»   » ತೆರೆಯಮೇಲೆ ನಿತ್ಯಾನಂದ, ಜತೆಗೆ ರಂಜಿತಾ

ತೆರೆಯಮೇಲೆ ನಿತ್ಯಾನಂದ, ಜತೆಗೆ ರಂಜಿತಾ

Posted By:
Subscribe to Filmibeat Kannada
ಹೊಸ ಚಿತ್ರಕ್ಕೆ ಸರಿಯಾದ ಕಥೆ ಇಲ್ಲ ಎಂದು ಕರುಬುವ ಪ್ರಮೇಯವೇ ಇಲ್ಲ. ಹೊಸ ಹೊಸ ಕಥೆಗಳನ್ನು ಹೇಳುವ ಸಮಾಜಕ್ಕೆ ಸದಾ ಒಂದು ಕಿವಿ ಪೆನ್ನು ಆಗಿರುವ ರಾಮ್ ಗೋಪಾಲ್ ವರ್ಮಾ ಹೊಸ ಹೊಸ ಕಥಾಪ್ರಸಂಗಳಿಗೆ ಕಾಯ್ತಾ ಇರ್ತಾರೆ. ಸಿಕ್ಕರೆ ಸಾಕು, ಚಕ್ ಅಂತ ಒಂದು ಸಿನಿಮಾ ತೆಗಿತಾರೆ. ನೈಜ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಿಸುವುದರಲ್ಲಿ ಎತ್ತಿದ ಕೈ ರಾಮ್ ಗೋಪಾಲ್ ವರ್ಮಾ ಈಗ ಅಂತಹ ಹೊಸ ಸಾಹಸಕ್ಕೆ ಮತ್ತೆ ಕೈಹಾಕಿದ್ದಾರೆ.

ಮುಂಬೈನಲ್ಲಿ ಪಾಕಿ ಪಾತಕಿಗಳು ನಡೆಸಿದ ಹತ್ಯಾಕಾಂಡದ ರಕ್ತದ ಕಣಗಳನ್ನು ತಾಜ್ ಹೊಟೇಲಿನ ನೆಲಹಾಸಿನಿಂದ ಇನ್ನೂ ಒರೆಸಿರಲಿಲ್ಲ, ಆಗಲೇ ವರ್ಮಾ ಅಲ್ಲಿಗೆ ಅಂದಿನ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಅವರ ಮಗನೊಂದಿಗೆ ಅಲ್ಲಿಗೆ ಹಾಜರಾಗಿ ವಿವಾದ ಸೃಷ್ಟಿಸಿದ್ದರು. ವಿವಾದಾತ್ಮಕ ವಿಷಯಗಳಿಗೆ ಮುಗಿಬೀಳುವುದರಲ್ಲಿ ವರ್ಮಾ ಯಾವತ್ತೂ ಮುಂದು.

ಈಗ, ಸ್ವಾಮಿ ನಿತ್ಯಾನಂದ ಮತ್ತು ನಟಿ ರಂಜಿತಾ ರೊಮ್ಯಾಂಟಿಕ್ ಕಥಾನಕವನ್ನು ತೆರೆಗೆ ತರಲು ರಾಮ್ ಸಿದ್ಧರಾಗಿದ್ದಾರೆ. ಚಿತ್ರಕ್ಕೆ ಹೆಸರೂ ಫಿಕ್ಸ್ ಆಗಿದೆ. ಗಾಡ್ ಅಂಡ್ ಸೆಕ್ಸ್ ಶೀರ್ಷಿಕೆಯ ಚಿತ್ರಕ್ಕೆ ಅವರೀಗಾಗಲೇ ಚಿತ್ರಕಥೆ ಬರೆಯುವುದಕ್ಕೂ ಶುರು ಹಚ್ಚಿಕೊಂಡಿದ್ದಾರಂತೆ.

ಆಶ್ರಮಗಳಲ್ಲಿ ಏನೇನು ನಡೆಯುತ್ತದೋ ಅವೆಲ್ಲವನ್ನೂ ತೆರೆದು ತೋರಿಸುವುದು ನನ್ನ ಹೊಸ ಚಿತ್ರದ ಉದ್ದೇಶ ಎಂದು ಸ್ಪಷ್ಟಪಡಿಸಿರುವ ರಾಮ್ ಗೋಪಾಲ್ ವರ್ಮಾ ಅವರ ನೂತನ ಚಿತ್ರಕ್ಕೆ ನಿತ್ಯಾನಂದ ಮತ್ತು ಅವನೊಂದಿಗೆ ಅನುರಕ್ತಳಾದ ಭಕ್ತೆ ರಂಜಿತಾಳೇ ಪ್ರೇರಣೆ. ಆಶ್ರಮದ ಹೆಸರಿನಲ್ಲಿ, ಸ್ವಾಮೀಜಿಯ ಸೋಗಿನಲ್ಲಿ ನಡೆಯುವ ಹಗರಣಗಳ ಬಗೆಗೆ ನನಗೆ ಸದಾ ಕುತೂಹಲವಿತ್ತು. ಇದೀಗ ಕರ್ಮಕಾಂಡವಾಗಿರುವ ನಿತ್ಯಾನಂದ ಲೈಂಗಿಕ ಹಗರಣ ಚಿತ್ರ ನಿರ್ಮಿಸಲು ಸ್ಫೂರ್ತಿ ನೀಡಿತು ಎಂದಿದ್ದಾರೆ ರಾಮ್.

ನಿತ್ಯಾನಂದನಾಗಿ...ರಂಜಿತಾಳಾಗಿ...! ಸದ್ಯದಲ್ಲೇ ನಟ ನಟಿಯರ ಹೆಸರುಗಳು ಹೊರಬೀಳಲಿವೆ. ಅಲ್ಲಿಯವರೆಗೆ ಆಶ್ರಮದೊಳಗೆ ಸ್ವಾಮಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ, ನಿಶ್ಯಬ್ಧ! ಅಂದಹಾಗೆ, ಸಾನಿಯಾ ಮತ್ತು ಮಲ್ಲಿಕ್ ಮದುವೆ ವಿವಾಹ ಹಗರಣ ಕೂಡ ಮಿತಿಮೀರುತ್ತಿದ್ದು ಒಂದಲ್ಲ ಒಂದು ದಿನ ರಾಮ್ ಈ ಕಥೆಯನ್ನೂ ಚಿತ್ರಕಹಾನಿ ಮಾಡಿದರೆ ಅಚ್ಚರಿಯಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada