ಟೀಕಿಸಿದ ಟ್ರೋಲ್‌ಗಳಿಗೆ ಸೋನು ಸೂದ್ ಖಡಕ್ ಉತ್ತರ
ನಟ ಸೋನು ಸೂದ್ ಅನ್ನು ಪರಿಚಯಿಸುವ ಅಗತ್ಯವಿಲ್ಲ. ಕೊರೊನಾ ಲಾಕ್‌ಡೌನ್ ಅವದಿಯಲ್ಲಿ ಸೋನು ಸೂದ್ ಮಾಡಿದ ಮಾನವೀಯ ಕಾರ್ಯ ನೆನಪಿನಿಂದ ಸುಲಭಕ್ಕೆ ಮಾಸುವುದಲ್ಲ.
ನಟ ಸೋನು ಸೂದ್ ಅನ್ನು ಅಭಿಮಾನಿಗಳು (ಮಸೀಯಾ) ದೇವರು ಎಂದು ಕರೆದರು, ಅವರಿಗಾಗಿ ಗುಡಿಗಳನ್ನು ಕಟ್ಟಿದರು. ಅವರ ಹೆಸರನ್ನು ಮಕ್ಕಳಿಗೆ ಇಟ್ಟರು, ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡರು. ಅವರ ಹೆಸರಲ್ಲಿ ಪೂಜೆಗಳು ನಡೆದವು.
ಸೋನು ಸೂದ್‌ಗೆ ಭಾರಿ ಸಂಖ್ಯೆಯ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಆದರೆ ಅದರ ಜೊತೆಗೆ ಸೋನು ಸೂದ್ ಕೆಲಸಗಳನ್ನು ಅನುಮಾನದಿಂದ ನೋಡುವ, ಕಾಲೆಳೆಯುವ, ಸೋನು ಸೂದ್ ಬಗ್ಗೆ ಸುಳ್ಳು ಹಬ್ಬಿಸುವವರೂ ಇದ್ದಾರೆ.

ಇತ್ತೀಚೆಗೆ ಕೆಲವು ಟ್ರೋಲಿಗರು ಸೋನು ಸೂದ್ ಅನ್ನು ವ್ಯಂಗ್ಯ ಮಾಡಿದ್ದರು. 'ಸೋನು ಸೂದ್ ತಮ್ಮ ಪುಸ್ತಕ 'ಐ ಆಮ್ ನೋ ಮಸಿಯಾ' ಪುಸ್ತಕದಲ್ಲಿ ತಮ್ಮನ್ನು ತಾವು ಮಸೀಯಾ (ದೇವರು) ಎಂದು ಕರೆದುಕೊಂಡಿದ್ದಾರೆ' ಎಂದು ಟೀಕಿಸಿದ್ದರು.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋನು ಸೂದ್, 'ಅವರೆಲ್ಲಾ ಹಣಕೊಟ್ಟು ನೇಮಿಸಲ್ಪಟ್ಟ ಟ್ರೋಲ್‌ಗಳಷ್ಟೆ. ನನ್ನ ಪುಸ್ತಕ ಅದ್ಭುತವಾಗಿ ಮಾರಾಟವಾಗುತ್ತಿದೆ. ನನ್ನನ್ನು ನಾನು ಹೊಗಳಿಕೊಳ್ಳುವ ಕಾರ್ಯವನ್ನು ನಾನೆಂದೂ ಮಾಡುವುದಿಲ್ಲ. ನನ್ನ ಅಭಿಮಾನಿಗಳನ್ನು ಸಹ ನನ್ನನ್ನು ಹೊಗಳಬೇಡಿ ಎಂದು ಹೇಳುತ್ತೇನೆ' ಎಂದಿದ್ದಾರೆ ಸೋನು ಸೂದ್.
ಮುಂದುವರೆದು ಮಾತನಾಡಿರುವ ಸೋನು ಸೂದ್, 'ಇಂಥಹಾ ಋಣಾತ್ಮಕತೆಯನ್ನು ನಾನು ನಿರ್ಲಕ್ಷಿಸುತ್ತೇನೆ. ಅವುಗಳನ್ನು ನಿರ್ಲಕ್ಷಿಸದಿದ್ದರೆ ನಾವು ಮುಂದಕ್ಕೆ ಹೋಗಲು, ಸಾಧಿಸಲು ಸಾಧ್ಯವಿಲ್ಲ. ಯಾವುದೋ ಕಾರಣಕ್ಕೆ ನಾವೆಲ್ಲರೂ ಹುಟ್ಟಿದ್ದೀವಿ, ನಾನು ನನ್ನ ಪಾಲಿನ ಕೆಲಸ ಮಾಡುತ್ತಿದ್ದೇನೆ ಅಷ್ಟೆ' ಎಂದಿದ್ದಾರೆ ಸೋನು ಸೂದ್.


Click it and Unblock the Notifications











