»   » ಐಶ್ವರ್ಯ ರೈ ಮನನೋಯಿಸಿದ್ದಕ್ಕೆ ಅಭಿ ಗರಂ

ಐಶ್ವರ್ಯ ರೈ ಮನನೋಯಿಸಿದ್ದಕ್ಕೆ ಅಭಿ ಗರಂ

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ಪತ್ರಿಕೆಯೊಂದರ ಮೇಲೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಗರಂ ಆಗಿದ್ದಾರೆ. ಐಶ್ವರ್ಯ ರೈ ಬಚ್ಚನ್ ಆರೋಗ್ಯದ ಬಗ್ಗೆ ಇಲ್ಲಸಲ್ಲದ ವರದಿಯನ್ನು ಪ್ರಕಟಿಸಿರುವ ಆಂಗ್ಲ ಪತ್ರಿಕೆಯ ವಿರುದ್ಧ ಅಭಿಷೇಕ್ ಬಚ್ಚನ್ ನಖಶಿಖಾಂತ ಕೋಪಗೊಂಡಿದ್ದಾರೆ.

ಐಶ್ವರ್ಯ ರೈ ಕ್ಷಯರೋಗದಿಂದ ಬಳಲುತ್ತಿದ್ದು ಸದ್ಯಕ್ಕೆಅವರು ಗರ್ಭವತಿಯಾಗುವುದು ಅನುಮಾನ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿತ್ತು. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಷೇಕ್, ಪತ್ರಿಕೆ ಪ್ರಕಟಿಸಿರುವ ವರದಿಯಲ್ಲಿ ಯಾವುದೇ ಹುರುಳಿಲ್ಲ. ನೀವೇನು ಗಾಬರಿಯಾಗುವ ಅವಶ್ಯಕತೆಯೂ ಇಲ್ಲ. ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ಉತ್ತರ ನೀಡಿದ್ದಾರೆ.

''ಪತ್ರಿಕೆಯಲ್ಲಿನ ವರದಿ ವಾಕರಿಕೆ ಬರಿಸುವಂತಿದೆ ಹಾಗೂ ಹೆದರಿಕೆ ಹುಟ್ಟಿಸುವಂತಿದೆ. ಮಹಿಳೆಯೊಬ್ಬಳ ಬಗ್ಗೆ ಈ ರೀತಿ ಬೇಜವಾಬ್ದಾರಿ ವರದಿ ಪ್ರಕಟಿಸಿರುವ ಬಗ್ಗೆ ಅಸಹ್ಯವೆನಿಸುತ್ತದೆ.ಗಂಡನಾಗಿ ನಾನು ಈ ರೀತಿಯ ಹೊಲಸು ಸುದ್ದಿಯ ಬಗ್ಗೆ ನಿಜಕ್ಕೂ ಬೇಸರಗೊಂಡಿದ್ದೇನೆ. ಮಾಧ್ಯಮಗಳು ನನ್ನ ಬಗ್ಗೆ ಏನೇ ಬರೆದರೂ ನಾನು ಇದುವರೆಗೂ ಪ್ರತಿಕ್ರಿಯಿಸಿರಲಿಲ್ಲ. ಬರೆಯುವುದಕ್ಕೂ ಒಂದು ಮಿತಿ ಇರಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಐಶ್ವರ್ಯ ರೈ ಕ್ಷಯರೋಗದಿಂದ ಬಳಲುತ್ತಿದ್ದಾರೆಂದು 'ಮುಂಬೈ ಮಿರರ್' ಪತ್ರಿಕೆ ಸುದ್ದಿ ಪ್ರಕಟಿಸಿತ್ತು. ವರದಿಗಾರನ ಹೆಸರನ್ನು ಹಾಕದೆ ಈ ಸುದ್ದಿಯನ್ನು ಮುಂಬೈ ಮಿರರ್ ಅಚ್ಚುಹಾಕಿತ್ತು. ನಿಮ್ಮ ಕೆಲಸದ ಬಗ್ಗೆ ನಿಮಗೆ ನಿಜವಾದ ಕಾಳಜಿ ಇದ್ದಿದ್ದರೆ ವರದಿಗಾರನ ಹೆಸರನ್ನು ಪ್ರಕಟಿಸಬೇಕಾಗಿತ್ತು ಎಂದು ಅಭಿಷೇಕ್ ಪತ್ರಿಕೆಗೆ ಸವಾಲೆಸೆದಿದ್ದಾರೆ.

ಈ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಅಭಿಷೇಕ್ ಬಚ್ಚನ್ ಅಭಿಮಾನಿಗಳು ಐಶ್ವರ್ಯ ರೈ ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಷೇಕ್, ನಿಮ್ಮ ಕಾಳಜಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಐಶ್ವರ್ಯ ರೈ ಮತ್ತು ನಮ್ಮ ಕುಟುಂಬದ ಬಗ್ಗೆ ನಿಮ್ಮ ಪ್ರೀತಿ ಹೀಗೆ ಇರಲಿ ಎಂದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada