ್ರಹಿಸಿ ಗೊಂಬೆಗೆ ತಂದುಕೊಡುವ ಟಾಸ್ಕ್, ಗೊಂಬೆಗೆ ಪುಟ್ಟ ಮಗುವಿನಿಂದ 'ಸಾಮಾನ್ಯ ಜ್ಞಾನ' ಪರೀಕ್ಷೆ ರಂಜಿಸಲಿದೆ. [ಹೊಸ ಬಣ್ಣಗಳೊಂದಿಗೆ 'ಕಲರ್ಸ್ ಕನ್ನಡ' ಟಿವಿ ಆರಂಭ]

ಸುಷ್ಮಾ ಅವರ ನವಿರು ನಿರೂಪಣೆ, ಖ್ಯಾತ ಹಾಸ್ಯ ಕಲಾವಿದ ರಾಜು ತಾಳಿಕೋಟೆ ಅವರ ಕಚಗುಳಿ ಇಡುವ ಮಾತು ನಗೆಗಡಲಲ್ಲಿ ತೇಲಿಸಲಿದೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಿರ್ಮಾಪಕ ಮಿಲನ ಪ್ರಕಾಶ್, ನಿರ್ದೇಶಕ ಸತೀಶ್ ಕೃಷ್ಣ, ಬರಹಗಾರರು, ತಂತ್ರಜ್ಞರು, ಕಲಾವಿದರು ಭಾಗವಹಿಸಿದ್ದಾರೆ.

ಮೈಸೂರು 'ಲಕ್ಷ್ಮೀ ಬಾರಮ್ಮ- ಸೀರಿಯಲ್ ಸಂತೆ' ಜೂನ್ 14, ಭಾನುವಾರ ಸಂಜೆ 5 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











