»   » ಮದುವೆ ಬಗ್ಗೆ ವಿವೇಕ ಮೂಡಿದೆ

ಮದುವೆ ಬಗ್ಗೆ ವಿವೇಕ ಮೂಡಿದೆ

Posted By:
Subscribe to Filmibeat Kannada
ಪ್ರೇಮ ವಿವಾಹದದ ಬಗ್ಗೆ ಒಬೆರಾಯ್ ಹುಡ್ಗನ ವಿವೇಕದ ಮಾತುಗಳನ್ನು ಕೇಳಿ, ಬಾಲಿವುಡ್ ಗೆ ಬಾಲಿವುಡ್ಡೇ ಹುಬ್ಬೇರಿಸಿದೆ. ಅಮರ ಪ್ರೇಮಿ ಎಂಬ ಹಣೆಪಟ್ಟಿ ಹೊತ್ತು,ಪ್ರೀತಿ ಎಂಬ ಐಶ್ವರ್ಯ ಕೈಗೆಟುಕಿತು ಎಂದು ಕುಣಿದಾಡಿದ್ದ ಈ ನವಾಬ ಕೊನೆಗೆ ಪ್ರೇಮ ವ್ಯವಹಾರಕ್ಕೆ ಗುಡ್ ಬೈ ಹೇಳಿದ್ದು ಹಳೆ ಸಂಗತಿ. ಕಳೆದ ನಾಲ್ಕು ವರ್ಷದಲ್ಲಿ ಕನಿಷ್ಠ ಎಂದರೂ ನಲ್ವತ್ತು ಜನ ಹುಡುಗಿರ ಜೊತೆ ನನ್ನ ಹೆಸರು ತಗುಲಿ ಹಾಕಿದ್ದೀರಾ ನೀವು ಮಾಧ್ಯಮದವರು, ಆದ್ರೆ ಈಗ ಅದು ಹಳೆ ಕಥೆ. ನಾನು ಪ್ರೀತಿಸಿದರು ಮದುವೆ ಆಗಿದ್ದಾರೆ. ಅವರು ಸುಖವಾಗಿರಲಿ ಎಂದು ನಗುಮುಖದಲ್ಲೇ ಉತ್ತರಿಸಿದರು ವಿವೇಕ್.

ಪ್ರೀತಿ ಪ್ರೇಮ ಎಂದು ಯೌವನ ಹೊಳೆಯಲ್ಲಿ ಈಜಾಡುವುದಷ್ಟೇ ಜೀವನವಲ್ಲ ಎಂಬ ಸತ್ಯ ಕಂಡುಕೊಂಡ ವಿವೇಕ್, ಬಡವರ, ದೀನ ದಲಿತರ ಉದ್ಧಾರಕ್ಕೆ ಶ್ರಮಿಸತೊಡಗಿದರು. ತಮ್ಮ ತಾಯಿ ಯಶೋಧರಾ ಹೆಸರಿನಲ್ಲಿರುವ ಫೌಂಡೇಶನ್ ಮೂಲಕ ಅನೇಕರಿಗೆ ನೆರವಿನ ಹಸ್ತ ನೀಡಿದ್ದಾರೆ. ಶ್ರೀರಾಮಚಂದ್ರಾಪುರ ಮಠದ ಸೇವಾಕರ್ತರಾಗಿ ದುಡಿದಿದ್ದಾರೆ, ತ್ಸುನಾಮಿ, ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಈ ಮೂಲಕ ಪ್ರೇಮದ ಕಹಿಯನ್ನು ಮರೆತರು. ಗುಲ್ಜಾರ್ , ಪಾಬ್ಲೊ ನೆರುಡಾ ಕವನಗಳನ್ನು ಓದುತ್ತಾ, ಓದುತ್ತಾ ಜೀವನ ಪ್ರೀತಿ, ವಿವೇಕ ಬೆಳೆಸಿಕೊಂಡರು ಒಬೆರಾಯ್ ಹುಡ್ಗ.

ಈಗ 33 ವರ್ಷ ವಯಸ್ಸಿನ ವಿವೇಕ್ ಗೆ ಸಿಗರೇಟ್ ಚಟವಿಲ್ಲ, ವಿಶ್ವ ಆರೋಗ್ಯ ಸಂಸ್ಥೆಯ ತಂಬಾಕು ವಿರೋಧಿ ವಕ್ತಾರ ಬೇರೆ. ಹುಡುಗಿರ ಹಿಂದೆ ಮುಂದೆ ಸುತ್ತುವುದನ್ನಂತೂ ನಿಲ್ಲಿಸಿಯಾಗಿದೆ. ಮದುವೆ ಆಗುವ ಮನಸ್ಸು ಮೂಡಿದೆ. ಅರೆಂಜ್ ಮ್ಯಾರೇಜ್ ಬೆಸ್ಟ್ ಎನ್ನುತ್ತಿರುವ ವಿವೇಕ್, ಅವರ ತಂದೆ ತಾಯಿಯ ಉದಾಹರಣೆ ಕೊಡುತ್ತಾರೆ. ಮನೆ ಮಂದಿಗೆಲ್ಲಾ ಒಪ್ಪಿಗೆಯಾಗುವ ಕನ್ಯಾಮಣಿಯನ್ನೇ ಮದುವೆಯಾಗುವುದು ಎಂದು ಭೀಷ್ಮ ಪ್ರತಿಜ್ಞೆ ಮಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಗರಡಿಯಿಂದ ಬಂದ ಹುಡುಗನಾದರೂ ವಿವೇಕ್ ನಂತರ ಬೇರೆ ಬೇರೆ ಕಾರಣಗಳಿಗೆ ಬಗೆ ಬಗೆ ಚಿತ್ರಗಳಲ್ಲಿ ನಟಿಸುವ ಮನಸ್ಸು ಮಾಡಿ, ಒಮ್ಮೆ ದಕ್ಕಿದ್ದ ಸ್ಟಾರ್ ಗಿರಿ ಕೀರಿಟವನ್ನು ತಾವೇ ಗೊತ್ತಿಲ್ಲದ್ದಂತೆ ಕೆಳಗುರುಳಿಸಿದ್ದು ಇತಿಹಾಸ. ಸದ್ಯ ಪ್ರಿನ್ಸ್ ಚಿತ್ರದ ನಂತರ ಮತ್ತೆ ವರ್ಮಾರ ಬಹುನಿರೀಕ್ಷಿತ ರಕ್ತ ಚರಿತದಲ್ಲಿ ಪರಿಟಾಲ ರವಿ ಪಾತ್ರಧಾರಿಯಾಗಿ ಕಾಣಿಸಲಿದ್ದಾರೆ ವಿವೇಕ್. ಒಟ್ಟಿನಲ್ಲಿ ಭಗ್ನ ಪ್ರೇಮಿಯಾದರೂ, ದೇವದಾಸನಾಗದೆ, ಹೊಸ ಜೀವನದ ಕನಸು ಕಾಣುತ್ತಿರುವ ವಿವೇಕ್ ಗೆ ಟ್ವೀಟ್ ಮಾಡಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada