ಇಷಾ ಡಿಯೋಲ್ ಬೆನ್ನೇರಿದ ಗಾಯತ್ರಿ ಮಂತ್ರ

ತನ್ನ ಬೆನ್ನ ಮೇಲೆ ಗಾಯತ್ರಿ ಮಂತ್ರದ ಹಚ್ಚೆ ಹಾಕಿಸಿಕೊಂಡು ಅಮ್ಮನ ಜತೆ ತಿರುಮಲ ತಿರುಪತಿಗೆ ಭೇಟಿ ನೀಡಿದ್ದಾರೆ. ಅಮ್ಮ ಮಗಳಿಬ್ಬರೂ ಏಡುಕೊಂಡಲವಾಡನ ದರ್ಶನಭಾಗ್ಯ ಪಡೆದು ಕೃತಾರ್ಥರಾಗಿದ್ದಾರೆ. ಇಷಾ ಅವರ ಬೆನ್ನಮೇಲಿದ್ದ ಚಿತ್ತಾರವನ್ನು ನೋಡಿದ ಕೆಲವರು ಇದೇನಪ್ಪಾ ಇದು ಎಂದು ಬೋಳುತಲೆ ಸವರಿಕೊಂಡಿದ್ದಾರೆ.
ಕಡೆಗೆ ಅದು ಚಿತ್ತಾರವಲ್ಲ ಗಾಯತ್ರಿ ಮಂತ್ರ ಎಂದು ಗೊತ್ತಾಗಿದೆ. ಆಕೆಯ ಹೊಸ ವರಸೆಯನ್ನು ನೋಡಿದವರು ನಾನಾ ತೆರನಾಗಿ ಮಾತನಾಡಿಕೊಂಡು ಬೆನ್ನು ಸವರಿಕೊಂಡಿದ್ದಾರೆ. ಕೆಲವರಂತೂ ಇಷಾ ಈ ರೀತಿ ಮಾಡಿದ್ದು ಸರಿಯಲ್ಲ. ಗಾಯತ್ರಿ ಮಂತ್ರಕ್ಕೆ ಅಪಚಾರ ಮಾಡಿದ್ದಾರೆ ಎಂದಿದ್ದಾರೆ.
ಬುಧವಾರ (ಡಿ.12) ಸುಪ್ರಭಾತ ಸಮಯಕ್ಕೆ ವಿಐಪಿ ದ್ವಾರದ ಮೂಲಕ ಆಲಯ ಪ್ರವೇಶಿಸಿದ ಹೇಮಾ ಮಾಲಿನಿ ಕುಟುಂಬ ಸ್ವಾಮಿಗೆ ವಿಶೇಷ ಪೂಜೆಯನ್ನೂ ಸಲ್ಲಿಸಿದೆ. ಕೆಲತಿಂಗಳ ಹಿಂದಷ್ಟೇ ಇಷಾ ಡಿಯೋಲ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದರು. ಮದುವೆ ಬಳಿಕ ಇದೇ ಮೊದಲ ಬಾರಿಗೆ ತಿಮ್ಮಪ್ಪನ ದರ್ಶನಭಾಗ್ಯ ಪಡೆದರು.
ಸಂಸ್ಕೃತದಲ್ಲಿ ತಮ್ಮ ಬೆನ್ನ ಮೇಲೆ ಗಾಯತ್ರಿ ಮಂತ್ರವನ್ನು ಹಚ್ಚೆ ಹಾಕಿಸಿಕೊಂಡಿರುವ ಇಷಾ ಡಿಯೋಲ್ ಈ ಬಗ್ಗೆ ಏನನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ಅವರ ಬೆನ್ನಿನ ಮೇಲೆ ಈ ರೀತಿ ವೈದಿಕ ಮಂತ್ರಗಳನ್ನು ಹಾಕಿಸಿಕೊಂಡಿರುವುದಂತೂ ಚರ್ಚನೀಯ ವಿಷಯವಾಗಿದೆ. (ಏಜೆನ್ಸೀಸ್)


Click it and Unblock the Notifications











