ಬಾಲಿವುಡ್ ನಟ ಸಂಜಯ್ ದತ್ ಗೆ 5 ವರ್ಷ ಜೈಲು

ಟಾಡಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಒಂದು ವರ್ಷ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಈಗಾಗಲೆ ಸಂಜಯ್ ದತ್ ಜೈಲಿನಲ್ಲಿ 18 ತಿಂಗಳು ಕಳೆದಿದ್ದಾರೆ. ಉಳಿದ 3 ವರ್ಷ 6 ತಿಂಗಳ ಕಾಲಾವಧಿ ಶಿಕ್ಷೆಯನ್ನು ಜೈಲಿನಲ್ಲಿ ಕಳೆಯಬೇಕಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಯಾಕೂಬ್ ಮೆನನ್ ಅವರ ವಿರುದ್ಧ ಆರೋಪವನ್ನೂ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಅವರಿಗೆ ಮರದಂಡನೆ ಶಿಕ್ಷೆ ವಿಧಿಸಿದೆ. "ಸ್ಫೋಟ ಪ್ರಕರಣದಲ್ಲಿ ಮೆನನ್ ಪಾತ್ರ ಇದೆ ಎಂಬ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ" ಎಂದು ಕೋರ್ಟ್ ಸ್ಪಷ್ಟವಾಗಿ ತನ್ನ ತೀರ್ಪಿನಲ್ಲಿ ಹೇಳಿದೆ.
ಈ ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್ಐ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾತ್ರ ಇದೆ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ಪ್ರಕರಣ ಉಳಿದ ಹತ್ತು ಮಂದಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ.
ಯಾಕೂಬ್ ಮೆನನ್ ಸಹೋದರ ಟೈಗರ್ ಮೆನನ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಈ ಸ್ಫೋಟದ ಮಾಸ್ಟರ್ ಮೈಂಡ್ ಗಳು. ಸ್ಫೋಟದ ನಂತರ ಇವರು ದೇಶ ಬಿಟ್ಟು ತಲೆಮರೆಸಿಕೊಂಡಿದ್ದಾರೆ. 1993ರಲ್ಲಿ ನಡೆದ ಮುಂಬೈ ಬಾಂಬ್ ಸ್ಫೋಟದಲ್ಲಿ ಒಟ್ಟು 257 ಮಂದಿ ಸಾವಪ್ಪಿದರೆ 713 ಮಂದಿ ಗಾಯಗೊಂಡರು. (ಪಿಟಿಐ)


Click it and Unblock the Notifications











