ದಿಲೀಪ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ, ಕುಟುಂಬ ಆಪ್ತರಿಂದ ಮಾಹಿತಿ
ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಕುಟುಂಬ ಆಪ್ತ ಫೈಸಲ್ ಫಾರೂಕಿ ಶುಕ್ರವಾರ ಪಿಟಿಐಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
''ದಿಲೀಪ್ ಕುಮಾರ್ ಆರೋಗ್ಯವಾಗಿದ್ದಾರೆ. ವೈದ್ಯರ ಸಲಹೆಯಂತೆ ಸ್ವಲ್ಪ ದಿನ ಆಸ್ಪತ್ರೆಯಲ್ಲೇ ಇರಲಿದ್ದಾರೆ. ಆರೈಕೆ ಮಾಡಲು ವೈದ್ಯರಿಗೂ ಸಹಾಯವಾಗಲಿದೆ. ಒಂದೆರಡು ದಿನದ ಬಳಿಕ ಡಿಸ್ಚಾರ್ಜ್ ಆಗಲಿದ್ದಾರೆ'' ಎಂದು ಫೈಸಲ್ ಫಾರೂಕಿ ತಿಳಿಸಿದ್ದಾರೆ.
98 ವರ್ಷದ ದಿಲೀಪ್ ಕುಮಾರ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಜೂನ್ 29 ರಂದು ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ನಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಉಸಿರಾಟದಲ್ಲಿ ಏರುಪೇರಾಗಿತ್ತು. ಸದ್ಯ ತೀವ್ರ ನಿಗಾ ಘಟಕದಲ್ಲಿ ದಿಲೀಪ್ ಕುಮಾರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜೂನ್ ಆರಂಭದಲ್ಲೂ ಆಸ್ಪತ್ರೆ ಸೇರಿದ್ದ ನಟ
ಜೂನ್ ತಿಂಗಳ ಆರಂಭದಲ್ಲಿಯೂ ದಿಲೀಪ್ ಕುಮಾರ್ ಅನಾರೋಗ್ಯದ ಕಾರಣದಿಂದ ಆಸ್ಪತ್ರೆ ಸೇರಿದ್ದರು. ಮೂರ್ನಾಲ್ಕು ದಿನದ ನಂತರ ಡಿಸ್ಚಾರ್ಜ್ ಆದರು. ಇದೀಗ, ಜೂನ್ ತಿಂಗಳಲ್ಲಿ ಎರಡನೇ ಬಾರಿ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
1998ರ ಬಳಿಕ ಸಿನಿಮಾದಲ್ಲಿ ನಟಿಸಿಲ್ಲ.
'ಮುಘಲ್-ಎ-ಅಜಮ್', 'ರಾಮ್ ಔರ್ ಶ್ಯಾಮ್', 'ಕೋಹಿನೂರ್' ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ಕುಮಾರ್ 1998 ರಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ದಿಲೀಪ್ ಕುಮಾರ್ ನಿಜವಾದ ಹೆಸರು ಮೊಹಮ್ಮದ್ ಯೂಸಫ್ ಖಾನ್.


Click it and Unblock the Notifications











