»   »  ರೆಹಮಾನ್,ಅನಿಲ್ ವಿರುದ್ಧ ಮಾನನಷ್ಟ ದಾವೆ

ರೆಹಮಾನ್,ಅನಿಲ್ ವಿರುದ್ಧ ಮಾನನಷ್ಟ ದಾವೆ

Posted By:
Subscribe to Filmibeat Kannada

ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ಬಾಲಿವುಡ್ ನಟ ಅನಿಲ್ ಕಪೂರ್ ಮೇಲೆ ಕೊಳೆಗೇರಿ ನಿವಾಸಿಗಳ ಸಂಘ ಮಾನನಷ್ಟ ಮೊಕದ್ದಮೆ ಹೂಡಿದೆ. ಉತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದಿರುವ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ ಭಾರತೀಯರನ್ನು ನಾಯಿಗಳೆಂದೂ ಮತ್ತು ಕೊಳೆಗೇರಿ ನಿವಾಸಿಗಳನ್ನು ಸ್ಲಂ ನಾಯಿಗಳೆಂದು ಕರೆದಿರುವ ಬಗ್ಗೆ ಸಂಘ ಆಕ್ಷೇಪಣೆ ವ್ಯಕ್ತಪಡಿಸಿದೆ.

ಪಾಟ್ನಾದ ಸ್ಥಳೀಯ ನ್ಯಾಯಾಲಯದಲ್ಲಿ ಕೊಳೆಗೇರಿ ಸಂಘದ ಪ್ರಧಾನ ಕಾರ್ಯದರ್ಶಿ ತಪೇಶ್ವರ್ ವಿಶ್ವಕರ್ಮ ಎಂಬುವರು ದೂರು ದಾಖಲಿಸಿದ್ದಾರೆ. 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ ಕೆಟ್ಟ ಅಭಿರುಚಿಯುಳ್ಳ ಚಿತ್ರವಾಗಿದ್ದು, ಭಾರತೀಯರನ್ನು ಅವಮಾನಿಸುವಂತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಚಿತ್ರದ ಶೀರ್ಷಿಕೆ ಆಕ್ಷೇಪಾರ್ಹವಾಗಿದೆ. ಅಷ್ಟೇ ಅಲ್ಲ ಭಾರತೀಯರನ್ನು ನಾಯಿಗಳೆಂದು ಕೊಳೆಗೇರಿ ನಿವಾಸಿಗಳನ್ನು ಸ್ಲಂ ನಾಯಿಗಳು ಎಂದು ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ಸಂಘ ಆರೋಪಿಸಿದೆ.

ಈ ಕೇಸನ್ನು ಫೆಬ್ರವರಿ 5ರಂದು ವಿಚಾರಣೆ ಮಾಡಲಾಗುತ್ತದೆ ಎಂದು ಮುಖ್ಯ ಮ್ಯಾಜಿಸ್ಟ್ರೇಟರ್ ರಾಘವೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಸಾಕ್ಷಾಧಾರಗಳನ್ನು ನ್ಯಾಯಾಲಕ್ಕೆ ಒದಗಿಸುವಂತೆ ವಿಶ್ವಕರ್ಮ ಅವರಿಗೆ ನ್ಯಾಯಾಲಯ ಸೂಚಿಸಿದೆ.

"Slumdog Millionaire" ಎಂದರೆ ಹಿಂದಿಯಲ್ಲಿ ಸ್ಲಂ ನಿವಾಸಿ ಕೋಟ್ಯಾಧಿಪತಿ ನಾಯಿ ಎಂಬರ್ಥ ಬರುತ್ತದೆ. ಈ ರೀತಿಯ ಆಕ್ಷೇಪಾರ್ಹ ಹೆಸರುಗಳನ್ನು ಬಳಸುವುದು ಮಾನವ ಹಕ್ಕುಗಳು ಮತ್ತು ಗೌರವವನ್ನು ಗಾಳಿಗೆ ತೂರಿದಂತೆ ಆಗುವುದಿಲ್ಲವೆ? ಎನ್ನುತ್ತಾರೆ ವಿಶ್ವಕರ್ಮ. ರೆಹಮಾನ್ ಮತ್ತು ಅನಿಲ್ ಕಪೂರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿದ್ದೇನೆ ಎನ್ನ್ನುತ್ತಾರೆ ಅವರು.

ಮುಂಬೈ ಕೊಳೆಗೇರಿಗೆ ಸೇರಿದ ಅನಾಥ ಬಾಲಕನೊಬ್ಬ ಕೋಟ್ಯಾಧಿಪತಿಯಾಗುವ ಕಥಾ ಹಂದರವನ್ನು ಸ್ಲಂ ಡಾಗ್ ಮಿಲಿಯನೇರ್ ಹೊಂದಿದೆ. ಈ ಚಿತ್ರ ಇತ್ತೀಚೆಗಷ್ಟೇ ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರಿಗೂಒಂದು ಪ್ರಶಸ್ತಿ ಬಂದಿತ್ತು. ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರನ್ನು ಬಿಟ್ಟು ಸಂಗೀತ ನಿರ್ದೇಶಕ ಮತ್ತು ನಟನ ಮೇಲೆ ಮಾನನಷ್ಟ ದಾವೆ ಹೂಡಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

(ಏಜೆನ್ಸೀಸ್)
ಕೊಳಚೆ ನಾಯಿ ಕೋಟೀಶ್ವರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada