ಭಾವನಾ ಮೆನನ್ ಎಂದೇ ಪ್ರಸಿದ್ಧರಾಗಿರುವ ಕಾರ್ತಿಕಾ ಮೆನನ್ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಕನ್ನಡ,ತೆಲಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಭಾವನಾ, 1986 ಜೂನ್ 6 ರಂದು ಕೇರಳದಲ್ಲಿ ಜನಿಸಿದರು. ತಾಯಿ ಪುಷ್ಪಾ ಗೃಹಿಣಿಯಾದರೆ, ತಂದೆ ಅಸಿಸ್ಟಂಟ್ ಸಿನಿಮಾಟೋಗ್ರಾಫರ್ ಜಿ.ಬಾಲಚಂದ್ರನ್.
ವೃತ್ತಿಜೀವನ
ಭಾವನಾ ತಮ್ಮ 16ನೇ ವಯಸ್ಸಿನಲ್ಲಿ `ನಮ್ಮಾಳ್' ಎಂಬ ಮಲಯಾಳಂ ಚಿತ್ರದಿಂದ ಸಿನಿರಂಗ ಪ್ರವೇಶಿಸಿದರು. 2010ರಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ `ಜಾಕಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕಿಚ್ಚ ಸುದೀಪ್ ಅವರ `ವಿಷ್ಣುವರ್ಧನ', ಗಣೇಶ್ ಅವರ ರೋಮಿಯೊ, ಯಾರೇ ಕೂಗಾಡಲಿ, ಬಚ್ಚನ್, ಟೋಪಿವಾಲ, ಮೈತ್ರಿ, ಮುಕುಂದ ಮುರಾರಿ, 99, ಟಗರು, ಭಜರಂಗಿ 2, ಕೇಸ್ ಆಫ್ ಕೊಂಡಾಣ ಮುಂತಾದ ಸಿನಿಮಾಗಳಲ್ಲಿ ನಟಿಸಿದರು.
ಕಿಡ್ನಾಪ್: 2017ರ ಫೆಬ್ರವರಿ 17ರಂದು ತ್ರಿಶೂರ್‌ನಿಂದ ಕೊಚ್ಚಿ ಹೋಗುವ ರಸ್ತೆಯಲ್ಲಿ ಕೆಲವು ವ್ಯಕ್ತಿಗಳ ಗುಂಪೊಂದು ಭಾವನಾರ ಕಾರನ್ನು ಅಡ್ಡಗಟ್ಟಿ ತಡೆದು ಭಾವನರನ್ನು ಕಿಡ್ನಾಪ್ ಮಾಡಿ, ಎರಡುವರೆ ಗಂಟೆ ಕಾರಿನಲ್ಲಿ ಕಿರುಕಳ ಕೊಟ್ಟು ಅಸಭ್ಯವಾಗಿ ಚಿತ್ರಗಳನ್ನು ತೆಗೆದು ನಂತರ ಕಾಕಿನಾಡದ ಹತ್ತಿರ ಬಿಟ್ಟು ಓಡಿಹೋದರು. ತಕ್ಷಣ ಭಾವನಾ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಿದರು. ಈ ಘಟನೆ ಮಲಯಾಳಂ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿತ್ತು. ಜೊತೆಗೆ ಈ ಘಟನೆಯ ಸಂಬಂಧಿಸಿದಂತೆ ಮಲಯಾಳಂ ಚಿತ್ರರಂಗದ ಒಬ್ಬ ಟಾಪ್ ನಟನ ಕೈವಾಡದ ಕುರಿತಾಗಿಯೂ ಕೇಳಿಬಂತು. ಈ ಘಟನೆಗಳಿಂದ ಚೇತರಿಸಿಕೊಂಡು ಭಾವನಾ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾದರು.
ಮದುವೆ: 2018ರ ನವೆಂಬರ್ 22ರಂದು ತಮ್ಮ ಬಹುಕಾಲದ ಗೆಳೆಯ ಮತ್ತು ಕನ್ನಡ ನಿರ್ಮಾಪಕ ನವೀನ್ ಎಂಬುವವರನ್ನು ಮದುವೆಯಾದರು.